ಅರಾಜಕತೆಯ ಬಿರುಗಾಳಿ

ಅರಾಜಕತೆಯ ಬಿರುಗಾಳಿ
ಅರಾಜಕತೆಯ ಬಿರುಗಾಳಿ
Published on
ಸುಂಕ, ಹೆಚ್ಚುವರಿ ಸುಂಕ, ನಮ್ಮ ನೀತಿಗಳಿಗೆ ಒಪ್ಪದಿದ್ದರೆ ಮತ್ತಷ್ಟು ಸುಂಕ!
2025ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಪದೇಪದೆ ಪ್ರಸ್ತಾಪಿಸಿದ ಮಾತುಗಳಿವು. ಬೇರೆ ದೇಶಗಳಿಂದ ಅಮೆರಿಕಕ್ಕೆ ಬರುವ ಉತ್ಪನ್ನಗಳ ಮೇಲೆ ಸುಂಕ ಪಟ್ಟಿಯನ್ನು ಬಿಡುಗಡೆಗೊಳಿಸುವುದು, ಕೆಲವೇ ದಿನಗಳಲ್ಲಿ ಆ ದರವನ್ನು ತಗ್ಗಿಸುವುದು ಅಥವಾ ಹೆಚ್ಚಿಸುವುದು ಟ್ರಂಪ್​ ನಡೆಯಾಗಿಬಿಟ್ಟಿದೆ. ಭಾರತದ ಮೇಲಂತೂ ಶೇಕಡ 50ರಷ್ಟು ಸುಂಕ ವಿಧಿಸಿದ್ದು, ವ್ಯಾಪಾರ ಒಪ್ಪಂದ ಸಂಬಂಧ ಉಭಯ ರಾಷ್ಟ್ರಗಳ ನಡುವೆ ಮಾತುಕತೆ ಮುಂದುವರಿದಿದೆ. ಟ್ರಂಪ್​ ಕೈಗೊಂಡ ದ್ವಂದ್ವ ಮತ್ತು ತರಾತುರಿಯ ನಿರ್ಧಾರಗಳು ಜಾಗತಿಕ ಷೇರುಪೇಟೆಗಳನ್ನು ಅಲುಗಾಡಿಸಿದವು. ಇದರ ಒಂದಿಷ್ಟು ಪರಿಣಾಮ ಭಾರತದ ಷೇರುಪೇಟೆಯ ಮೇಲಾಯಿತು. ಒಟ್ಟಾರೆ, ವಿವಾದಾಸ್ಪದ ನಿರ್ಧಾರಗಳ ಮೂಲಕವೇ ಟ್ರಂಪ್​ ಸುದ್ದಿಯಾದರು.

ಸೌದಿ&ಪಾಕ್​ ಸ್ನೇಹ

ಸೌದಿ ರಾಜಕುಮಾರ ಮೊಹಮ್ಮದ್​ ಬಿನ್​ ಸಲ್ಮಾನ್​ ಆಹ್ವಾನದ ಮೇರೆಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್​ ಶರೀಫ್​ ಸೌದಿ ರಾಜಧಾನಿ ರಿಯಾದ್​ಗೆ ಭೇಟಿ ನೀಡಿದ್ದರು. ಎರಡೂ ದೇಶಗಳ ನಾಯಕರು ಸೆಪ್ಟೆಂಬರ್​ 18ರಂದು ಮಹತ್ವದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದರು. ಎರಡು ದೇಶಗಳಲ್ಲಿ ಯಾವುದೇ ಒಂದು ದೇಶದ ಮೇಲೆ ಆಕ್ರಮಣ ನಡೆದರೆ ಅದು ಎರಡೂ ದೇಶಗಳ ಮೇಲಿನ ಆಕ್ರಮಣ ಎಂದು ಪರಿಗಣಿಸಲಾಗುವುದು ಎಂಬುದು ಒಪ್ಪಂದದ ಪ್ರಮುಖ ಅಂಶವಾಗಿದೆ. ಒಂದು ವೇಳೆ ಪಾಕಿಸ್ತಾನದ ಮೇಲೆ ಯಾರಾದರೂ ದಾಳಿ ನಡೆಸಿದರೆ ಆಗ ಸೌದಿ ಪಾಕಿಸ್ತಾನದ ನೆರವಿಗೆ ಬರಲಿದೆ. ಅಮೆರಿಕ ಮೇಲಿದ್ದ ಸೌದಿ ನಂಬಿಕೆಗೆ ಧಕ್ಕೆ ಬಂದಿರುವುದರಿಂದ ಪಾಕಿಸ್ತಾನದೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಂಡಿದ್ದು, ಇದು ಎಲ್ಲ ಬಗೆಯ ಶಸ್ತ್ರಾಸ್ತ್ರ ಸಹಕಾರದ ಅಂಶವನ್ನೂ ಒಳಗೊಂಡಿದೆ.

ಇಸ್ರೇಲ್​ನಿಂದ ಪ್ರಬಲ ದಾಳಿ

ಇಸ್ರೇಲ್​ ಸೆಪ್ಟೆಂಬರ್​ 8ರಿಂದ 10ರವರೆಗಿನ 72 ಗಂಟೆಗಳಲ್ಲಿ ಆರು ಇಸ್ಲಾಮಿಕ್​ ರಾಷ್ಟ್ರಗಳ ಮೇಲೆ ದಾಳಿ ನಡೆಸಿತು. ಈ ದಾಳಿಗಳಲ್ಲಿ 200 ಜನರು ಪ್ರಾಣ ಕಳೆದುಕೊಂಡರೆ ಸಾವಿರಕ್ಕೂ ಅಧಿಕ ಜನರು ಗಾಯಗೊಂಡರು. ಕತಾರ್​ನ ರಾಜಧಾನಿ ದೋಹಾ ಮೇಲೂ ಇಸ್ರೇಲ್​ ವಾಯುದಾಳಿ ನಡೆಸುತ್ತಿದ್ದಂತೆ ಹಲವು ರಾಷ್ಟ್ರಗಳಲ್ಲಿ ನಡುಕ ಸೃಷ್ಟಿಯಾಯಿತು. ಅಲ್ಲದೆ, ಇಸ್ರೇಲ್​ನ ಮುಂದಿನ ಗುರಿ ಸೌದಿ ಅರೇಬಿಯಾ,

ಒಲಿಯದ ನೊಬೆಲ್​

ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ್ದು ತಾನೇ ಎಂದು 50ಕ್ಕೂ ಹೆಚ್ಚು ಬಾರಿ ಹೇಳಿಕೊಂಡ (ಟ್ರಂಪ್​ ಹೇಳಿಕೆಯನ್ನು ಭಾರತ ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿದೆ) ಡೊನಾಲ್ಡ್​ ಟ್ರಂಪ್​ ನೊಬೆಲ್​ ಶಾಂತಿ ಪ್ರಶಸ್ತಿ ತಮಗೇ ಸಿಗಬೇಕು ಎಂದು ಹಲವು ವೇದಿಕೆಗಳಲ್ಲಿ ಮಾತ್ರವಲ್ಲದೆ ಮಾಧ್ಯಮಗಳ ಜತೆ ಮಾತನಾಡುವಾಗಲೂ ಹೇಳಿದ್ದರು. ಹೀಗಾಗಿ, ಈ ಬಾರಿ ನೊಬೆಲ್​ ಶಾಂತಿ ಪ್ರಶಸ್ತಿಯ ಘೋಷಣೆ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಕೊನೆಗೂ, ಟ್ರಂಪ್​ಗೆ ಪ್ರಶಸ್ತಿ ಒಲಿಯಲಿಲ್ಲ. ಪ್ರಜಾಪ್ರಭುತ್ವ ಹಕ್ಕುಗಳಿಗಾಗಿ ಹೋರಾಡುತ್ತಿರುವ ವೆನಿಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾಡೊ ನೊಬೆಲ್​ ಶಾಂತಿ ಪ್ರಶಸ್ತಿಗೆ ಭಾಜನರಾದರು. ಈ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಟ್ರಂಪ್​, ಕೊನೆಗೆ ಫಿಫಾ ಶಾಂತಿ ಪದಕವನ್ನು ಕೊರಳಿಗೆ ಹಾಕಿಕೊಂಡು ಸಂಭ್ರಮಿಸಿದರು.

ಶಾಂತವಾಗದ ಬಾಂಗ್ಲಾ

ಶೇಖ್​ ಹಸೀನಾ 2024ರ ಆಗಸ್ಟ್​ನಲ್ಲಿ ಬಾಂಗ್ಲಾದೇಶವನ್ನು ತೊರೆದ ಬಳಿಕ ಆ ದೇಶದ ಸ್ಥಿತಿ ಅಯೋಮಯವಾಗಿದೆ. ಮೊಹಮ್ಮದ್​ ಯೂನುಸ್​ ನೇತೃತ್ವದ ಮಧ್ಯಂತರ ಸರ್ಕಾರ ರಚನೆಯಾಗಿದ್ದರೂ, ಬಾಂಗ್ಲಾದಲ್ಲಿ ಶಾಂತಿ ನೆಲೆಸಿಲ್ಲ. ಬದಲಿಗೆ, ಹಿಂಸಾಚಾರ ತಾಂಡವವಾಡುತ್ತಿದ್ದು, ಅರಾಜಕತೆ ಸೃಷ್ಟಿಯಾಗಿದೆ. ಅಲ್ಪಸಂಖ್ಯಾತ ಹಿಂದೂಗಳ ಸ್ಥಿತಿ ಶೋಚನೀಯವಾಗಿದೆ. ಡಿಸೆಂಬರ್​ ತಿಂಗಳಲ್ಲೇ ಇಬ್ಬರು ಹಿಂದೂ ಯುವಕರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಶೇಖ್​ ಹಸೀನಾ ವಿರೋಧಿ ನಾಯಕ ಉಸ್ಮಾನ್​ ಹದಿ ಹತ್ಯೆ ನಂತರವಂತೂ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಇಸ್ಲಾಮಿಕ್​ ಮೂಲಭೂತವಾದಿಗಳು ಹಿಂದೂಗಳ ಅಂಗಡಿಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ.

ಪಾಕ್​&ತಾಲಿಬಾನ್​ ವೈರ

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಒಂದು ಕಾಲದಲ್ಲಿ ಮಿತ್ರರಾಷ್ಟ್ರಗಳು. ಕಾಲಚಕ್ರ ಬದಲಾಗಿದ್ದು, ಪ್ರಸಕ್ತ ಇವೆರಡೂ ದೇಶಗಳು ಬದ್ಧವೈರಿಗಳಾಗಿ ಮಾರ್ಪಟ್ಟಿವೆ. ಅದರಲ್ಲೂ, ತಾಲಿಬಾನ್​ ಹಿಡಿತದಲ್ಲಿರುವ ಅಪ್ಘಾನಿಸ್ತಾನ ಭಾರತದೊಂದಿಗೆ ಸ್ನೇಹಹಸ್ತ ಚಾಚಿರುವುದು ಪಾಕ್​ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 2021ರಲ್ಲಿ ಅಮೆರಿಕ ತನ್ನ ಸೈನಿಕರನ್ನು ಅಫ್ಘಾನ್​​ನಿಂದ ವಾಪಸ್​ ಕರೆಸಿಕೊಂಡ ಬಳಿಕ ಮತ್ತೆ ತಾಲಿಬಾನ್​ ಆಡಳಿತ ಆರಂಭವಾಯಿತು. ತಾಲಿಬಾನ್​ ಆಡಳಿತದ ಆರಂಭಿಕ ವರ್ಷಗಳಲ್ಲಿ ಪಾಕಿಸ್ತಾನ ಅಫ್ಘಾನ್​ನೊಂದಿಗೆ ಸ್ನೇಹ ಹೊಂದಿತ್ತಾದರೂ, ಇತ್ತೀಚಿನ ದಿನಗಳಲ್ಲಿ ಅದು ಹಳಸಿದೆ. ಪಾಕಿಸ್ತಾನದ ಒತ್ತಡಕ್ಕೆ ಮಣಿಯದೆ ತಾಲಿಬಾನ್​ ಸ್ವತಂತ್ರ ನಿರ್ಧಾರ ಕೈಗೊಳ್ಳುತ್ತಿದೆ. ತೆಹ್ರಿಕ್​&ಇ&ತಾಲಿಬಾನ್​ ಪಾಕಿಸ್ತಾನ (ಟಿಟಿಪಿ) ಭಯೋತ್ಪಾದಕ ಸಂಘಟನೆಯು ಪಾಕಿಸ್ತಾನದ ಮೇಲೆ ಒಂದೇ ವರ್ಷದಲ್ಲಿ 600 ದಾಳಿಗಳನ್ನು ನಡೆಸಿದ್ದು, ಇದರಲ್ಲಿ ಹಲವು ಸೈನಿಕರು ಮತ್ತು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.
ನೇಪಾಳದಲ್ಲಿ ಜೆನ್​&ಝಿ ಹೋರಾಟದ ಜ್ವಾಲೆ
ಸಾಮಾಜಿಕ ಮಾಧ್ಯಮ ನಿರ್ಬಂಧದ ಮೂಲಕ ಯುವಜನರ ದನಿ ಅದುಮಲು ಹೊರಟಿದ್ದ ನೇಪಾಳ ಸರ್ಕಾರದ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಯಿತು. ಸೆಪ್ಟೆಂಬರ್​ 8ರಂದು 18ರಿಂದ 30 ವರ್ಷದೊಳಗಿನ (ಜನರೇಷನ್​ ಝಡ್​) ಸಾವಿರಾರು ಯುವಕರು ಬೀದಿಗಳಿದು ಹೋರಾಟ ನಡೆಸಿದ ಪರಿಣಾಮ ಸರ್ಕಾರ ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವನ್ನು ಹಿಂದೆ ಪಡೆಯಿತು. "ಅಭಿವ್ಯಕ್ತಿ ಸ್ವಾತಂತ್ರ್ಯಯ ನಮ್ಮ ಹಕ್ಕು', "ಪ್ರಜಾಪ್ರಭುತ್ವ ಛಿದ್ರವಾಯಿತು, ಸರ್ವಾಧಿಕಾರ ಮತ್ತೆ ಮರಳಿತು' ಎಂಬ ಯುವಕರ ಘೋಷಣೆ ಕಾಠ್ಮಂಡು ಬೀದಿಗಳಲ್ಲಿ ಅನುರಣಿಸಿದವು. ಪ್ರತಿಭಟನಾನಿರತ ಯುವಕರು ಸಂಸತ್​ ಭವನಕ್ಕೆ ನುಗ್ಗಲು ಯತ್ನಿಸಿದ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಪೊಲೀಸರು ಎರಾಬಿರ್ರಿಯಾಗಿ ಹಲವು ಸುತ್ತು ಗುಂಡು ಹಾರಿಸಿದ ಪರಿಣಾಮ 20 ಯುವಕರು ಪ್ರಾಣ ಕಳೆದುಕೊಂಡರು. 200ಕ್ಕೂ ಹೆಚ್ಚು ಜನರು ಗಾಯಗೊಂಡರು. ಮುಂದಿನ ಹಲವು ದಿನಗಳ ಕಾಲ ಕಾಠ್ಮಂಡುವಿನಲ್ಲಿ ಕ್ಯೂರ್ ಮುಂದುವರಿದಿತ್ತು. ಪ್ರಧಾನಿ ಕೆ.ಪಿ.ಶರ್ಮಾ ಓಲಿ ಸೆ.9ರಂದು ರಾಜೀನಾಮೆ ನೀಡಿದ ಬಳಿಕ ಪರಿಸ್ಥಿತಿ ಸ್ವಲ್ಪ ನಿಯಂತ್ರಣಕ್ಕೆ ಬಂತು.

ಬದಲಾದ ಸಮೀಕರಣಗಳು

- ಪಾಕಿಸ್ತಾನ ಮತ್ತು ಅದರ ನೀತಿಗಳನ್ನು ವಿರೋಧಿಸುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಈ ವರ್ಷ ಮತ್ತೆ ಪಾಕ್​ಗೆ ಭರಪೂರ ನೆರವು ನೀಡಿದರು.
- ಭಾರತಕ್ಕೆ ಪಾಕಿಸ್ತಾನಕ್ಕಿಂತಲೂ ಈಗ ಬಾಂಗ್ಲಾದೇಶವೇ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ವಿದೇಶಾಂಗ ವ್ಯವಹಾರ ಗಳ ಸಂಸದೀಯ ಸಮಿತಿ ಇದೇ ಡಿಸೆಂಬರ್​ನಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
- ಅಫ್ಘಾನಿಸ್ತಾನ ವಿದೇಶಾಂಗ ಮಂತ್ರಿ ಅಮೀರ್​ ಖಾನ್​ ಮುತ್ತಾಕಿ ಒಂದು ವಾರದ ಕಾಲ ಭಾರತಕ್ಕೆ ಭೇಟಿ ನೀಡಿ, ವಿದೇಶಾಂಗ ಸಚಿವ ಜೈಶಂಕರ್​ ಜತೆ ಚರ್ಚೆ ನಡೆಸಿದರು. ಇದರ ಪರಿಣಾಮವಾಗಿ ಅಫ್ಘಾನ್​ನಲ್ಲಿ ಭಾರತ ತನ್ನ ರಾಯಭಾರ ಕಚೇರಿಯನ್ನು ಪೂರ್ಣಪ್ರಮಾಣದಲ್ಲಿ ಆರಂಭಿಸಿರುವುದು, ಭಾರತವಿರೋಧಿ ಚಟುವಟಿಕೆಗಳಿಗೆ ತನ್ನ ನೆಲದಿಂದ ಆಸ್ಪದ ನೀಡುವುದಿಲ್ಲ ಎಂದು ಅಫ್ಘಾನ್​ ಸರ್ಕಾರ ಹೇಳಿರುವುದು ಸೇರಿದಂತೆ ಸರಣಿ ಬೆಳವಣಿಗೆಗಳು ಪಾಕ್​ನ ನಿದ್ದೆಗೆಡಿಸಿದೆ.

ಎಸ್​ಇಒ ಶೃಂಗಸಭೆಯ ಯಶಸ್ಸು

ಚೀನಾದಲ್ಲಿ ಆಗಸ್ಟ್​ 31ರಂದು ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್​ಸಿಒ) ಶೃಂಗಸಭೆ ಭಾರತ&ಚೀನಾ&ರಷ್ಯಾ ನಡುವಿನ ಮೈತ್ರಿಯನ್ನು ಜಗತ್ತಿಗೆ ಸಾರಿತು. ಏಳು ವರ್ಷಗಳ ನಂತರ ಚೀನಾಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಂಪುಹಾಸಿನ ಸ್ವಾಗತ ದೊರೆಯಿತು. ಭಾರತ ಮತ್ತು ಚೀನಾ ನಡುವೆ ಸ್ನೇಹದ ಹೊಸ ಅಧ್ಯಾಯವೂ ಆರಂಭವಾಯಿತು. "ಡ್ರ್ಯಾಗನ್​ ಮತ್ತು ಆನೆ ಒಟ್ಟಿಗೆ ಬರಬೇಕು' ಎಂದು ಜಿನ್​ಪಿಂಗ್​ ಕರೆ ನೀಡಿದರೆ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಚೀನಾ ತೊಡಗಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು. ಇದೇ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ಪುತಿನ್​ ಮತ್ತು ಮೋದಿ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಿತು. ಮೂರೂ ದೇಶಗಳು ಪರಸ್ಪರ ಸಹಕಾರವನ್ನು ವಿಸ್ತರಿಸಿದರೆ ಅಮೆರಿಕದ ಡಾಲರ್​ ಪ್ರಾಬಲ್ಯವೂ ಕುಸಿಯಲಿದೆ ಎಂಬ ಸಂದೇಶವನ್ನು ಶೃಂಗಸಭೆ ಸಾರಿತು.

ಪುತಿನ್-ಮೋದಿ ದೋಸ್ತಿ

ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಡಿಸೆಂಬರ್​ 4 ಮತ್ತು 5ರಂದು ಭಾರತಕ್ಕೆ ಭೇಟಿ ನೀಡಿದರು. ವಿಮಾನ ನಿಲ್ದಾಣದಿಂದ ಪುತಿನ್​ ಮತ್ತು ಪ್ರಧಾನಿ ನರೇಂದ್ರ ಮೋದಿ ಒಂದೇ ಕಾರಿನಲ್ಲಿ ಪಯಣಿಸಿದರು. ಮಾತ್ರವಲ್ಲ, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇರಿರುವ ಹೆಚ್ಚುವರಿ ಸುಂಕದ ಬೆದರಿಕೆಗೆ ಮಣಿಯುವುದಿಲ್ಲ ಎಂದು ಉಭಯ ನಾಯಕರು ತಮ್ಮ ನಡೆಗಳಿಂದಲೇ ಸ್ಪಷ್ಟಪಡಿಸಿದರು. ವ್ಯಾಪಾರ, ಇಂಧನ, ಉನ್ನತ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವೆ ಸಹಕಾರದ ಹಾದಿ ವಿಶಾಲಗೊಂಡಿತು. ಭಾರತಕ್ಕೆ ಕಚ್ಚಾ ತೈಲ ಪೂರೈಕೆ ನಿಲ್ಲಿಸುವುದಿಲ್ಲ ಎಂದು ಪುತಿನ್​ ಸ್ಪಷ್ಟಪಡಿಸಿದರು.

ಬ್ರಿಟನ್​ನೊಂದಿಗೆ ಬಾಂಧವ್ಯವೃದ್ಧಿ

ಬ್ರಿಟನ್​ ಪ್ರಧಾನಿ ಕೀರ್​ ಸ್ಟಾರ್ಮರ್​ ಅಕ್ಟೋಬರ್​ 8, 9ರಂದು ಎರಡು ದಿನಗಳ ಭಾರತ ಭೇಟಿಗೆ ಆಗಮಿಸಿದ್ದರು. ಮುಂಬೈನಲ್ಲಿ ಪ್ರಧಾನಿ ನರೇಂದ್ರ ಮೋದಿಯ ವರನ್ನು ಭೇಟಿ ಮಾಡಿದ ಸ್ಟಾರ್ಮರ್​, ದ್ವಿಪಯ ಬಾಂಧವ್ಯ ವಿಸ್ತರಿಸಲು ಬದ್ಧ ಎಂದರು. ಉಭಯ ರಾಷ್ಟ್ರಗಳ ನಡುವೆ ವಾಣಿಜ್ಯ ಸಂಬಂಧ ಕೂಡ ಮತ್ತಷ್ಟು ದೃಢಗೊಂಡಿದೆ.

ಹೆಚ್ಚಿದ ಭಾರತದ ಬಲ

ವಿದೇಶಾಂಗ ನೀತಿಯಲ್ಲಿ ಸ್ಪಷ್ಟ ಹಾಗೂ ಪರಿಣಾಮಕಾರಿ ನಿಲುವಿನಿಂದ ಭಾರತದ ವರ್ಚಸ್ಸು ಹೆಚ್ಚಿತು. ಈ ವರ್ಷವೂ ಹಲವು ರಾಷ್ಟ್ರಗಳೊಂದಿಗೆ ದ್ವಿಪಯ ಸಂಬಂಧಗಳನ್ನು ವೃದ್ಧಿಸಿಕೊಂಡಿದೆ. ಅಲ್ಲದೆ, ಜಾಗತಿಕ ನಾಯಕರು ಭಾರತಕ್ಕೆ ಭೇಟಿ ನೀಡಿ, ಸ್ನೇಹಪಥವನ್ನು ವಿಸ್ತರಿಸಿದರು.

ವ್ಯಾನ್ಸ್​ ಭೇಟಿ

ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್​ ಏಪ್ರಿಲ್​ 21ರಿಂದ 24ರವರೆಗೆ ನಾಲ್ಕು ದಿನಗಳ ಕಾಲ ಭಾರತ ಭೇಟಿಯಲ್ಲಿದ್ದರು. ರಾಜತಾಂತ್ರಿಕ ಮಾತುಕತೆಗಳ ಬಳಿಕ ವ್ಯಾನ್ಸ್​ ಪ್ರೇಕ್ಷಣಿಯ ತಾಣಗಳಿಗೆ ಭೇಟಿ ನೀಡಿ, ಇಲ್ಲಿಯ ಸಂಸತಿಗೆ ಮನಸೋತರು.
ಭಾರತದ ನೆರೆಯ ರಾಷ್ಟ್ರಗಳಲ್ಲಿ ಈ ವರ್ಷ ಅಶಾಂತಿ ಮತ್ತು ಹಿಂಸಾಚಾರವೇ ತಾಂಡವವಾಡಿತು. ನೇಪಾಳ, ಬಾಂಗ್ಲಾದೇಶದಲ್ಲಿ ಲಾಂತರ ಜನರು ಬೀದಿಗಿಳಿದು ಹೋರಾಟ ನಡೆಸಿದರು. ಆದರೂ, ಈ ಎರಡೂ ರಾಷ್ಟ್ರಗಳಲ್ಲಿ ಅರಾಜಕ ಸ್ಥಿತಿ ಮುಂದುವರಿದಿದೆ. ಜನವರಿ 20ರಂದು ಅಮೆರಿಕ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಡೊನಾಲ್ಡ್​ ಟ್ರಂಪ್​ ಆರಂಭದಿಂದಲೂ ವಿವಾದಾತ್ಮಕ ನಿರ್ಧಾರಗಳಿಂದ ಸುದ್ದಿಯಾದರು. ಅವರು ಸಾರಿರುವ ಸುಂಕ ಸಮರವಂತೂ ಹಲವು ರಾಷ್ಟ್ರಗಳಿಗೆ ಸಂಕಷ್ಟ ತಂದೊಡ್ಡಿತು.
ರವೀಂದ್ರ ಎಸ್​. ದೇಶಮುಖ್​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net