ಇದು ನಾವು ಕಟ್ಟಿದ್ದ ಬಾಂಗ್ಲಾವಲ್ಲ: ಕಣ್ಣೀರಿಟ್ಟ ಮಾಜಿ ಪ್ರಧಾನಿ; ಯೂನಸ್​ ಸರ್ಕಾರದ ಹರಿಹಾಯ್ದ ಶೇಖ್​ ಹಸೀನಾ! Sheikh Hasina on Bangladesh

ಇದು ನಾವು ಕಟ್ಟಿದ್ದ ಬಾಂಗ್ಲಾವಲ್ಲ ಎಂದು ಮಾಜಿ ಪ್ರಧಾನಿ ಶೇಖ್ ಹಸೀನಾ ಕಣ್ಣೀರು
ಇದು ನಾವು ಕಟ್ಟಿದ್ದ ಬಾಂಗ್ಲಾವಲ್ಲ ಎಂದು ಮಾಜಿ ಪ್ರಧಾನಿ ಶೇಖ್ ಹಸೀನಾ ಕಣ್ಣೀರು
Published on

ಪ್ರಮುಖ ಮುಖ್ಯಾಂಶಗಳು

  • ಇದು ನಾವು ಕಟ್ಟಿದ್ದ ಬಾಂಗ್ಲಾವಲ್ಲ ಎಂದು ಮಾಜಿ ಪ್ರಧಾನಿ ಶೇಖ್ ಹಸೀನಾ ಕಣ್ಣೀರು
  • ಮುಹಮ್ಮದ್ ಯೂನಸ್ ನೇತೃತ್ವದ ಹಂಗಾಮಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ
  • ಬಾಂಗ್ಲಾದೇಶ ಇನ್ನೊಂದು ಪಾಕಿಸ್ತಾನವಾಗಿ ಬದಲಾಗಿದೆ
ನವದೆಹಲಿ: ಬಾಂಗ್ಲಾದೇಶದಲ್ಲಿ ನಡೆದ ಭೀಕರ ರಾಜಕೀಯ ವಿದ್ಯಮಾನಗಳ ಬಳಿಕ ದೇಶಬಿಟ್ಟು ಭಾರತ ಸೇರಿದ್ದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina on Bangladesh), ದೆಹಲಿಯಿಂದಲೇ ಆಡಿಯೋ ಕಾನ್ಫರೆನ್ಸ್ ಮೂಲಕ ಜಗತ್ತಿನ ಮುಂದೆ ಬಂದು ಮಾತನಾಡಿದ್ದಾರೆ.
ಅಧಿಕಾರ ಕಳೆದುಕೊಂಡ ಬಳಿಕ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಂಗ್ಲಾದೇಶದ ಇತ್ತೀಚಿನ ಸ್ಥಿತಿಯನ್ನು ಕಂಡು ಕಣ್ಣೀರಿಟ್ಟಿದ್ದಾರೆ. ಕೇವಲ ಮಾಜಿ ಪ್ರಧಾನಿಯಾಗಿ ಮಾತ್ರವಲ್ಲ, ದೇಶದ ಸ್ಥಾಪಕ ಮುಜಿಬುರ್ ರೆಹಮಾನ್ ಮಗಳಾಗಿ ನನ್ನ ನೋವು ಹೇಳಿಕೊಳ್ಳುತ್ತಿದ್ದೇನೆ ಎಂದು ಅವರು ಭಾವುಕರಾಗಿದ್ದಾರೆ.

ಕಣ್ಣೀರಿಟ್ಟ ನಾಯಕಿ!

2024 ರಲ್ಲಿ ತಮ್ಮ ಮೇಲೆ ನಡೆದ ದಾಳಿ ಬಗ್ಗೆ ಮಾತನಾಡುತ್ತಾ ಶೇಖ್ ಹಸೀನಾ, 1975 ರಲ್ಲಿ ತಮ್ಮ ಇಡೀ ಕುಟುಂಬವನ್ನು ಹೀಗೆಯೇ ಹತ್ಯೆ ಮಾಡಲಾಗಿತ್ತು, ಆಗಲೂ ತಾನು 6 ವರ್ಷಗಳ ಕಾಲ ದೇಶಬಿಟ್ಟು ಹೊರಗಿರಬೇಕಾಯಿತು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಲಕ್ಷಾಂತರ ಜನರ ಪ್ರಾಣತ್ಯಾಗದಿಂದ ರೂಪುಗೊಂಡ ಬಾಂಗ್ಲಾದೇಶ ಇಂದು ಸಂಪೂರ್ಣವಾಗಿ ಬದಲಾಗಿದೆ. ಇದು ನಾವು ಕನಸು ಕಂಡ ಬಾಂಗ್ಲಾದೇಶವಲ್ಲ, ಇಲ್ಲಿ ಜನಸಾಮಾನ್ಯರಿಗೆ ಈಗ ನೆಮ್ಮದಿಯಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.


ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿತ್ತು ದೊಡ್ಡ ಸಂಚು!

ಆರಂಭದಲ್ಲಿ ವಿದ್ಯಾರ್ಥಿಗಳು ನಡೆಸಿದ ಮೀಸಲಾತಿ ವಿರೋಧಿ ಪ್ರತಿಭಟನೆಯನ್ನು ಕೆಲ ಸಂಘಟಿತ ಗುಂಪುಗಳು ತಮ್ಮ ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡವು ಎಂದು ಹಸೀನಾ ಆರೋಪಿಸಿದ್ದಾರೆ.
ವಿದ್ಯಾರ್ಥಿಗಳ ಮುಗ್ದ ಬೇಡಿಕೆಗಳನ್ನು ಹಿಂಸಾತ್ಮಕ ಚಳುವಳಿಯಾಗಿ ಬದಲಾಯಿಸಿ, ತಮ್ಮ ಸರ್ಕಾರವನ್ನು ಉರುಳಿಸಲು ಕೆಲವು ಶಕ್ತಿಗಳು ತೆರೆಮರೆಯಲ್ಲಿ ದೊಡ್ಡ ಸಂಚು ರೂಪಿಸಿದ್ದವು ಎಂದಿದ್ದಾರೆ.

ತಮ್ಮ ಸರ್ಕಾರವು ಸಮಸ್ಯೆಯನ್ನು ಶಾಂತಿಯುತವಾಗಿ, ಮಾತುಕತೆ ಮೂಲಕ ಬಗೆಹರಿಸಲು ಸಾಕಷ್ಟು ಪ್ರಯತ್ನ ಪಟ್ಟಿತ್ತು. ಆದರೆ ವಿರೋಧಿಗಳು ಪ್ರತಿಭಟನೆಯನ್ನು ಹಿಂಸೆಯ ಮಾರ್ಗವನ್ನಾಗಿ ಬಳಸಿಕೊಂಡರು ಎಂದಿದ್ದಾರೆ.

ಪೊಲೀಸರ ಕರ್ತವ್ಯವೇನು? ಸರ್ಕಾರದ ಸಮರ್ಥನೆ

ದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದನ್ನು ಸಮರ್ಥಿಸಿಕೊಂಡ ಹಸೀನಾ, ಪೊಲೀಸ್ ಠಾಣೆಗಳಿಗೇ ಬೆಂಕಿ ಹಚ್ಚಿದಾಗ, ಜನರ ಜೀವಗಳು ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗಳು ನಾಶವಾಗುತ್ತಿದ್ದಾಗ ಭದ್ರತಾ ಪಡೆಗಳು ಸುಮ್ಮನೆ ಕೂರಲು ಸಾಧ್ಯವಿತ್ತೇ? ಎಂದು ಪ್ರಶ್ನಿಸಿದ್ದಾರೆ.

ದೇಶದಲ್ಲಿ ತಮ್ಮ ಪಕ್ಷ ಅವಾಮಿ ಲೀಗ್‌ನ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ಭೀಕರ ದಾಳಿಗಳು ನಡೆಯುತ್ತಿವೆ. ಈಗಾಗಲೇ ಸುಮಾರು 10,000ಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಹತ್ಯೆಯಾಗಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಗಂಭೀರವಾಗಿ ಬಾಧಿತರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.


ಬಾಂಗ್ಲಾದೇಶ ಮತ್ತೊಂದು ಪಾಕಿಸ್ತಾನವಾಗುತ್ತಿದೆ!

ಶೇಖ್ ಹಸೀನಾ ಜತೆಗೆ ಮಾತನಾಡಿದ ಅವರ ಮಗ ಸಜೀಬ್ ವಾಜೀದ್, ಬಾಂಗ್ಲಾದೇಶದ ಪ್ರಸ್ತುತ ಯೂನಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಬಾಂಗ್ಲಾದೇಶ ಇಂದು ಮತ್ತೊಂದು ಪಾಕಿಸ್ತಾನವಾಗಿ ಬದಲಾಗಿದೆ ಎಂದು ಕಿಡಿಕಾರಿದ್ದಾರೆ.
ದೇಶದಲ್ಲಿ ಹಿಂಸಾಚಾರ ಮುಂದುವರಿದಿದ್ದು, ಸಾವಿನ ಸಂಖ್ಯೆ ಹೆಚ್ಚುತ್ತಲೇಯಿದೆ. ಆದರೆ ಸರ್ಕಾರ ಈ ಅಂಕಿಅಂಶಗಳನ್ನು ಮುಚ್ಚಿಡುತ್ತಿದೆ. ತನಿಖೆ ಹೆಸರಿನಲ್ಲಿ ಹತ್ಯೆಗಳನ್ನು ನಡೆಸುತ್ತಿರುವವರಿಗೆ ಯೂನಸ್ ಸರ್ಕಾರ ಕಾನೂನು ರಕ್ಷಣೆ ನೀಡುತ್ತಿದೆ. ಅವಾಮಿ ಲೀಗ್ ಪಕ್ಷದವರನ್ನು ಗುರಿಯಾಗಿಸಿ ರಾಜಕೀಯ ಹತ್ಯೆಗಳು ಮತ್ತು ದೌರ್ಜನ್ಯಗಳು ರಾಜಾರೋಷವಾಗಿ ನಡೆಯುತ್ತಿವೆ ಎಂದಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net