ಅಂತಾರಾಜ್ಯ ಕುಖ್ಯಾತ ನಾಲ್ವರು ಕಳ್ಳರ ಬಂಧನ: ಕುಣಿಗಲ್ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ

Published on

ತುಮಕೂರು: ದ್ವಿಚಕ್ರ ವಾಹನದ ಡಿಕ್ಕಿಯಲ್ಲಿದ್ದ 82ಗ್ರಾಂ ಚಿನ್ನದ ನಕ್ಲೇಸ್ ಕಳವು ಮಾಡಿದ್ದ ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಕುಣಿಗಲ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಮಿಳುನಾಡಿದ ಚಕ್ರಯ್ಯ(26), ಗೋಗುಲ ಡ್ಯಾನಿಯಲ್(52), ಆಂಧ್ರಪ್ರದೇಶದ ಬಾನಾಲ ಸಂಜುಸಾಗರ(28), ಪುಲಿ ಪ್ರದೀಪ(33) ಬಂಧಿತ ಕುಖ್ಯಾತ ಆರೋಪಿಗಳು. ಬಂಧಿತರಿಂದ 10 ಲಕ್ಷ ರೂ., ನಗದು, 82ಗ್ರಾಂ ಒಂದು ಚಿನ್ನದ ನೆಕ್ಲೇಸ್, 595ಗ್ರಾಂ ತೂಕದ ಬೆಳ್ಳಿ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಮಾರುತಿ ಎರ್ಟಿಗಾ ಕಾರು, ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜುಲೈ 12ರಂದು ಕುಣಿಗಲ್ ಪಟ್ಟಣದಲ್ಲಿ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿದ್ದ 82ಗ್ರಾಂ ಚಿನ್ನದ ನಕ್ಲೇಸ್ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿದ್ದು ನ್ಯಾಯಾಲಯಕ್ಕೆ ದೊಷಾರೋಪಣಾ ಪಟ್ಟಿಯನ್ನು ಪೊಲೀಸರು ಸಲ್ಲಿಸಿದ್ದಾರೆ. ಬಂಧಿತರ ವಿಚಾರಣೆ ವೇಳೆ ರಾಜ್ಯದ ವಿವಿಧ ಭಾಗದಲ್ಲಿಯೂ ಇಂತಹ ಅಪರಾಧಿ ಕೃತ್ಯ ಎಸಗಿರುವುದು ಪತ್ತೆಯಾಗಿದೆ.

ಪ್ರಕರಣ ಹಿನ್ನೆಲೆ: ಹುತ್ರಿದುರ್ಗ ಹೋಬಳಿ ಕೆಂಪನಹಳ್ಳಿಯ ಬೊರೇಗೌಡ ಎಂಬುವರು ಕುಣಿಗಲ್ ಪಟ್ಟಣದ ಖಾಸಗಿ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ 82 ಗ್ರಾಂ ತೂಕದ ಚಿನ್ನದ ನಕ್ಲೇಸ್ ಬಿಡಿಸಿಕೊಂಡು ತಮ್ಮ ದ್ವಿಚಕ್ರವಾಹನದ ಡಿಕ್ಕಿಯಲ್ಲಿಟ್ಟಿದ್ದು ಬಿ.ಎಂ.ರಸ್ತೆಯಲ್ಲಿರುವ ಚಾಮುಂಡೇಶ್ವರಿ ಫರ್ನಿಚರ್ಸ್‌ ಒಳಗೆ ಹೋಗಿ ವಾಪಸ್ ಬರುವ ಹೊತ್ತಿಗೆ ಡಿಕ್ಕಿ ಹೊಡೆದು ಕಳವು ಮಾಡಲಾಗಿತ್ತು. ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆಗೆ ಕುಣಿಗಲ್ ಠಾಣೆ ಪೊಲೀಸ್ ನಿರೀಕ್ಷಕ ಡಿ.ಎಲ್.ರಾಜು ನೇತೃತ್ವದಲ್ಲಿ ರಚಿಸಿದ್ದ ವಿಶೇಷ ತಂಡ ಆರೋಪಿಗಳನ್ನು ಪತ್ತೆಹಚ್ಚಿದೆ. ಆರೋಪಿಗಳು ತುಮಕೂರು ನಗರದ 2 ಪ್ರಕರಣ, ಗುಬ್ಬಿ 1 ಪ್ರಕರಣ, ಚಿಕ್ಕಮಗಳೂರು ಜಿಲ್ಲೆ ಕಡೂರು ಠಾಣೆ 1 ಪ್ರಕರಣ, ಹಾಸನ ಜಿಲ್ಲೆ ಚನ್ನರಾಯಪಟ್ಟಣ 1 ಪ್ರಕರಣ ಹಾಗೂ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ 1 ಪ್ರಕರಣ ಸೇರಿದಂತೆ ಒಟ್ಟು 7 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಬಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net