ಆಗಸದಿಂದ ಮಳೆಯೊಂದಿಗೆ ಧರೆಗೆ ಅಪ್ಪಳಿಸಿದ ಸಾವಿರಾರು ಕಪ್ಪೆಗಳು: ಈ ವಿಚಿತ್ರ ವಿದ್ಯಮಾನದ ಹಿಂದಿದೆ ಅಚ್ಚರಿಯ ಸಂಗತಿ! Frogs Fell From The Sky

ಆಗಸದಿಂದ ಮಳೆಯೊಂದಿಗೆ ಧರೆಗೆ ಅಪ್ಪಳಿಸಿದ ಸಾವಿರಾರು ಕಪ್ಪೆಗಳು: ಈ ವಿಚಿತ್ರ ವಿದ್ಯಮಾನದ ಹಿಂದಿದೆ ಅಚ್ಚರಿಯ ಸಂಗತಿ! Frogs Fell From The Sky
ಆಗಸದಿಂದ ಮಳೆಯೊಂದಿಗೆ ಧರೆಗೆ ಅಪ್ಪಳಿಸಿದ ಸಾವಿರಾರು ಕಪ್ಪೆಗಳು: ಈ ವಿಚಿತ್ರ ವಿದ್ಯಮಾನದ ಹಿಂದಿದೆ ಅಚ್ಚರಿಯ ಸಂಗತಿ! Frogs Fell From The Sky
Published on

ಪ್ರಮುಖ ಮುಖ್ಯಾಂಶಗಳು

  • ಸೆರ್ಬಿಯಾದಲ್ಲಿ ದಿಗ್ಭ್ರಮೆಗೊಳಿಸಿದ ವಿಚಿತ್ರ ವಿದ್ಯಮಾನ
  • ಆಕಾಶದಿಂದ ನೆಲಕ್ಕಪ್ಪಳಿಸಿದ ಸಾವಿರಾರು ಕಪ್ಪೆಗಳ ದಂಡು
  • ಇದು ಕೇವಲ ಸೆರ್ಬಿಯಾದಲ್ಲಲ್ಲ, ಜಗತ್ತಿನ ಬೇರೆಡೆಯೂ ನಡೆದಿದೆ
  • ಈ ವಿದ್ಯಾಮಾನಕ್ಕೆ ಹವಾಮಾನ ತಜ್ಞರು ನೀಡುವ ವೈಜ್ಞಾನಿಕ ವಿವರಣೆ ಇಲ್ಲಿದೆ
Frogs Fell From The Sky : ಸುಮಾರು 21 ವರ್ಷಗಳ ಹಿಂದೆ ಅಂದರೆ, ಜೂನ್ 2005ರಲ್ಲಿ ಸೆರ್ಬಿಯಾದ ಸಣ್ಣ ಪಟ್ಟಣವೊಂದರಲ್ಲಿ ಜನರನ್ನು ದಿಗ್ಭ್ರಮೆಗೊಳಿಸುವ ವಿಚಿತ್ರ ವಿದ್ಯಮಾನವೊಂದು ಸಂಭವಿಸಿತು. ಆ ಒಂದು ಘಟನೆಯನ್ನು ನೋಡಿ ಇಡೀ ಜಗತ್ತೇ ಸೆರ್ಬಿಯಾ ಪಟ್ಟಣದ ಕಡೆ ತಿರುಗಿ ನೋಡಿತ್ತು. ಆಕಾಶದಲ್ಲಿ ದಿಢೀರನೆ ಕಡು ಕಪ್ಪಾದ ಮೋಡಗಳು ಕವಿದು, ಮಳೆಯ ರೂಪದಲ್ಲಿ ಸಾವಿರಾರು ಕಪ್ಪೆಗಳು ಭೂಮಿಗೆ ಬಿದ್ದವು. ಅನಿರೀಕ್ಷಿತವಾಗಿ ಸುರಿದ ಈ ಕಪ್ಪೆಗಳ ಮಳೆಯಿಂದಾಗಿ ಇಡೀ ರಸ್ತೆಗಳೇ ಸಂಪೂರ್ಣವಾಗಿ ಬಂದ್ ಆಗಿದ್ದವು ಮತ್ತು ಭಯಭೀತರಾದ ಸ್ಥಳೀಯರು ರಕ್ಷಣೆಗಾಗಿ ಅತ್ತಿತ್ತ ಓಡಾಡಿದರು. ಅತ್ಯಂತ ವೇಗವಾಗಿ ಮತ್ತು ವಿಚಿತ್ರವಾದ ಆಕಾರ ಹಾಗೂ ಬಣ್ಣದೊಂದಿಗೆ ಮೂಡಿಬಂದ ಆ ಕರಾಳ ಮೋಡವನ್ನು ನೋಡಿ ಜನರು ಆಶ್ಚರ್ಯಚಕಿತರಾಗುವಷ್ಟರಲ್ಲೇ, ಆಕಾಶದಿಂದ ಸಾರಾಸಗಟಾಗಿ ಕಪ್ಪೆಗಳು ಉದುರಲು ಆರಂಭಿಸಿದ್ದವು. ಇದನ್ನು ಕಣ್ಣಾರೆ ಕಂಡ ಅಲ್ಲಿನ ಜನರು ಆ ಭಯಾನಕ ಘಟನೆಯನ್ನು ಇಂದಿಗೂ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ.
ಆಕಾಶದಿಂದ ಸುರಿದ ಕಪ್ಪೆಗಳನ್ನು ನೋಡಿದ ಪ್ರತ್ಯಕ್ಷದರ್ಶಿಗಳು, ಆರಂಭದಲ್ಲಿ ಕಪ್ಪೆಗಳನ್ನು ಸಾಗಿಸುತ್ತಿದ್ದ ಯಾವುದೋ ಒಂದು ವಿಮಾನವು ಹಾರಾಟದ ಮಧ್ಯೆ ಅಪಘಾತಕ್ಕೀಡಾಗಿ ಕಪ್ಪೆಗಳು ಉದುರಿರಬಹುದೆಂದೇ ಭಾವಿಸಿದ್ದರು. ಆದರೆ, ಅಚ್ಚರಿಯ ಸಂಗತಿ ಏನೆಂದರೆ, ಈ ವಿಚಿತ್ರ ವಿದ್ಯಮಾನದಲ್ಲಿ ಕಪ್ಪೆಗಳಿಗೆ ಯಾವುದೇ ಸಣ್ಣ ಗಾಯಗಳು ಕೂಡ ಆಗಿರಲಿಲ್ಲ. ಕಪ್ಪೆಗಳು ನೆಲಕ್ಕೆ ಬಿದ್ದ ತಕ್ಷಣವೇ ಅತ್ಯಂತ ವೇಗವಾಗಿ ರಸ್ತೆಗಳಿಂದ ಪಕ್ಕಕ್ಕೆ ಜಿಗಿದು ಓಡಲಾರಂಭಿಸಿದವು.
ಕೇಳಲು ಇದು ಎಷ್ಟೇ ವಿಲಕ್ಷಣವಾಗಿ ಅನಿಸಿದರೂ, ಉಭಯಚರಗಳು ಹೀಗೆ ಆಕಾಶದಿಂದ ಮಳೆಯಂತೆ ಸುರಿದಿರುವುದು ಇದೇ ಮೊದಲೇನಲ್ಲ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಇಂತಹ ಎಷ್ಟೋ ಘಟನೆಗಳು ಈಗಾಗಲೇ ಘಟಿಸಿರುವ ಸಾಕಷ್ಟು ಉದಾಹರಣೆಗಳಿವೆ. 1625ರಲ್ಲಿ ಬೆಲ್ಜಿಯಂನ ಟೂರ್ನೈ ನಗರದಲ್ಲಿ ಮತ್ತು 1794ರಲ್ಲಿ ಫ್ರಾನ್ಸ್‌ನ ಲಿಲ್ಲೆ ಪಟ್ಟಣದ ಸಮೀಪವೂ ಇದೇ ರೀತಿ ಕಪ್ಪೆಗಳ ಭೀಕರ ಮಳೆಯಾಗಿದ್ದ ಉಲ್ಲೇಖಗಳು ನಮಗೆ ಸಿಗುತ್ತವೆ.
ಇಂಗ್ಲೆಂಡ್‌ನ ಗ್ಲೌಸೆಸ್ಟರ್‌ಶೈರ್‌ನ ಎರಡು ಪಟ್ಟಣಗಳಲ್ಲಿ ಬರೋಬ್ಬರಿ ಎರಡು ವಾರಗಳ ಕಾಲ ವಿಚಿತ್ರವಾದ ‘ಗುಲಾಬಿ ಬಣ್ಣದ ಕಪ್ಪೆಗಳ’ ಮಳೆಯಾಗಿದ್ದಾಗಿ 1987ರಲ್ಲಿ ವರದಿಯಾಗಿತ್ತು. ವಿಶೇಷವೆಂದರೆ, ಇಂತಹ ವಿಲಕ್ಷಣ ಮಳೆಯಲ್ಲಿ ಕೇವಲ ಕಪ್ಪೆಗಳು ಮಾತ್ರವಲ್ಲದೆ ಪಕ್ಷಿಗಳು, ಮೀನುಗಳು ಮತ್ತು ಜಿಗಣೆಗಳಂತಹ ಹಾರಲಾರದ ಇತರ ಸಣ್ಣ ಜೀವಿಗಳು ಸಹ ಆಕಾಶದಿಂದ ಬಿದ್ದ ಉದಾಹರಣೆಗಳಿವೆ. ಇದೇ ಕಾರಣಕ್ಕೆ, ಹೊಂಡುರಾಸ್‌ನ 'ಯೋರೋ' ಎಂಬ ಸಣ್ಣ ಪಟ್ಟಣದ ಜನರು ಪ್ರತಿವರ್ಷವೂ ಅತ್ಯಂತ ಸಡಗರದಿಂದ 'ಫೆಸ್ಟಿವಲ್ ಡಿ ಲಾ ಲೂವಿಯಾ ಡಿ ಪೆಸೆಸ್' (ಮೀನುಗಳ ಮಳೆಯ ಹಬ್ಬ) ಎಂಬ ವಿಶಿಷ್ಟ ಹಬ್ಬವನ್ನು ಆಚರಿಸುತ್ತಾರೆ. ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಆಕಾಶದಿಂದ ಮಳೆಯ ರೂಪದಲ್ಲಿ ಬೀಳುವ ಸಣ್ಣ ಬೆಳ್ಳಿ ಬಣ್ಣದ ಮೀನುಗಳ ನೆನಪಿಗಾಗಿ ಈ ವಿಭಿನ್ನ ಹಬ್ಬವನ್ನು ಅಲ್ಲಿನ ಸ್ಥಳೀಯರು ಆಚರಿಸಿಕೊಂಡು ಬರುತ್ತಿದ್ದಾರೆ.

ವಿಚಿತ್ರ ವಿದ್ಯಾಮಾನದ ಹಿಂದಿರುವ ಕಾರಣವೇನು?

ಭೌತಶಾಸ್ತ್ರದ ನಿಯಮಗಳ ಪ್ರಕಾರ, ಮೇಲೆ ಹೋದ ಪ್ರತಿಯೊಂದು ವಸ್ತುವೂ ಕೆಳಗೆ ಬರಲೇಬೇಕು. ಈ ವಿಲಕ್ಷಣ ವಿದ್ಯಮಾನದಲ್ಲೂ ಸಹ, ಆಕಾಶದಿಂದ ಕೆಳಗೆ ಬಿದ್ದ ಜೀವಿಗಳು ಮೊದಲು ಯಾವುದೋ ಒಂದು ರೀತಿಯಲ್ಲಿ ಮೇಲೆ ಹೋಗಿರಲೇಬೇಕಾಗುತ್ತದೆ. ಸಂಶೋಧಕರು ನೀಡುವ ವಿವರಣೆಯ ಪ್ರಕಾರ, ಈ ಸಣ್ಣ ಜೀವಿಗಳು ದಿಢೀರನೆ ಸಂಭವಿಸುವ ವಿಚಿತ್ರ ಹವಾಮಾನ ಬದಲಾವಣೆಗಳಿಗೆ ಸಿಲುಕಿಕೊಳ್ಳುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಸಮುದ್ರ ಅಥವಾ ಸರೋವರಗಳಂತಹ ಜಲರಾಶಿಯ ಮೇಲೆ ಭೀಕರ ಸುಂಟರಗಾಳಿ ಉಂಟಾದಾಗ, ಆ ನೀರಿನ ಸುರುಳಿಯ ಒಳಗಿರುವ ಅತ್ಯಂತ ಕಡಿಮೆ ವಾಯುಭಾರ ಒತ್ತಡವು ನೀರಿನಲ್ಲಿರುವ ಹಗುರವಾದ ವಸ್ತುಗಳನ್ನು ಹಾಗೂ ಜೀವಿಗಳನ್ನು ಮೇಲಕ್ಕೆ ಸೆಳೆದುಕೊಳ್ಳುತ್ತದೆ.
ಹೀಗೆ ಸೆರೆಸಿಕ್ಕ ಸಣ್ಣ ಜೀವಿಗಳು, ಆ ಸುಂಟರಗಾಳಿಯು ಚಲಿಸಿದಂತೆಲ್ಲಾ ಅದರ ಜೊತೆಯಲ್ಲೇ ಸಾಗುತ್ತವೆ. ಅಂತಿಮವಾಗಿ, ಗಾಳಿಯ ವೇಗವು ಕಡಿಮೆಯಾದಾಗ ಅಥವಾ ಸುಂಟರಗಾಳಿಯ ತೀವ್ರತೆ ಕುಗ್ಗಿದಾಗ, ಅದರೊಳಗಿದ್ದ ಜೀವಿಗಳೆಲ್ಲವೂ ಮಳೆಯ ರೂಪದಲ್ಲಿ ಭೂಮಿಯ ಮೇಲೆ ಸುರಿಯುತ್ತವೆ. ಇಂತಹ ಕೆಲವು ಜಲಸ್ತಂಭಗಳು ನೂರಾರು ಮೈಲುಗಳಷ್ಟು ದೂರ ಪ್ರಯಾಣಿಸಬಲ್ಲವಾದರೂ, ಸಾಮಾನ್ಯವಾಗಿ ಒಂದು ಅಥವಾ ಎರಡು ಮೈಲು ಸಾಗುವಷ್ಟರಲ್ಲಿ ತಮ್ಮ ಶಕ್ತಿಯನ್ನು ಕಳೆದುಕೊಂಡು ಕಣ್ಮರೆಯಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಹಗುರವಾದ ಉಭಯಚರಗಳು ಹಾಗೂ ಜಲಚರಗಳು ಗಾಳಿಯಲ್ಲಿ ತೇಲಿಹೋಗಿ ಇಂತಹ ವಿಚಿತ್ರ ಮಳೆಗೆ ಕಾರಣವಾಗುತ್ತವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net