ರಾಜ್ಯದಲ್ಲಿ ಇನ್ವೆಸ್ಟ್, ಈ ಬಾರಿಯೇ ಬೆಸ್ಟ್: ಸಿಎಂ ಬೊಮ್ಮಾಯಿ ವ್ಯಾಖ್ಯಾನ; ಹಿಂದಿನ ಸಮಾವೇಶಗಳಿಗಿಂತ ಅತ್ಯುತ್ತಮ ಸ್ಪಂದನೆ

Invest Karnataka State
ಸಮಾವೇಶದ ನಿಮಿತ್ತ ಆಯೋಜಿಸಿದ್ದ ನವೋದ್ಯಮ ಸ್ಪರ್ಧೆಯಲ್ಲಿ ದೆವಿಕ್ ಅರ್ಥ್ ಪ್ರೖೆ ಲಿ., ಮೊದಲ ಬಹುಮಾನವಾಗಿ 40 ಲಕ್ಷ ರೂ. ಪಡೆಯಿತು. ಸಿಎಂ ಬೊಮ್ಮಾಯಿ, ಸಚಿವರಾದ ಭಗವಂತ ಕೂಬಾ, ಸುನೀಲ್ ಕುಮಾರ್, ಮುರುಗೇಶ್ ನಿರಾಣಿ ಚೆಕ್ ಪ್ರತಿ ವಿತರಿಸಿದರು.
Published on

ಬೆಂಗಳೂರು: ಮೊದಲ ಜಾಗತಿಕ ಹೂಡಿಕೆದಾರರ ಸಮಾವೇಶ ಹೊರತುಪಡಿಸಿ ಈವರೆಗೂ ನಡೆದಿರುವ ಉಳಿದೆಲ್ಲ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಆದ ಒಡಂಬಡಿಕೆಗಳ ಅನುಷ್ಠಾನದ ಪ್ರಮಾಣ ಶೇ.15ಕ್ಕಿಂತ ಕಡಿಮೆ ಎಂಬ ವಿಚಾರವನ್ನು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹಿರಂಗಪಡಿಸಿದ್ದಾರೆ.

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಸಮಾರೋಪದಲ್ಲಿ ಮಾತನಾಡಿದ ಅವರು, ಈ ಬೆಳವಣಿಗೆ ಪುನರಾವರ್ತನೆ ಆಗಬಾರದೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಮುಂದಿನ ಮೂರು ತಿಂಗಳ ಒಳಗೆ ಒಡಂಬಡಿಕೆ ಅನುಷ್ಠಾನವಾಗಬೇಕು ಎಂದು ನಿರ್ದೇಶನ ನೀಡಿರುವುದಾಗಿ ತಿಳಿಸಿದರು. ಹಿಂದಿನ ಹೂಡಿಕೆ ಸಮಾವೇಶಗಳಿಗಿಂತ ನಮ್ಮ ಸರ್ಕಾರ ಒಡಂಬಡಿಕೆಯ ಅನುಷ್ಠಾನದಲ್ಲಿ ಮುಂದಿದೆ. 2000ದಲ್ಲಿ ಮೊದಲ ಜಿಮ್ ಮಾಡಲಾಗಿತ್ತು. 27 ಸಾವಿರ ಕೋಟಿ ರೂ. ಹೂಡಿಕೆಯ ಭರವಸೆಯಾಗಿದ್ದು, ಶೇ.44 ಬಂಡವಾಳ ಹೂಡಿಕೆಯಾಯಿತು. 2010 ರಲ್ಲಿ 3,94,768 ಕೋಟಿ ಭರವಸೆ ನಿಡಲಾಗಿತ್ತು, ಶೇ.14 ಮಾತ್ರ ಸಾಕಾರವಾಯಿತು. 2012ರಲ್ಲಿ 6,77,158 ಕೋಟಿ ಬಂಡವಾಳ ಭರವಸೆಯಲ್ಲಿ ಕೇವಲ ಶೇ.8, 2016ರಲ್ಲಿ 3,05,000 ಕೋಟಿ ಪೈಕಿ ಶೇ.15 ಸಾಕಾರವಾಗಿದೆ. ಈ ಬಾರಿ ನಮ್ಮ ಸರ್ಕಾರ ಈ ರೀತಿ ಆಗಲು ಬಿಡುವುದಿಲ್ಲ. ಯಾವ ಸರ್ಕಾರವೂ ವಾಸ್ತವ ಅಂಶ ಹೇಳುವುದಿಲ್ಲ. ನಾನು ಪ್ರಮಾಣಿಕತೆಯಿಂದ ಪಾರದರ್ಶಕತೆಯಿಂದ ಇದನ್ನು ತಿಳಿಸುತ್ತಿದ್ದು, ನಾನು ನನ್ನ ರಾಜ್ಯದ ಜನತೆಗೆ ವಾಸ್ತವ ಹೇಳಬಯಸುತ್ತೇನೆ ಎಂದರು. ಈ ಬಾರಿ 9.08 ಲಕ್ಷ ಕೋಟಿ ರೂ. ಒಡಂಬಡಿಕೆಯಾಗಿದೆ. ಅದರಲ್ಲಿ 2.83 ಲಕ್ಷ ಕೋಟಿ ರೂ. ಹೂಡಿಕೆಯ ಒಡಂಬಡಿಕೆಗೆ ಅನುಮೋದನೆ ಸಿಕ್ಕಿದೆ. ಅಂದರೆ ಶೇ.30ಕ್ಕಿಂತ ಹೆಚ್ಚು ಅನುಮೋದನೆಯೇ ಆಗಿದೆ ಎಂದು ವಿವರಿಸಿದರು.

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಹೂಡಿಕೆ ಮಾತ್ರವಲ್ಲ ಸ್ಪೂರ್ತಿಯನ್ನೂ ಪಡೆಯಬೇಕು, ಉದ್ಯಮಿಗಳ ಕೌಶಲ್ಯದಿಂದ ಸ್ಪೂರ್ತಿ ಪಡೆದು ಮುಂದಿನ ಜಿಮ್ ನಲ್ಲಿ ಸ್ಪೂರ್ತಿ ಪಡೆದವರು ಸಹಿ ಹಾಕಬೇಕು ಅದು ನಮ್ಮ ಉದ್ದೇಶ, ಹೂಡಿಕೆ ಮತ್ತು ಸ್ಪೂರ್ತಿ ಎರಡೂ ಈ ಸಮಾವೇಶದಲ್ಲಿ ಆಗಿದೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಅನುಷ್ಠಾನಕ್ಕೂ ರಾಜ್ಯ ರೆಡಿ: ರಾಜ್ಯದಲ್ಲಿನ ಮೂಲಸೌಕರ್ಯ ವ್ಯವಸ್ಥೆ, ನೀತಿಗಳು ಬಂಡವಾಳ ಹೂಡಿಕೆದಾರರನ್ನು ನಿರಾಶೆಗೊಳಿಸುವುದಿಲ್ಲ ಎಂದು ಸಿಎಂ ಹೇಳಿದರು. ಹುಬ್ಬಳ್ಳಿ ಧಾರವಾಡ, ಮಂಗಳೂರು, ಕಲಬುರ್ಗಿ, ಬಳ್ಳಾರಿ, ತುಮಕೂರು, ಮೈಸೂರು ಜಿಲ್ಲೆಗಳಲ್ಲಿ ಲ್ಯಾಂಡ್ ಬ್ಯಾಂಕ್ ಲಭ್ಯವಿದೆ. ಶಿವಮೊಗ್ಗ, ವಿಜಯಪುರ ವಿಮಾನ ನಿಲ್ದಾಣ ಶೀಘ್ರ ಆರಂಭವಾಗುತ್ತಿದ್ದು, ಕಾರವಾರದಲ್ಲಿ ವಿಮಾನ ನಿಲ್ದಾಣವಾಗಲಿದೆ. 6000 ರಾಷ್ಟ್ರೀಯ ಹೆದ್ದಾರಿ ನಿರ್ವಣವಾಗುತ್ತಿದೆ ಎಂದರು.

ಬೊಮ್ಮಾಯಿ ಹೇಳಿದ ಯಶಸ್ಸಿನ ಗುಟ್ಟು

  1. ನಮ್ಮ ಶಕ್ತಿ ನಮ್ಮ ಜನ, ಅತಿ ಹೆಚ್ಚಿನ ಕೌಶಲ್ಯವನ್ನು ಹೊಂದಿದ ಮಾನವ ಸಂಪನ್ಮೂಲ ಇಲ್ಲಿದೆ, ನಮ್ಮ ನೀತಿಗಳೇ ನಮ್ಮ ಶಕ್ತಿ.
  2. ಜಿಮ್ ಯಶಸ್ಸಿನ ಹಿಂದೆ ನಮ್ಮ ತೆರಿಗೆ ನಿಯಮ, ಹೂಡಿಕೆ ನೀತಿ ಸರಳೀಕರಣವಿದೆ. ಕರ್ನಾಟಕ ಏನು ಆಲೋಚಿಸುತ್ತದೆಯೋ ದೇಶ ನಾಳೆ ಅದನ್ನು ಆಲೋಚಿಸುತ್ತದೆ.
  3. ಬೆಂಗಳೂರಿಗೆ ಪ್ರತಿದಿನ ಸಾವಿರಾರು ಇಂಜಿನಿಯರ್​ಗಳು ಬರುತ್ತಿದ್ದು, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
  4. ನಮ್ಮ ನೀತಿ, ಚಿಂತನೆಗಳಲ್ಲಿ ಬದಲಾವಣೆಗಳನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಹೊಸ ಸವಾಲುಗಳನ್ನು ಎದುರಿಸುತ್ತಿದ್ದೇವೆ.
  5. ಆರ್ಥಿಕತೆಯಲ್ಲಿ ಯಾವುದೇ ಮ್ಯಾಜಿಕ್ ಇರಲ್ಲ, ಕಠಿಣ ಪರಿಶ್ರಮ, ನೀತಿ ನಿಯಮಗಳಿಂದ ಮಾತ್ರ ಸಾಧ್ಯ. ನಮ್ಮ ಅಪೋ›ಚ್, ವಿಷನ್ ಬದಲಾಯಿಸಿಕೊಂಡಿದ್ದೇವೆ.

ಜಿಮ್ ಸಾಹಸ: ಹಿಂದಿನ ಸಮಾವೇಶಗಳಿಗಿಂತ ಈ ಸಮಾವೇಶ ಬಹಳ ಪ್ರಮುಖವಾಗಿತ್ತು. ಇಡೀ ಜಗತ್ತು ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಜಗತ್ತಿನ ದೊಡ್ಡ ದೇಶಗಳಿಗೂ ಬಿಸಿ ತಟ್ಟಿದೆ. ಆದರೆ ಕರ್ನಾಟಕ ಧೈರ್ಯದಿಂದ ಹೂಡಿಕೆದಾರರ ಸಮಾವೇಶ ಮಾಡಿದೆ ಎಂದು ಸಿಎಂ ಹೇಳಿದರು. ಇಡೀ ಜಗತ್ತು ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಯತ್ನಿಸುತ್ತಿದೆ ಆದರೆ ಕರ್ನಾಟಕ ಜಿಮ್ ಸಮಾವೇಶದ ಸಾಹಸ ಮಾಡಿದೆ, ಇದರ ಫಲಿತಾಂಶ ಒಡಂಬಡಿಕೆಯಲ್ಲಿ ಸ್ಪಷ್ಟವಾಗಿದೆ. ಕರ್ನಾಟಕ ಸರ್ಕಾರದ ಮೇಲೆ ನಂಬಿಕೆ ಇರಿಸಿ ಹೂಡಿಕೆ ಮಾಡಿದ್ದಾರೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.

ಹಸಿರು ಇಂಧನ ಉತ್ಪಾದನೆ 2 ಲಕ್ಷ ಕೋಟಿ ರೂ. ಹೂಡಿಕೆ: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಹಸಿರು ಇಂಧನ ಉತ್ಪಾದನಾ ವಲಯದಲ್ಲಿ ಉದ್ಯಮಿಗಳು 2 ಲಕ್ಷ ಕೋಟಿ ರೂ. ಹೂಡಿಕೆ ಮಾಡಿದ್ದು, ಹೂಡಿಕೆಯಿಂದ ಉತ್ಪಾದನೆ ಹೆಚ್ಚಾಗಿ ಬಂದಾಗ ಗ್ರಿಡ್ ನಿರ್ವಹಣೆ, ಸಬ್ ಸ್ಟೇಷನ್ ನಿರ್ವಹಣೆ ಸೇರಿ ಎಲ್ಲವೂ ಸವಾಲಾಗಲಿದೆ. ಆದರೆ ಅದನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತೇವೆ. ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತೇವೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಭರವಸೆ ನೀಡಿದ್ದಾರೆ.

ಇನ್ವೆಸ್ಟ್ ಕರ್ನಾಟಕ ಸಮಾರೋಪದಲ್ಲಿ ಮಾತನಾಡಿ, ಇಂಧನ ವಲಯದಲ್ಲಿ ಹೂಡಿಕೆಗೆ ವಿಶೇಷ ಮಹತ್ವ ಇದೆ. ಉದ್ಯಮಿಗಳಿಗೆ ದೊಡ್ಡ ಮಟ್ಟದ ಹೂಡಿಕೆ ವ್ಯವಸ್ಥೆಗಳನ್ನು, ಬೇಕಾದ ಎಲ್ಲ ತಯಾರಿಗಳನ್ನು ಇಲಾಖೆ ಮುಂದಿನ ದಿನಗಳಲ್ಲಿ ಮಾಡಲಿದೆ ಎಂದರು.

ಮುಂದಿನ 10-15 ವರ್ಷಗಳಲ್ಲಿ ಇಂಧನ ಇಲಾಖೆಯ ಕೆಲಸಗಳು ಏನು, ಹೇಗೆ ಮಾಡಬೇಕು? ಅನ್ನುವ ಬಗ್ಗೆ ಮುಖ್ಯಮಂತ್ರಿಗಳು ನೀಲಿನಕ್ಷೆ ಹಾಕಿಕೊಟ್ಟಿದ್ದಾರೆ. ಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಹಲವು ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ. ಒಟ್ಟು 1,68,545 ಕೋಟಿ ಮೊತ್ತದ ಹೂಡಿಕೆ ಒಪ್ಪಂದ ನಡೆದಿದೆ. ಇದರಿಂದ 12,340 ಮೆಗಾ ವಾಟ್ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ದೊರೆಯಲಿದೆ. ಜತೆಗೆ, 35 ಸಾವಿರಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಮಾಹಿತಿ ನೀಡಿದರು.

ಮುನ್ನಂದಾಜಿಸು, ನಿಯಂತ್ರಿಸು: ಕರೊನಾ ಸೋಂಕು ಕಲಿಸಿದ ಪಾಠ, ಆರೋಗ್ಯ ವ್ಯವಸ್ಥೆಯ ನೈಜ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಅರಿತು, ಮುನ್ನಂದಾಜಿಸು ಹಾಗೂ ನಿಯಂತ್ರಿಸು ಆರೋಗ್ಯ ಸೂತ್ರವನ್ನು ಪಾಲಿಸುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಇನ್ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಕರನೋತ್ತರ ಕಾಲಘಟ್ಟದಲ್ಲಿ ಆರೋಗ್ಯ ಕ್ಷೇತ್ರದ ಸವಾಲುಗಳು’ ಕುರಿತು ಸಂವಾದದಲ್ಲಿ ಭಾಗವಹಿಸಿ ಮಾತನಾಡಿ, ಖಾಸಗಿ ಸಹಭಾಗಿತ್ವದಲ್ಲಿ ಕರೊನಾ ಪಿಡುಗು ನಿಯಂತ್ರಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ.

ಕರೊನಾ ಸಂಕಷ್ಟ ಕಾಲದಲ್ಲಿ ಔಷಧೋಪಕರಣ, ಚಿಕಿತ್ಸೆಗಿಂತ ವೈದ್ಯರು ಮತ್ತಿತರ ಸಿಬ್ಬಂದಿ ಕೊರತೆ ನಿವಾರಣೆ ದೊಡ್ಡ ಸವಾಲಾಗಿ ಪರಿಗಣಿಸಿ 15,000 ಸಿಬ್ಬಂದಿ ಹುದ್ದೆ ಭರ್ತಿ ಮಾಡಲಾಯಿತು. ದೀರ್ಘಾಯುಷ್ಯಕ್ಕಿಂತ ಉತ್ತಮ ಗುಣಮಟ್ಟದ ಜೀವನದ ಗುಣಪಾಠ ಕಲಿಸಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ, ಐದು ಹೊಸ ವೈದ್ಯಕೀಯ, ತಾಂತ್ರಿಕ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಿದೆ. ರಾಜ್ಯದಲ್ಲಿ ಸದ್ಯಕ್ಕೆ 800 ಜನರಿಗೆ ಒಬ್ಬ ವೈದ್ಯರಿದ್ದಾರೆ. ಆಧುನಿಕ ತಂತ್ರಜ್ಞಾನದಿಂದ ಟೆಲಿಮೆಡಿಸಿನ್, ಟೆಲಿಐಸಿಯು ಸೌಲಭ್ಯ ಕಲ್ಪಿಸಿದ್ದು, ಒಳಾಂತರ ಪ್ರದೇಶಗಳು, ಹಳ್ಳಿಗಳಿಗೂ ಆದ್ಯತೆ ನೀಡಲಾಗಿದೆ.

ಪ್ರಧಾನಿ ಮೋದಿಯವರ ಆಶಯದಂತೆ ಜನರಿಕ್ ಔಷಧ ಮಳಿಗೆಗಳು ಹೆಚ್ಚೆಚ್ಚು ಆರಂಭಿಸಲು ಒತ್ತು ನೀಡಲಾಗಿದೆ. ಅಲ್ಲದೆ, ಬಡವರ ಆರೋಗ್ಯದ ಬಗ್ಗೆ ಕಾಳಜಿಹೊಂದಿದ್ದು, ಆಯುಷ್ಮಾನ್ ಭಾರತ ಯೋಜನೆಯಡಿ ಕಳೆದ ನಾಲ್ಕು ವರ್ಷಗಳಲ್ಲಿ 38 ಲಕ್ಷ ಜನರಿಗೆ ಚಿಕಿತ್ಸೆ ಸೌಲಭ್ಯ ಒದಗಿಸಿ, ಐದು ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಡಾ.ಕೆ.ಸುಧಾಕರ್ ವಿವರಿಸಿದರು.

ಜಿಮ್​ಗೆ ಡಾ.ವಿಜಯ ಸಂಕೇಶ್ವರ ಭೇಟಿ

ವಿಆರ್​ಎಲ್ ಸಮೂಹಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರು ಶುಕ್ರವಾರ ಇನ್ವೆಸ್ಟ್ ಕರ್ನಾಟಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡರು. ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಆರೋಗ್ಯ ಸಚಿವ ಡಾ.ಸುಧಾಕರ್, ವಿಧಾನಪರಿಷತ್ ಸದಸ್ಯ ನಾಗರಾಜ್ ಯಾದವ್ ಇದ್ದರು.

ಬೆಂಗಳೂರು: ಇನ್ವೆಸ್ಟ್ ಕರ್ನಾಟಕ ಹೂಡಿಕೆದಾರರ ಸಮಾವೇಶಕ್ಕೆ ವಿಆರ್​ಎಲ್ ಸಮೂಹದ ಚೇರ್ಮನ್, ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಶುಕ್ರವಾರ ಭೇಟಿ ನೀಡಿ, ವಿವಿಧ ಕ್ಷೇತ್ರದ ಉದ್ಯಮಿಗಳು, ತಂತ್ರಜ್ಞರ ಜತೆ ಸಮಾಲೋಚನೆ ನಡೆಸಿದರು. ಮೇಳದ ಅಂಗವಾಗಿ ಆಯೋಜಿಸಲಾಗಿದ್ದ ಪ್ರದರ್ಶನ ಮಳಿಗೆಗೆ ಭೇಟಿಕೊಟ್ಟ ಅವರು, ಆಟೋಮೊಬೈಲ್ ಹಾಗೂ ಹಸಿರು ಇಂಧನ ಕ್ಷೇತ್ರದಲ್ಲಿನ ಹೊಸ ತಂತ್ರಜ್ಞಾನ, ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದರು. ಹುಬ್ಬಳ್ಳಿ ಯುವಕರ ಹೊಸ ಮಾದರಿಯ ಇವಿ ವಾಹನ, ಟಯೋಟಾ ಕಿಲೋಸ್ಕರ್ ಹೈಬ್ರಿಡ್ ವಾಹನ ಸೇರಿ ಎಂಆರ್​ಎನ್ ಗ್ರೂಪನ್ ಬಯೋ ಎನರ್ಜಿ ಬೆಳವಣಿಗೆಗಳ ಬಗ್ಗೆ ರ್ಚಚಿಸಿದರು. ಬಳಿಕ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರು ಸಮಾವೇಶದ ಬೆಳವಣಿಗೆ ಕುರಿತು ವಿವರಣೆ ನೀಡಿದರು. ಆರೋಗ್ಯ ಸಚಿವ ಡಾ.ಸುಧಾಕರ್ ಕೂಡ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net