ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉದ್ವಿಗ್ನ: ರಿಯಾದ್‌ನ ಪ್ರತಿಷ್ಠಿತ ಕಟ್ಟಡದ ಮೇಲೆ ಹೂತಿಗಳ ಮಿಸೈಲ್​ ಅಟ್ಯಾಕ್! Houthi Attack

The 80-story PIF Tower in Riyadh, Saudi Arabia, damaged by a missile attack from Houthi rebels.
ಹೂತಿ ಬಂಡುಕೋರರ ಮಿಸೈಲ್ ದಾಳಿಯಿಂದ ಹಾನಿಗೊಳಗಾದ ಸೌದಿ ಅರೇಬಿಯಾದ ರಿಯಾದ್‌ನ 80 ಅಂತಸ್ತಿನ PIF ಟವರ್
Published on: 

ರಿಯಾದ್‌: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತೆ ದಟ್ಟವಾಗುತ್ತಿದ್ದು, ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಗುರುವಾರ (ನ.19) ಭಾರಿ ಸ್ಫೋಟದ ಸದ್ದು ಕೇಳಿಬಂದಿದ್ದು, ಇಡೀ ನಗರವೇ ಬೆಚ್ಚಿಬಿದ್ದಿದೆ. ಯೆಮೆನ್‌ನ ಇರಾನ್ ಬೆಂಬಲಿತ ಹೂತಿ ಬಂಡುಕೋರರು ನಡೆಸಿದ ಈ ದಾಳಿಯಲ್ಲಿ ರಿಯಾದ್‌ನ ಅತಿ ಎತ್ತರದ ಗಗನಚುಂಬಿ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಸೌದಿ ಅರೇಬಿಯಾ ದೃಢಪಡಿಸಿದೆ.

80 ಅಂತಸ್ತಿನ ಟವರ್‌ಗೆ ಹಾನಿ!

ರಿಯಾದ್‌ನಲ್ಲಿ ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಸೌದಿ ನಾಗರಿಕ ರಕ್ಷಣಾ ಸಂಸ್ಥೆ ಎಕ್ಸ್​ನಲ್ಲಿ ಮೂಲಕ ಈ ಮಾಹಿತಿಯನ್ನು ಖಚಿತಪಡಿಸಿದೆ. ದಾಳಿಯಿಂದ ಕಟ್ಟಡಕ್ಕೆ ಭೌತಿಕ ಹಾನಿಯಾಗಿದೆಯಾದರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೌದಿ ಸಂಸ್ಥೆಯು ಕಟ್ಟಡದ ಹೆಸರನ್ನು ನೇರವಾಗಿ ಹೇಳದಿದ್ದರೂ, ಅದು ಬಿಡುಗಡೆ ಮಾಡಿದ ಫೋಟೋದಲ್ಲಿ ರಿಯಾದ್‌ನ ಅತಿ ಎತ್ತರದ ಕಟ್ಟಡವಾದ 80 ಅಂತಸ್ತಿನ ಪಬ್ಲಿಕ್ ಇನ್ವೆಸ್ಟ್‌ಮೆಂಟ್ ಫಂಡ್ ಟವರ್ ಎಂದು ಹೇಳಲಾಗುತ್ತಿದೆ.

ಸೌದಿ ಅರೇಬಿಯಾದ ಸಾರ್ವಭೌಮ ಸಂಪತ್ತು ನಿಧಿಯ ಪ್ರಧಾನ ಕಚೇರಿ ಇದೇ ಕಟ್ಟಡದಲ್ಲಿದೆ. ದಾಳಿಯ ಅವಶೇಷಗಳು ಕಟ್ಟಡದ ಮೇಲೆ ಬಿದ್ದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದು, ಎಷ್ಟು ನಷ್ಟವಾಗಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಸೌದಿ ಮೈತ್ರಿಕೂಟದ ವಕ್ತಾರ ತುರ್ಕಿ ಅಲ್-ಮಲ್ಕಿ ತಿಳಿಸಿದ್ದಾರೆ.

ಸೌದಿ ಏರ್‌ಸ್ಟ್ರೈಕ್‌ಗೆ ಹೂತಿಗಳ ಪ್ರತೀಕಾರ?

ಯೆಮೆನ್‌ನಲ್ಲಿ ಅಂತರ್ಯುದ್ಧ ತೀವ್ರಗೊಂಡಿದ್ದು, ಸೌದಿ ಅರೇಬಿಯಾ ಮತ್ತು ಹೂತಿ ಬಂಡುಕೋರರ ನಡುವಿನ ಸಂಘರ್ಷ ತಾರಕಕ್ಕೇರಿದೆ. ರಿಯಾದ್ ಮೇಲಿನ ಈ ದಾಳಿಗೂ ಮುನ್ನ, ಮಂಗಳವಾರ ಮತ್ತು ಬುಧವಾರದಂದು ಸೌದಿ ನೇತೃತ್ವದ ಮೈತ್ರಿಕೂಟವು ಯೆಮೆನ್‌ನಲ್ಲಿರುವ ಹೂತಿಗಳ ನೆಲೆಗಳ ಮೇಲೆ ಭಾರಿ ವೈಮಾನಿಕ ದಾಳಿ ನಡೆಸಿತ್ತು.

ಸನಾ, ಅಮ್ರಾನ್, ಸಾದಾ ಮತ್ತು ಹೋಡೈಡಾ ಪ್ರಾಂತ್ಯಗಳಲ್ಲಿ ಹೂತಿಗಳು ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಬಚ್ಚಿಟ್ಟಿದ್ದ ಪರ್ವತದ ಸುರಂಗಗಳು ಸೇರಿದಂತೆ ಒಟ್ಟು 60 ಮಿಲಿಟರಿ ನೆಲೆಗಳನ್ನು ಧ್ವಂಸ ಮಾಡಿದ್ದಾಗಿ ಸೌದಿ ಸೇನೆ ಘೋಷಿಸಿತ್ತು. ಇದಕ್ಕೆ ಪ್ರತೀಕಾರವಾಗಿಯೇ ಹೂತಿ ಬಂಡುಕೋರರು ನೇರವಾಗಿ ಸೌದಿ ರಾಜಧಾನಿಯ ಆರ್ಥಿಕ ಕೇಂದ್ರವನ್ನೇ ಗುರಿಯಾಗಿಸಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

Also Read
'ಮೂಸೆವಾಲಾ' ಹಂತಕನಿಗೆ ಶುರುವಾದ ಕಂಟಕ: 'ಗೋಲ್ಡಿ ಬ್ರಾರ್' ಹಿಡಿದುಕೊಟ್ಟವರಿಗೆ 10.5 ಕೋಟಿ ರೂ. ಬಹುಮಾನ! Goldy Brar
The 80-story PIF Tower in Riyadh, Saudi Arabia, damaged by a missile attack from Houthi rebels.

ಕಾರ್ಖಾನೆಗಳ ಮೇಲೆ ದಾಳಿ: 17 ಜನರ ಸಾವು

ಮತ್ತೊಂದೆಡೆ, ಸೌದಿ ಮೈತ್ರಿಕೂಟದ ವೈಮಾನಿಕ ದಾಳಿಯಲ್ಲಿ ಸಾಮಾನ್ಯ ಜನರು ಬಲಿಯಾಗಿದ್ದಾರೆ ಎಂದು ಹೂತಿಗಳ ಆರೋಗ್ಯ ಸಚಿವಾಲಯ ಆರೋಪಿಸಿದೆ. ಹೋಡೈಡಾದಲ್ಲಿರುವ ಸ್ಪಾಂಜ್ ಕಾರ್ಖಾನೆಯೊಂದರ ಮೇಲೆ ಮಿಸೈಲ್​ ಬಿದ್ದ ಪರಿಣಾಮ 15 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ.

ಹಾಗೆಯೇ ಸಾದಾದಲ್ಲಿ ಇಬ್ಬರು ಬಲಿಯಾಗಿದ್ದರೆ, ರಾಜಧಾನಿ ಸನಾದ ಪಾದರಕ್ಷೆ ಕಾರ್ಖಾನೆ ಮೇಲೆ ನಡೆದ ದಾಳಿಯಲ್ಲಿ 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೂತಿ ವಕ್ತಾರ ಅನೀಸ್ ಅಲ್-ಅಸ್ಬಾಹಿ ತಿಳಿಸಿದ್ದಾರೆ. ಒಟ್ಟಿನಲ್ಲಿ, ಯೆಮೆನ್‌ನಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರವನ್ನು ಸೌದಿ ಬೆಂಬಲಿಸುತ್ತಿದ್ದರೆ, ಇರಾನ್ ಬೆಂಬಲಿತ ಹೂತಿ ಬಂಡುಕೋರರು ಸೌದಿಗೆ ನಿರಂತರವಾಗಿ ತಲೆನೋವಾಗಿದ್ದಾರೆ.

ಈಗ ರಾಜಧಾನಿ ರಿಯಾದ್‌ನ ಪ್ರತಿಷ್ಠಿತ ಕಟ್ಟಡದ ಮೇಲೆಯೇ ದಾಳಿ ನಡೆದಿರುವುದು ಮಧ್ಯಪ್ರಾಚ್ಯದಲ್ಲಿ ಮತ್ತೊಂದು ದೊಡ್ಡ ಯುದ್ಧದ ಆತಂಕವನ್ನು ಹುಟ್ಟುಹಾಕಿದೆ ಎನ್ನುವುದು ಜಾಗತಿಕ ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ, (ಏಜೆನ್ಸೀಸ್​).