"ನೀವು ನಿಜವಾದ ಹೀರೋ"...: ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಸಾಹಸಕ್ಕೆ ಇಸ್ರೇಲ್​ ಪ್ರಧಾನಿ ನೆತನ್ಯಾಹು ಮೆಚ್ಚುಗೆ! Captain Smit Machchhar

ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ನಡೆದ ಚಾಕು ದಾಳಿಯ ನಡುವೆಯೂ 170ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಸಾಹಸಗಾಥೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಮೆಚ್ಚುಗೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
Captain Smith Machar's Flydubai cockpit feat and praise from Israeli Prime Minister Netanyahu.
ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಫ್ಲೈದುಬೈ ವಿಮಾನ ಕಾಕ್‌ಪಿಟ್ ಸಾಹಸ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ಪ್ರಶಂಸೆ.
Published on: 

ಟೆಲ್ ಅವಿವ್: ಬುಧವಾರ (ಸೆ. 30) ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ ಫ್ಲೈದುಬೈ (flydubai) ವಿಮಾನ FZ1073 ರ ಕಾಕ್‌ಪಿಟ್‌ನಲ್ಲಿ ನಡೆದ ಕರಾಳ ಘಟನೆಯೊಂದು ಇಡೀ ವಿಶ್ವವೇ ಬೆಚ್ಚಿಬೀಳುವಂತೆ ಮಾಡಿದೆ.

ಆದರೆ, ಆ ತೀವ್ರ ಕ್ಷಣದಲ್ಲಿ ಸಹ ಕೆಚ್ಚದೆಯ ಧೈರ್ಯವನ್ನು ಪ್ರದರ್ಶಿಸಿ, ನೂರಾರು ಪ್ರಯಾಣಿಕರ ಜೀವ ಉಳಿಸಲು ನಿಂತವರು ನಮ್ಮದೇ ದೇಶದ, ಗುಜರಾತ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್.

ವಿಮಾನದಲ್ಲಿ ಆಗಿದ್ದೇನು?

ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು ಆಕಾಶದಲ್ಲಿ ಹಾರಾಡುತ್ತಿದ್ದಾಗ, ಕಾಕ್‌ಪಿಟ್‌ನಲ್ಲೇ ಒಂದು ದೊಡ್ಡ ದುರಂತಕ್ಕೆ ಸಂಚು ರೂಪುಗೊಂಡಿತ್ತು. ವಿಮಾನದ ಸಹ-ಪೈಲಟ್ ಇದ್ದಕ್ಕಿದ್ದಂತೆ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Captain Smit Machchhar) ಮೇಲೆ ಚಾಕುವಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ವಿಮಾನದ ನಿಯಂತ್ರಣವನ್ನು ತನ್ನ ಹತೊಟಿಗೆ ತೆಗೆದುಕೊಂಡು, ಅದನ್ನು ಪತನಗೊಳಿಸುವುದೇ ಆತನ ಉದ್ದೇಶವಾಗಿತ್ತು.

ಹಠಾತ್ ದಾಳಿಯಿಂದಾಗಿ ವಿಮಾನ ಕೇವಲ 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಸುಮಾರು 14,000 ಅಡಿಗಳಷ್ಟು ಆಳಕ್ಕೆ ಧುಮುಕಿದೆ. ಆಕಾಶದಲ್ಲಿ ವಿಮಾನ ತಲೆಕೆಳಗಾಗಿ, ಯಾವುದೋ ದೊಡ್ಡ ದುರಂತ ಸಂಭವಿಸುತ್ತಿದೆ ಎಂದೇ ಎಲ್ಲರೂ ಭಾವಿಸಿದ್ದರು.

Also Read
ಸೌಜನ್ಯ ಪ್ರಕರಣ: ಮರು ತನಿಖೆ ಮುನ್ನವೇ ಮೊದಲ ಸವಾಲು; ಎಸ್​ಐಟಿ ತಂಡದಿಂದ ಹೆಸರು ಕೈಬಿಡುವಂತೆ ASP ವೆಂಕಟೇಶ್ ಪ್ರಸನ್ನ ಮನವಿ! ASP Venkatesh Prasanna
Captain Smith Machar's Flydubai cockpit feat and praise from Israeli Prime Minister Netanyahu.

ಸಾವಿನಂಚಿನಲ್ಲೂ ಕಳಚದ ಧೈರ್ಯ!

ಚಾಕು ಇರಿತದಿಂದ ತೀವ್ರವಾಗಿ ರಕ್ತಸ್ರಾವವಾಗುತ್ತಿದ್ದರೂ, ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ ಧೃತಿಗೆಡಲಿಲ್ಲ. ದಾಳಿಕೋರನ ಕೃತ್ಯವನ್ನು ಪ್ರತಿರೋಧಿಸುತ್ತಲೇ, ಕೊನೆಯುಸಿರು ಇರುವವರೆಗೂ ಹೋರಾಡಿದರು. ತಾವು ಸಂಪೂರ್ಣವಾಗಿ ಕುಸಿದು ಬೀಳುವ ಮುನ್ನವೇ ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಅವರು ಯಶಸ್ವಿಯಾದರು.

ಕ್ಯಾಪ್ಟನ್ ನೀಡಿದ ಆ ಸಣ್ಣ ಸುಳಿವು ಹಾಗೂ ಬಾಗಿಲು ತೆರೆದುಕೊಂಡಿದ್ದರಿಂದ ತಕ್ಷಣವೇ ಎಚ್ಚೆತ್ತುಕೊಂಡ ಪ್ರಯಾಣಿಕರು ಮತ್ತು ಸಿಬ್ಬಂದಿ ಒಳಗೆ ನುಗ್ಗಿ, ಆ ದುಷ್ಟ ಸಹ-ಪೈಲಟ್‌ನನ್ನು ಹೆಡೆಮುರಿ ಕಟ್ಟಿ ನಿಯಂತ್ರಣಕ್ಕೆ ತೆಗೆದುಕೊಂಡರು. ಬಳಿಕ ಮತ್ತೊಂದು ತಂಡದ ಪೈಲಟ್‌ಗಳು ವಿಮಾನದ ನಿಯಂತ್ರಣ ಪಡೆದು, ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ಅದನ್ನು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿಸಿದರು. ಹೀಗಾಗಿ, ವಿಮಾನದಲ್ಲಿದ್ದ 174ಕ್ಕೂ ಅಧಿಕ ಪ್ರಯಾಣಿಕರ ಜೀವ ಉಳಿಯಿತು.

ಇಸ್ರೇಲ್​ ಪ್ರಧಾನಿ ಸೆಲ್ಯೂಟ್​!

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು 'ಎಕ್ಸ್' (X) ವೇದಿಕೆಯಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಸಾಧಾರಣ ಧೈರ್ಯ ಪ್ರದರ್ಶಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ನಿಜವಾದ ನಾಯಕ. ಅವರು ದೊಡ್ಡ ದುರಂತವೊಂದನ್ನು ತಪ್ಪಿಸಿ, ಅನೇಕ ಅಮೂಲ್ಯ ಜೀವಗಳನ್ನು ಉಳಿಸಿದ್ದಾರೆ ಎಂದು ಬಣ್ಣಿಸಿದ್ದಾರೆ. ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮಚ್ಚಾರ್ ಅವರ ಆರೋಗ್ಯದ ಮೇಲೆ ನಿರಂತರ ನಿಗಾ ಇರಿಸಿದ್ದು, ಅವರು ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಒಂದು ದಶಕಕ್ಕೂ ಹೆಚ್ಚು ಕಾಲ ವಾಣಿಜ್ಯ ವಿಮಾನಯಾನ ಕ್ಷೇತ್ರದಲ್ಲಿ ಅನುಭವವಿರುವ, ಸ್ಪೈಸ್‌ಜೆಟ್‌ನಲ್ಲಿ ಸುಮಾರು 11 ವರ್ಷ ಸೇವೆ ಸಲ್ಲಿಸಿರುವ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಇಂದು ಕೇವಲ ಭಾರತಕ್ಕಷ್ಟೇ ಅಲ್ಲ, ಇಡೀ ಜಗತ್ತಿನ ಮುಂದೆ ಹೀರೋ ಆಗಿ ಮೂಡಿಬಂದಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net