

ಜಿನೀವಾ: ಜಿನೀವಾದಲ್ಲಿ ನಡೆಯುತ್ತಿರುವ 63 ನೇ ಸಂಯುಕ್ತ ರಾಷ್ಟ್ರಗಳ ಮಾನವ ಹಕ್ಕು ಮಂಡಳಿ (UNHRC) ಸಭೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಪಾಕಿಸ್ತಾನ ಸರ್ಕಾರವು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಮಾಡುತ್ತಿದೆ ಎಂದು ಮಾನವ ಹಕ್ಕು ಹೋರಾಟಗಾರ್ತಿ ತಸ್ಲೀಮಾ ಅಖ್ತರ್ (Tasleema Akhtar) ಕಿಡಿಕಾರಿದ್ದಾರೆ.
ಭಾರತದ ಆಡಳಿತವಿರುವ ಕಾಶ್ಮೀರ ಹಾಗೂ ಜಮ್ಮು ಭಾಗದಲ್ಲಿ ಶಿಕ್ಷಣ, ಮೂಲಸೌಕರ್ಯ ಸೇರಿದಂತೆ ಮಹತ್ವದ ಬೆಳವಣಿಗೆ, ಅಭಿವೃದ್ಧಿ ಕಂಡುಬರುತ್ತಿದೆ. ಆದರೆ ಪಾಕಿಸ್ತಾನದ ಆಡಳಿತವಿರುವ ಕಾಶ್ಮೀರದಲ್ಲಿ ಕೇವಲ ಹಿಂಸಾಚಾರ ತಾಂಡವಾಡುತ್ತಿದೆ ಎಂದು ತಸ್ಲೀಮಾ ಅಖ್ತರ್ ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ಮಾನವನ್ನು ಹಜಾರು ಮಾಡಿದ್ದಾರೆ.
ಸಂಯುಕ್ತ ರಾಷ್ಟ್ರಗಳ ಸಭೆಯಲ್ಲಿ ಮಾತನಾಡಿದ ತಸ್ಲೀಮಾ ಅಖ್ತರ್, ಕಳೆದ ಕೆಲ ತಿಂಗಳುಗಳಿಂದ ಪಾಕಿಸ್ತಾನದ ಆಡಳಿತವಿರುವ ಕಾಶ್ಮೀರದ ಪ್ರಾಂತಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಅಲ್ಲಿಯ ಜನರು ಆಹಾರ, ಉದ್ಯೋಗ ಸೇರಿದಂತೆ ಮೂಲಭೂತ ಸೌಕರ್ಯಗಳಿಗಾಗಿ ಸರ್ಕಾರಕ್ಕೆ ಮನವಿ ನೀಡಿದ್ದಾರೆ.
ಮನವಿಗೆ ಸರಿಯಾದ ಪ್ರತಿಕ್ರಿಯೆ ದೊರೆಯದ ಹಿನ್ನಲೆ, ಪ್ರತಿಭಟನೆಗೆ ಮುಂದಾಗಿದ್ದರೆ. ಆದರೆ ಪಾಕಿಸ್ತಾನ ಸರ್ಕಾರ ಹಾಗೂ ಸೈನ್ಯವು ಈ ಪ್ರತಿಭಟನೆಯನ್ನು ಹತ್ತಿಕ್ಕಲು ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ. ಪ್ರತಿಭಟನೆಯ ನಾಯಕರನ್ನು ಬಂಧಿಸುವ, ಅಪಹರಿಸುವ ಹಾಗೂ ಕೆಲವೊಂದು ಸಂದರ್ಭದಲ್ಲಿ ಗುಂಡಿಕ್ಕಿ ಕೊಂದಿರುವ ವರದಿ ಲಭ್ಯವಾಗಿದೆ.
ಅಲ್ಲಿಯ ಜನಕ್ಕೆ ಸರಿಯಾದ ಸೌಲಭ್ಯ ದೊರೆಯದ ಹಿನ್ನಲೆಯಲ್ಲಿ ಈ ಹೋರಾಟ ನಡೆಯುತ್ತಿದ್ದು, ಇದನ್ನು ಸರಿಪಡಿಸುವ ಬದಲು ತನ್ನ ನಾಗರಿಕರ ಮೇಲೆಯೇ ಮಿಲಿಟರಿ ಪ್ರಯೋಗ ಮಾಡುತ್ತಿರುವುದು ಆಘಾತಕಾರಿ ಬೆಳವಣಿಗೆ ಯಾಗಿದೆ ಎಂದು ತಸ್ಲೀಮಾ ಕಿಡಿಕಾರಿದ್ದಾರೆ.
ಒಂದು ಕಡೆ ಪಿಒಕೆ ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದ್ದರೆ, ಇನ್ನೊಂದೆಡೆ ಭಾರತದ ಆಡಳಿತವಿರುವ ಕಾಶ್ಮೀರದಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕಂಡುಬರುತ್ತಿದೆ. ಭಾರತದ ಕಾಶ್ಮೀರದ ಜನರ ಜಿವನ ಮಟ್ಟ ಸುಧಾರಿಸುತ್ತಿದೆ, ಉದ್ಯೋಗ ದೊರೆಯುತ್ತಿದೆ, ಪ್ರವಾಸೋದ್ಯಮ ಬೆಳವಣಿಗೆ ಹೊಂದಿದೆ. ಮುಖ್ಯವಾಗಿ ಕಾಶ್ಮೀರಿಗಳು ಮತ್ತೆ ಉತ್ತಮ ಶಿಕ್ಷಣವನ್ನು ಪಡೆಯುತ್ತಿದ್ದಾರೆಂದು ತಸ್ಲೀಮಾ ಅಖ್ತರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2024 ರಲ್ಲಿ ಭಾರತ ಸರ್ಕಾರವು ಮುಂದಿನ 5 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬೃಹತ್ ಬದಲಾವಣೆಯ ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೆ ತರಲಿದ್ದು, ಕಣಿವೆ ರಾಜ್ಯ ಭಯೋತ್ಪಾದನೆ ಮುಕ್ತವಾಗಿ, ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಎಂದು ಭಾರತವನ್ನು ಜಾಗತಿಕ ವೇದಿಕೆಯಲ್ಲಿ ಕೊಂಡಾಡಿದ್ದಾರೆ.
ಪಿಓಕೆ ಜನರಿಗೆ ಮೂಲಭೂತ ಸೌಕರ್ಯಗಳನ್ನು ಪಾಕಿಸ್ತಾನ ಸರ್ಕಾರ ತಲುಪಿಸುವಲ್ಲಿ ವಿಫಲವಾಗುತ್ತಿದ್ದು, ಅಕ್ಕಿ, ಬೇಳೆ, ಹಣ್ಣು, ತರಕಾರಿಗಳ ಬೆಲೆ ಕೈಗೆಟುಕದಿರುವ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನಲೆ ಈ ಪ್ರತಿಭಟನೆ ಆರಂಭವಾಯಿತು. ಆದರೆ ಪಾಕಿಸ್ತಾನದ ರಕ್ಷಣಾ ಮಂತ್ರಿ, ರಾವಲಕೋಟ್ ಮತ್ತು ಮಿರ್ಪುರದ ಜನ ನಕಲಿ ಕಾಶ್ಮೀರಿಗಳೆಂದು ಹೇಳಿಕೆ ನೀಡಿದ ನಂತರ ಈ ಹೋರಾಟ ಈಗ ರಾಜಕೀಯ ಸಂಘರ್ಷವಾಗಿ ಪರಿವರ್ತನೆಯಾಗಿದೆ. ಪಿಓಕೆ ಜನರ ಹೋರಾಟ ತೀವ್ರವಾದ ಹಿನ್ನಲೆ ಪಾಕಿಸ್ತಾನ ಸೇನೆ ಪಿಓಕೆಗೆ ರವಾನೆಯಾಗಿದ್ದು, ಸದ್ಯ ಈ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಈ ಪ್ರತಿಭಟನೆಯಲ್ಲಿ ಪಾಕಿಸ್ತಾನಿ ರೇಂಜರ್‌ಗಳು ಮತ್ತು ಫ್ರಾಂಟಿಯರ್ ಕಾರ್ಪ್ಸ್ ಸಿಬ್ಬಂದಿ ನಿರಾಯುಧ ಜನರ ಮೇಲೆ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದ್ದಾರೆ. ವಿಶೇಷವಾಗಿ ರಾವಲಕೋಟ್‌ನ ಚಿನಾರ್ ಚೌಕ್‌ನಲ್ಲಿ ನೆರೆದಿದ್ದ ಬೃಹತ್ ಜನಸಾಗರದ ಮೇಲೆ ಭದ್ರತಾ ಪಡೆಗಳು ಸುಮಾರು ಒಂದು ಗಂಟೆಗಳ ಕಾಲ ಗುಂಡಿನ ಮಳೆ ಸುರಿಸಿದ್ದಾರೆ. ಇದರ ಪರಿಣಾಮವಾಗಿ ರಾವಲಕೋಟ್ ಮತ್ತು ಮಿರ್ಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮಿಲಿಟರಿ ದೌರ್ಜನ್ಯದ ಹೊರತಾಗಿಯೂ ಸುಮಾರು ಎರಡು ಲಕ್ಷಕ್ಕೂ ಅಧಿಕ ಜನರು ಡಿ-ಚೌಕ್‌ನಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ಕೇವಲ ಬೀದಿಗಳಲ್ಲಿ ಮಾತ್ರವಲ್ಲದೆ, ಕೋಟ್ಲಿ ಸೇರಿದಂತೆ ಹಲವು ಪಟ್ಟಣಗಳಲ್ಲಿ ಪಾಕಿಸ್ತಾನಿ ರೇಂಜರ್‌ಗಳು ನೇರವಾಗಿ ಜನರ ಮನೆಗಳಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಮಹಿಳೆಯರ ಶಾಂತಿಯುತ ಪ್ರತಿಭಟನೆಯನ್ನು ಚದುರಿಸಲು ವೈಮಾನಿಕ ಗುಂಡಿನ ದಾಳಿ ನಡೆಸಲಾಗಿದೆ. ಅಷ್ಟೇ ಅಲ್ಲದೆ, ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಮತ್ತು ತುರ್ತು ನೆರವು ನೀಡಲು ತೆರಳುತ್ತಿದ್ದ ಖಾಸಗಿ ಆಂಬ್ಯುಲೆನ್ಸ್‌ಗಳ ಮೇಲೂ ಗುಂಡಿನ ದಾಳಿ ನಡೆಸಿರುವುದು ಪಾಕ್ ಪಡೆಗಳ ಕ್ರೌರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ, (ಏಜೆನ್ಸೀಸ್).