ತಂದೆಯ ಅಂತ್ಯಸಂಸ್ಕಾರದಲ್ಲಾದರೂ ಕಾಣಿಸಿಕೊಳ್ಳುತ್ತಾರಾ ಮೊಜ್ತಾಬಾ ಖಮೇನಿ?

Mojtaba Khamenei
Mojtaba Khamenei
Published on

ಪ್ರಮುಖ ಮುಖ್ಯಾಂಶಗಳು

  • ತಂದೆಯ ಹತ್ಯೆಯ ಬಳಿಕ ಸುಪ್ರೀಂ ಲೀಡರ್ ಆದ ಪುತ್ರ; ನಾಲ್ಕು ತಿಂಗಳಾದರೂ ಸಾರ್ವಜನಿಕವಾಗಿ ಕಾಣಿಸಿಲ್ಲ!
  • ಗಂಭೀರ ಗಾಯ, ರಹಸ್ಯ ಜೀವನ; ಇರಾನ್ ಹೊಸ ಸುಪ್ರೀಂ ಲೀಡರ್‌ಗಾಗಿ ಕಾಯುತ್ತಿದೆ ಜನತೆ
  • ತಂದೆ ಹತ್ಯೆಯಾದ ಬಳಿಕ ನೆರಳಿನಲ್ಲೇ ನಾಯಕತ್ವ; ಅಂತ್ಯಕ್ರಿಯೆ ವೇಳೆ ಬಹಿರಂಗವಾಗುತ್ತಾರಾ ಮೊಜ್ತಬಾ?
ತೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಾಮೆನೇಯಿ ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆಗೆ ಇರಾನ್ ಸರ್ಕಾರ ಭರ್ಜರಿ ಸಿದ್ಧತೆ ನಡೆಸಿದೆ. ಜುಲೈ 4ರಿಂದ ಅಂತಿಮ ವಿಧಿವಿಧಾನಗಳು ಆರಂಭವಾಗಲಿದ್ದು, ಜುಲೈ 9ರಂದು ಮಶ್ಹದ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇದೇ ವೇಳೆ ಹೊಸ ಸುಪ್ರೀಂ ಲೀಡರ್ ಆಗಿರುವ ಪುತ್ರ ಮೊಜ್ತಾಬಾ ಖಮೇನಿ (Mojtaba Khamenei) ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆಯೇ ಎಂಬ ಕುತೂಹಲ ಹೆಚ್ಚಾಗಿದೆ.

ಗಾಯಗೊಂಡ ಬಳಿಕ ಸಾರ್ವಜನಿಕವಾಗಿ ಕಾಣಿಸಿಲ್ಲ

ವರದಿಯ ಪ್ರಕಾರ, ಫೆಬ್ರವರಿ 28ರಂದು ತೆಹ್ರಾನ್‌ನಲ್ಲಿರುವ ಸುಪ್ರೀಂ ಲೀಡರ್ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಅಲಿ ಖಾಮೆನೇಯಿ ಮೃತಪಟ್ಟಿದ್ದು, ಪುತ್ರ ಮೊಜ್ತಬಾ ಖಾಮೆನೇಯಿ ಗಂಭೀರವಾಗಿ ಗಾಯಗೊಂಡಿದ್ದರು. ಅವರ ಮುಖ ಮತ್ತು ಕಾಲಿಗೆ ತೀವ್ರ ಗಾಯಗಳಾಗಿವೆ ಎನ್ನಲಾಗಿದೆ. ತಂದೆಯ ನಿಧನದ ಬಳಿಕ ಅವರು ಸುಪ್ರೀಂ ಲೀಡರ್ ಆಗಿ ಅಧಿಕಾರ ವಹಿಸಿಕೊಂಡಿದ್ದರೂ, ಇದುವರೆಗೆ ಒಮ್ಮೆಯೂ ಸಾರ್ವಜನಿಕವಾಗಿ, ವಿಡಿಯೊದಲ್ಲಿ ಅಥವಾ ಧ್ವನಿ ಸಂದೇಶದಲ್ಲೂ ಕಾಣಿಸಿಕೊಂಡಿಲ್ಲ. ಅವರ ಹೆಸರಿನಲ್ಲಿ ಹೊರಬರುವ ಎಲ್ಲ ಸಂದೇಶಗಳನ್ನು ಸರ್ಕಾರಿ ಟಿವಿಯ ನಿರೂಪಕರು ಅಥವಾ ಸರ್ಕಾರಿ ವೆಬ್‌ಸೈಟ್‌ಗಳು ಪ್ರಕಟಿಸುತ್ತಿವೆ.

ಅಮೆರಿಕ-ಇಸ್ರೇಲ್‌ಗೆ ಎಚ್ಚರಿಕೆ

ಮಾರ್ಚ್‌ನಲ್ಲಿ ಬಿಡುಗಡೆಯಾದ ಮೊದಲ ಸಂದೇಶದಲ್ಲಿ ಮೊಜ್ತಬಾ ಖಾಮೆನೇಯಿ, ಇರಾನ್ ಯುದ್ಧ ಬಯಸುವುದಿಲ್ಲ. ಆದರೆ ತನ್ನ ಹಕ್ಕುಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೋರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣ ಮುಂದುವರಿಸುವುದಾಗಿ, ಅಗತ್ಯವಿದ್ದರೆ ಅಮೆರಿಕದ ಸೇನಾ ನೆಲೆಗಳ ಮೇಲಿನ ದಾಳಿಯನ್ನೂ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
ಏಪ್ರಿಲ್‌ನಲ್ಲಿ ಬಿಡುಗಡೆಗೊಂಡ ಮತ್ತೊಂದು ಸಂದೇಶದಲ್ಲಿ ಹೋರ್ಮುಜ್ ಜಲಸಂಧಿಯ ನಿರ್ವಹಣೆ ಹೊಸ ಹಂತಕ್ಕೆ ಸಾಗಲಿದೆ ಎಂದು ಹೇಳಲಾಗಿತ್ತು. ನೆರೆಯ ರಾಷ್ಟ್ರಗಳೊಂದಿಗೆ ಸ್ನೇಹ ಮುಂದುವರಿಯುತ್ತದೆ. ಆದರೆ ಅಮೆರಿಕದ ಸೇನಾ ನೆಲೆಗಳ ವಿರುದ್ಧ ಕಠಿಣ ನಿಲುವು ಮುಂದುವರಿಯಲಿದೆ ಎಂಬ ಸಂದೇಶವೂ ನೀಡಲಾಗಿತ್ತು.

ವದಂತಿಗಳಿಗೆ ಕಾರಣವಾದ ಗೈರು ಹಾಜರಿ

ಇರಾನ್ ಅಧಿಕಾರಿಗಳು ಮೊಜ್ತಬಾ ಖಾಮೆನೇಯಿ ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದು, ಧ್ವನಿ ಸಂಪರ್ಕದ ಮೂಲಕ ಆಡಳಿತದ ಪ್ರಮುಖ ನಿರ್ಧಾರಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ನಾಲ್ಕು ತಿಂಗಳಾದರೂ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಕೆಲವರು ಭದ್ರತಾ ಕಾರಣದಿಂದ ಅವರನ್ನು ಸಾರ್ವಜನಿಕರಿಂದ ದೂರ ಇಡಲಾಗಿದೆ ಎಂದು ಹೇಳಿದರೆ, ಮತ್ತೂ ಕೆಲವರು ಗಂಭೀರ ಗಾಯವೇ ಇದಕ್ಕೆ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಸಂದೇಶದಲ್ಲಿ ಜೂನ್ 2025ರ ಯುದ್ಧದ ವೇಳೆ ನಡೆದ ಅಪರಾಧಗಳಿಗೆ ಹೊಣೆಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಂಗಕ್ಕೆ ಸೂಚಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಂತ್ಯಕ್ರಿಯೆಯತ್ತ ಎಲ್ಲರ ಚಿತ್ತ

ಜುಲೈ 4ರಂದು ತೆಹ್ರಾನ್‌ನಲ್ಲಿ ಅಂತಿಮ ಯಾತ್ರೆ ಆರಂಭವಾಗಲಿದ್ದು, ನಂತರ ಕೋಮ್ ನಗರದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಇರಾಕ್‌ನ ಪವಿತ್ರ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ಜುಲೈ 9ರಂದು ಮಶ್ಹದ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇರಾನ್‌ನ ಉನ್ನತ ನಾಯಕರು ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಂಪ್ರದಾಯವಿದೆ. ಹೀಗಾಗಿ ಮೊಜ್ತಬಾ ಖಾಮೆನೇಯಿ ಈ ಬಾರಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ದೇಶದೊಳಗೆ ಹಾಗೂ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ ಎಂದು ವರದಿ ಹೇಳಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net