ಮಧ್ಯಪ್ರಾಚ್ಯ ಯುದ್ಧಕ್ಕೆ ಬಿಗ್ ಬ್ರೇಕ್!...ಡೊನಾಲ್ಡ್ ಟ್ರಂಪ್ ಡಿಜಿಟಲ್ ಸಹಿ; ಇರಾನ್ ಜೊತೆ ಶಾಂತಿ ಒಪ್ಪಂದ ಫೈನಲ್ | US Iran Peace

US Iran Peace | ಡೊನಾಲ್ಡ್ ಟ್ರಂಪ್ ಡಿಜಿಟಲ್ ಸಹಿ; ಇರಾನ್ ಜೊತೆ ಶಾಂತಿ ಒಪ್ಪಂದ ಫೈನಲ್
US Iran Peace | ಡೊನಾಲ್ಡ್ ಟ್ರಂಪ್ ಡಿಜಿಟಲ್ ಸಹಿ; ಇರಾನ್ ಜೊತೆ ಶಾಂತಿ ಒಪ್ಪಂದ ಫೈನಲ್
Published on
US Iran Peace: ಮಧ್ಯಪ್ರಾಚ್ಯದಲ್ಲಿ ಕಳೆದ ಮೂರು ತಿಂಗಳುಗಳಿಂದ ನಡೆಯುತ್ತಿದ್ದ ಸಂಘರ್ಷಕ್ಕೆ ಕೊನೆಗೂ ತೆರೆ ಬಿದ್ದಿದೆ. ದಿನಗಟ್ಟಲೆ ನಡೆದ ಸುದೀರ್ಘ ಮಾತುಕತೆ ಮತ್ತು ಸಂಧಾನಗಳ ಬಳಿಕ, ಅಮೆರಿಕ (US) ಮತ್ತು ಇರಾನ್ ಜಾಗತಿಕ ಮಟ್ಟದ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಸ್ಪಷ್ಟಪಡಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಡಿಜಿಟಲ್ ಮೂಲಕ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ವರ್ಸೈಲ್ಸ್‌ನಿಂದ ನಿರ್ಗಮಿಸುವಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಒಪ್ಪಂದಕ್ಕೆ ಸಹಿ ಬಿದ್ದಿದೆ. ನಾನು ವರ್ಸೈಲ್ಸ್‌ನಲ್ಲಿ ಕುಳಿತು ಡಿಜಿಟಲ್ ಸಹಿ ಮಾಡಿದ್ದೇನೆ ಎಂದು ತಿಳಿಸಿದರು.
ಮತ್ತೊಂದೆಡೆ ಇರಾನ್ ಕೂಡ ಒಪ್ಪಂದವನ್ನು ಖಚಿತಪಡಿಸಿದೆ. ಆದರೆ, ಇದು ಅಮೆರಿಕದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಇರಾನ್ ವಾದಿಸಿದೆ. ಅಷ್ಟೇ ಅಲ್ಲದೆ, ನಿಜವಾದ ಪರೀಕ್ಷೆ ಈಗಷ್ಟೇ ಆರಂಭವಾಗುತ್ತಿದ್ದು, ಒಪ್ಪಂದದ ಅನುಷ್ಠಾನ ಅತ್ಯಂತ ಪ್ರಮುಖವಾಗಿದೆ ಎಂದು ಇರಾನ್ ಎಚ್ಚರಿಸಿದೆ. ಈ ತಾತ್ಕಾಲಿಕ ಒಪ್ಪಂದದ ಅನ್ವಯ, ಅಂತಿಮ ನಿಯಮಗಳನ್ನು ರೂಪಿಸಲು ಉಭಯ ದೇಶಗಳಿಗೆ 60 ದಿನಗಳ ಕಾಲಾವಕಾಶ ಸಿಗಲಿದೆ. ಉಭಯ ದೇಶಗಳ ಅಧ್ಯಕ್ಷರ ಸಹಿಯೊಂದಿಗೆ ಇಸ್ಲಾಮಾಬಾದ್ ತಿಳುವಳಿಕಾ ಒಪ್ಪಂದದ ಪಠ್ಯ ಅಂತಿಮಗೊಂಡಿದೆ. ಈಗ ಒಪ್ಪಂದದ ಜಾರಿ ಮತ್ತು ಅನುಷ್ಠಾನವನ್ನು ಪರೀಕ್ಷಿಸುವ ಸಮಯ ಬಂದಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮೇಲ್ ಬಕಾಯಿ ತಿಳಿಸಿದ್ದಾರೆ.
ಒಪ್ಪಂದದ ಪ್ರಮುಖಾಂಶಗಳು
ಹೋರ್ಮುಜ್ ಜಲಸಂಧಿ ಮುಕ್ತ: ಜಾಗತಿಕ ಕಚ್ಚಾ ತೈಲದ ಸುಮಾರು ಐದನೇ ಒಂದು ಭಾಗದಷ್ಟು ಸಾಗಣೆಯಾಗುವ ಪ್ರಮುಖ ಜಲಮಾರ್ಗವಾದ ಸ್ಟ್ರೈಟ್ ಆಫ್ ಹೋರ್ಮುಜ್ (Strait of Hormuz) ಅನ್ನು ಪುನರಾರಂಭಿಸಲು ಈ ಒಪ್ಪಂದವು ದಾರಿ ಮಾಡಿಕೊಡಲಿದೆ.
ಆರ್ಥಿಕ ದಿಗ್ಬಂಧನ ಸಡಿಲಿಕೆ: ಒಪ್ಪಂದದ ಭಾಗವಾಗಿ, ಇರಾನ್ ಆರ್ಥಿಕತೆಯ ಮೇಲೆ ತೀವ್ರ ಹೊಡೆತ ನೀಡಿದ್ದ ತೈಲ ನಿರ್ಬಂಧಗಳನ್ನು ಹಿಂಪಡೆಯಲು ಅಮೆರಿಕ ಸಮ್ಮತಿಸಿದೆ.
$300 ಬಿಲಿಯನ್ ಪರಿಹಾರ ನಿಧಿ: ಅಂತಿಮ ಒಪ್ಪಂದ ಏರ್ಪಟ್ಟ ನಂತರ, ಪ್ರಾದೇಶಿಕ ರಾಷ್ಟ್ರಗಳ ಬೆಂಬಲದೊಂದಿಗೆ 300 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಪುನರ್ನಿರ್ಮಾಣ ನಿಧಿಯನ್ನು ಬಿಡುಗಡೆ ಮಾಡಲು ಅಮೆರಿಕ ಅನುಕೂಲ ಮಾಡಿಕೊಡಲಿದೆ.
ಪರಮಾಣು ಕಾರ್ಯಕ್ರಮದ ಸವಾಲು: ಇರಾನ್‌ನ ಪರಮಾಣು (ನ್ಯೂಕ್ಲಿಯರ್) ಕಾರ್ಯಕ್ರಮದ ವಿಷಯ ಇನ್ನೂ ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ. ಒಪ್ಪಂದದ ಪ್ರಕಾರ, ಇರಾನ್ ತನ್ನ ಹತ್ತಿರ ಇರೋ ಬಾಂಬ್ ತಯಾರಿಸಲು ಬಳಸುವ ಯುರೇನಿಯಂ ದಾಸ್ತಾನನ್ನು ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ (IAEA) ಕಣ್ಣಾವಲಿನಲ್ಲಿ ಕಡಿಮೆ ಮಾಡಬೇಕಾಗುತ್ತದೆ.

ಶುಕ್ರವಾರದ ಉನ್ನತ ಮಟ್ಟದ ಸಭೆ ರದ್ದು..?

ಇದಕ್ಕೂ ಮುನ್ನ, ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದ ನಿಯೋಗವು ಶುಕ್ರವಾರ ಸ್ವಿಟ್ಜರ್ಲೆಂಡ್‌ನಲ್ಲಿ ಇರಾನ್‌ನ ಮುಖ್ಯ ಸಂಧಾನಕಾರ ಮೊಹಮ್ಮದ್-ಬಾಗೇರ್ ಗಲಿಬಾಫ್ ಅವರನ್ನು ಭೇಟಿಯಾಗಬೇಕಿತ್ತು. ಪರಮಾಣು ಮಾತುಕತೆಗೆ ಈ ಸಭೆ ಅತ್ಯಂತ ಪ್ರಮುಖ ಎಂದು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದರು. ಆದರೆ, ಅಧ್ಯಕ್ಷರೇ ನೇರವಾಗಿ ಡಿಜಿಟಲ್ ಸಹಿ ಹಾಕಿರುವುದರಿಂದ ಶುಕ್ರವಾರದ ಸಭೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ ಎಂದು ಬಕಾಯಿ ತಿಳಿಸಿದ್ದಾರೆ. ಆಕ್ಸಿಯೋಸ್ ವರದಿಯ ಪ್ರಕಾರ, ಅಮೆರಿಕವು ಇರಾನ್‌ನ ಪರಮಾಣು ಕಾರ್ಯಕ್ರಮದ ಬಗ್ಗೆ ಇನ್ನೂ ಸಂದೇಹ ಹೊಂದಿದ್ದರೂ, ಈ ಜೆಂಟಲ್‌ಮ್ಯಾನ್ ಒಪ್ಪಂದ ಜಾರಿಗೆ ತರುವಲ್ಲಿ ಇರಾನ್ ಎಷ್ಟು ಗಂಭೀರವಾಗಿದೆ ಎಂಬುದು ಮುಂದಿನ ಕೆಲವು ದಿನಗಳಲ್ಲಿ ಅಥವಾ ವಾರಗಳಲ್ಲಿ ತಿಳಿಯಲಿದೆ ಎಂದು ವಾಷಿಂಗ್ಟನ್ ತಿಳಿಸಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net