ಚೀನಾದ ಐಟಿ ಕಂಪನಿಗಳು ಗಣ್ಯ ವ್ಯಕ್ತಿಗಳ ಮೇಲೆ ನಿಗಾ: ಉನ್ನತ ಮಟ್ಟದ ಸಮಿತಿಯಿಂದ ತನಿಖೆ

China
Published on

ನವದೆಹಲಿ: ಚೀನಾದ ಐಟಿ ಕಂಪನಿಗಳು ಗಣ್ಯ ವ್ಯಕ್ತಿಗಳ ಮೇಲೆ ನಿಗಾ ಇರಿಸಿರುವ ಕುರಿತು ಉನ್ನತಮಟ್ಟದ ಸಮಿತಿ ತನಿಖೆ ನಡೆಸಲಿದೆ. ಇದರ ಉಸ್ತುವಾರಿಯನ್ನು ರಾಷ್ಟ್ರೀಯ ಸೈಬರ್ ಭದ್ರತೆ ಸಮನ್ವಯಕಾರರು ವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ಚೀನಾ ಕಂಪನಿಗಳ ಬೇಹುಗಾರಿಕೆ ಕುರಿತು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಕೇಳಿದ್ದ ಪ್ರಶ್ನೆಗೆ ಜೈಶಂಕರ್ ಪತ್ರದ ಮೂಲಕ ಈ ಪ್ರತಿಕ್ರಿಯೆ ನೀಡಿದ್ದಾರೆ. ಡಿಜಿಟಲ್ ಗೂಢಚಾರಿಕೆ ಕುರಿತು ಈಗಾಗಲೇ ಭಾರತದಲ್ಲಿರುವ ಚೀನಾ ರಾಯಭಾರಿ ಹಾಗೂ ಚೀನಾ ವಿದೇಶಾಂಗ ಸಚಿವರ ಜತೆ ಚರ್ಚೆ ನಡೆಸಲಾಗಿದೆ. ಭಾರತೀಯರ ಡೇಟಾ ರಕ್ಷಣೆಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಲು ಬಿಡುವುದಿಲ್ಲ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

100ಕ್ಕೂ ಅಧಿಕ ಅಮೆರಿಕ ಕಂಪನಿಗಳ ಡೇಟಾ ಹ್ಯಾಕ್: ಅಮೆರಿಕದ ಪ್ರಮುಖ 100ಕ್ಕೂ ಅಧಿಕ ಕಂಪನಿಗಳ ಡೇಟಾ ಹ್ಯಾಕ್ ಮಾಡಿದ ಪ್ರಕರಣ ಸಂಬಂಧ ಚೀನಾದ ಐವರು ಪ್ರಜೆಗಳ ವಿರುದ್ಧ ಅಮೆರಿಕದ ನ್ಯಾಯಾಂಗ ಇಲಾಖೆ ಪ್ರಕರಣ ದಾಖಲಿಸಿದೆ. ಇವರನ್ನು ತಲೆಮರೆಸಿಕೊಂಡ ಆರೋಪಿಗಳು ಎಂದು ಘೋಷಣೆ ಮಾಡಲಾಗಿದೆ. ಭಾರತ ಸರ್ಕಾರದ ಮಹತ್ವದ ಮಾಹಿತಿ ಹ್ಯಾಕ್ ಮಾಡಿದ್ದಾರೆ ಎನ್ನಲಾಗಿದೆ.

ಪೂರ್ವ ಲಡಾಖ್​ನ ಪ್ಯಾಂಗಾಂಗ್ ತ್ಸೊ ಸರೋವರ ಪ್ರದೇಶದಲ್ಲಿನ ಫಿಂಗರ್ ಪಾಯಿಂಟ್​ಗಳಿಂದ ಸೇನೆಯನ್ನು ಹಿಂಪಡೆಯಲು ಚೀನಾ ತಕ್ಷಣ ಕ್ರಮ ಕೈಗೊಳ್ಳಬೇಕು. ಗಡಿ ವಾಸ್ತವ ರೇಖೆಯ ಬದಲಾವಣೆಗೆ ಯತ್ನಿಸದೇ, ಅದಕ್ಕೆ ಗೌರವ ನೀಡಬೇಕು. | ಅನುರಾಗ್ ಶ್ರೀವಾಸ್ತವ್ ವಿದೇಶಾಂಗ ಇಲಾಖೆ ವಕ್ತಾರ

2500 ಖಾತೆಗಳ ಮೇಲೆ ಕಣ್ಣು

ಭಾರತದಲ್ಲಿ ಚೀನಾದ ಕಾರ್ಯಸೂಚಿ ಯನ್ನು ಪ್ರಚಾರ ಮಾಡುತ್ತಿರುವ ಸಾಮಾಜಿಕ ಜಾಲತಾಣಗಳ ಸುಮಾರು 2500 ಖಾತೆಗಳ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ಕಣ್ಣಿಟ್ಟಿವೆ.

ನಿಗಾದಲ್ಲಿ ಮತ್ತಷ್ಟು ಅಧಿಕಾರಿಗಳು

ಚೀನಾದ ಐಟಿ ಕಂಪನಿ ಝೆನ್​ಹುವಾ 200ಕ್ಕೂ ಹೆಚ್ಚು ಪ್ರಭಾವಿಗಳು, ಚಿಂತಕರು, ಸಂಶೋಧಕರು, 40ಕ್ಕೂ ಅಧಿಕ ಐಎಫ್​ಎಸ್ ಅಧಿಕಾರಿಗಳು, ಕೆಲ ಮಾಧ್ಯಮ ಸಂಸ್ಥೆಗಳ ಪ್ರಮುಖರ ಮೇಲೂ ಕಣ್ಣಿಟ್ಟಿತ್ತು ಎಂಬ ಮಾಹಿತಿ ಲಭಿಸಿದೆ. ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ, ಇರಾನ್​ನ ಭಾರತದ ರಾಯಭಾರಿ, ಅಮೆರಿಕದಲ್ಲಿ ನಿಯೋಜನೆಗೊಂಡಿರುವ ಭಾರತದ ರಾಜತಾಂತ್ರಿಕ ಅಧಿಕಾರಿಗಳ ಮೇಲೆ ಸಂಸ್ಥೆ ನಿಗಾ ಇಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net