G7ನಲ್ಲಿ ಮೋದಿ-ಟ್ರಂಪ್ ಭೇಟಿ: ಭಾರತದ ಮೇಲೆ ಯಾರಾದ್ರೂ ದಾಳಿ ಮಾಡಿದ್ರೆ... ಟ್ರಂಪ್ ಮಹತ್ವದ ಹೇಳಿಕೆ!

G7
G7
Published on
ಪ್ಯಾರಿಸ್​​: ಫ್ರಾನ್ಸ್‌ನ ಎವಿಯನ್‌ನಲ್ಲಿ ನಡೆದ G7 ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ದ್ವಿಪಕ್ಷೀಯ ಸಭೆ ಹಲವು ಕಾರಣಗಳಿಂದ ಗಮನ ಸೆಳೆದಿದೆ. ಭಾರತ-ಅಮೆರಿಕ ಸಂಬಂಧಗಳು ಕೆಲವು ತಿಂಗಳುಗಳಿಂದ ಹಲವು ಸವಾಲುಗಳನ್ನು ಎದುರಿಸುತ್ತಿರುವ ನಡುವೆಯೇ ಈ ಭೇಟಿ ನಡೆದಿದ್ದು, ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯಕ್ಕೆ ಹೊಸ ಬಲ ನೀಡುವ ಪ್ರಯತ್ನವಾಗಿ ಕಾಣುತ್ತಿದೆ.
ಸಭೆಯ ಬಳಿಕ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಅಮೆರಿಕ ನಡುವೆ ಯಾವುದೇ ಅಧಿಕೃತ ರಕ್ಷಣಾ ಒಪ್ಪಂದ ಇಲ್ಲದಿದ್ದರೂ, ಭಾರತದ ಮೇಲೆ ಯಾವುದೇ ದಾಳಿ ನಡೆದರೆ ಅಮೆರಿಕ ಭಾರತಕ್ಕೆ ಬೆಂಬಲವಾಗಿ ನಿಲ್ಲುತ್ತದೆ ಎಂದು ಹೇಳಿದ್ದಾರೆ."ಭಾರತದ ಮೇಲೆ ದಾಳಿ ನಡೆದರೆ ನಾವು ಅಲ್ಲಿರುತ್ತೇವೆ. ಭಾರತ ನಮ್ಮ ಅತ್ಯುತ್ತಮ ಸ್ನೇಹಿತರಲ್ಲಿ ಒಂದು. ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಅತ್ಯಂತ ಬಲವಾಗಿದೆ" ಎಂದು ಟ್ರಂಪ್ ಹೇಳಿದ್ದಾರೆ.
ಸುಮಾರು 16 ತಿಂಗಳ ಬಳಿಕ ಮೋದಿ ಮತ್ತು ಟ್ರಂಪ್ ಮುಖಾಮುಖಿಯಾಗಿ ಭೇಟಿಯಾಗಿದ್ದಾರೆ. ಕಳೆದ ವರ್ಷ ವಾಷಿಂಗ್ಟನ್‌ನಲ್ಲಿ ನಡೆದ ಭೇಟಿಯ ನಂತರ ಇದೇ ಮೊದಲ ಬಾರಿಗೆ ಇಬ್ಬರೂ ನೇರವಾಗಿ ಮಾತುಕತೆ ನಡೆಸಿದರು.
ಸಭೆಯಲ್ಲಿ ಪ್ರಧಾನಿ ಮೋದಿ, ಭಾರತ-ಅಮೆರಿಕ ಸಂಬಂಧಗಳು ಹೊಸ ಚೈತನ್ಯ ಪಡೆದುಕೊಂಡಿವೆ ಎಂದು ಹೇಳಿದ್ದಾರೆ. "ನಮ್ಮ ಎರಡು ದೇಶಗಳ ತಂಡಗಳು ಹಲವು ಗುರಿಗಳನ್ನು ನಿಗದಿಪಡಿಸಿವೆ. ಅವುಗಳನ್ನು ಸಾಧಿಸಲು ನಾವು ವೇಗವಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಸಂಬಂಧದಲ್ಲಿ ಹೊಸ ಶಕ್ತಿ ಮತ್ತು ಹೊಸ ಉತ್ಸಾಹ ಕಾಣಿಸುತ್ತಿದೆ" ಎಂದು ಮೋದಿ ಹೇಳಿದರು.ಇದೇ ವೇಳೆ ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸಲು ಟ್ರಂಪ್ ಕೈಗೊಂಡಿರುವ ಪ್ರಯತ್ನಗಳನ್ನು ಮೋದಿ ಮೆಚ್ಚಿದರು. ಆ ಪ್ರದೇಶದಲ್ಲಿ ಶಾಶ್ವತ ಶಾಂತಿ ನೆಲೆಸಲಿ ಎಂಬ ಆಶಯವನ್ನೂ ವ್ಯಕ್ತಪಡಿಸಿದರು.

ಹೋರ್ಮುಜ್ ಮುಕ್ತವಾಗಿ ಕಾರ್ಯನಿರ್ವಹಿಸುವುದು ಅಗತ್ಯ 

ಸಭೆಯಲ್ಲಿ ಸಮುದ್ರ ಭದ್ರತೆ ಕೂಡ ಪ್ರಮುಖ ವಿಷಯವಾಗಿತ್ತು. ವಿಶ್ವದ ಒಟ್ಟು ನಾವಿಕರಲ್ಲಿ ಸುಮಾರು 10 ಶೇಕಡಾ ಭಾರತೀಯರು ಇದ್ದಾರೆ ಎಂದು ಮೋದಿ ತಿಳಿಸಿದರು. ಆದ್ದರಿಂದ ಸಮುದ್ರ ಮಾರ್ಗಗಳ ಸುರಕ್ಷತೆ ಹಾಗೂ ನಾವಿಕರ ರಕ್ಷಣೆ ಜಾಗತಿಕ ಮಟ್ಟದಲ್ಲಿ ಬಹಳ ಮುಖ್ಯ ಎಂದು ಅವರು ಒತ್ತಿಹೇಳಿದರು. ವಿಶೇಷವಾಗಿ ಹೋರ್ಮುಜ್ ಜಲಸಂಧಿ ಮುಕ್ತವಾಗಿ ಕಾರ್ಯನಿರ್ವಹಿಸುವುದು ಜಾಗತಿಕ ಆರ್ಥಿಕತೆಗೆ ಅತ್ಯಂತ ಅಗತ್ಯವಾಗಿದೆ ಎಂದು ಮೋದಿ ಹೇಳಿದರು. ಹಡಗುಗಳ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಮೋದಿಯನ್ನು ಹೊಗಳಿದ ಟ್ರಂಪ್​​!

ಮೋದಿ ಅವರ ಬಗ್ಗೆ ಟ್ರಂಪ್ ಮಾಡಿದ ಪ್ರಶಂಸೆ ಕೂಡ ಎಲ್ಲರ ಗಮನ ಸೆಳೆಯಿತು. ಪ್ರಧಾನಿ ಮೋದಿಯನ್ನು ಹೊಗಳಿದ ಟ್ರಂಪ್, "ಮೋದಿ ಅತ್ಯಂತ ಕಠಿಣ ಮಾತುಕತೆಗಾರ. ಅವರನ್ನು ನೋಡಿದರೆ ತುಂಬಾ ಸರಳ ವ್ಯಕ್ತಿಯಂತೆ ಕಾಣುತ್ತಾರೆ. ಆದರೆ ಅವರು ಅತ್ಯಂತ ಬಲಿಷ್ಠ ನಾಯಕ. ಅವರೊಂದಿಗೆ ಮಾತುಕತೆ ನಡೆಸುವುದು ಸುಲಭವಲ್ಲ" ಎಂದು ಹೇಳಿದರು.
ಇದಕ್ಕಿಂತಲೂ ಮುಂದೆ ಹೋಗಿ, "ಮೋದಿ ಒಬ್ಬ ಅದ್ಭುತ ನಾಯಕ. ಅವರು ತುಂಬಾ ಒಳ್ಳೆಯ ವ್ಯಕ್ತಿಯಂತೆ ಕಾಣುತ್ತಾರೆ. ಆದರೆ ಮಾತುಕತೆಯಲ್ಲಿ ತುಂಬಾ ಕಠಿಣರಾಗಿರುತ್ತಾರೆ. ಭಾರತಕ್ಕೆ ಅವರು ಅತ್ಯುತ್ತಮ ನಾಯಕ" ಎಂದು ಟ್ರಂಪ್ ಶ್ಲಾಘಿಸಿದರು. ಇದೇ ವೇಳೆ, "ನಾನು ಅಧ್ಯಕ್ಷನಾಗಿರುವವರೆಗೂ ಭಾರತಕ್ಕೆ ಶ್ವೇತಭವನದಲ್ಲಿ ಒಬ್ಬ ಉತ್ತಮ ಸ್ನೇಹಿತ ಇರುತ್ತಾನೆ. ಇಲ್ಲಿ ಇರುವ ಪ್ರತಿಯೊಬ್ಬರೂ ಭಾರತವನ್ನು ಗೌರವಿಸುತ್ತಾರೆ. ವಿಶೇಷವಾಗಿ ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ" ಎಂದು ಟ್ರಂಪ್ ಹೇಳಿದ್ದಾರೆ.
ಜಿ7 ಶೃಂಗಸಭೆಯ ವೇಳೆ ನಡೆದ ಈ ಸಭೆ ಭಾರತ-ಅಮೆರಿಕ ಸಂಬಂಧಗಳಿಗೆ ಹೊಸ ಉತ್ತೇಜನ ನೀಡುವ ನಿರೀಕ್ಷೆ ಮೂಡಿಸಿದೆ. ವ್ಯಾಪಾರ, ರಕ್ಷಣಾ ಸಹಕಾರ, ಸಮುದ್ರ ಭದ್ರತೆ ಹಾಗೂ ಜಾಗತಿಕ ಸವಾಲುಗಳ ಕುರಿತು ಎರಡೂ ರಾಷ್ಟ್ರಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಸಹಕಾರ ವಿಸ್ತರಿಸುವ ಸಾಧ್ಯತೆ ಇದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net