60,000 ಪೈಕಿ ಕೆಲವೇ ಕೆಲವರಿಗೆ ಮಾತ್ರ ಸ್ವಯಂ ಎಕ್ಸಿಟ್​ ಆಗುವಂತೆ ಟೆಕ್​ ದೈತ್ಯ ಮೈಕ್ರೋಸಾಫ್ಟ್ ಆಫರ್​! | Microsoft ​ ​

Microsoft ​    ​
60,000 ಪೈಕಿ ಕೆಲವೇ ಕೆಲವರಿಗೆ ಮಾತ್ರ ಎಕ್ಸಿಟ್​ ಆಫರ್ ಒಪ್ಪುವಂತೆ ಮೈಕ್ರೋಸಾಫ್ಟ್ ಡಿಮಾಂಡ್​ ಮಾಡ್ತಿರುವುದೇಕೆ? | Microsoft ​ ​
Published on: 

ನವದೆಹಲಿ: ಕಳೆದ ವರ್ಷ ಮತ್ತು ಈ ವರ್ಷದ ಆರಂಭದಲ್ಲಿ ಅದೆಷ್ಟೋ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಬಿಸಾಡಿರುವ ಹೆಸರಾಂತ ಟೆಕ್ ದೈತ್ಯ​ ಸಂಸ್ಥೆ ಮೈಕ್ರೋಸಾಫ್ಟ್, ಈ ವರ್ಷವು ಭಾರಿ ಉದ್ಯೋಗ ಕಡಿತಕ್ಕೆ ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದೆ. ಇದರ ಬೆನ್ನಲ್ಲೇ, ಮೊನ್ನೆ ಮೊನ್ನೆಯಷ್ಟೇ 60 ಸಾವಿರಕ್ಕೂ ಹೆಚ್ಚು ನೌಕರರಿಗೆ ತಾವೇ ಕೆಲಸ ಬಿಟ್ಟುಹೋಗುವಂತೆ​ ಕೊಟ್ಟಿರುವ ಸ್ವಯಂ ಎಕ್ಸಿಟ್​ ಆಫರ್ ಸದ್ಯ ಟೆಕ್​​ ಉದ್ಯೋಗ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಭಾರಿ ಪ್ರಮಾಣದ ಹೂಡಿಕೆ ಮಾಡುತ್ತಿರುವ ಮೈಕ್ರೋಸಾಫ್ಟ್, ಎಷ್ಟು ಸಾಧ್ಯವೋ ಅಷ್ಟು ವೆಚ್ಚ ಕಡಿತಗೊಳಿಸುವ ಉದ್ದೇಶದಿಂದ ಸುಮಾರು 60 ಸಾವಿರ ಉದ್ಯೋಗಿಗಳಿಗೆ ಸ್ವಯಂ ವಿದಾಯ ಹೇಳುವ ಆಫರ್​ ಅನ್ನು ನೀಡಿದೆ. ಕಂಪನಿಯ ಒಟ್ಟು ಉದ್ಯೋಗಿಗಳಲ್ಲಿ ಸುಮಾರು ಕಾಲು ಭಾಗದಷ್ಟು ಮಂದಿ ಈ ಯೋಜನೆಗೆ ಅರ್ಹರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಅಮೆರಿಕ, ಕೆನಡಾ, ಭಾರತ ಮತ್ತು ಬ್ರಿಟನ್‌ನ ಆಯ್ದ ತಂಡಗಳಲ್ಲಿ ಉಪಾಧ್ಯಕ್ಷರ ಹಂತದವರೆಗಿನ ಉದ್ಯೋಗಿಗಳು ಈ ಯೋಜನೆಯ ಪ್ರಯೋಜನ ಪಡೆಯಬಹುದು ಎನ್ನಲಾಗಿದೆ. ಆದರೆ, ಡೇಟಾ ಸೆಂಟರ್‌ಗಳು, ಸೇಲ್ಸ್​ ಮತ್ತು ಮಾರುಕಟ್ಟೆ ವಿಭಾಗಗಳ ಕೆಲವು ಉದ್ಯೋಗಿಗಳಿಗೆ ಈ ಆಫರ್ ಅನ್ವಯಿಸುವುದಿಲ್ಲ ಎಂಬುದನ್ನು ಸಂಸ್ಥೆಯು ಒತ್ತಿ ಹೇಳಿದೆ. ಸುಮಾರು 60 ಸಾವಿರ ಉದ್ಯೋಗಿಗಳ ಪೈಕಿ 3000 ಮಂದಿಗೆ ಆಫರ್ ಅನ್ನು​ ಒಪ್ಪಿಕೊಳ್ಳುವಂತೆ ತಿಳಿಸಲಾಗಿದೆ.

ಈ ಕುರಿತಾಗಿ ಸ್ವತಃ ಮೈಕ್ರೋಸಾಫ್ಟ್ ಸಿಎಫ್‌ಒ ಆಮಿ ಹುಡ್ ಮಾತನಾಡಿ, ಕಂಪನಿಯ ಸ್ವಯಂಪ್ರೇರಿತ ನಿರ್ಗಮನ ಪ್ರಸ್ತಾಪವನ್ನು ಬಹಳ ಕಡಿಮೆ ಉದ್ಯೋಗಿಗಳು ಸ್ವೀಕರಿಸುತ್ತಾರೆ ಎಂದು ನಿರೀಕ್ಷಿಸಿದ್ದೇವೆ. ಇದು ಹಲವಾರು ದೇಶಗಳಲ್ಲಿ ಸುಮಾರು 60,000 ಉದ್ಯೋಗಿಗಳಿಗೆ ಮುಕ್ತವಾಗಿದೆ. ಆಂತರಿಕ ಜ್ಞಾಪಕ ಪತ್ರದಲ್ಲಿ, ಹೆಚ್ಚಿನ ಅರ್ಹ ಉದ್ಯೋಗಿಗಳು ಉಳಿಯುವ ಸಾಧ್ಯತೆಗಳಿವೆ ಎಂದು ಸೂಚಿಸಿದ್ದಾರೆ.

ಈ ವಾರ ನಾವು ಘೋಷಿಸಿದ ಸ್ವಯಂಪ್ರೇರಿತ ನಿರ್ಗಮನ ಪ್ರಸ್ತಾಪದ ಹಿಂದಿನ ತಾರ್ಕಿಕತೆಯ ಬಗ್ಗೆ ಕೆಲವು ಪ್ರಶ್ನೆಗಳಿವೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ನಮ್ಮ ಉದ್ದೇಶ, ಉದ್ಯೋಗಿಗಳು ತಮ್ಮದೇ ಆದ ನಿರ್ಧಾರಗಳ ಮೇಲೆ ಕಂಪನಿಯನ್ನು ತೊರೆಯಲು ಆಯ್ಕೆ ನೀಡುವುದು. ಮೈಕ್ರೋಸಾಫ್ಟ್‌ನಲ್ಲಿ ಬೆಳವಣಿಗೆಯ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಕೆಲವೇ ಜನರು ಈ ಆಫರ್​ ಅನ್ನು ಆಯ್ಕೆ ಮಾಡುತ್ತಾರೆ ಎಂಬುದು ನಮ್ಮ ನಿರೀಕ್ಷೆ ಎಂದು ಹುಡ್ ಹೇಳಿದ್ದಾರೆ.

Also Read
ಹಾಲಿನ ದರ ಏರಿಕೆ ಬೆನ್ನಲ್ಲೇ ಬಸ್​ ಟಿಕೆಟ್​ ಬೆಲೆ ಹೆಚ್ಚಳ? ನವೆಂಬರ್​ ಮೊದಲ ವಾರದಲ್ಲಿ ನಿರ್ಧರಿಸುವುದಾಗಿ ಬೈರತಿ ಸುರೇಶ್ ಹೇಳಿಕೆ
Microsoft ​    ​

ಉದ್ಯೋಗಿಗಳಿಗೆ ತಮ್ಮ ಮುಂದಿನ ವೃತ್ತಿಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆಚ್ಚಿನ ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶ ಎಂದು ಕಂಪನಿಯ ಮುಖ್ಯ ಮಾನವ ಸಂಪನ್ಮೂಲ (ಎಚ್​ಆರ್​) ಆಮಿ ಕೋಲ್ಮನ್ ಸ್ಪಷ್ಟಪಡಿಸಿದ್ದಾರೆ. ಈ ವರ್ಷ ಮೈಕ್ರೋಸಾಫ್ಟ್ ನೀಡುತ್ತಿರುವ ಎರಡನೇ ಸ್ವಯಂ ಗುಡ್​ಬೈ ಆಫರ್ ಇದಾಗಿದೆ. ಏಪ್ರಿಲ್‌ನಲ್ಲಿ ಅಮೆರಿಕದ ಉದ್ಯೋಗಿಗಳ ಪೈಕಿ ಸುಮಾರು ಶೇ.7ರಷ್ಟು ಮಂದಿಗೆ ಇದೇ ರೀತಿಯ ಅವಕಾಶ ನೀಡಲಾಗಿತ್ತು. ಅವರಲ್ಲಿ ಶೇ. 30ರಷ್ಟು ಮಂದಿ ಇದನ್ನು ಸ್ವೀಕರಿಸಿದ್ದರು ಎಂದು ಸಿಎನ್​ಬಿಸಿ ವರದಿ ಮಾಡಿದೆ.

ಈ ನಿಯಮಗಳು ಕಂಪನಿಯ ಸಾಮಾನ್ಯ ಬೇರ್ಪಡಿಕೆ ಪ್ಯಾಕೇಜ್‌ಗಳಂತೆಯೇ ಇರಲಿದೆ. ಉದ್ಯೋಗಿಗಳು ಈ ಆಫರ್​ ಅನ್ನು ಸ್ವೀಕರಿಸಬೇಕೋ, ಬೇಡವೋ ಎಂಬುದನ್ನು ನಿರ್ಧರಿಸಲು ಈ ವರ್ಷದ ಡಿಸೆಂಬರ್ ಮೊದಲ ವಾರದವರೆಗೆ ಸಮಯವಿದೆ. ಪ್ರಸ್ತುತ ಸಮಯದಲ್ಲಿ ಸಂಸ್ಥೆಯು ಹೊಸ ನೌಕರರ ನೇಮಕ ಕುರಿತಾಗಿ ಯಾವುದೇ ಪ್ಲ್ಯಾನ್​ ಇಲ್ಲವೆಂದು ಹೇಳಿದೆ,(ಏಜೆನ್ಸೀಸ್).