ಯಾರು ಈ 'ಕಂಚು' ಗೆದ್ದ ಯುವಕ
ಬಿಹಾರದ ನಳಂದ ಜಿಲ್ಲೆಯ ಹರ್ನೌತ್ ಮೂಲದ ಝಂಡು, ಹುಟ್ಟಿನಿಂದಲೇ ಪೋಲಿಯೊ ಪೀಡಿತರಾಗಿದ್ದರು. ರಸ್ತೆಬದಿಯಲ್ಲಿ ಆಲೂಗಡ್ಡೆ ಮತ್ತು ಈರುಳ್ಳಿ ಮಾರುವ ತನ್ನ ತಂದೆಗೆ ಬೆಂಬಲವಾಗಿ, ಕೊರೊನಾ ಲಾಕ್ಡೌನ್ ಸಮಯದಲ್ಲಿ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಲು ಇ-ರಿಕ್ಷಾ ಓಡಿಸಲು ಪ್ರಾರಂಭಿಸಿದರು. 2017ರಲ್ಲಿ ಪ್ಯಾರಾ ಅಥ್ಲೆಟಿಕ್ಸ್ನಲ್ಲಿ ಶಾಟ್ಪುಟ್ ಮತ್ತು ಡಿಸ್ಕಸ್ ಥ್ರೋ ಮೂಲಕ ತಮ್ಮ ಕ್ರೀಡಾ ಪ್ರಯಾಣವನ್ನು ಪ್ರಾರಂಭಿಸಿದ ಅವರು, ಜಿಮ್ನಲ್ಲಿ ಅಭ್ಯಾಸ ಮಾಡುವುದರ ಜತೆ ಜತೆಯಲ್ಲೇ ಪವರ್ಲಿಫ್ಟಿಂಗ್ನತ್ತ ಒಲವು ತೋರಿದರು.
2023ರ ರಾಷ್ಟ್ರೀಯ ಚಾಂಪಿಯನ್ಶಿಪ್ಗೆ ಹೋಗಲು ಹಣವಿಲ್ಲದ ಕಾರಣ, ಅವರು ತಮ್ಮ ಇ-ರಿಕ್ಷಾವನ್ನು ಸಹ ಮಾರಿದರು. ಆದರೆ, ದುರಾದೃಷ್ಟವಶಾತ್ ಆ ಟೂರ್ನಿಯಲ್ಲಿ ಅವರು ಗೆಲುವು ಸಾಧಿಸಲು ವಿಫಲವಾದರು. ಇಷ್ಟಕ್ಕೆ ಎದೆಗುಂದದ ಝಂಡು, ನಿರಂತರವಾಗಿ ಕಠಿಣ ಪರಿಶ್ರಮದಲ್ಲಿ ತೊಡಗಿದರು. ಪ್ಯಾರಾಲಿಂಪಿಕ್ ಕಂಚಿನ ಪದಕ ವಿಜೇತ ರಾಜಿಂದರ್ ಸಿಂಗ್ ರಾಹೇಲು, ಬಿಹಾರಿ ಯುವಕನ ಪ್ರತಿಭೆಯನ್ನು ಗುರುತಿಸಿ ಗಾಂಧಿನಗರದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಕೇಂದ್ರದಲ್ಲಿ ಅವರಿಗೆ ತರಬೇತಿ ನೀಡಿದರು. ಅಲ್ಲಿಂದ, ಝಂಡು ಹಿಂತಿರುಗಿ ನೋಡಿದ್ದೇ ಇಲ್ಲ.
72 ಕೆಜಿ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆಗಳನ್ನು ಸೃಷ್ಟಿಸಿದರು. ಮತ್ತು 2025ರ ಬೀಜಿಂಗ್ ವಿಶ್ವಕಪ್ ಮತ್ತು 2026ರ ಏಷ್ಯಾ ಹಾಗೂ ಓಷಿಯಾನಿಯಾ ಚಾಂಪಿಯನ್ಶಿಪ್ಗಳಲ್ಲಿ ಕಂಚಿನ ಪದಕಗಳನ್ನು ಗೆದ್ದರು. ಈಗ, ಕಾಮನ್ವೆಲ್ತ್ನಲ್ಲಿ ಭಾರತಕ್ಕೆ ಮೊದಲ ಪದಕ ಹಾಗೂ ತಮ್ಮ ತೆಕ್ಕೆಗೆ ಮತ್ತೊಂದು ಕಂಚನ್ನು ಗೆಲ್ಲುವ ಮೂಲಕ ದೇಶದ ಕೀರ್ತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಈ ನಳಂದ ಯುವಕ, 2028ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಪ್ಯಾರಾಲಿಂಪಿಕ್ಸ್ಗೆ ಲಗ್ಗೆಯಿಡಲು ಕಣ್ಣಿಟ್ಟಿದ್ದಾರೆ,(ಏಜೆನ್ಸೀಸ್).