

ಶಿವಮೊಗ್ಗ: ಚಾರಣದಲ್ಲಿ ಪಾಲ್ಗೊಳ್ಳುವುದರಿಂದ ದೇಹ ಮತ್ತು ಮನಸ್ಸು ಸದೃಢಗೊಳ್ಳುವುದರ ಜತೆ ಸಂತೋಷ ದೊರೆಯುತ್ತದೆ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಜಿ.ಜಿ.ಸುನೀಲ್‌ಕುಮಾರ್ ಹೇಳಿದರು.
ಯೂತ್ ಹಾಸ್ಟೆಲ್ ಆಫ್ ಅಸೋಸಿಯೇಷನ್ ಇಂಡಿಯಾ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ಬಂಡೆಕಲ್ ಗುಡ್ಡ ಹಾಗೂ ಉಕ್ಕಡ ಫಾಲ್ಸ್ ಚಾರಣಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ಸಂಘಟನೆಯಿಂದ ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಚಾರಣಗಳನ್ನು ಪ್ರತಿ ವರ್ಷ ಆಯೋಜಿಸುತ್ತಿದ್ದು, ನೂರಾರು ಜನರು ಚಾರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಚಾರಣ ಮಾಡುವುದರಿಂದ ಸಸ್ಯ ಸಂಕುಲ ಹಾಗೂ ಜೀವ ವೈವಿಧ್ಯ ಪರಿಚಯವಾಗುತ್ತದೆ. ಪರಿಸರ ವಿಶೇಷತೆ ತಿಳಿಯುತ್ತದೆ. ಉಕ್ಕಡ ಜಲಪಾತ ಹಾಗೂ ಬಂಡೆಕಲ್ ಗುಡ್ಡದ ಚಾರಣಕ್ಕೆ ಜನರು ಆಸಕ್ತಿ ತೋರಿರುವುದು ವಿಶೇಷ ಎಂದರು.
ಯೂತ್ ಹಾಸ್ಟೆಲ್ ಜಿಲ್ಲಾ ಚೇರ್ಮನ್ ಹರೀಶ್ ಪಂಡಿತ್ ಮಾತನಾಡಿ, ಚಾರಣದಿಂದ ಸಹ ಪ್ರವಾಸಿಗಳೊಂದಿಗೆ ಉತ್ತಮ ಸಂವಹನ ನಡೆಸುವ ಜತೆಯಲ್ಲಿ ಮಾಹಿತಿ ವಿನಿಮಯ ಸಾಧ್ಯವಾಗುತ್ತದೆ. ಮಾನಸಿಕ ದುಗುಡ ಕಡಿಮೆಯಾಗಿ ಉತ್ಸಾಹ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಉಪಾಧ್ಯಕ್ಷ ಜಿ.ವಿಜಯ್‌ಕುಮಾರ್ ಮಾತನಾಡಿ, ಕಡಿಮೆ ಖರ್ಚಿನಲ್ಲಿ ಅತ್ಯಂತ ವ್ಯವಸ್ಥಿತ ಚಾರಣ ಆಯೋಜಿಸಲಾಗುತ್ತಿದೆ. ಹೆಚ್ಚು ಜನರು ಯೂತ್ ಹಾಸ್ಟೆಲ್ ಸದಸ್ಯರಾಗಬೇಕು ಎಂದರು. ಕಾರ್ಯದರ್ಶಿ ಪ್ರಶಾಂತ್, ಪ್ರಮುಖರಾದ ಉಮೇಶ್ , ರಾಘವೇಂದ್ರ, ಮನಮೋಹನ್ ಪವಾರ್, ನವೀನ್ ಪಂಡಿತ್, ಹೇಮಂತ್, ರಾಘವೇಂದ್ರ, ಈಶ್ವರಿ ಮತ್ತಿತರರು ಇದ್ದರು.