ಇಡೀ ಅಮೆರಿಕವನ್ನೇ ನಡುಗಿಸುತ್ತಿದೆ 4 ಅಡಿ ಉದ್ದ, 5 ಕೆಜಿ ತೂಕದ ದೈತ್ಯ ಹಲ್ಲಿ: ಕಾರಣ ನಿಜಕ್ಕೂ ಭಯಾನಕವಾಗಿದೆ! Giant Lizard

ಇಡೀ ಅಮೆರಿಕವನ್ನೇ ನಡುಗಿಸುತ್ತಿದೆ 4 ಅಡಿ ಉದ್ದ, 5 ಕೆಜಿ ತೂಕದ ದೈತ್ಯ ಹಲ್ಲಿ: ಕಾರಣ ನಿಜಕ್ಕೂ ಭಯಾನಕವಾಗಿದೆ! Giant Lizard
ಇಡೀ ಅಮೆರಿಕವನ್ನೇ ನಡುಗಿಸುತ್ತಿದೆ 4 ಅಡಿ ಉದ್ದ, 5 ಕೆಜಿ ತೂಕದ ದೈತ್ಯ ಹಲ್ಲಿ: ಕಾರಣ ನಿಜಕ್ಕೂ ಭಯಾನಕವಾಗಿದೆ! Giant Lizard
Published on

ಪ್ರಮುಖ ಮುಖ್ಯಾಂಶಗಳು

  • ದೈತ್ಯ ಹಲ್ಲಿಯಂತೆ ಕಾಣುವ ಈ ಕ್ರೂರ ಜೀವಿಯ ಹೆಸರೇ 'ಅರ್ಜೆಂಟೈನ್ ಬ್ಲ್ಯಾಕ್ ಅಂಡ್ ವೈಟ್ ತೇಗು'
  • ಪ್ರಸ್ತುತ ಅಮೆರಿಕದ ವನ್ಯಜೀವಿ ಸಂರಕ್ಷಣಾ ಇಲಾಖೆಯ ನಿದ್ದೆಗೆಡಿಸಿರುವ ಹೆಮ್ಮಾರಿ
  • ಕೇವಲ ನೋಟದಲ್ಲಷ್ಟೇ ಅಲ್ಲದೆ, ಪ್ರಕೃತಿ ಮತ್ತು ಜೀವಸಂಕುಲಕ್ಕೆ ಭೀಕರ ಹಾನಿ ಉಂಟುಮಾಡುವ ಈ ಅಪಾಯಕಾರಿ ದೈತ್ಯ ಹಲ್ಲಿ
  • ಎಲ್ಲೇ ಕಣ್ಣಿಗೆ ಬಿದ್ದರೂ ತಕ್ಷಣವೇ ವರದಿ ಮಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ ಅಮೆರಿಕ ಅಧಿಕಾರಿಗಳು
Giant Lizard : ನಾಲ್ಕು ಅಡಿ ಉದ್ದ, ಬರೋಬ್ಬರಿ 5 ಕೆಜಿ ತೂಕ, ನೋಡಲು ದೈತ್ಯ ಹಲ್ಲಿಯಂತೆ ( Giant Lizard ) ಕಾಣುವ ಈ ಕ್ರೂರ ಜೀವಿಯ ಹೆಸರೇ 'ಅರ್ಜೆಂಟೈನ್ ಬ್ಲ್ಯಾಕ್ ಅಂಡ್ ವೈಟ್ ತೇಗು' (Argentine Black and White Tegu). ಪ್ರಸ್ತುತ ಅಮೆರಿಕದ ವನ್ಯಜೀವಿ ಸಂರಕ್ಷಣಾ ಇಲಾಖೆಯ ನಿದ್ದೆಗೆಡಿಸಿರುವ ಈ ಹೆಮ್ಮಾರಿ ಜೀವಿಗಳ ಆಕ್ರಮಣದ ಬಗ್ಗೆ ಅಧಿಕಾರಿಗಳು ಜನರಿಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ಕೇವಲ ನೋಟದಲ್ಲಷ್ಟೇ ಅಲ್ಲದೆ, ಪ್ರಕೃತಿ ಮತ್ತು ಜೀವಸಂಕುಲಕ್ಕೆ ಭೀಕರ ಹಾನಿ ಉಂಟುಮಾಡುವ ಈ ಅಪಾಯಕಾರಿ ದೈತ್ಯ ಹಲ್ಲಿ ಎಲ್ಲೇ ಕಣ್ಣಿಗೆ ಬಿದ್ದರೂ ತಕ್ಷಣವೇ ವರದಿ ಮಾಡುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಖಡಕ್ ಸೂಚನೆ ನೀಡಿದ್ದು, ಸದ್ಯ ಇದರ ಹಾವಳಿ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ!
ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ಉಡ ಅಥವಾ ಇಗುವಾನಾ (Iguana) ಜಾತಿಗೆ ಸೇರಿದ ದೈತ್ಯ ಹಲ್ಲಿಗಳಂತೆ ಕಾಣುವ ಈ 'ತೇಗು' ಜೀವಿಗಳು, ಪರಿಸರ ಪ್ರೇಮಿಗಳ ನಿದ್ದೆಗೆಡಿಸಿವೆ. ಇತರ ಅಪರೂಪದ ಪ್ರಾಣಿ-ಪಕ್ಷಿ ಸಂಕುಲವನ್ನು ಸಂಪೂರ್ಣವಾಗಿ ನಾಶಪಡಿಸುವ ಹಾಗೂ ಇಡೀ ಪರಿಸರ ವ್ಯವಸ್ಥೆಯ ಸಮತೋಲನವನ್ನೇ ಏರುಪೇರು ಮಾಡುವ ಭೀಕರ ಸಾಮರ್ಥ್ಯ ಈ ದೈತ್ಯ ಹಲ್ಲಿಗಳಿಗಿದೆ. ಈ ಜೀವಿಗಳ ಇದೇ ಅಪಾಯಕಾರಿ ಗುಣ ಇದೀಗ ವನ್ಯಜೀವಿ ಸಂರಕ್ಷಣಾ ಇಲಾಖೆಯ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಮೂಲತಃ ಬ್ರೆಜಿಲ್, ಅರ್ಜೆಂಟೀನಾ ಮತ್ತು ಪರಾಗ್ವೆಯಂತಹ ಲ್ಯಾಟಿನ್ ಅಮೆರಿಕನ್ ದೇಶಗಳಲ್ಲಿ ಮಾತ್ರ ಕಂಡುಬರುತ್ತಿದ್ದ ಈ ಜೀವಿಗಳು ಜಗತ್ತಿನಾದ್ಯಂತ ಪಸರಿಸಿದ್ದರ ಹಿಂದೆ ಒಂದು ಆಘಾತಕಾರಿ ಕಾರಣವಿದೆ. ಈ ಭಯಾನಕ ಜೀವಿಗಳನ್ನು ಸಾಕುಪ್ರಾಣಿಗಳನ್ನಾಗಿ ಸಾಕುವ ಹುಚ್ಚು ಹತ್ತಿಸಿಕೊಂಡ ಹಲವು ಪ್ರಾಣಿ ಪ್ರೇಮಿಗಳು, ಇವುಗಳನ್ನು ವಿದೇಶಗಳಿಂದ ಅಮೆರಿಕದ ಫ್ಲೋರಿಡಾ ಮತ್ತು ಜಾರ್ಜಿಯಾದಂತಹ ನಗರಗಳಿಗೆ ತಂದು ಬಿಟ್ಟಿದ್ದೇ ಇಂದಿನ ಈ ಭೀಕರ ಆಕ್ರಮಣಕ್ಕೆ ಪ್ರಮುಖ ಕಾರಣವಾಗಿದೆ.
ಮಾರುಕಟ್ಟೆಯಲ್ಲಿ ಈ ಅಪರೂಪದ ಜೀವಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ, ಇವುಗಳನ್ನು ಅಕ್ರಮವಾಗಿ ಖರೀದಿಸಿ ತಳಿ ಅಭಿವೃದ್ಧಿ ಮಾಡುವ ಮಾಫಿಯಾಗಳು ಸಕ್ರಿಯವಾಗಿವೆ. ಆದರೆ, ಇವುಗಳನ್ನು ಆರಂಭದಲ್ಲಿ ಮನೆಯಲ್ಲಿ ಸಾಕಿದರೂ, ಅತ್ಯಂತ ವೇಗವಾಗಿ ತೂಕ ಹೆಚ್ಚಿಸಿಕೊಂಡು ದೈತ್ಯಾಕಾರವಾಗಿ ಬೆಳೆಯುವುದರಿಂದ ಕಂಗಾಲಾದ ಜನರು ಇವುಗಳನ್ನು ಮನೆಗಳಿಂದ ಹೊರಹಾಕಲು ಪ್ರಾರಂಭಿಸಿದ್ದಾರೆ. ಕಾಲಾನಂತರದಲ್ಲಿ ಜನರ ಈ ನಡೆ ದೊಡ್ಡದೊಂದು ಗಂಡಾಂತರವನ್ನೇ ಸೃಷ್ಟಿಸಿದೆ. ಪ್ರಸ್ತುತ ಕಾಡು ಸೇರಿರುವ ಈ ಜೀವಿಗಳು ತಮ್ಮ ಕಣ್ಣಿಗೆ ಕಾಣುವ ಪ್ರತಿಯೊಂದು ಪ್ರಾಣಿ-ಪಕ್ಷಿಗಳ ಮೊಟ್ಟೆಗಳನ್ನು ನುಂಗಿ ನೀರು ಕುಡಿಯುತ್ತಿದ್ದು, ಇದರಿಂದಾಗಿ ಹಲವು ಜೀವಿಗಳು ಭೂಮಿಯಿಂದ ಶಾಶ್ವತವಾಗಿ ನಿರ್ನಾಮವಾಗುವ ಭೀತಿ ಎದುರಾಗಿದೆ.
ಅಮೆರಿಕದ ಜಾರ್ಜಿಯಾದಲ್ಲಂತೂ ಈ ತೇಗು ಹಲ್ಲಿಗಳು ಅಲ್ಲಿನ ಸಂರಕ್ಷಿತ ವನ್ಯಜೀವಿಗಳ ಪಟ್ಟಿಯಲ್ಲಿರುವ ಗೋಫರ್ ಆಮೆಗಳು, ಕಾಡು ಕೋಳಿಗಳು ಹಾಗೂ ಮೊಸಳೆಗಳ ಮೊಟ್ಟೆಗಳನ್ನು ತಿಂದು ಮಾರಣಹೋಮ ನಡೆಸುತ್ತಿವೆ. ಇವುಗಳು ಅತಿ ವೇಗವಾಗಿ ಬೆಳೆಯುವುದರಿಂದ ಇವುಗಳನ್ನು ಬೇಟೆಯಾಡುವ ಇತರ ಕ್ರೂರ ಪ್ರಾಣಿಗಳೂ ಕಾಡಿನಲ್ಲಿ ಇಲ್ಲದಂತಾಗಿದ್ದು, ಈ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿದೆ. ಅರ್ಜೆಂಟೈನ್ ಬ್ಲ್ಯಾಕ್ ಆಂಡ್ ವೈಟ್ ತೇಗು ಸಾಮಾನ್ಯವಾಗಿ ಮನುಷ್ಯರ ಮೇಲೆ ನೇರ ದಾಳಿ ಮಾಡದಿದ್ದರೂ, ಕೃಷಿ ಫಾರ್ಮ್‌ಗಳಲ್ಲಿ ನುಗ್ಗಿ ತೀವ್ರ ಹಾನಿ ಉಂಟುಮಾಡುತ್ತಿವೆ. ಅಷ್ಟೇ ಅಲ್ಲದೆ, ಇವುಗಳ ಮೂಲಕ ಅಪಾಯಕಾರಿ ಬ್ಯಾಕ್ಟೀರಿಯಾಗಳು ಹರಡುವ ಭೀತಿಯೂ ಎದುರಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net