ಕಾಪಿ-ಪೇಸ್ಟ್ ವಿವರಣೆಗೆ ಸೋಮವಾರ ಉತ್ತರ! ಈಗ ದೀಪಾವಳಿ ಸಂಭ್ರಮಿಸಿ: ತೈಲ ಕಂಪನಿಗಳಿಗೆ ಸಚಿವ ರಿಜ್ವಾನ್ ಅರ್ಷದ್ ಟಾಂಗ್

E20-Petrol
ಕಾಪಿ-ಪೇಸ್ಟ್ ವಿವರಣೆಗೆ ಸೋಮವಾರ ಉತ್ತರ! ಈಗ ದೀಪಾವಳಿ ಸಂಭ್ರಮಿಸಿ: ತೈಲ ಕಂಪನಿಗಳಿಗೆ ಸಚಿವ ರಿಜ್ವಾನ್ ಅರ್ಷದ್ ಟಾಂಗ್
Published on: 

ಬೆಂಗಳೂರು: ರಾಜ್ಯದಲ್ಲಿ ಇ20 ಪೆಟ್ರೋಲ್‌ನಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಎಥೆನಾಲ್ ಬೆರೆಸಿ ಮಾರಾಟ ಮಾಡುತ್ತಿರುವ ಅಕ್ರಮದ ಬಗ್ಗೆ ದಾಖಲೆ ಸಮೇತ ತೈಲ ಕಂಪನಿಗಳ ವಿರುದ್ಧ ಸಿಡಿದೆದ್ದ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್, ಇದೀಗ ಅದೇ ಆಯಿಲ್​ ಸಂಸ್ಥೆಗಳ ವಿವರಣೆಗೆ ಖಡಕ್​ ತಿರುಗೇಟು ನೀಡಿದ್ದಾರೆ.

ಪೆಟ್ರೋಲ್​ನಲ್ಲಿ ಶೇ.20ಕ್ಕಿಂತ ಹೆಚ್ಚು ಎಥೆನಾಲ್​ ಬೆರೆಸಿ, ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ಗರಿಷ್ಟ ಎಂದರೆ ಶೇ.31.2ರಷ್ಟು ಎಥೆನಾಲ್​ ಮಿಕ್ಸಿಂಗ್ ಆಗಿರುವ ಬಗ್ಗೆ ಸಚಿವರು ಪ್ರಯೋಗಾಲಯದ ವರದಿಯನ್ನು ಮುಂದಿಟ್ಟು ತೈಲ ಕಂಪನಿಗಳಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದರು. ಈ ವಿಚಾರ ರಾಷ್ಟ್ರ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಅಲರ್ಟ್ ಆದ ಆಯಿಲ್ ಕಂಪನಿಗಳು, ತಮ್ಮ ವಿವರಣೆಯನ್ನು ಸೋಷಿಯಲ್ ಮೀಡಿಯಾ ಮೂಲಕ ಕೊಟ್ಟಿವೆ. ಆದರೆ, ಇವೆಲ್ಲವೂ ಒಂದೇ ರೀತಿ ಇರುವುದನ್ನು ಗಮನಿಸಿದ ಅರ್ಷದ್​, ನಿಮ್ಮ ಕಾಪಿ-ಪೇಸ್ಟ್ ಉತ್ತರಕ್ಕೆ ಸೋಮವಾರ ಪ್ರತ್ಯುತ್ತರ ನೀಡುವುದಾಗಿ ಹೇಳಿದ್ದಾರೆ.

ನಿಮ್ಮ ಕಾಪಿ-ಪೇಸ್ಟ್ ಉತ್ತರವನ್ನು ನಾನೂ ಗಮನಿಸಿದ್ದೇನೆ. ನಿಮ್ಮ ದೀಪಾವಳಿ ಹಬ್ಬದ ವೀಕೆಂಡ್​ ಸಂಭ್ರಮವನ್ನು ಹಾಳುಮಾಡಲು ಬಯಸುವುದಿಲ್ಲ. ಸೋಮವಾರ ದೇಶದ ಜನತೆಯ ಮುಂದೆ ನಿಮ್ಮ ಈ ವಿವರಣೆಗೆ ವಿವರವಾದ ಉತ್ತರ ಕೊಡುತ್ತೇನೆ. ಅಲ್ಲಿಯವರೆಗೆ ಹಬ್ಬವನ್ನು ಆನಂದಿಸಿ. ತೈಲ ಸಂಸ್ಥೆಗಳು ಕೇವಲ ಸಾಧಾರಣ ಸಂಸ್ಥೆಗಳಲ್ಲ, ಅವು ಸರ್ಕಾರಿ ಸ್ವಾಮ್ಯದ ಜವಾಬ್ದಾರಿಯುತ ಕಂಪನಿಗಳು ಎಂಬುದನ್ನು ಮರೆಯಬಾರದು. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು" ಎಂದು ಎಕ್ಸ್​ ಪೋಸ್ಟ್ ಮೂಲಕ ತಿರುಗೇಟು ನೀಡಿದ್ದಾರೆ.

ಅಷ್ಟಕ್ಕೂ ಏನಿದು ಇ20 ವಾರ್​?

ಕರ್ನಾಟಕ ಸರ್ಕಾರವು ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ, ಇಂಡಿಯನ್ ಆಯಿಲ್ (IOCL), ಹಿಂದೂಸ್ತಾನ್ ಪೆಟ್ರೋಲಿಯಂ (HPCL), ಭಾರತ್ ಪೆಟ್ರೋಲಿಯಂ (BPCL), ನಯಾರಾ (Nayara) ಮತ್ತು ಶೆಲ್ (Shell) ನಂತಹ ಕಂಪನಿಗಳಿಗೆ ಸೇರಿದ ಪೆಟ್ರೋಲ್ ಬಂಕ್‌ಗಳಿಂದ ಒಟ್ಟು 63 ಮಾದರಿಗಳನ್ನು ಸಂಗ್ರಹಿಸಲಾಯಿತು. ಆರಂಭದಲ್ಲಿ, ಈ ಮಾದರಿಗಳನ್ನು ಆಯಾ ತೈಲ ಕಂಪನಿಗಳ ಪ್ರಯೋಗಾಲಯಗಳಿಗೆ ಕಳುಹಿಸಿ, ಅವುಗಳಲ್ಲಿರುವ ಎಥೆನಾಲ್ ಪ್ರಮಾಣವನ್ನು ಬಹಿರಂಗಪಡಿಸುವಂತೆ ಕೇಳಲಾಗಿತ್ತು. ಆದರೆ, ಕಂಪನಿಗಳಿಂದ ಯಾವುದೇ ಸ್ಪಷ್ಟ ಉತ್ತರ ಸಿಗದಿದ್ದಾಗ, ಕೆಲವು ಮಾದರಿಗಳನ್ನು ಪರೀಕ್ಷೆಗಾಗಿ ಖಾಸಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಯಿತು. ಏಳು ಜಿಲ್ಲೆಗಳಿಂದ ಸಂಗ್ರಹಿಸಿದ ಮಾದರಿಗಳಲ್ಲಿ, ನಿಗದಿತ ಶೇ.20ರ ಮಿತಿಗಿಂತ ಹೆಚ್ಚು ಎಥೆನಾಲ್ ಇರುವುದು ಕಂಡುಬಂದಿದೆ ಎಂದು ಸಚಿವರು ತಿಳಿಸಿದರು.

Also Read
ಪೆಟ್ರೋಲ್​ನಲ್ಲಿ ಶೇ.31 ಎಥೆನಾಲ್ ಬೆರೆಸಿ ಮಾರಾಟ! ಪ್ರಯೋಗಾಲಯದ ವರದಿ ಮುಂದಿಟ್ಟು ಆರೋಪಿಸಿದ ಸಚಿವ ರಿಜ್ವಾನ್ ಅರ್ಷದ್ | E20 Petrol
E20-Petrol

ಕರ್ನಾಟಕ ಸರ್ಕಾರ ಬಹಿರಂಗಪಡಿಸಿದ ವಿವರಗಳ ಪ್ರಕಾರ, ಇಂಡಿಯನ್ ಆಯಿಲ್‌ನ ಪೆಟ್ರೋಲ್ ಮಾದರಿಗಳಲ್ಲಿ ಅತಿ ಹೆಚ್ಚು ಅಂದರೆ ಶೇ.31.2ರಷ್ಟು ಎಥೆನಾಲ್ ಇರುವುದು ಪತ್ತೆಯಾಗಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಮಾದರಿಗಳಲ್ಲಿ ಶೇ.30.5, ಭಾರತ್ ಪೆಟ್ರೋಲಿಯಂನಲ್ಲಿ ಶೇ.26.5, ನಯಾರಾ ಪೆಟ್ರೋಲ್‌ನಲ್ಲಿ ಶೇ.26.1 ಮತ್ತು ಶೆಲ್ ಪೆಟ್ರೋಲ್‌ನಲ್ಲಿ ಶೇ.25.5ರಷ್ಟು ಎಥೆನಾಲ್ ಇರುವುದು ಪರೀಕ್ಷೆಗಳಲ್ಲಿ ಕಂಡುಬಂದಿದೆ ಎಂದು ಹೇಳಿದೆ.

ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಪೆಟ್ರೋಲ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಎಥೆನಾಲ್ ಬೆರೆಸುವುದರಿಂದ ವಾಹನ ಸವಾರರ ಮೇಲೆ ಹೆಚ್ಚುವರಿ ಹೊರೆ ಬೀಳುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಇದು ವಾಹನಗಳ ಮೈಲೇಜ್, ಇಂಜಿನ್ ಕಾರ್ಯಕ್ಷಮತೆ ಮತ್ತು ನಿರ್ವಹಣಾ ವೆಚ್ಚದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇಂಧನ ಮೈಲೇಜ್‌ನಲ್ಲಿ ಶೇ.10ರಷ್ಟು ಇಳಿಕೆಯಾದರೆ, ದೇಶಾದ್ಯಂತ ವಾರ್ಷಿಕವಾಗಿ ಸುಮಾರು 62,000 ಕೋಟಿ ರೂಪಾಯಿಗಳ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. ವಾಹನಗಳ ನಿರ್ವಹಣೆ ಮತ್ತು ದುರಸ್ತಿ ವೆಚ್ಚದ ರೂಪದಲ್ಲಿ ಹೆಚ್ಚುವರಿಯಾಗಿ 39,000 ಕೋಟಿ ರೂ.ಗಳ ಹೊರೆ ಉಂಟಾಗಿದೆ ಎಂದು ಸರ್ಕಾರ ಕಳವಳ ವ್ಯಕ್ತಪಡಿಸಿದೆ.