ರಾಜ್ಯದಲ್ಲಿ ಮುಂದಿನ ಐದು ವರ್ಷಗಳಲ್ಲಿ ಏಳು ಲಕ್ಷ ಕೋಟಿ ರೂ. ಹೂಡಿಕೆ: ಸಚಿವ ಎಂ.ಬಿ.ಪಾಟೀಲ

M B PATIL DROUGHT MEETING
ವಿಜಯಪುರ ಜಿಪಂ ಸಭಾಂಗಣದಲ್ಲಿ ಸಚಿವ ಎಂ.ಬಿ. ಪಾಟೀಲರು ಬರ ನಿರ್ವಹಣೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
Published on

ಬೆಂಗಳೂರು: ರಾಜ್ಯದಲ್ಲಿ ವಾರ್ಷಿಕ 1.40 ಲಕ್ಷ ಕೋಟಿ ರೂ.ಗಳಂತೆ ಮುಂದಿನ ಐದು ವರ್ಷಗಳಲ್ಲಿ ಒಟ್ಟು ಏಳು ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಗುರಿ ನಿಗದಿಯಾಗಿದೆ. ಹೂಡಿಕೆ ಆಕರ್ಷಣೆಗೆ ಪೂರಕವಾದ ಉಪಕ್ರಮಗಳಿಗೆ ಚಾಲನೆ ನೀಡಲಾಗಿದೆ.

ಭವಿಷ್ಯದ ತಂತ್ರಜ್ಞಾನ, ಸುಧಾರಿತ ತಯಾರಿಕೆ ಕ್ಷೇತ್ರದಲ್ಲಿ ಕರ್ನಾಟಕವನ್ನು ಏಷ್ಯಾದಲ್ಲಿಯೇ ಅತ್ಯುತ್ತಮ ಬಂಡವಾಳ ಹೂಡಿಕೆಯ ತಾಣವನ್ನಾಗಿ ಮಾಡುವ ಮಹತ್ವಾಕಾಂಕ್ಷೆ ಹೊಂದಿದೆ. ಸದ್ಯದ ಹೂಡಿಕೆಮಟ್ಟದಲ್ಲಿ ಶೇ.75ರಷ್ಟು ಹೆಚ್ಚಿಸಬೇಕೆಂಬ ಅಭಿಲಾಷೆಯಿದೆ.

ರಾಜ್ಯದ ಕೈಗಾರಿಕಾ ಬೆಳವಣಿಗೆ ದರವನ್ನು ಐದು ವರ್ಷಗಳಲ್ಲಿ ಶೇ.15 ರಿಂದ 16ರಷ್ಟು ಹೆಚ್ಚಿಸಲು ಉದ್ದೇಶಿಸಲಾಗಿದೆ. ಸದ್ಯಕ್ಕೆ ರಾಜ್ಯದಲ್ಲಿ ಪ್ರತಿ ವರ್ಷ 80 ಸಾವಿರ ಕೋಟಿ ರೂ. ಮೊತ್ತದ ಹೂಡಿಕೆ ಹರಿದುಬರುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಮಾಹಿತಿ ನೀಡಿದ್ದಾರೆ.

ಹೊಸ ಕೈಗಾರಿಕೆ ನೀತಿ ಶೀಘ್ರ ಪ್ರಕಟ

ಆದ್ಯತಾ ವಲಯಗಳ ಕಡೆಗೆ ಹೂಡಿಕೆದಾರರನ್ನು ಆಕರ್ಷಿಸಲು, ವಿಶ್ವದರ್ಜೆಯ ಕೈಗಾರಿಕಾ ಸವಲತ್ತು ಒದಗಿಸಲು, ಸರ್ಕಾರ ಹತ್ತಾರು ಕ್ರಮಗಳನ್ನು ಕೈಗೊಂಡಿದೆ. ಶೀಘ್ರವೇ ಹೊಸ ಕೈಗಾರಿಕಾ ನೀತಿಯು ಪ್ರಕಟವಾಗಲಿದೆ.

ಈ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳ ತಜ್ಞರು, ಪ್ರಮುಖರು, ಭಾಗಿದಾರರ ಸಲಹೆ ಹಾಗೂ ಅಭಿಪ್ರಾಯ ಪಡೆಯಲಾಗಿದೆ. ಒಂಭತ್ತು ವಿಷನ್ ಗ್ರೂಪ್‌ಗಳು ಆಯಾ ಕ್ಷೇತ್ರದಲ್ಲಿ ನುರಿತವರೊಂದಿಗೆ ಚರ್ಚಿಸಿ ಮಾಹಿತಿ ಸಂಗ್ರಹಿಸಲಿವೆ.

ಕೈಗಾರಿಕಾ ಸಮೂಹಗಳು, ಆದಿಯಿಂದ ಅಂತ್ಯದವರೆಗೆ ಸಾಮಾನ್ಯ ಬಳಕೆಯ ಸೌಲಭ್ಯ ಕೇಂದ್ರಗಳ ಸ್ಥಾಪನೆ, ಅರ್ಜಿ ಸಲ್ಲಿಕೆ, ಅನುಮೋದನೆ ಪ್ರಕ್ರಿಯೆ ಡಿಜಿಟಲೀಕರಣ, ಭೂಬ್ಯಾಂಕ್‌ನ ವಾಸ್ತವ ಚಿತ್ರಣ, ಪಾಲಿಟೆಕ್ನಿಕ್‌ಗಳಲ್ಲಿ ಸುಧಾರಿತ ಉಪಕರಣಗಳ ಜೋಡಣೆ, ನವೀಕರಣ ಹಾಗೂ ನುರಿತ ಮಾನವ ಸಂಪನ್ಮೂಲ ಸೃಜನೆಗೆ ಒತ್ತು ನೀಡಲಾಗಿದೆ ಎಂದು ಎಂ.ಬಿ.ಪಾಟೀಲ ತಿಳಿಸಿದ್ದಾರೆ.

ವಿಷನ್ ಗ್ರೂಪ್‌ಗಳ ಸ್ಥಾಪನೆ

ವೈಮಾಂತರಿಕ್ಷ, ರಕ್ಷಣೆ, ಇಎಸ್‌ಡಿಎಂ, ಆಟೋ/ ವಿದ್ಯುತ್ ಚಾಲಿತ, ಕೈಗಾರಿಕೆ 5.0, ಇಂಧನ, ಜವಳಿ ಮತ್ತು ಪರಿಸರ ಸೇರಿ ಒಂಭತ್ತು ವಿಷನ್ ಗ್ರೂಪ್‌ಗಳನ್ನು ಸ್ಥಾಪಿಸಲಾಗಿದೆ. ಕಾರ್ಯತಂತ್ರ ಹೂಡಿಕೆ ಸಮಿತಿ ಮೂಲಕ ಬಂಡವಾಳ ಆಕರ್ಷಣೆಗೆ ಮಾರ್ಗದರ್ಶನ ಪಡೆಯಲು ಸಮಿತಿ ರಚನೆ ಮಾಡಲಾಗಿದೆ.

ಕೈಗಾರಿಕಾ ಸ್ನೇಹಿ ರಾಜ್ಯ, ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿಪಥದಲ್ಲಿ ಸಾಗಲು ಅನುಕೂಲಕರ ವಾತಾವರಣ ಸೃಷ್ಟಿಸುವ ಗುರಿಯಿದೆ. ಇನ್ವೆಸ್ಟ್ ಕರ್ನಾಟಕ ವೇದಿಕೆಯನ್ನು ಪುನರ್ ರಚಿಸಲಾಗಿದೆ. ಒಂಭತ್ತು ವಿಷನ್ ಗ್ರೂಪ್‌ಗಳಿಗೆ ಇತರ ಜಿಲ್ಲೆಗಳಲ್ಲಿ ಲಭ್ಯ ಅವಕಾಶಗಳ ಬಳಕೆ, ಬೆಂಗಳೂರಿನಾಚೆ ಕೈಗಾರಿಕೆಗಳನ್ನು ಸ್ಥಾಪಿಸುವ ಹೊಣೆಗಾರಿಕೆ ಒಪ್ಪಿಸಲಾಗಿದೆ ಎಂದು ಎಂ.ಬಿ.ಪಾಟೀಲ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net