ಬಿಜೆಪಿಗೆ ತನಿಖೆ ಬಿಸಿ ಗ್ಯಾರಂಟಿ: ಎಸ್​ಐಟಿ ರಚನೆ ಜತೆಗೆ ಎರಡು ವಿಶೇಷ ನ್ಯಾಯಾಲಯ ಸ್ಥಾಪನೆಗೆ ಸರ್ಕಾರದ ಸಿದ್ಧತೆ

Vidhanasoudha (5)
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆಯೆನ್ನಲಾದ ವಿವಿಧ ಹಗರಣಗಳ ತನಿಖೆಗಾಗಿ ಎರಡು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದಕ್ಕೆ ನಿರ್ಧರಿಸಿರುವ ಸರ್ಕಾರ, ತಕ್ಷಣಕ್ಕೆ ನಾಲ್ಕು ಹಗರಣಗಳಿಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡಗಳನ್ನು ರಚಿಸಲಿದೆ. ನಾವು ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ತನಿಖೆ ನಡೆಸುವುದಾಗಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿತ್ತು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ತನಿಖೆಯ ಸ್ವರೂಪ, ತನಿಖಾ ತಂಡ ಹೇಗಿರಬೇಕು ಎಂಬ ನಿಯಮಾವಳಿಗಳನ್ನು ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಜತೆ ಚರ್ಚೆ ನಡೆಸಿ ಬಹುತೇಕ ಅಂತಿಮಗೊಳಿಸಿದ್ದಾರೆ. ತನಿಖೆಯನ್ನು ಹೆಚ್ಚು ದಿನ ಎಳೆಯದೇ ಬೇಗ ವರದಿ ನೀಡಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂಬ ಕಾರಣಕ್ಕೆ ಎಸ್​ಐಟಿ ಸ್ವರೂಪದಲ್ಲಿಯೇ ಕೆಲ ಬದಲಾವಣೆ ಮಾಡಲು ತೀರ್ವನಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ನಾಲ್ಕು ಪ್ರಕರಣಗಳು: ಈಗ ತನಿಖೆಗೆ ಆದೇಶಿಸಲಿರುವ 4 ಪ್ರಕರಣಗಳೆಂದರೆ- ಭಾರಿ ಸದ್ದು ಮಾಡಿದ್ದ ಬಿಟ್ ಕಾಯಿನ್, 40 ಪರ್ಸೆಂಟ್ ಕಮಿಷನ್, ಕರೊನಾ ಕಾಲದಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದ ಖರೀದಿ ಹಾಗೂ ಕೆಐಎಡಿಬಿಯಲ್ಲಿ ನಡೆದಿರುವ ಜಮೀನು ಡಿನೋಟಿಫಿಕೇಷನ್ ಹಾಗೂ ಕೈಗಾರಿಕೆ ಆರಂಭಿಸದ ಜಮೀನು ವಾಪಸ್ ಪಡೆಯದೇ ಹರಾಜು ಕೇಸ್. ಉಳಿದ ಅನೇಕ ಪ್ರಕರಣಗಳಿದ್ದು, ಅವುಗಳಲ್ಲಿ ನ್ಯಾಯಾಂಗ ಅಥವಾ ಇಲಾಖಾ ವಿಚಾರಣೆ ನಡೆಸಲಾಗುತ್ತದೆ ಎಂದು ಮೂಲಗಳು ಖಚಿತಪಡಿಸಿವೆ.

ಎಸ್​ಐಟಿ ರಚನೆ: ನಾಲ್ಕು ಪ್ರಕರಣಗಳಲ್ಲಿ ಮೊದಲಿಗೆ ಎಡಿಜಿಪಿ ಮಟ್ಟದ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡಗಳನ್ನು (ಎಸ್​ಐಟಿ) ರಚನೆ ಮಾಡಲಾಗುತ್ತದೆ. ಎಡಿಜಿಪಿಗಳಾದ ಸೌಮೇಂದು ಮುಖರ್ಜಿ ಹಾಗೂ ಪ್ರಣವ್ ಮೊಹಂತಿ ಅವರನ್ನು ಎರಡು ಪ್ರಕರಣಗಳ ತನಿಖಾ ಮುಖ್ಯಸ್ಥರಾಗಿ ನೇಮಕ ಮಾಡಲು ಸರ್ಕಾರ ತೀರ್ಮಾನ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಬಿಟ್ ಕಾಯಿನ್ ಹಗರಣದ ಜವಾಬ್ದಾರಿಯನ್ನು ಸೌಮೇಂದು ಮುಖರ್ಜಿ ಹಾಗೂ 40 ಪರ್ಸೆಂಟ್ ಹಗರಣದ ಹೊಣೆಯನ್ನು ಮೊಹಂತಿಯವರಿಗೆ ನೀಡುವ ಸಾಧ್ಯತೆಗಳಿವೆ. ಉಳಿದ ಎರಡು ಪ್ರಕರಣಗಳಿಗೆ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ಹುಡುಕಲಾಗುತ್ತಿದೆ.

ತಕ್ಷಣ ಆದೇಶ: ಎಸ್​ಐಟಿ ರಚನೆಯ ಆದೇಶ ಒಂದೆರಡು ದಿನಗಳಲ್ಲಿ ಹೊರಬರಲಿದೆ. ಆ ನಂತರ ವಿಶೇಷ ನ್ಯಾಯಾಲಯ ರಚನೆಯಾಗಲಿದೆ. ಎಸ್​ಐಟಿಗಳಿಗೆ ಕಂದಾಯ ಇಲಾಖೆ, ಗೃಹ ಇಲಾಖೆ ಹಾಗೂ ಕಾನೂನು ಇಲಾಖೆಗಳಲ್ಲಿ ಪ್ರತ್ಯೇಕ ನಿಬಂಧನೆಗಳಿವೆ. ಆದ್ದರಿಂದ ಈ ಪ್ರಕರಣದಲ್ಲಿ ಮೂರನ್ನು ಸೇರಿಸಿ ಹೊಸದಾಗಿ ನಿಬಂಧನೆಗಳನ್ನು ವಿಧಿಸಲಾಗುತ್ತಿದೆ ಎಂದು ತಿಳಿದುಬಂದಿದೆ

ವಿಶೇಷ ನ್ಯಾಯಾಲಯ: ಬಿಜೆಪಿ ಸರ್ಕಾರದ ಅವಧಿಯ ಹಗರಣಗಳ ವಿಚಾರಣೆಗೆ ಎರಡು ವಿಶೇಷ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಸಚಿವ ಎಚ್.ಕೆ. ಪಾಟೀಲ್ ಸಮಾಲೋಚನೆ ಮಾಡಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಅಂದರೆ ಲೋಕಸಭಾ ಚುನಾವಣೆ ಬರುವ ಮುನ್ನ ತನಿಖೆಯನ್ನು ರ್ತಾಕ ಅಂತ್ಯಕ್ಕೆ ಮುಟ್ಟಿಸುವುದು ಸರ್ಕಾರದ ಉದ್ದೇಶವಾಗಿದೆ.

ಮುಖ್ಯಾಂಶಗಳು

  • ನಾಲ್ಕು ಹಗರಣಗಳ ತನಿಖೆಗೆ ಎಸ್​ಐಟಿ
  • ಇದೇ ವಾರದಲ್ಲಿ ಆದೇಶ ನಿರೀಕ್ಷೆ
  • ಎಡಿಜಿಪಿಗಳಾದ ಸೌಮೇಂದು ಮುಖರ್ಜಿ, ಪ್ರಣವ್ ಮೊಹಂತಿಗೆ ಹೊಣೆ
  • ಉಳಿದ ಕೇಸ್​ಗಳಿಗೆ ಇನ್ನಿಬ್ಬರು ಅಧಿಕಾರಿಗಳಿಗಾಗಿ ಶೋಧ
  • ಎಸ್​ಐಟಿಗಳಿಗೆ ಪೊಲೀಸ್ ಠಾಣೆಗಳ ಅಧಿಕಾರ
  • ಯಾರೇ ದೂರು ಕೊಟ್ಟರೂ ತಕ್ಷಣ ಎಫ್​ಐಆರ್ ಮಾಡಿ ನ್ಯಾಯಾಲಯಕ್ಕೆ ಸಲ್ಲಿಕೆ

ಎಸ್​ಐಟಿಯಲ್ಲಿ ಬದಲಾವಣೆ

  • ಎಸ್​ಐಟಿಗಳಿಗೆ ಪೊಲೀಸ್ ಠಾಣೆಯ ಎಲ್ಲ ಅಧಿಕಾರ ನೀಡಲಾಗುತ್ತದೆ
  • ತನಿಖಾ ದಳದ ಮುಖ್ಯಸ್ಥರೇ ಠಾಣಾಧಿಕಾರಿ
  • ಯಾರೇ ದೂರು ನೀಡಿದರೂ ತಕ್ಷಣ ಎಫ್​ಐಆರ್ ದಾಖಲಿಸಬೇಕು
  • ದೂರಿನೊಂದಿಗೆ ದಾಖಲೆಗಳಿದ್ದರೆ ತಕ್ಷಣ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಬೇಕು
  • ದಾಖಲೆಗಳಿಲ್ಲದಿದ್ದರೂ ದೂರನ್ನು ಗಂಭೀರವಾಗಿ ಪರಿಗಣಿಸಿ ದಾಖಲೆ ಸಂಗ್ರಹಿಸಬೇಕು

ಆಯ್ದ ಪ್ರಕರಣಗಳು ಏಕೆ?

  1. ಬಿಟ್ ಕಾಯಿನ್ ಹಗರಣದ ಬಗ್ಗೆ ಕಾಂಗ್ರೆಸ್ ಪ್ರಸ್ತಾಪ ಮಾಡಿತ್ತು. ಸದನದಲ್ಲಿಯೂ ಚರ್ಚೆ ಮಾಡಿತ್ತು. ಹಿಂದಿನ ಸರ್ಕಾರ ಯಾವುದೇ ಸ್ಪಷ್ಟ ತನಿಖೆ ಮಾಡದೇ ಮುಚ್ಚಿ ಹಾಕಿತ್ತು. ಅಧಿಕಾರಿಗಳು ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸಿದವರು ಇದರ ಹಿಂದೆ ಇದ್ದಾರೆ ಹಾಗೂ ಸಾವಿರಾರು ಕೋಟಿ ರೂ.ಗಳ ಅಕ್ರಮ ನಡೆದಿದೆ ಎಂಬ ಕಾಂಗ್ರೆಸ್ ಆರೋಪದ ಹಿನ್ನೆಲೆಯಲ್ಲಿ ಬಿಟ್ ಕಾಯಿನ್​ಗೆ ಪ್ರಮುಖ್ಯತೆ ನೀಡಲು ಕಾರಣವಾಗಿದೆ.
  2. 40 ಪರ್ಸೆಂಟ್ ಕಮಿಷನ್ ಆರೋಪದ ಬಗ್ಗೆ ಕಾಂಗ್ರೆಸ್ ‘ಪೇಸಿಎಂ’ ಅಭಿಯಾನ ಸೇರಿದಂತೆ ಹಲವು ಹೋರಾಟ ಮಾಡಿತ್ತು. ಗುತ್ತಿಗೆದಾರರ ಸಂಘದವರು ತನಿಖೆ ನಡೆಸಿದರೆ ದಾಖಲೆ ನೀಡುವುದಾಗಿ ಹೇಳಿದ್ದರು. ಹೀಗಾಗಿ ಈ ಪ್ರಕರಣ ಕೈಗೆತ್ತಿಕೊಳ್ಳಲಾಗುತ್ತಿದೆ.
  3. ಕರೊನಾ ಕಾಲದಲ್ಲಿ ವಿವಿಧ ವಸ್ತುಗಳ ಖರೀದಿಯಲ್ಲಿ ಅಂದಾಜು 2,000 ಕೋಟಿ ರೂ.ಗಳ ಹಗರಣವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿಯೂ ಚರ್ಚೆಯಾಗಿತ್ತು. ಚಾಮರಾಜನಗರ ಆಕ್ಸಿಜನ್ ದುರಂತವನ್ನೂ ಸೇರಿಸಿ ತನಿಖೆ ಮಾಡಲಾಗುತ್ತದೆ.
  4. ಕೆಐಎಡಿಬಿಯಲ್ಲಿ 2008 ರಿಂದ 2013ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಾಜು 10,253 ಎಕರೆ ಹಾಗೂ ಯಡಿಯೂರಪ್ಪ ಮತ್ತು ಬೊಮ್ಮಾಯಿ ಕಾಲದಲ್ಲಿ 6 ಸಾವಿರ ಎಕರೆ ಭೂಮಿಯನ್ನು ಡಿನೋಟಿಫೈ ಮಾಡಲಾಗಿದೆ ಎಂಬ ಆರೋಪವಿದೆ. ಕೈಗಾರಿಕೆಗೆ ಭೂಮಿ ಪಡೆದು ಬಳಸದಿರುವವರಿಂದ ವಾಪಸ್ ಪಡೆಯದೆ ಹರಾಜು ಹಾಕಲಾಗಿದೆ ಎಂಬ ದೂರುಗಳಿವೆ. ಇದು ಕರ್ನಾಟಕ ಕೈಗಾರಿಕೆ ವಿಸ್ತರಣೆ ಸೌಲಭ್ಯ ಅಧಿನಿಯಮದ ಉಲ್ಲಂಘನೆ. ಆದ್ದರಿಂದ ಆ ಪ್ರಕರಣದ ತನಿಖೆಗೆ ನಿರ್ಧಾರವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net