ಪೋಲೆಂಡ್‌ನಲ್ಲಿ ಭೀಕರ ಗುಂಡಿನ ದಾಳಿಗೆ 5 ಸಾವು! ಹಲವರ ಸ್ಥಿತಿ ಗಂಭೀರ; ದಾಳಿಕೋರನಿಗೆ ಗುಂಡು ಹಾರಿಸಿದ ಖಾಕಿ | Poland

Poland
ಪೋಲೆಂಡ್‌ನಲ್ಲಿ ಭೀಕರ ಗುಂಡಿನ ದಾಳಿಗೆ ಐವರ ಸಾವು! 12ಕ್ಕೂ ಹೆಚ್ಚು ಮಂದಿಗೆ ಗಾಯ; ದಾಳಿಕೋರನಿಗೆ ಗುಂಡು ಹಾರಿಸಿದ ಖಾಕಿ! Poland
Published on: 

ಕ್ರಾಕೋವ್: ಪೋಲೆಂಡ್‌ನ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಹಾಗೂ ಐತಿಹಾಸಿಕ ನಗರವಾದ ಕ್ರಾಕೋವ್‌ನ 'ಮೇನ್ ಮಾರ್ಕೆಟ್ ಸ್ಕ್ವೇರ್' ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ಅಪರಿಚಿತ ವ್ಯಕ್ತಿಯೊಬ್ಬ ನಡೆಸಿದ ಭೀಕರ ಗುಂಡಿನ ದಾಳಿಗೆ ಕನಿಷ್ಠ ಐವರು ಬಲಿಯಾಗಿದ್ದು, 12ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಘಟನೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದ ಪೋಲಿಷ್ ಪೊಲೀಸರು ದಾಳಿಕೋರನ ಮೇಲೆ ಗುಂಡು ಹಾರಿಸಿ, ಆತನನ್ನು ಸದ್ಯ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಆರೋಪಿಗೆ ತೀವ್ರ ರಕ್ತಸ್ರಾವ ಉಂಟಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಲಿಸುವ ಕಾರಿನಿಂದ ದಾಳಿ

ಶನಿವಾರ ಸ್ಥಳೀಯ ಸಮಯ ಮಧ್ಯಾಹ್ನ ಸುಮಾರು 3 ಗಂಟೆಗೆ ಕ್ರಾಕೋವ್‌ನ ಸ್ಲಾವ್ಕೊವ್ಸ್ಕಾ ರಸ್ತೆಯಿಂದ ಮಾರುಕಟ್ಟೆ ಚೌಕದ ಕಡೆಗೆ ವೇಗವಾಗಿ ಬಂದ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ಸಾರ್ವಜನಿಕರ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾನೆ. ಈ ವೇಳೆ, ಸಾರ್ವಜನಿಕರಲ್ಲದೆ ಘಟನಾ ಸ್ಥಳದಲ್ಲಿದ್ದ ಕೆಲ ಪೊಲೀಸರಿಗೂ ದಾಳಿಯಲ್ಲಿ ಗಾಯಗಳಾಗಿವೆ.

ದಾಳಿಕೋರ ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯ ವೇಳೆ ಆತನಿಗೆ ಗುಂಡು ತಗಲಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಗಳು ತಿಳಿಸಿವೆ. ಜನದಟ್ಟಣೆಯ ಪ್ರದೇಶದಲ್ಲೇ ಈ ದುರಂತ ನಡೆದಿದ್ದು, ಗುಂಡಿನ ದಾಳಿಗೆ ಅಂಗಡಿಯೊಂದರ ಗ್ಲಾಸ್‌ಗಳು ಹಾನಿಗೊಂಡಿವೆ. ಏರ್ ಅಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Also Read
ಕಾಪಿ-ಪೇಸ್ಟ್ ವಿವರಣೆಗೆ ಸೋಮವಾರ ಉತ್ತರ! ಈಗ ದೀಪಾವಳಿ ಸಂಭ್ರಮಿಸಿ: ತೈಲ ಕಂಪನಿಗಳಿಗೆ ಸಚಿವ ರಿಜ್ವಾನ್ ಅರ್ಷದ್ ಟಾಂಗ್
Poland

ಪೋಲೆಂಡ್ ಪ್ರಧಾನಿ ಪ್ರತಿಕ್ರಿಯೆ

ಈ ಭೀಕರ ದಾಳಿಯ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ (X) ನಲ್ಲಿ ಕಳವಳ ವ್ಯಕ್ತಪಡಿಸಿರುವ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ (Donald Tusk), "ಕ್ರಾಕೋವ್‌ನಲ್ಲಿ ನಡೆದ ಈ ದುರಂತ ಘಟನೆಯ ಕುರಿತು ಗೃಹ ಸಚಿವರಿಂದ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದೇನೆ. ಪೊಲೀಸರು ಘಟನೆಯ ಹಿನ್ನೆಲೆ, ಉದ್ದೇಶ ಮತ್ತು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ.

ಸದ್ಯದ ಮಟ್ಟಿಗೆ ದಾಳಿಕೋರನ ಹಿನ್ನೆಲೆ ಹಾಗೂ ಈ ಕ್ರೂರ ಕೃತ್ಯದ ಹಿಂದಿನ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿದಿದೆ,(ಏಜೆನ್ಸೀಸ್).