US Iran Peace Deal; ಅಮೆರಿಕ-ಇರಾನ್ ಶಾಂತಿ ಒಪ್ಪಂದ ಜೂ.19ಕ್ಕೆ ಸಹಿ! ಪಾಕಿಸ್ತಾನ ಮಧ್ಯವರ್ತಿ: ಶೆಹಬಾಜ್ ಷರೀಫ್ ಘೋಷಣೆ

US Iran Peace Deal
US Iran Peace Deal
Published on
ಇಸ್ಲಾಮಾಬಾದ್: ಕಳೆದ 107 ದಿನಗಳಿಂದ ಮುಂದುವರಿದಿದ್ದ ಅಮೆರಿಕ-ಇರಾನ್ ಸಂಘರ್ಷಕ್ಕೆ(US Iran Peace Deal) ಅಂತ್ಯ ಹಾಡುವ ಮಹತ್ವದ ಶಾಂತಿ ಒಪ್ಪಂದಕ್ಕೆ ಜೂನ್ 19ರಂದು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಸಹಿ ಹಾಕಲಾಗುವುದು ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಘೋಷಿಸಿದ್ದಾರೆ. ಈ ಐತಿಹಾಸಿಕ ಸಮಾರಂಭವನ್ನು ಪಾಕಿಸ್ತಾನ ಆಯೋಜಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಶೆಹಬಾಜ್ ಷರೀಫ್, ಇದು ಕೇವಲ ಎರಡು ದೇಶಗಳ ನಡುವಿನ ಒಪ್ಪಂದವಲ್ಲ, ಶಾಂತಿ ಮತ್ತು ಸಂವಾದದ ಗೆಲುವಾಗಿದೆ ಎಂದು ಹೇಳಿದರು. ಮೂರು ತಿಂಗಳು 16 ದಿನಗಳ ನಿರಂತರ ಮಾತುಕತೆ ಮತ್ತು ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ ಈ ಒಪ್ಪಂದ ಸಾಧ್ಯವಾಗಿದೆ ಎಂದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧಕ್ಕೆ ಅಂತ್ಯ ತರಲು ಒಪ್ಪಂದ ಅಂತಿಮಗೊಂಡಿದೆ ಎಂದು ಘೋಷಿಸಿದ್ದಾರೆ. ಕಳೆದ 107 ದಿನಗಳ ಯುದ್ಧವು ಜಾಗತಿಕ ಇಂಧನ ಮಾರುಕಟ್ಟೆ ಹಾಗೂ ವಿಶ್ವ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರಿತ್ತು.
ಶೆಹಬಾಜ್ ಷರೀಫ್ ಪ್ರಕಾರ, ಜೂನ್ 19ರಂದು ಜಿನೀವಾದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಶಾಂತಿ ಒಪ್ಪಂದಕ್ಕೆ ಅಧಿಕೃತ ಸಹಿ ಹಾಕಲಾಗುತ್ತದೆ. ಈ ಬೆಳವಣಿಗೆಗೆ ಪಾಕಿಸ್ತಾನದ ಜನತೆ, ಅಂತರರಾಷ್ಟ್ರೀಯ ಸಮುದಾಯ ಹಾಗೂ ಸಂಸತ್ ಸದಸ್ಯರನ್ನು ಅವರು ಅಭಿನಂದಿಸಿದರು.

ಪಾಕಿಸ್ತಾನಿಗಳಿಗೆ ಹೆಮ್ಮೆಯ ದಿನ!

“ಇಂದು ಪಾಕಿಸ್ತಾನದಲ್ಲಿರುವ ಜನರಿಗೆ ಮಾತ್ರವಲ್ಲ, ವಿಶ್ವದಾದ್ಯಂತ ಇರುವ ಪಾಕಿಸ್ತಾನಿಗಳಿಗೆ ಹೆಮ್ಮೆಯ ದಿನವಾಗಿದೆ” ಎಂದು ಅವರು ಹೇಳಿದರು. ಈ ಶಾಂತಿ ಒಪ್ಪಂದದಿಂದ ಜಾಗತಿಕ ಆರ್ಥಿಕ ಸ್ಥಿರತೆ ಹೆಚ್ಚಲಿದ್ದು, ಅದರ ಲಾಭವನ್ನು ಪಾಕಿಸ್ತಾನದ ಪ್ರತಿಯೊಬ್ಬ ನಾಗರಿಕನಿಗೂ ತಲುಪಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಪ್ರಧಾನಿ ಭರವಸೆ ನೀಡಿದರು. ಯುದ್ಧದ ಪರಿಣಾಮ ಪಾಕಿಸ್ತಾನದ ಆರ್ಥಿಕತೆಯ ಮೇಲೂ ದೊಡ್ಡ ಹೊಡೆತ ಬಿದ್ದಿದೆ ಎಂದು ಅವರು ಒಪ್ಪಿಕೊಂಡರು.
ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಯಲ್ಲಿ ಪಾಕಿಸ್ತಾನ ಪ್ರಮುಖ ಮಧ್ಯವರ್ತಿಯಾಗಿ ಕೆಲಸ ಮಾಡಿದೆ ಎಂದು ಶೆಹಬಾಜ್ ಷರೀಫ್ ಹೇಳಿದರು. ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಸಂಪರ್ಕ ಸಾಧಿಸುವುದು, ಮಾತುಕತೆಗೆ ವೇದಿಕೆ ಸೃಷ್ಟಿಸುವುದು ಸೇರಿದಂತೆ ಹಲವು ರಾಜತಾಂತ್ರಿಕ ಪ್ರಯತ್ನಗಳಲ್ಲಿ ಪಾಕಿಸ್ತಾನ ಸಕ್ರಿಯ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸೀಂ ಮುನೀರ್ ಅವರ ಪಾತ್ರವನ್ನು ಅವರು ಶ್ಲಾಘಿಸಿದರು. ಯುದ್ಧದ ಬೆಂಕಿ ನಂದಿಸಿ ಶಾಂತಿ ಸ್ಥಾಪಿಸಲು ಅಸೀಂ ಮುನೀರ್ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net