US- Iran War | ಅಮೆರಿಕ-ಇರಾನ್ ಭೀಕರ ಕ್ಷಿಪಣಿ ಸಂಘರ್ಷ: ಇರಾನ್ ಬಂದರಿನ ಮೇಲೆ ಯುಎಸ್ ದಾಳಿ, ಅಮೆರಿಕ ಮಿಲಿಟರಿ ಬೇಸ್ ಧ್ವಂಸ ಮಾಡಿದ IRGC

ಅಮೆರಿಕ-ಇರಾನ್ ಭೀಕರ ಕ್ಷಿಪಣಿ ಸಂಘರ್ಷ: ಇರಾನ್ ಬಂದರಿನ ಮೇಲೆ ಯುಎಸ್ ದಾಳಿ, ಅಮೆರಿಕ ಮಿಲಿಟರಿ ಬೇಸ್ ಧ್ವಂಸ ಮಾಡಿದ IRGC
ಅಮೆರಿಕ-ಇರಾನ್ ಭೀಕರ ಕ್ಷಿಪಣಿ ಸಂಘರ್ಷ: ಇರಾನ್ ಬಂದರಿನ ಮೇಲೆ ಯುಎಸ್ ದಾಳಿ, ಅಮೆರಿಕ ಮಿಲಿಟರಿ ಬೇಸ್ ಧ್ವಂಸ ಮಾಡಿದ IRGC
Published on
ಕುವೈತ್ ಸಿಟಿ: ಜಗತ್ತಿನ ಅತ್ಯಂತ ಸೂಕ್ಷ್ಮ ಪ್ರದೇಶವಾದ ಮುಸ್ಲಿಂ ರಾಷ್ಟ್ರಗಳ ಒಕ್ಕೂಟ ಮಧ್ಯಪ್ರಾಚ್ಯದಲ್ಲಿ ಭೀಕರ ಜಾಗತಿಕ ಯುದ್ಧದ ಕೌಂಟ್‌ಡೌನ್ ಶುರುವಾಗಿದೆ. ಅಮೆರಿಕ ಮತ್ತು ಇರಾನ್(US- Iran War) ನಡುವೆ ಏಪ್ರಿಲ್ ತಿಂಗಳಲ್ಲಿ ಏರ್ಪಟ್ಟಿದ್ದ ಕದನ ವಿರಾಮ ಒಪ್ಪಂದವನ್ನು ಗಾಳಿಗೆ ತೂರಿರುವ ಉಭಯ ದೇಶಗಳು, ಗುರುವಾರ (ಮೇ,28) ಪರಸ್ಪರರ ಮಿಲಿಟರಿ ನೆಲೆಗಳ ಮೇಲೆ ಕರಾರುವಾಕ್ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುವ ಮೂಲಕ ಜಾಗತಿಕ ರಕ್ಷಣಾ ವಲಯದಲ್ಲಿ ದಿಗಿಲು ಮೂಡಿಸಿವೆ.
ಇಡೀ ವಿಶ್ವದ ಶೇ. 20 ಕ್ಕೂ ಹೆಚ್ಚು ತೈಲ ರಫ್ತಾಗುವ ಆಯಕಟ್ಟಿನ ಜಲಮಾರ್ಗ ‘ಸ್ಟ್ರೈಟ್ ಆಫ್ ಹೊರ್ಮುಜ್’ ಅನ್ನು ಸಂಪೂರ್ಣವಾಗಿ ಮುಚ್ಚುವ ಭೀತಿ ಎದುರಾಗಿದ್ದು, ಇಡೀ ಗಲ್ಫ್ ವಲಯ ಈಗ ಯುದ್ಧದ ಮುಖದ ಮೇಲೆ ಬಂದು ನಿಂತಿದೆ. ಅಮೆರಿಕದ ಪರಮ ಮಿತ್ರ ರಾಷ್ಟ್ರವಾದ ಕುವೈತ್ ಕೂಡ ಈ ಭೀಕರ ಸಂಘರ್ಷದ ಸುಳಿಗೆ ಸಿಲುಕಿದೆ.

ಹೊರ್ಮುಜ್ ಜಲಮಾರ್ಗದಲ್ಲಿ ಇರಾನ್ ಮಿಲಿಟರಿ ಫೈರಿಂಗ್!

ಇರಾನ್‌ನ ಅಧಿಕೃತ ಸರ್ಕಾರಿ ಮಾಧ್ಯಮ ‘ಐಆರ್‌ಐಬಿ’ (IRIB) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಗುರುವಾರ ಮಧ್ಯರಾತ್ರಿ 12:35 ರ ಸುಮಾರಿಗೆ ಇರಾನ್‌ನ ಯಾವುದೇ ಅನುಮತಿ ಇಲ್ಲದೆ 4 ದೈತ್ಯ ಹಡಗುಗಳು ಸ್ಟ್ರೈಟ್ ಆಫ್ ಹೊರ್ಮುಜ್ ಮೂಲಕ ಪರ್ಷಿಯನ್ ಗಲ್ಫ್ ಪ್ರವೇಶಿಸಲು ಯತ್ನಿಸಿದ್ದವು. ಇರಾನ್ ಕೋಸ್ಟ್ ಗಾರ್ಡ್ಸ್ ನೀಡಿದ ವಾರ್ನಿಂಗ್ ಅನ್ನು ಕಡೆಗಣಿಸಿ ಮುನ್ನುಗ್ಗಿದ ಹಡಗುಗಳ ಮೇಲೆ ಇರಾನ್ ನೌಕಾಸೇನೆ ಭೀಕರವಾಗಿ ರೌಂಡ್ಸ್ ಫೈರಿಂಗ್ ನಡೆಸಿ, ಅವುಗಳನ್ನು ಬಲವಂತವಾಗಿ ಹಿಂದಕ್ಕೆ ಓಡಿಸಿದೆ. ಈ ಹಡಗುಗಳು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಸೇರಿದ್ದವು ಎನ್ನಲಾಗಿದೆ.

ಬಂದರ್ ಅಬ್ಬಾಸ್ ಮೇಲೆ ಅಮೆರಿಕದ ಭೀಕರ ಏರ್‌ಸ್ಟ್ರೈಕ್!

ತಮ್ಮ ಹಡಗುಗಳ ಮೇಲಿನ ದಾಳಿಯಿಂದ ಕೆಂಡಾಮಂಡಲವಾದ ಅಮೆರಿಕ ಸೇನೆ, ತಕ್ಷಣವೇ ಇರಾನ್‌ನ ಪ್ರಮುಖ ಬಂದರು ನಗರಿ ‘ಬಂದರ್ ಅಬ್ಬಾಸ್’ ಸಮೀಪವಿರುವ ಇರಾನ್‌ನ ಅತ್ಯಾಧುನಿಕ ಡ್ರೋನ್ ನಿಯಂತ್ರಣ ಕೇಂದ್ರವನ್ನು ಗುರಿಯಾಗಿಸಿಕೊಂಡು ಭೀಕರ ವೈಮಾನಿಕ ದಾಳಿ ನಡೆಸಿದೆ. ಯುಎಸ್ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿರುವಂತೆ, ಇರಾನ್ ಜಿಗಿಸಲು ಸಜ್ಜಾಗಿದ್ದ 4 ಡೆಡ್ಲಿ ಅಟ್ಯಾಕ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕ ವಾಯುಪಡೆ, ಡ್ರೋನ್ ಕಂಟ್ರೋಲ್ ಸ್ಟೇಷನ್ ಅನ್ನು ಬಾಂಬ್ ಹಾಕಿ ಧೂಳೀಪಟ ಮಾಡಿದೆ. ಬಂದರ್ ಅಬ್ಬಾಸ್ ನಗರದ ಪೂರ್ವ ಭಾಗದಲ್ಲಿ ಮಧ್ಯರಾತ್ರಿ 1:30 ಕ್ಕೆ ಭೀಕರ ಸ್ಫೋಟದ ಸೌಂಡ್ ಕೇಳಿಸಿದ್ದು, ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು ಸಕ್ರಿಯಗೊಂಡಿದ್ದವು.

ಪ್ರತಿಯಾಗಿ ಅಮೆರಿಕ ಮಿಲಿಟರಿ ಬೇಸ್ ಮೇಲೆ ಇರಾನ್ ಪ್ರತಿದಾಳಿ!

ಅಮೆರಿಕದ ಈ ದುಸ್ಸಾಹಸಕ್ಕೆ ಇರಾನ್‌ನ ಶಕ್ತಿಶಾಲಿ ಸೇನೆ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್’ (IRGC) ಕೇವಲ ಮೂರೇ ಗಂಟೆಗಳಲ್ಲಿ ಭೀಕರ ಪ್ರತ್ಯುತ್ತರ ನೀಡಿದೆ. ಬೆಳಗಿನ ಜಾವ 4:50 ಕ್ಕೆ ಬಂದರ್ ಅಬ್ಬಾಸ್ ಮೇಲೆ ದಾಳಿ ನಡೆಸಲು ಅಮೆರಿಕದ ಯುದ್ಧ ವಿಮಾನಗಳು ಮತ್ತು ಡ್ರೋನ್‌ಗಳು ಹಾರಿದ್ದ ಆ ಪ್ರಮುಖ ಅಮೆರಿಕನ್ ಮಿಲಿಟರಿ ಬೇಸ್ ಅನ್ನು ಗುರಿಯಾಗಿಸಿಕೊಂಡು ಇರಾನ್ ಕಣ್ಗಾವಲು ಕ್ಷಿಪಣಿಗಳ ಸುರಿಮಳೆಗರೆದಿದೆ. ಈ ದಾಳಿಯಿಂದ ಕುವೈತ್ ಗಡಿಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಕುವೈತ್ ಸೇನೆಯು ತನ್ನ ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಶತ್ರುಗಳ ಕ್ಷಿಪಣಿಯನ್ನು ಹೊಡೆದುರುಳಿಸಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ.
ಈ ಕರಾರುವಾಕ್ ದಾಳಿ ಮತ್ತು ಪ್ರತಿದಾಳಿಗಳ ಕಾರಣದಿಂದಾಗಿ ವಿಶ್ವಸಂಸ್ಥೆ ಹಮ್ಮಿಕೊಂಡಿದ್ದ ಇಡೀ ಶಾಂತಿ ಮಾತುಕತೆಗಳು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಜಾಗತಿಕ ಇಂಧನ ಸರಪಳಿಗೆ ಭಾರಿ ಪೆಟ್ಟು ಬೀಳುವ ಆತಂಕ ಎದುರಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net