

ಹುಣಸೂರು: ದಾರ್ಶನಿಕರು ಮತ್ತು ಸಂತರ ಜೀವನಾದರ್ಶಗಳ ಪರಿಚಯವನ್ನು ಇಂದಿನ ಪೀಳಿಗೆಗೆ ಮಾಡಿಕೊಡುವ ಮಹತ್ತರ ಜವಾಬ್ದಾರಿ ಶಿಕ್ಷಕರು ಮತ್ತು ಪಾಲಕರ ಮೇಲಿದೆ ಎಂದು ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವಸ್ವಾಮೀಜಿ ಕರೆ ನೀಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಮೈಸೂರು ಘಟಕ, ಕದಳಿ ಮಹಿಳಾ ವೇದಿಕೆ, ಶ್ರೀ ಜಡೆಮಹಾಂತಸ್ವಾಮೀಜಿ ದತ್ತಿ, ಡಾ.ಇಮ್ಮಡಿ ಶಿವಬಸವ ಸ್ವಾಮೀಜಿ ದತ್ತಿ ಸಹಯೋಗದಲ್ಲಿ ತಾಲೂಕಿನ ಮಾದಳ್ಳಿಯ ಶ್ರೀ ಗುರುಬೂದಿಸ್ವಾಮಿ ಶಾಲೆಯಲ್ಲಿ ಬುಧವಾರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ದಾರ್ಶನಿಕರ ಬದುಕು ಮತ್ತು ಸಂದೇಶ ಕುರಿತು ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮದು ಸಂತರು, ಸನ್ಯಾಸಿಗಳ ನೆಲೆವೀಡು. ಸಾಧಕರು ನಮಗೆ ದಾರಿದೀಪವಾಗಿದ್ದು, ಸತ್ಯ, ಧರ್ವ, ತ್ಯಾಗವೆಂದರೇನು ಎನ್ನುವುದನ್ನು ಕಲಿಸಿಕೊಟ್ಟಿದ್ದಾರೆ. ಆದರೆ ಆಧುನಿಕತೆಯ ಭರಾಟೆಯಲ್ಲಿ ನಾವು ನಮ್ಮ ಮಕ್ಕಳಿಗೆ ಇಂತಹ ಮಹನೀಯರ ವಿಚಾರಧಾರೆಗಳ ಪರಿಚಯ ಮಾಡಿಕೊಡುವುದನ್ನೇ ಮರೆತಿದ್ದೇವೆ. ಇದು ಇಡೀ ಸಮುದಾಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಮಾತನಾಡಿ, ವಿದ್ಯಾರ್ಥಿದೆಸೆಯಿಂದಲೇ ಮಕ್ಕಳಲ್ಲಿ ಬದುಕಿನ ಅರ್ಥವನ್ನು ತಿಳಿಸುವ ಮಹನೀಯರ ಪರಿಚಯವನ್ನು ಇಂತಹ ಸ್ಪರ್ಧೆಗಳ ಮೂಲಕ ಮಾಡಿಸುತ್ತಿರುವುದು ಶ್ಲಾಘನೀಯ ಎಂದರು.
50ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಶ್ರಾಂತ ಪ್ರಾಧ್ಯಾಪಕಿ ಡಾ.ಸಿ.ಜೆ.ಉಷಾದೇವಿ, ಶಾರದಾ ಶಿವಲಿಂಗಸ್ವಾಮಿ, ಪ್ರಾಂಶುಪಾಲ ವೆಂಕಟೇಶ್ವರಲು, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಜಯಾಗೌಡ, ದತ್ತಿದಾನಿ ಸುಧಾ ಮೃತ್ಯುಂಜಯಪ್ಪ, ಜಾಬಗರೆ ರಮೇಶ್, ಸ್ನೇಹಸ್ತ್ರೀ ಸಮಾಜದ ಸದಸ್ಯರು ಇದ್ದರು.
.