ರಾಜಕೀಯ ಸೇಡಿಗಾಗಿ ತನಿಖೆ ಹುನ್ನಾರ; ಮಾಜಿ ಸಿಎಂ ಶಂಕೆ

basavaraj bommai
Published on

ಬೆಂಗಳೂರು: ಕೋವಿಡ್ ಖರೀದಿ ಅವ್ಯವಹಾರ ಹಾಗೂ ಶೇ.40ರಷ್ಟು ಕಮಿಷನ್ ಆರೋಪ ತನಿಖೆ ಅಚ್ಚರಿಯೇನಿಲ್ಲ. ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ಆಯೋಗ ವಿಚಾರಣೆ ನಡೆಸಲಿ ಅಭ್ಯಂತರವೇನಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಸರ್ಕಾರದ ಕ್ರಮಕ್ಕೆ ಸ್ವಾಗತವಿದೆ. ನಮ್ಮ ಆಡಳಿತಾವಧಿಯ ತನಿಖೆ ಮಾಡಿ ಎಂದು ಮುಕ್ತವಾಗಿ ಹೇಳಿದ್ದೇವೆ. ಆದರೆ 40 ಪರ್ಸೆಂಟ್ ಆರೋಪದ ದಾಖಲೆಗಳಿಲ್ಲ. ಎರಡು ವರ್ಷಗಳಾದರೂ ಗುತ್ತಿಗೆದಾರರ ಸಂಘ ಅಥವಾ ಕಾಂಗ್ರೆಸ್ ಪಕ್ಷ ದಾಖಲೆಗಳನ್ನು ಕೊಟ್ಟಿಲ್ಲ ಎಂದು ತಿವಿದರು.

ತನಿಖೆ ನಡೆಯಲಿ

ನಮ್ಮ ಕಾಲದ ಆರೋಪಗಳ ಬಗ್ಗೆ ತನಿಖೆ ನಡೆಸಲು ಅಭ್ಯಂತರವಿಲ್ಲ. ಅದರಂತೆಯೇ ಹಿಂದಿನ ಪ್ರಕರಣ ಕುರಿತು ತನಿಖೆ ನಡೆಯಲಿ. ಟೆಂಡರ್‌ನಲ್ಲಿ ನಿಗದಿತ ಮೊತ್ತಕ್ಕೆ ಹೆಚ್ಚಿನ ಮೊತ್ತಕ್ಕೆ ಗುತ್ತಿಗೆ ನೀಡಿದ ಹಲವು ಪ್ರಕರಣಗಳು ಲೋಕಾಯುಕ್ತ ಮುಂದಿದ್ದು, ಅವನ್ನೂ ತನಿಖೆ ಒಳಪಡಿಸುವರಾ ? ಎಂದು ಕೇಳಿದರು.

ಹೊಸದಾಗಿ ದೂರು ಕೊಟ್ಟರೆ ಪರಿಗಣಿಸಬೇಕಾಗುತ್ತದೆ. ಭ್ರಷ್ಟಾಚಾರ ಯಾವತಿದ್ದರೂ ಭ್ರಷ್ಟಾಚಾರವೇ ವಿಭಿನ್ನವಾಗಿ ಪರಿಗಣಿಸಲಾಗದು. ಹಿಂದಿನ ಪ್ರಕರಣಗಳು ತನಿಖೆಗೆ ಒಪ್ಪಿಸದಿದ್ದರೆ ರಾಜಕೀಯವಾಗಿ ಸೇಡು ತೀರಿಸಿಕೊಳ್ಳುವ ಹುನ್ನಾರವೆಂದು ಅನುಮಾನಿಸಬೇಕಾಗುತ್ತದೆ ಎಂದರು.

ಪಿಎಸ್‌ಐ ನೇಮಕ ಪರೀಕ್ಷಾ ಅಕ್ರಮದ ಬಗ್ಗೆ ಈಗಾಗಲೇ ತನಿಖೆ ನಡೆದು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿಯಾಗಿದೆ. ಇದೀಗ ಮತ್ತೊಮ್ಮೆ ತನಿಖೆಗೆ ಆದೇಶಿಸಿದ್ದು, ಈ ತನಿಖೆಯೂ ಪೊಲೀಸರೇ ಮಾಡಬೇಕಾಗುತ್ತದೆ.

ಮತ್ತೊಮ್ಮೆ ತನಿಖೆ ಮೂಲಕ ಯಾರನ್ನಾದರೂ ರಕ್ಷಿಸುವ ಉದ್ದೇಶವಿದೆಯೆ ? ಅಥವಾ ಈಗಾಗಲೇ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಇರುವವರ ಹೆಸರು ಕೈಬಿಡುತ್ತಾರಾ ? ತನಿಖೆ ಯಾವ ರೀತಿಯದು ಎಂದು ನೋಡೋಣವೆಂದು ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್‌ನ ಮನಸ್ಥಿತಿ

ಚಂದ್ರಯಾನ-3 ಮಿಷನ್ ಯಶಸ್ವಿಯಾಗಿಸಿದ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದಿದ್ದರು. ಯಾವಾಗಲೂ ದೊಡ್ಡ ಸಾಧನೆ, ದೇಶಕ್ಕೆ ಹೆಮ್ಮೆ ತರುವ ಕೆಲಸ ಮಾಡಿದವರಿಗೆ ಮುಂದೆಬಿಡಬೇಕು ಎಂದು ಪ್ರತಿಪಾದಿಸಿದರು.

ಈ ಉದಾರತೆಯನ್ನೇ ರಾಜ್ಯ ಬಿಜೆಪಿ ನಾಯಕರು ಮೆರೆದಿದ್ದಾರೆ. ಇಸ್ರೋ ವಿಜ್ಞಾನಿಗಳನ್ನು ಮುಂದೆ ಒಂದು ಹೆಜ್ಜೆ ಸರಿದು, ಸಾಮಾನ್ಯ ಕಾರ್ಯಕರ್ತರ ಜತೆ ನಿಂತಿದ್ದಾರೆ. ಇದನ್ನು ತಿಳಿದುಕೊಳ್ಳುವ, ಹೊಗಳುವ ಮನಸ್ಸುಗಳು ಬೇಕಷ್ಟೇ. ಆದರೆ ಈ ನಡವಳಿಕೆಯನ್ನು ಬ್ಯಾರಿಕೇಡ್ ಬಂಧಿ ಎಂದು ಕಾಂಗ್ರೆಸ್ ಹೇಳಿರುವುದು ಅವರ ಮನಸ್ಥಿತಿಯನ್ನು ಎಂದು ಬೊಮ್ಮಾಯಿ ಕಾಲೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net