ಮದ್ಯ, ಪಾರ್ಟಿ ಡ್ರಗ್ಸ್, ಖಿನ್ನತೆಯ ಮಾತ್ರೆಗಳ ಕಿಲ್ಲರ್ ಕಾಂಬಿನೇಷನ್!... ಲಂಡನ್‌ನ ಐಷಾರಾಮಿ ಹೋಟೆಲ್‌ನಲ್ಲಿ ಸೌದಿ ರಾಜಕುಮಾರ ಶವವಾಗಿ ಪತ್ತೆ | Saudi Prince

Saudi Prince | ಲಂಡನ್‌ನ ಐಷಾರಾಮಿ ಹೋಟೆಲ್‌ನಲ್ಲಿ ಸೌದಿ ರಾಜಕುಮಾರ ಶವವಾಗಿ ಪತ್ತೆ
Saudi Prince | ಲಂಡನ್‌ನ ಐಷಾರಾಮಿ ಹೋಟೆಲ್‌ನಲ್ಲಿ ಸೌದಿ ರಾಜಕುಮಾರ ಶವವಾಗಿ ಪತ್ತೆ
Published on
ಲಂಡನ್: ಲಂಡನ್‌ನ ಮ್ಯಾರಿಯಾಟ್ ಐಷಾರಾಮಿ ಹೋಟೆಲ್ ಕೋಣೆಯ ಶೌಚಾಲಯದ ನೆಲದ ಮೇಲೆ ಸೌದಿ ಅರೇಬಿಯಾದ ರಾಜಕುಮಾರ (Saudi Prince) ಅಬ್ದುಲ್ಲಾ ಬಿನ್ ಫಹಾದ್ ಬಿನ್ ಅಬ್ದುಲ್ಲಾ ಬಿನ್ ಅಬ್ದುಲ್ ಅಜೀಜ್ ಬಿನ್ ಜಲಾವಿ ಅಲ್ ಸೌದ್ ಶವವಾಗಿ ಪತ್ತೆಯಾಗಿದ್ದಾರೆ. ಅವರು ಮದ್ಯ, ಮಾದಕ ದ್ರವ್ಯ ಹಾಗೂ ಪ್ರಿಸ್ಕ್ರಿಪ್ಷನ್ ಔಷಧಗಳನ್ನು ಸಂಯೋಜಿಸಿ ಸೇವಿಸಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಇನ್ನರ್ ವೆಸ್ಟ್ ಲಂಡನ್ ಕೊರೊನರ್ಸ್ ಕೋರ್ಟ್‌ಗೆ ಸಲ್ಲಿಕೆಯಾದ ಸಾಕ್ಷ್ಯಾಧಾರಗಳ ಪ್ರಕಾರ, ರಾಜಕುಮಾರ ಅಬ್ದುಲ್ಲಾ ನವೆಂಬರ್ 19 ರಂದು ಒಂದು ವಾರದ ಮಟ್ಟಿಗೆ ಸುಮಾರು 600 ಯುರೋ ಮೌಲ್ಯದ ಈ ಹೋಟೆಲ್ ಕೋಣೆಗೆ ಚೆಕ್-ಇನ್ ಆಗಿದ್ದರು. ಸಾವನ್ನಪ್ಪುವ ಹಿಂದಿನ ದಿನ ಸಂಜೆ, ಸಿಗರೇಟ್ ಸೇದಲು ಕ್ಷಣಕಾಲ ಹೊರಬಂದಿದ್ದ ಅವರು, ಸಿಟಿಟಿವಿಯಲ್ಲಿ ಕೊನೆಯ ಬಾರಿಗೆ ಜೀವಂತವಾಗಿ ಕಂಡುಬಂದಿದ್ದರು.
ಮರುದಿನ, ಹೋಟೆಲ್‌ನ ಶುಚಿಗೊಳಿಸುವ ಸಿಬ್ಬಂದಿ 5ನೇ ಮಹಡಿಯ ಅವರ ಕೋಣೆಗೆ ಪ್ರವೇಶಿಸಿದಾಗ, ರಾಜಕುಮಾರ ಶೌಚಾಲಯದ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ. ಹೋಟೆಲ್ ಸಿಬ್ಬಂದಿ ತಕ್ಷಣ ತುರ್ತು ಸೇವೆಗೆ ಕರೆ ಮಾಡಿದ್ದು, ಸ್ಥಳಕ್ಕೆ ಆಗಮಿಸಿದ ಪ್ಯಾರಾಮೆಡಿಕ್ ಸಿಬ್ಬಂದಿ ಅವರನ್ನು ಬದುಕಿಸಲು ಯತ್ನಿಸಿದರೂ ಫಲಕಾರಿಯಾಗದೆ, ನವೆಂಬರ್ 25 ರಂದು ಮೃತಪಟ್ಟಿರುವುದಾಗಿ ಘೋಷಿಸಲಾಯಿತು.

ಟಾಕ್ಸಿಕಾಲಜಿ ವರದಿಯಲ್ಲಿ ಮಾರಕ ಮಿಶ್ರಣ ಪತ್ತೆ

ವಿಚಾರಣೆ ವೇಳೆ ಬಹಿರಂಗವಾದ ವಿಷಶಾಸ್ತ್ರದ ಪರೀಕ್ಷೆಯ ವರದಿಯಂತೆ, ರಾಜಕುಮಾರ ಅಬ್ದುಲ್ಲಾ ರಕ್ತದಲ್ಲಿ ಮದ್ಯದ ಪ್ರಮಾಣ ಪ್ರತಿ 100 ಮಿಲಿ ಲೀಟರ್‌ಗೆ 222 ಮಿಲಿಗ್ರಾಂನಷ್ಟಿತ್ತು. ಇದು ಇಂಗ್ಲೆಂಡ್‌ನ ಡ್ರೈವಿಂಗ್ ಕಾನೂನಿನ ಲೀಗಲ್ ಲಿಮಿಟ್‌ಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಈ ಪ್ರಮಾಣದ ಮದ್ಯ ಸೇವನೆಯು ವ್ಯಕ್ತಿಯೊಬ್ಬನನ್ನು ನೇರವಾಗಿ ಕೋಮಾಗೆ ತಳ್ಳಲು ಸಾಕು ಎಂದು ತಜ್ಞರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದರ ಜೊತೆಗೆ, ಪಾರ್ಟಿ ಡ್ರಗ್ ಎಂದೇ ಕರೆಯಲ್ಪಡುವ ಜಿಎಚ್‌ಬಿ, ಗಾಂಜಾ, ಕ್ಸಾನಾಕ್ಸ್ ಹಾಗೂ ಆತಂಕ ಶಮನಕಾರಿ ಔಷಧಗಳ ಕುರುಹುಗಳು ಅವರ ದೇಹದಲ್ಲಿ ಪತ್ತೆಯಾಗಿವೆ. ಈ ಎಲ್ಲಾ ಅಪಾಯಕಾರಿ ವಸ್ತುಗಳ ಸಂಯೋಜನೆಯೇ ಅಂತಿಮವಾಗಿ ತೀವ್ರ ಹೃದಯಾಘಾತಕ್ಕೆ ಕಾರಣವಾಗಿ ಅವರ ಪ್ರಾಣವನ್ನು ತೆಗೆದಿದೆ ಎಂದು ವೈದ್ಯಕೀಯ ತಜ್ಞರು ತೀರ್ಮಾನಿಸಿದ್ದಾರೆ.

ವ್ಯಸನಮುಕ್ತಿಗೆ ಚಿಕಿತ್ಸೆ ಪಡೆದಿದ್ದ ರಾಜಕುಮಾರ

ರಾಜಕುಮಾರ ಅಬ್ದುಲ್ಲಾ ಮರಣ ಹೊಂದುವ ಮೊದಲು ಮದ್ಯಪಾನ ಹಾಗೂ ಪ್ರಿಸ್ಕ್ರಿಪ್ಷನ್ ಔಷಧಗಳ ಅತಿಯಾದ ವ್ಯಸನದಿಂದ ಬಳಲುತ್ತಿದ್ದರು ಎಂಬ ವಿಷಯ ನ್ಯಾಯಾಲಯಕ್ಕೆ ತಿಳಿದುಬಂದಿದೆ. ಅವರು 2025 ರ ಆಗಸ್ಟ್‌ನಲ್ಲಿ ರೋಹ್ಯಾಂಪ್ಟನ್‌ನ ಪ್ರಿಯೋರಿ ಕ್ಲಿನಿಕ್​ಗೆ ದಾಖಲಾಗಿ ಮದ್ಯ, ಬೆಂಜೊಡಿಯಾಜೆಪೈನ್ಸ್ ಮತ್ತು ಪ್ರಿಗಾಬಾಲಿನ್ ವ್ಯಸನ ಮುಕ್ತಿಗೆ ಚಿಕಿತ್ಸೆ ಪಡೆದಿದ್ದರು ಎಂದು ವರದಿಯಾಗಿದೆ.
ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್ ಡಾ. ವಿಕ್ಟೋರಿಯಾ ಚಾಮೊರೊ ನೀಡಿದ ಮಾಹಿತಿ ಪ್ರಕಾರ, ರಾಜಕುಮಾರ ಚಿಕಿತ್ಸೆಯ ಸಮಯದಲ್ಲಿ ಆತಂಕ ಮತ್ತು ಖಿನ್ನತೆಯ ಲಕ್ಷಣಗಳನ್ನು ಹೊಂದಿದ್ದರೂ, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿ ಯಾವುದೇ ದೈಹಿಕ ತೊಂದರೆಗಳಿಲ್ಲದೆ ಡಿಟಾಕ್ಸ್ ಪ್ರೋಗ್ರಾಂ ಪೂರ್ಣಗೊಳಿಸಿದ್ದರು. ನಂತರದ ಕೆಲವು ಭೇಟಿಗಳನ್ನು ಅವರು ತಪ್ಪಿಸಿಕೊಂಡಿದ್ದರೂ, ಡಿಸ್ಚಾರ್ಜ್ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯದಲ್ಲಿದ್ದಾರೆ ಎಂದು ವೈದ್ಯರು ಭಾವಿಸಿರಲಿಲ್ಲ. ಇದಾದ ಬಳಿಕ ಅವರು ಮರ್ಸಿಸೈಡ್‌ನ ರೈನ್ ಫೋರ್ಡ್ ಹಾಲ್ ಕ್ಲಿನಿಕ್​ನಲ್ಲಿ ಉಸಿರಾಟದ ಸೋಂಕಿಗೆ ಚಿಕಿತ್ಸೆ ಪಡೆದು ಅಕ್ಟೋಬರ್‌ನಲ್ಲಿ ಹೊರಬಂದಿದ್ದರು.

ಅನಾಹುತಕಾರಿ ಸಾವು ಎಂದು ಕೊರೊನರ್ ತೀರ್ಪು

ಪ್ರಕರಣದ ವಿಚಾರಣೆ ನಡೆಸಿದ ಸಹಾಯಕ ಕೊರೊನರ್ ಜೀನ್ ಹಾರ್ಕಿನ್, ರಾಜಕುಮಾರ ಅಬ್ದುಲ್ಲಾಗೆ ಆತ್ಮಹತ್ಯೆ ಮಾಡಿಕೊಳ್ಳುವ ಯಾವುದೇ ಉದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ, ಅವರು ಯಾರೊಂದಿಗೂ ಆತ್ಮಹತ್ಯೆಯ ಆಲೋಚನೆಗಳನ್ನು ಹಂಚಿಕೊಂಡಿರಲಿಲ್ಲ ಮತ್ತು ಯಾವುದೇ ಮೂರನೇ ವ್ಯಕ್ತಿಯ ಭಾಗಿಯಾಗುವಿಕೆಯ ಸಾಕ್ಷ್ಯಗಳು ಸಿಕ್ಕಿಲ್ಲ. ಅಂತಿಮ ಕ್ಷಣಗಳಲ್ಲಿ ಅವರು ಸಂಪೂರ್ಣ ಏಕಾಂಗಿಯಾಗಿದ್ದರೆಂಬುದನ್ನು ಸಿಸಿಟಿವಿ ದೃಶ್ಯಾವಳಿಗಳು ದೃಢಪಡಿಸಿವೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಜೀನ್ ಹಾರ್ಕಿನ್ ಇದನ್ನು ಅನಾಹುತಕಾರಿ ದುರಂತ ಸಾವು ಎಂದು ತೀರ್ಪು ನೀಡಿದ್ದಾರೆ. ವೈದ್ಯಕೀಯ ಸಾವಿನ ಕಾರಣವನ್ನು ಬಹುವಿಧದ ಮಾದಕ ದ್ರವ್ಯ ಸೇವನೆ ಎಂದು ಪಟ್ಟಿ ಮಾಡಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ವ್ಯಕ್ತಪಡಿಸಿದ್ದಾರೆ.

ಸೌದಿ ರಾಜಮನೆತನದ ಅಧಿಕೃತ ಪ್ರಕಟಣೆ

ಸೌದಿ ರಾಯಲ್ ಕೋರ್ಟ್ ಅಧಿಕೃತ ಹೇಳಿಕೆಯ ಮೂಲಕ ರಾಜಕುಮಾರ ಅಬ್ದುಲ್ಲಾ ಮರಣವನ್ನು ದೃಢಪಡಿಸಿದ್ದು, ರಿಯಾದ್‌ನ ವಿಐಪಿ ಇಮಾಮ್ ತುರ್ಕಿ ಬಿನ್ ಅಬ್ದುಲ್ಲಾ ಮಸೀದಿಯಲ್ಲಿ ಅಂತಿಮ ಪ್ರಾರ್ಥನೆಗಳನ್ನು ನೆರವೇರಿಸಲಾಗುವುದು ಎಂದು ಪ್ರಕಟಿಸಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net