

ಯೂಕ್ರೇನ್: ಕಳೆದ ಐದು ವರ್ಷಗಳಿಂದ ನಡೆದು ಬರುತ್ತಿದ್ದ ರಷ್ಯಾ-ಯೂಕ್ರೇನ್ ಯುದ್ಧಕ್ಕೆ ಇದೀಗ ತೆರೆ ಬೀಳುವ ಲಕ್ಷಣ ಕಂಡು ಬರುತ್ತಿದೆ. ಇಷ್ಟು ದಿನಗಳ ಕಾಲ ಯೂಕ್ರೇನ್ ಪರವಾಗಿ ನಿಂತಿದ್ದ ದೊಡ್ಡಣ್ಣ ಅಮೆರಿಕ ಈಗ, ರಷ್ಯಾ ಜತೆ ರಹಸ್ಯ ಒಪ್ಪಂದ ಮಾಡಿಕೊಂಡ ಹಿನ್ನಲೆ ಯೂಕ್ರೇನ್ ಈಗ ಒಬ್ಬಂಟಿಯಾಗಿದೆ ಎಂದು ಜಾಗತಿಕ ಮಾಧ್ಯಮಗಳ ವರದಿ ತಿಳಿಸುತ್ತಿವೆ.
ಅಮೆರಿಕ- ರಷ್ಯಾ ಒಪ್ಪಂದದ ಸುದ್ದಿ ಹೊರಬಿದ್ದ ಹಿನ್ನಲೆಯಲ್ಲಿ ಕಂಗೆಟ್ಟಿರುವ ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಖಾಸಗಿ ಮಾಧ್ಯಮವೊಂದರಲ್ಲಿ ನಾವೀಗ ಯುದ್ಧವನ್ನು ನಿಲ್ಲಿಸಲು ಮುಂದಾಗುತ್ತಿದೆವೆಂದು ನೀಡಿರುವ ಹೇಳಿಕೆ ಈಗ ಎಲ್ಲಡೆ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗೆ ದೊರೆತಿರುವ ಶಾಕಿಂಗ್ ಸುದ್ದಿ ಏನೆಂದರೆ, ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಯೂಕ್ರೇನ್ನ ಶೇ.25 ರಷ್ಟು ಭೂಪ್ರದೇಶವನ್ನು ರಷ್ಯಾಗೆ ಬಿಟ್ಟುಕೊಡಲು ಸಿದ್ಧರಾಗಿದ್ದಾರೆಂದು ಜಾಗತಿಕ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಅಲ್ಲಿ ತಳಿಸಿರುವಂತೆ ಕಳೆದ 5 ವರ್ಷಗಳಿಂದ ಈ ಸಂಘರ್ಷ ನಡೆಯುತ್ತಿದ್ದು, ಉಭಯ ಪಕ್ಷಗಳು ಭಾರೀ ನಷ್ಟ ಅನುಭವಿಸುತ್ತಿವೆ. ಹೀಗಾಗಿ ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು. ಹೀಗಾಗಿ ನಮ್ಮ ಕೆಲ ಭೂಪ್ರದೇಶವನ್ನು ರಷ್ಯಾಗೆ ನೀಡಿದರೆ, ಯುದ್ಧ ನಿಲ್ಲುತ್ತದೆ ಎಂದರೆ ಅದಕ್ಕೂ ತಾವು ಸಿದ್ಧವಿರುವುದಾಗಿ ಝೆಲೆನ್ಸ್ಕಿಹೇಳಿದ್ದಾರೆ ಎನ್ನಲಾಗುತ್ತಿದೆ.
ನಾವು, ಕೇವಲ ಯುದ್ಧವನ್ನು ನಿಲ್ಲಿಸಿ ಪ್ರದೇಶದಲ್ಲಿ ಶಾಂತಿ ಸ್ಥಾಪನೆ ಉದ್ದೇಶದಿಂದ, ಭೂಪ್ರದೇಶವನ್ನು ನೀಡುತ್ತಿದ್ದೆವೇ ಹೊರತು, ಈ ಸಂಘರ್ಷದಲ್ಲಿ ರಷ್ಯಾ ಗೆದ್ದಿದೆ ಎಂದಲ್ಲ ಎಂದು ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. ನಮಗೆ, ನಮ್ಮ ಜನಕ್ಕೆ ಶಾಂತಿ ಮುಖ್ಯವಾಗಿದೆ. ಹೀಗಾಗಿ ನಾನು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗೆ ಸಭೆ ನಡೆಸಿ ಈ ಯುದ್ಧವನ್ನು ನಿಲ್ಲಿಸುವ ಕುರಿತು ಮಾತುಕತೆ ನಡೆಸಲಿದ್ದೇನೆ. ಇದಕ್ಕೆ ರಷ್ಯಾ ಕೂಡ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನೊಂದು ಕಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಮೇಲೆ ಹೇರಿದ್ದ ಆರ್ಥಿಕ ದಿಗ್ಭಂದನವನ್ನು ತೆಗೆಯಲು ಸೂಚನೆ ನೀಡಿದ್ದು, ಇರಾನ್ಗೆ ರಷ್ಯಾ ನೀಡುತ್ತಿದ್ದ ಸಹಾಯವನ್ನು ನಿಲ್ಲಿಸುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುತಿನ್ ಅವರಲ್ಲಿ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ರಷ್ಯಾ, ಇರಾನ್ಗೆ ಮಾಡುತ್ತಿರುವ ಸಹಾಯವನ್ನು ನಿಲ್ಲಿಸಿದರೆ, ಯೂಕ್ರೇನ್ ಯುದ್ಧದಿಂದ ಹಿಂಬರುವಂತೆ ಮಾಡುವುದಾಗಿ ಟ್ರಂಪ್ ಭರವಸೆ ನೀಡಿದ್ದಾರೆನ್ನುವ ಮಾತು ಜಾಗತಿಕ ಮಾಧ್ಯಮಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಈ ಹಿನ್ನಲೆಯಲ್ಲಿಯೇ, ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಯುದ್ಧವನ್ನು ನಿಲ್ಲಿಸಿಲು ಶೇ. 25 ರಷ್ಟು ಭೂಭಾಗವನ್ನು ನೀಡಿಯಾದರೂ ಯುದ್ಧವನ್ನು ನಿಲ್ಲಿಸುತ್ತೇವೆಂದು ಹೇಳಿಕೆ ನೀಡಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಮತ್ತೊಂದು ಮಾಹಿತಿ ಪ್ರಕಾರ, ರಷ್ಯಾ ಅಧ್ಯಕ್ಷ ಪುತಿನ್, ಯೂಕ್ರೇನ್ ಜೊತೆ ನಡೆಯುವ ಒಪ್ಪಂದದ ಸಂದರ್ಭದಲ್ಲಿ, ಚೀನಾ ಕೂಡ ಮಧ್ಯಸ್ಥಿಕೆ ವಹಿಸಬೇಕೆಂದು ಹೇಳಿದೆಯಂತೆ. ಆದರೆ ಈ ಬಗ್ಗೆ ಚೀನಾದಿಂದ ಯಾವುದೇ ಸ್ಪಷ್ಟನೆ ದೊರೆತಿಲ್ಲ. ಹಾಗೆಯೇ ಅಮೆರಿಕ ಕೂಡ ತನ್ನ ನ್ಯಾಟೋ ಸೇನೆಯನ್ನು ರಷ್ಯಾ ಸುತ್ತಲಿನ ದೇಶಗಳಲ್ಲಿ ನಿಯೋಜನೆ ಮಾಡುವಂತಿಲ್ಲವೆಂದು ಪುತಿನ್ ತಾಕೀತು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ, ಈ ಎಲ್ಲಾ ಅಂತೆ-ಕಂತೆ, ಒಪ್ಪಂದಗಳು ಎಷ್ಟರ ಮಟ್ಟಿಗೆ ಯಶಸ್ಸನ್ನು ಕಾಣುತ್ತದೆ? ಜಗತ್ತಿನಲ್ಲಿ ನಿಜವಾಗಿಯೂ ಶಾಂತಿ ಸ್ಥಾಪನೆಯಾಗುತ್ತದೆಯೋ? ಅಥವಾ ಈ ಒಪ್ಪಂದ ಇನ್ನೊಂದು ಯುದ್ಧಕ್ಕೆ ನಾಂದಿಯಾಗುತ್ತದೆಯೋ? ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ, (ಏಜೆನ್ಸೀಸ್).