ಜೈಪುರದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ವೇಳೆ ಅಪರಿತರಿಂದ ಅಭಿಜೀತ್ ದೀಪ್ಕೆ ಮೇಲೆ ಹಲ್ಲೆ; ಹಲವು ಬಾರಿ ಕಪಾಳಮೋಕ್ಷ | Abhijeet Dipke

ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ
ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ
Published on
ಜೈಪುರ: ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಮೇಲೆ ಸೋಮವಾರ(ಜೂ. 15) ಹಲ್ಲೆ ನಡೆದಿದೆ ಎಂದು ವರದಿಯಾಗಿದೆ.
ಜೈಪುರದಲ್ಲಿ ಇಂದು ಶಹೀದ್ ಸ್ಮಾರಕ್‌ನಲ್ಲಿ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬರು ಅಭಿಜೀತ್ ದೀಪ್ಕೆ ಅವರಿಗೆ ಹಲವು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ತಕ್ಷಣ ದೀಪ್ಕೆ ಬೆಂಬಲಿಗರು ಆ ಅಪರಿಚಿತನ ಮೇಲೆ ಹಲ್ಲೆ ನಡೆಸಿದ್ದು ಕೆಲಕಾಲ ಸ್ಥಳದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.
ಪರೀಕ್ಷಾ ಪತ್ರಿಕೆ ಸೋರಿಕೆ, ನಿರುದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉತ್ತರದಾಯಿತ್ವದ ಬೇಡಿಕೆಗಳಂತಹ ವಿಷಯಗಳ ಕುರಿತು ಪಕ್ಷದ ಅಭಿಯಾನದ ಭಾಗವಾಗಿ ದೀಪಿಕೆ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಏಕಾಏಕಿ ಅಪರಿಚಿತನೊಬ್ಬ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ವಿಡಿಯೋದಲ್ಲಿ ಹಲ್ಲೆಯ ದೃಶ್ಯ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ದೀಪ್ಕೆ ಅವರು ಜನಸಮೂಹದೊಂದಿಗೆ ಘೋಷಣೆ ಕೂಗುತ್ತಿದ್ದಾರೆ. ಆಗ ಒಬ್ಬ ವ್ಯಕ್ತಿ ಅವರ ಬಳಿಗೆ ಬಂದು ಸಾರ್ವಜನಿಕವಾಗಿಯೇ ಅವರಿಗೆ ಕಪಾಳಮೋಕ್ಷ ಮಾಡುತ್ತಾನೆ. ತಕ್ಷಣ ದೀಪ್ಕೆ ಬೆಂಬಲಿಗರು ದಾಳಿಕೋರನನ್ನು ಹಿಡಿದು ಹಲ್ಲೆ ನಡೆಸಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಇನ್ನೂ ತಮ್ಮ ಮೇಲಿನ ಹಲ್ಲೆಯ ಬಗ್ಗೆ ಎಕ್ಸ್​ನಲ್ಲಿ ಪ್ರತಿಕ್ರಿಯಿಸಿರುವ ಅಭಿಜೀತ್ ದೀಪ್ಕೆ, ದೈಹಿಕ ದಾಳಿಗಳು ಭಯ ಮತ್ತು ಹೇಡಿತನದ ಸಂಕೇತವಾಗಿದೆ. ನಾವು ಶಾಂತಿಯುತವಾಗಿ ನಮ್ಮ ಧ್ವನಿಯನ್ನು ಎತ್ತುವುದನ್ನು ಮುಂದುವರಿಸುತ್ತೇವೆ. ನಾನು ಗಾಂಧಿ ಮತ್ತು ಅಂಬೇಡ್ಕರ್ ಅವರ ಅನುಯಾಯಿ, ಮತ್ತು ನಾನು ಈ ಯುದ್ಧವನ್ನು ಶಾಂತಿ ಮತ್ತು ಪ್ರೀತಿಯಿಂದ ಹೋರಾಡುತ್ತಲೇ ಇರುತ್ತೇನೆ ಎಂದು ಬರೆದುಕೊಂಡಿದ್ದಾರೆ.
ದಾಳಿ ಮಾಡಿದ ಅಪರಿಚಿತ ವ್ಯಕ್ತಿಯ ಬಗ್ಗೆ ಬಂಧನ ಅಥವಾ ಔಪಚಾರಿಕ ಕ್ರಮಗಳ ಕುರಿತು ಪೊಲೀಸ್ ಅಧಿಕಾರಿಗಳು ಯಾವುದೇ ಮಾಹಿತಿ ಬಿಡುಗಡೆ ಮಾಡಿಲ್ಲ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net