ಅಮೆರಿಕದ ಸೆನೆಟರ್ ನಮ್ಮ ಭಟ್ಕಳದ ಅಳಿಮಯ್ಯ! ಮಾಜಿ ಸಚಿವರ ಮೊಮ್ಮಗಳನ್ನೇ ಮದುವೆಯಾಗಿರುವ ಅಬ್ದುಲ್ ಸಯೀದ್ | Abdul El Sayed

ಯುಎಸ್ ಸೆನೆಟರ್ ನಮ್ಮ ಭಟ್ಕಳದ ಅಳಿಮಯ್ಯ!
ಯುಎಸ್ ಸೆನೆಟರ್ ನಮ್ಮ ಭಟ್ಕಳದ ಅಳಿಮಯ್ಯ!
Published on: 

ವಾಷಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ನಾಯಕ ಅಬ್ದುಲ್ ಎಲ್-ಸಯೀದ್ (Abdul El Sayed) ಮಿಚಿಗನ್ ರಾಜ್ಯದಿಂದ ಸೆನೆಟರ್ ಆಗಿ ಆಯ್ಕೆಯಾಗುವ ಮೂಲಕ ಅಮೆರಿಕನ್ ಇತಿಹಾಸದಲ್ಲೇ ಮೊದಲ ಮುಸ್ಲಿಂ ಸೆನೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಲ್ಲಿ ಮತ್ತೊಂದು ಕುತೂಹಲಕಾರಿ ವಿಷಯವೆಂದರೆ, ಅವರು ನಮ್ಮ ರಾಜ್ಯದ ಅಳಿಯ ಎನ್ನುವುದು.

ಅಬ್ದುಲ್ ಎಲ್-ಸಯೀದ್ ಪತ್ನಿ ಡಾ. ಸಾರಾ ಜುಕಕು ಅವರ ಕೌಟುಂಬಿಕ ಬೇರುಗಳು ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿವೆ ಎಂದು ವರದಿಯಾಗಿದೆ. ಸಾರಾ ಅವರ ತಾತ ಜೆ.ಎಚ್. ಶಂಸುದ್ದೀನ್ ಜುಕಕು ಅವರು 1950ರ ದಶಕದಲ್ಲಿ ಮೈಸೂರು ಸರ್ಕಾರದ ಹಣಕಾಸು ಹಾಗೂ ವಿದ್ಯುತ್ ಶಕ್ತಿ ಇಲಾಖೆಯ ಉಪಸಚಿವರಾಗಿ ಸೇವೆ ಸಲ್ಲಿಸಿದ ಪ್ರಮುಖ ರಾಜಕಾರಣಿ.

ಯಾರೀ ಜೆ ಎಚ್ ಶಂಸುದ್ದೀನ್ ಜುಕಕು?

ಭಟ್ಕಳದ ನವಾಯತ್ ಮುಸ್ಲಿಂ ಸಮುದಾಯಕ್ಕೆ ಸೇರಿದ ಶಂಸುದ್ದೀನ್ ಅವರು, ತಮ್ಮ ಸಮುದಾಯದಿಂದ ವಕೀಲರಾದ ಹಾಗೂ ಸಚಿವರಾಗಿ ಆಯ್ಕೆಯಾದ ಮೊದಲ ವ್ಯಕ್ತಿಯಾಗಿದ್ದರು. 1946ರಲ್ಲಿ ಮುಂಬೈ ಶಾಸನಸಭೆಗೆ ಆಯ್ಕೆಯಾಗಿದ್ದ ಅವರು, ನಂತರ 1957 ಮತ್ತು 62ರ ಚುನಾವಣೆಗಳಲ್ಲಿ ಹೊನ್ನಾವರ ಕ್ಷೇತ್ರದಿಂದ ಮೈಸೂರು ವಿಧಾನಸಭೆಗೆ ಆಯ್ಕೆಯಾಗಿದ್ದರು. 1958ರಲ್ಲಿ ಬಿ ಡಿ ಜತ್ತಿ ಅವರ ಸಚಿವ ಸಂಪುಟದಲ್ಲಿ ಹಣಕಾಸು ಉಪಸಚಿವರಾಗಿ ಹಾಗೂ ನಂತರ ಎಸ್. ನಿಜಲಿಂಗಪ್ಪ ಅವರ ಸಂಪುಟದಲ್ಲಿ ವಿದ್ಯುತ್ ಶಕ್ತಿ ಉಪಸಚಿವರಾಗಿ ಕಾರ್ಯನಿರ್ವಹಿಸಿದರು. ಭಟ್ಕಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಹಾಗೂ ಮೂಲಸೌಕರ್ಯ ತರುವಲ್ಲಿ ಅವರು ವಹಿಸಿದ ಪಾತ್ರಕ್ಕಾಗಿ ಭಟ್ಕಳದ ಪ್ರಮುಖ ವೃತ್ತಕ್ಕೆ ಶಂಸುದ್ದೀನ್ ಸರ್ಕಲ್ ಎಂದು ಹೆಸರಿಡಲಾಗಿದೆ.

Also Read
ಅಬ್ದುಲ್ ಯಾರ ಮುಂದೆಯೂ ತಲೆಬಾಗಲ್ಲ! 2027ರ ಉತ್ತರ ಪ್ರದೇಶದ ಚುನಾವಣೆಗೆ ಅಮೆರಿಕಾದ ತಂತ್ರ ಹೆಣೆದ ಓವೈಸಿ | Asaduddin Owaisi
ಯುಎಸ್ ಸೆನೆಟರ್ ನಮ್ಮ ಭಟ್ಕಳದ ಅಳಿಮಯ್ಯ!

ಭಟ್ಕಳದಿಂದ ಮಿಚಿಗನ್‌ವರೆಗೆ ಕುಟುಂಬದ ಪಯಣ

ಶಂಸುದ್ದೀನ್​ರ ಪುತ್ರ ಹಾಗೂ ಸಾರಾ ಅವರ ತಂದೆ ಡಾ. ಜುಕಕು ಎಸ್. ತಯ್ಯಬ್ ಅವರು ಬೆಂಗಳೂರು ಮೆಡಿಕಲ್ ಕಾಲೇಜಿನಿಂದ 1976ರಲ್ಲಿ ವೈದ್ಯಕೀಯ ಪದವಿ ಪಡೆದರು. ನಂತರ ಸೌದಿ ಅರೇಬಿಯಾದಲ್ಲಿ ಸೇವೆ ಸಲ್ಲಿಸಿ 1980ರ ದಶಕದಲ್ಲಿ ಅಮೆರಿಕದ ಮಿಚಿಗನ್‌ಗೆ ವಲಸೆ ಹೋದರು. ಮಿಚಿಗನ್‌ನಲ್ಲಿ ನೆಲೆಸಿ ಪ್ರಸಿದ್ಧ ಕಿಡ್ನಿ ತಜ್ಞರಾಗಿ (Nephrologist) ಸೇವೆ ಸಲ್ಲಿಸಿದ ಅವರು, ತಮ್ಮ ಮಕ್ಕಳಾದ ಸಾರಾಗೆ ಅಮೆರಿಕದಲ್ಲೇ ಶಿಕ್ಷಣ ಕೊಡಿಸಿದರೂ, ಭಟ್ಕಳದ ಕೌಟುಂಬಿಕ ಸಂಪರ್ಕವನ್ನು ನಿರಂತರವಾಗಿ ಕಾಯ್ದುಕೊಂಡು ಬಂದಿದ್ದರು.

ಸಾರಾ ಮತ್ತು ಅಬ್ದುಲ್ ಎಲ್-ಸಯೀದ್ ಪ್ರೇಮ ವಿವಾಹ

ಸಾರಾ ಅವರು ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಅಬ್ದುಲ್ ಎಲ್-ಸಯೀದ್ ಅವರನ್ನು ಭೇಟಿಯಾದರು. ವಿಶ್ವವಿದ್ಯಾಲಯದ ಮುಸ್ಲಿಂ ವಿದ್ಯಾರ್ಥಿಗಳ ಸಂಘದಲ್ಲಿದ್ದ ಇಬ್ಬರೂ 2006ರ ಮೇ ತಿಂಗಳಿನಲ್ಲಿ ವಿವಾಹವಾದರು. ಸಾರಾ ಅವರು ಪ್ರಸ್ತುತ ಮನೋವೈದ್ಯಕೀಯ ವಿಭಾಗದ ಹಿರಿಯ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಮ್ಮ ಪತ್ನಿಯ ದಕ್ಷಿಣ ಭಾರತದ ಹಾಗೂ ಕರ್ನಾಟಕದ ಹಿನ್ನೆಲೆಯ ಬಗ್ಗೆ ಹಲವು ಬಾರಿ ಹೆಮ್ಮೆಯಿಂದ ಮಾತನಾಡಿಕೊಂಡಿರುವ ಸೆನೆಟರ್ ಅಬ್ದುಲ್ ಎಲ್-ಸಯೀದ್, ನಾನು ಕಳೆದ 20 ವರ್ಷಗಳಿಂದ ದಕ್ಷಿಣ ಭಾರತದ ಕುಟುಂಬದ ಜೊತೆ ವಿವಾಹ ಬಂಧನದಲ್ಲಿದ್ದೇನೆ. ಈಗ ನಾನು ಅರಬ್ ಮೂಲದವನಿಗಿಂತ ಭಾರತೀಯನಾಗಿದ್ದೇನೆ ಎಂದು ಹೇಳಿಕೊಂಡಿದ್ದರು. ಅಮೆರಿಕದ ರಾಜಕೀಯ ಮುಂಚೂಣಿಗೆ ಎಲ್-ಸಯೀದ್ ಬಂದಿರುವುದು ಭಟ್ಕಳದ ಜುಕಕು ಕುಟುಂಬದ ಹಳೆಯ ನೆನಪುಗಳನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ(ಏಜೆನ್ಸೀಸ್​).