

ನವದೆಹಲಿ: ವಿಶ್ವದೆಲ್ಲೆಡೆ ಹೊಸ ಕೋವಿಡ್ ರೂಪಾಂತರಿ ಒಮಿಕ್ರಾನ್ ಆತಂಕ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಡಿ.15ರಿಂದ ಆರಂಭಿಸಲು ಉದ್ದೇಶಿಸಿದ್ದ ನಿಗದಿತ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಯನ್ನು ಮುಂದೂಡಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತೀರ್ಮಾನಿಸಿದೆ. ಬಯೋ ಬಬಲ್ ಒಪ್ಪಂದದಡಿ ಸಂಚರಿಸುವ ವಿಮಾನಗಳನ್ನು ಬಿಟ್ಟರೆ ಇನ್ನಾವುದೇ ಅಂತಾರಾಷ್ಟ್ರೀಯ ವಿಮಾನಗಳು ದೇಶಕ್ಕೆ ಬರುವಂತಿಲ್ಲ ಹಾಗೂ ಹೊರಗೂ ಪ್ರಯಾಣಿಸುವಂತೆ ಇಲ್ಲ.
20 ದೇಶಗಳಲ್ಲಿ ಒಮಿಕ್ರಾನ್: ಹೆಚ್ಚು ಸೋಂಕುಕಾರಕವೆಂಬುದು ಸಾಬೀತಾಗುತ್ತಿರುವ ಒಮಿಕ್ರಾನ್ ಕನಿಷ್ಠ 20 ದೇಶಗಳಲ್ಲಿ ಕಾಣಿಸಿಕೊಂಡಿದೆ.
ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಿದ ಕರೊನಾ ಸೋಂಕು ಪ್ರಕರಣ, ಸ್ಯಾಂಪಲ್ ಪರೀಕ್ಷೆಯಲ್ಲಿ ಪುನರಾವರ್ತನೆಯಾದ ವಿಲಕ್ಷಣತೆ ಇವೇ ಮುಂತಾದ ಅಂಶಗಳ ಪರಿಶೀಲನೆ ನಡೆಸುತ್ತಿದ್ದಾಗ, ಈಗ ಒಮಿಕ್ರಾನ್ ಎಂದು ಹೆಸರಿಸಲಾಗಿರುವ ಕರೊನಾ ವೈರಸ್ನ ಹೊಸ ರೂಪಾಂತರಿ ಪತ್ತೆಯಾಯಿತು ಎಂದು ವಿಜ್ಞಾನಿಗಳು ಅಪಾಯಕಾರಿ ವೈರಾಣುವಿನ ಪತ್ತೆ ಹಾದಿಯ ವಿವರವನ್ನು ಬಿಚ್ಚಿಟ್ಟಿದ್ದಾರೆ.
‘ಇದು ಭಾರಿ ಶಾಖೋಪಶಾಖೆಗಳಾಗಿ ಕವಲೊಡೆದು ಪರಿಣಾಮ ಉಂಟು ಮಾಡಲಿದೆ’ ಎಂದು ನವೆಂಬರ್ 19ರಂದೇ ತನಗೆ ಗೊತ್ತಾಗಿತ್ತು ಎಂದು ಪ್ರಥಮ ಬಾರಿಗೆ ಬಿ.1.1.529 (ಒಮಿಕ್ರಾನ್) ಪ್ರಭೇದದ ಸೀಕ್ವೆನ್ಸಿಂಗ್ ನಡೆಸಿದ ರಾಕ್ವೆಲ್ ವಿಯಾನಾ ಹೇಳಿದ್ದಾರೆ. ಅವರು ದಕ್ಷಿಣ ಆಫ್ರಿಕಾದಲ್ಲಿರುವ ಲ್ಯಾನ್ಸೆಟ್ ಲ್ಯಾಬ್ನ ವಿಜ್ಞಾನ ಮುಖ್ಯಸ್ಥರಾಗಿದ್ದಾರೆ. ವಿಯಾನಾ ಇದನ್ನು ರಾಷ್ಟ್ರೀಯ ಸೋಂಕು ರೋಗಗಳ ಸಂಸ್ಥೆ ಗಮನಕ್ಕೆ ತಂದಿದ್ದು ಅದು ಹೆಚ್ಚಿನ ಪರೀಕ್ಷೆ ನಡೆಸಿತ್ತು. ಅನೇಕ ರೂಪಾಂತರಗಳನ್ನು ಹೊಂದಿದ ಪ್ರಭೇದ ಇದಾಗಿರಬೇಕು ಎಂಬುದು ಈ ಪ್ರಕ್ರಿಯೆ ವೇಳೆ ತಿಳಿದು ಬಂದಿತ್ತು. ಜೊಹಾನೆಸ್ಬರ್ಗ್ ಮತ್ತು ಪ್ರಿಟೋರಿಯಾ ಸುತ್ತಮುತ್ತಲಿನ 32 ಸ್ಯಾಂಪಲ್ಗಳನ್ನು ಪರೀಕ್ಷಿಸಿದಾಗ ಈ ‘ಆಘಾತಕಾರಿ’ ವೈರಸ್ ಹೂರಣ ದೃಢಪಟ್ಟಿತು ಎನ್ನುತ್ತಾರೆ ಸಂಸ್ಥೆಯ ಜೀನ್ ಸೀಕ್ವೆನ್ಸರ್ ಡೇನಿಯಲ್ ಅಮೋಕೊ. ಒಮಿಕ್ರಾನ್ ಪ್ರಭೇದದ ಬಗ್ಗೆ ಜಗತ್ತನ್ನು ಮೊದಲು ಎಚ್ಚರಿಸಿದ್ದ ದಕ್ಷಿಣ ಆಫ್ರಿಕಾ ವೈದ್ಯೆ ಏಂಜಲಿಕ್ ಕೊಯೆಟ್ಝಿ ಹೇಳುವಂತೆ, ಅವರ ಬಳಿ ಬಂದ ರೋಗಿಗಳಲ್ಲಿ ಲಘು ಲಕ್ಷಣಗಳಿದ್ದವು. ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ, ಆಕ್ಸಿಜನ್ನ ಅಗತ್ಯವೂ ಬೀಳಲಿಲ್ಲ. ಒಮಿಕ್ರಾನ್ ಬಗ್ಗೆ ವಿಶ್ವದಲ್ಲಿ ಹುಟ್ಟಿರುವ ಆತಂಕ ಅರ್ಥಹೀನ ಎಂದೂ ಏಂಜಲಿಕ್ ಹೇಳಿದ್ದಾರೆ.
ಒಮ್ರಿಕಾನ್ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ: ಕರೊನಾ ವೈರಸ್ನ ಹೊಸ ತಳಿ ಒಮಿಕ್ರಾನ್ ಪತ್ತೆಯಾಗಿರುವುದರಿಂದ ವಿದೇಶಗಳಿಂದ ಬರುವ ವಿಮಾನ ಪ್ರಯಾಣಿಕರನ್ನು ಕಟ್ಟುನಿಟ್ಟಿನ ತಪಾಸಣೆ ಹಾಗೂ ಪರೀಕ್ಷೆಗೆ ಒಳಪಡಿಸಲು ಕೇಂದ್ರ ಸರ್ಕಾರ ದೃಢ ನಿರ್ಧಾರ ಮಾಡಿರುವುದರಿಂದ ಬುಧವಾರ ಬೆಂಗಳೂರು, ದೆಹಲಿ, ಚೆನ್ನೈ ಸಹಿತ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ಕಾಯುವಂತಾಗಿ ಸುಸ್ತಾದರು. ಹೊಸ ಮಾರ್ಗಸೂಚಿ ಬಗ್ಗೆ ಅಧಿಕಾರಿಗಳಲ್ಲೂ ಗೊಂದಲ ಇದ್ದ ಕಾರಣ ಟೆಸ್ಟ್ಗಾಗಿ ತಾಸುಗಟ್ಟಲೆ ಸರದಿಯಲ್ಲಿ ಕಾದಿದ್ದ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಯಿತು.
ಒಮಿಕ್ರಾನ್ ‘ಅಪಾಯವಿರುವ’ (ರಿಸ್ಕ್) ದೇಶಗಳಿಂದ ಬರುವ ಎಲ್ಲ ಪ್ರಯಾಣಿಕರನ್ನು ಬುಧವಾರ ಬೆಳಗ್ಗೆಯಿಂದ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನೆಗೆಟಿವ್ ಫಲಿತಾಂಶ ಬಂದರೆ ಮಾತ್ರವೇ ಅವರು ನಿಲ್ದಾಣದಿಂದ ಹೊರಹೋಗಬಹುದು. ರಿಸ್ಕ್ ಅಲ್ಲದ ದೇಶಗಳಿಂದ ಬರುವ ಪ್ರಯಾಣಿಕರ ಪೈಕಿ ರ್ಯಾಂಡಮ್ ಆಗಿ ಆಯ್ಕೆ ಮಾಡುವ ಶೇಕಡ ಎರಡು ಪ್ರಯಾಣಿಕರನ್ನು ಕೂಡ ಪರೀಕ್ಷಿಸಲಾಗುತ್ತಿದೆ. ಅವರು ಫಲಿತಾಂಶ ಪ್ರಕಟವಾಗದಿದ್ದರೂ ಹೊರ ಹೋಗಬಹುದಾಗಿದೆ. ಆದರೆ ಮುಂದಿನ 14 ದಿನ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ಗೆ ಒಳಪಡಬೇಕು ಎಂದು ಮಾರ್ಗಸೂಚಿ ನಿರ್ದೇಶಿಸಿದೆ. ವಿಮಾನ ನಿಲ್ದಾಣದಲ್ಲಿ ಆಂಟಿಜನ್ ಟೆಸ್ಟ್ಗೆ 3,900 ರೂಪಾಯಿ ಹಾಗೂ ಆರ್ಟಿ-ಪಿಸಿಆರ್ ಟೆಸ್ಟ್ಗೆ ಸುಮಾರು 500 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.
ರಿಸ್ಕ್ ದೇಶಗಳು: ಯುರೋಪ್ನ ಕೆಲ ರಾಷ್ಟ್ರಗಳು, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬೋಟ್ಸ್ವಾನಾ, ಚೀನಾ, ಮಾರಿಷಸ್, ನ್ಯೂಜಿಲ್ಯಾಂಡ್, ಜಿಂಬಾಬ್ವೆ, ಸಿಂಗಾಪುರ, ಹಾಂಗ್ಕಾಂಗ್ ಮತ್ತು ಇಸ್ರೇಲ್. ಈ ಪೈಕಿ ಕೆಲ ರಾಷ್ಟ್ರಗಳಲ್ಲಿ ಒಮಿಕ್ರಾನ್ ಸೋಂಕು ಧೃಡಪಟ್ಟಿದೆ.
ಮಹಾರಾಷ್ಟ್ರ ಕ್ರಮಕ್ಕೆ ಅಸಮಾಧಾನ: ಮಾರ್ಗಸೂಚಿಯಲ್ಲಿ ಇಲ್ಲದ ‘ರಿಸ್ಕ್’ ಪಟ್ಟಿಯಲ್ಲಿಲ್ಲದ ದೇಶಗಳ ಪ್ರಯಾಣಿಕರು ಕೂಡ ಟೆಸ್ಟ್ ಹಾಗೂ ಕ್ವಾರಂಟೈನ್ಗೆ ಒಳಗಾಗಬೇಕೆಂಬ ಮಹಾರಾಷ್ಟ್ರ ಸರ್ಕಾರದ ನಿಯಮಕ್ಕೆ ಕೇಂದ್ರ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರ ತನ್ನ ಮಾರ್ಗಸುಚಿಯನ್ನು ಪಾಲಿಸಬೇಕೆಂದು ತಾಕೀತು ಮಾಡಿದೆ. ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಪರೀಕ್ಷೆ ನಡೆಸಲಾಗುತ್ತಿದೆ.
ಬ್ರಿಟನ್ ಮತ್ತು ನೆದರ್ಲೆಂಡ್ಸ್ ನಿಂದ ದೆಹಲಿಗೆ ಆಗಮಿಸಿದ 6 ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಆಸ್ಪತ್ರೆಗೆ ದಾಖಲಾಗಿರುವ ಅವರು ಒಮಿಕ್ರಾನ್ ಸೋಂಕಿತರೇ ಎನ್ನುವುದನ್ನು ಪರಿಶೀಲಿಸಲು ದ್ರವ ಮಾದರಿಗಳನ್ನು ಪರೀಕ್ಷೆಗೆ ಕಳಿಸಲಾಗಿದೆ.
ಡಬ್ಲ್ಯುಎಚ್ಒ ಅತೃಪ್ತಿ: ಒಮಿಕ್ರಾನ್ ಕಳವಳದ ಕಾರಣ ದೇಶಗಳು ಸಾರಾಸಗಟಾಗಿ ವಿಮಾನ ಸಂಚಾರಗಳ ಮೇಲೆ ನಿರ್ಬಂಧ ವಿಧಿಸುವುದು ತರವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಅಭಿಪ್ರಾಯಪಟ್ಟಿದೆ. ಹೀಗೆ ಮಾಡುವುದರಿಂದ ಕಳವಳಕಾರಿ ಪ್ರಭೇದ (ವಿಒಸಿ) ಹರಡುವುದನ್ನು ತಡೆಯಲು ಆಗುವುದಿಲ್ಲ ಎಂದಿದೆ. ಈ ನಡುವೆ, ವೈರಾಣುವಿನ ಹೊಸ ತಳಿಯ ಪತ್ತೆ ಹಿನ್ನೆಲೆಯಲ್ಲಿ ಸೋಂಕು ವ್ಯಾಪಕವಾಗುವುದನ್ನು ತಡೆಯಲು ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ಕಾರ್ಯತಂತ್ರವನ್ನು ಬದಲಾಯಿಸಿಕೊಳ್ಳುತ್ತಿವೆ.