ಗಂಡನ ಅಕ್ರಮ ಸಂಬಂಧ ಬಯಲು ಮಾಡಿ 6,180 ಕೋಟಿ ರೂ. ಗೆದ್ದ ಪತ್ನಿ!
ದಕ್ಷಿಣ ಕೊರಿಯಾದ ಇತಿಹಾಸದಲ್ಲೇ ಅತ್ಯಂತ ದುಬಾರಿ ಡಿವೋರ್ಸ್ ಕೇಸ್
ಸ್‌ಕೆ ಗ್ರೂಪ್ ಅಧ್ಯಕ್ಷನಿಗೆ ತಟ್ಟಿದ ವಿಚ್ಛೇದನದ ಬಿಸಿ
ಪತಿಯಿಂದ ದ್ರೋಹವೆಂದು ಕೋರ್ಟ್ ಮೆಟ್ಟಿಲೇರಿದ ಪತ್ನಿಗೆ 'ಕೋಟಿ' ಜಯ
Divorce Case: ದಕ್ಷಿಣ ಕೊರಿಯಾದ ಅತ್ಯಂತ ದುಬಾರಿ ವಿಚ್ಛೇದನ ಪ್ರಕರಣ ಸದ್ಯ ಇಡೀ ಜಗತ್ತನ್ನೇ ಅಕ್ಷರಶಃ ಬೆಚ್ಚಿಬೀಳಿಸಿದೆ. ಹಿಂದೆಂದೂ ನೋಡದ, ಕೇಳದ ಹೈಪ್ರೊಫೈಲ್ ಡಿವೋರ್ಸ್ ಕೇಸ್ ಇದಾಗಿದ್ದು, ಮತ್ತೊಬ್ಬಳ ಜೊತೆ ತನ್ನ ಪತಿಯ ಅಕ್ರಮ ಸಂಬಂಧವನ್ನು ಬಯಲಿಗೆಳೆದ ಪತ್ನಿಗೆ ಕಡೆಗೂ ಕೋರ್ಟ್ನಲ್ಲಿ ದೊಡ್ಡ ಜಯ ಸಿಕ್ಕಿದೆ.
640 ಮಿಲಿಯನ್ ಡಾಲರ್
ಈ ಪ್ರಕರಣದಲ್ಲಿ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಸಿಯೋಲ್ ಹೈಕೋರ್ಟ್ ದೇಶದ ಪ್ರಮುಖ ಕೈಗಾರಿಕಾ ಸಂಘಟಿತ ಎಸ್‌ಕೆ ಗ್ರೂಪ್‌ನ ಅಧ್ಯಕ್ಷ ಚೆಯ್ ಟೇ-ವಾನ್ ಅವರಿಗೆ 944 ಬಿಲಿಯನ್ ವಾನ್ ( ಅಂದರೆ ಸುಮಾರು 640 ಮಿಲಿಯನ್ ಡಾಲರ್) ನಗದನ್ನು ಅವರ ಮಾಜಿ ಪತ್ನಿ ರೋಹ್ ಸೋ-ಯೊಂಗ್‌ಗೆ ಕೊಡುವಂತೆ ಆದೇಶ ನೀಡಿದೆ. ಈ ಹಣವನ್ನು ಭಾರತೀಯ ಕರೆನ್ಸಿಯಲ್ಲಿ ನೋಡುವುದಾದರೆ, ಬರೋಬ್ಬರಿ 6,245 ಕೋಟಿ ರೂ. ಆಗಿದೆ. ಇದೊಂದು ತೀರ್ಪು ದಕ್ಷಿಣ ಕೊರಿಯಾದ ಇತಿಹಾಸದಲ್ಲೇ ಅತಿದೊಡ್ಡ ವಿಚ್ಛೇದನ ಪ್ರಕರಣ ಎನ್ನಲಾಗಿದೆ.
ಅನೈತಿಕ ಸಂಬಂಧ ಬಯಲು
ರೋಹ್ ಸೋ-ಯಂಗ್ ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋಹ್ ಟೇ-ವೂ ಅವರ ಪುತ್ರಿ. ಈಕೆ ಮತ್ತು ಚೆ ಟೇ-ವೋನ್ 1988ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ, 2015ರಲ್ಲಿ, ಚೆ ಟೇ-ವೋನ್ ಅವರು ಅನ್ಯ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಮತ್ತು ಇವರಿಬ್ಬರಿಗೂ ಮಗುವೂ ಇರುವುದು ಬಯಲಾಯಿತು. ಈ ವಿಷಯ ತಿಳಿದ ಬೆನ್ನಲ್ಲೇ ವೋನ್, ತನಗೆ ವಿಚ್ಛೇದನ ಕೊಡಿಸುವಂತೆ ಕೋರ್ಟ್ ಮೆಟ್ಟಿಲೇರಿದರು.
ಈ ಪ್ರಕರಣದಲ್ಲಿ, ಹಿಂದೆ ನ್ಯಾಯಾಲಯ ಹೆಚ್ಚಿನ ಮೊತ್ತಕ್ಕೆ ಆದೇಶ ನೀಡಿದ್ದರೂ, ಸುಪ್ರೀಂ ಕೋರ್ಟ್ ಕೆಲವು ಅಂಶಗಳನ್ನು ಮರುಪರಿಶೀಲಿಸುವಂತೆ ಸೂಚಿಸಿತು. ಹೈಕೋರ್ಟ್ ಇತ್ತೀಚೆಗೆ ವಿಚಾರಣೆ ನಡೆಸಿ, 944 ಬಿಲಿಯನ್ ವೋನ್ ಪರಿಹಾರವನ್ನು ನಗದು ರೂಪದಲ್ಲೇ ಕೊಡುವಂತೆ ತೀರ್ಪಿನಲ್ಲಿ ಒತ್ತಿ ಹೇಳಿದೆ. ಚೆ ಟೇ-ವೋನ್ ಅವರ ಆಸ್ತಿಗಳ ಬೆಳವಣಿಗೆಯಲ್ಲಿ ರೋ ಸೋ-ಯಂಗ್ ಪರೋಕ್ಷವಾಗಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
ಕುಟುಂಬ ನಿರ್ವಹಣೆ ಹಾಗೂ ಸಾಮಾಜಿಕ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಆಕೆಯ ಕೊಡುಗೆಯನ್ನು ಗಣನೆಗೆ ತೆಗೆದುಕೊಂಡ ಬಳಿಕವೇ ಆಕೆಗೆ ದೊಡ್ಡ ಮಟ್ಟದ ಪರಿಹಾರವನ್ನು ನಿರ್ಧರಿಸಲಾಗಿದೆ ಎಂದು ಕೋರ್ಟ್ ತಿಳಿಸಿದೆ. ಆದಾಗ್ಯೂ, ಎಸ್‌ಕೆ ಗ್ರೂಪ್‌ನ ಬೆಳವಣಿಗೆಗೆ ಆಕೆಯ ತಂದೆ ರೋ ಟೇ-ವೂ ಅವರ ಫಂಡ್ಗಳೇ ಕಾರಣ ಎಂಬ ವಾದವನ್ನು ನ್ಯಾಯಾಲಯ ಇಲ್ಲಿ ಪರಿಗಣಿಸಲಿಲ್ಲ.
ಹೈಕೋರ್ಟ್ನಲ್ಲಿ ತಮ್ಮ ಹಿನ್ನಡೆ ಆದ ಕಾರಣ, ಚಾ ಟೇ-ವಾನ್ ಮತ್ತೆ ದಕ್ಷಿಣ ಕೊರಿಯಾದ ಸುಪ್ರೀಂ ಕೋರ್ಟ್‌ಗೆ ತೀರ್ಪನ್ನು ಪ್ರಶ್ನಿಸಿ, ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ. ಅಲ್ಲಿಗೆ, ಜಗತ್ತಿನಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ವಿಚ್ಛೇದನ ಪ್ರಕರಣ ಮುಂದುವರಿಯುವ ಲಕ್ಷಣಗಳಿವೆ,(ಏಜೆನ್ಸೀಸ್).