ಗಂಡನ ಪ್ರಾಣ ಉಳಿಸೋಕೆ ಮಾಧ್ಯಮದ ಮುಂದೆ ಭಿಕ್ಷೆ ಬೇಡ್ಬೇಕಾ..? 6 ದಿನ ಕಳೆದರೂ ರಕ್ಷಣೆಗೆ ಬಾರದ ಸರ್ಕಾರದ ವಿರುದ್ಧ ಇಂಜಿನಿಯರ್ ಪತ್ನಿ ಆಕ್ರೋಶ! | Nepal Floods

Nepal Floods > 6 ದಿನ ಕಳೆದರೂ ರಕ್ಷಣೆಗೆ ಬಾರದ ಸರ್ಕಾರದ ವಿರುದ್ಧ ಇಂಜಿನಿಯರ್ ಪತ್ನಿ ಆಕ್ರೋಶ!
Nepal Floods > 6 ದಿನ ಕಳೆದರೂ ರಕ್ಷಣೆಗೆ ಬಾರದ ಸರ್ಕಾರದ ವಿರುದ್ಧ ಇಂಜಿನಿಯರ್ ಪತ್ನಿ ಆಕ್ರೋಶ!
Published on
ಕಾಠ್ಮಂಡು: ನೇಪಾಳದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹದ (Nepal Floods) ಬಳಿಕ, ನೀರಿನಲ್ಲಿ ಮುಳುಗಿರುವ ಜಲವಿದ್ಯುತ್ ಯೋಜನೆಗಳ ಸುರಂಗಗಳಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗಾಗಿ ಕುಟುಂಬಗಳು ಅನುಭವಿಸುತ್ತಿರುವ ಯಾತನೆ ಮುಂದುವರಿದಿದೆ. ಪ್ರವಾಹ ಪೀಡಿತ ರಸುವಾ ಜಿಲ್ಲೆಯ ತ್ರಿಶೂಲಿ 3A ಜಲವಿದ್ಯುತ್ ಯೋಜನೆಯಲ್ಲಿ ನೇಪಾಳ ವಿದ್ಯುತ್ ಪ್ರಾಧಿಕಾರದ (NEA) ಇಂಜಿನಿಯರ್ ಸೇರಿದಂತೆ ಕನಿಷ್ಠ 40 ನೌಕರರು ಸುರಂಗದೊಳಗೆ ಸಿಲುಕಿಕೊಂಡಿದ್ದಾರೆ. ಘಟನೆ ನಡೆದು ಆರು ದಿನಗಳು ಕಳೆದರೂ ಯಾವುದೇ ಪರಿಣಾಮಕಾರಿ ರಕ್ಷಣಾ ಕಾರ್ಯಾಚರಣೆ ನಡೆದಿಲ್ಲ ಎಂದು ಸಿಲುಕಿರುವ ಇಂಜಿನಿಯರ್ ಅವರ ಪತ್ನಿ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ಪತಿಯ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ತ್ರಿಶೂಲಿ 3A ಅತ್ಯಂತ ಸುರಕ್ಷಿತ ಜಲವಿದ್ಯುತ್ ಯೋಜನೆಗಳಲ್ಲಿ ಒಂದೆಂದು ತಾವು ಕೇಳಿರುವುದಾಗಿ ತಿಳಿಸಿದರು. ಹಾಗಾಗಿ ತಮ್ಮ ಪತಿ ಸೇರಿದಂತೆ 40 ನೌಕರರು ಸುರಕ್ಷಿತವಾಗಿರುತ್ತಾರೆ ಎಂಬ ಭರವಸೆಯಿಂದ ಕುಟುಂಬಸ್ಥರು ಅಲೆಯುತ್ತಿದ್ದು, ಮಾಹಿತಿ ಪಡೆಯಲು ಸರ್ಕಾರಿ ಕಚೇರಿಗಳು ಮತ್ತು ಸೇನಾ ಪ್ರಧಾನ ಕಚೇರಿಯ ಸುತ್ತ ಅಲೆಯುತ್ತಿದ್ದಾರೆ. ಕೆಲವು ಸಂಬಂಧಿಕರು ಸ್ವತಃ ಘಟನಾ ಸ್ಥಳಕ್ಕೂ ತೆರಳಿದ್ದಾರೆ.
ಮಾಧ್ಯಮಗಳಲ್ಲಿ ಬರುತ್ತಿರುವ ರಕ್ಷಣಾ ವರದಿಗಳನ್ನು ಸುಳ್ಳು ಎಂದಿರುವ ಅವರು, ಚೀನಾ ಮತ್ತು ಭಾರತದ ತಂಡಗಳು ರಕ್ಷಣೆಗೆ ಇಳಿದಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದರೂ, ನಿಜಾಂಶವೇನೆಂದರೆ ಸ್ಥಳಕ್ಕೆ ಇನ್ನೂ ಒಂದು ಜೆಸಿಬಿ ಕೂಡ ತಲುಪಿಲ್ಲ ಎಂದು ಸತ್ಯಾಂಶ ಬಿಚ್ಚಿಟ್ಟಿದ್ದಾರೆ. ಇಷ್ಟೊಂದು ಗಂಭೀರ ವಿಷಯವನ್ನು ಸರ್ಕಾರ ಹಗುರವಾಗಿ ಪರಿಗಣಿಸುತ್ತಿದ್ದು, ಪ್ರವಾಹ ಬಂದು ಆರು-ಏಳು ದಿನಗಳಾದರೂ ಒಂದೂ ಜೆಸಿಬಿ ಅಥವಾ ಟನಲ್ ಕಟರ್ ಸ್ಥಳಕ್ಕೆ ಬಂದಿಲ್ಲ ಎಂದು ಅವರು ದೂರಿದ್ದಾರೆ.

ಮಾಧ್ಯಮಗಳ ಮುಂದೆ ಭಿಕ್ಷೆ ಬೇಡಬೇಕೇ..?

ಸಚಿವರ ಭೇಟಿ ಹಾಗೂ ವಿದೇಶಿ ನೆರವಿನ ಭರವಸೆಗಳು ಕುಟುಂಬಗಳಲ್ಲಿ ಕೇವಲ ಸುಳ್ಳು ಭರವಸೆ ಮೂಡಿಸಿವೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಈಗ ಪ್ರತಿ ಗಂಟೆ ಹಾಗೂ ಪ್ರತಿ ಕ್ಷಣವೂ ತಮಗೆ ಭಾರವಾಗುತ್ತಿದ್ದು, ಸರ್ಕಾರ ದಿನಕ್ಕೆ ಹತ್ತು-ಇಪ್ಪತ್ತು ಮೀಟರ್ ಮುಂದೆ ಸಾಗಿದ್ದೇವೆ ಎನ್ನವುದು ಜೀವ ಉಳಿಸುವ ಕೆಲಸವೋ ಅಥವಾ ತಮಾಷೆಯೋ ಎಂದು ಪ್ರಶ್ನಿಸಿದ್ದಾರೆ. ಇದು ಕೇವಲ ಒಬ್ಬ ವ್ಯಕ್ತಿಯ ಪ್ರಶ್ನೆಯಲ್ಲ, 40 ಕುಟುಂಬಗಳ ಜೀವನದ ಪ್ರಶ್ನೆಯಾಗಿದ್ದು, ಅವರ ಕುಟುಂಬಗಳು ಅನುಭವಿಸುತ್ತಿರುವ ನರಕಯಾತನೆಯ ಕಲ್ಪನೆ ಸರ್ಕಾರಕ್ಕಿದೆಯೇ ಎಂದು ಕೇಳಿದ್ದಾರೆ. ಅನೇಕ ಸಂಬಂಧಿಕರು ಮಾತನಾಡಲಾಗದೆ ಆಸ್ಪತ್ರೆ ಸೇರಿದ್ದು, ತಮ್ಮ ಪತಿ ಹೋಗಿದ್ದು ರಾಷ್ಟ್ರದ ಕೆಲಸಕ್ಕಾಗಿ ಹೊರತು ವೈಯಕ್ತಿಕ ಕೆಲಸಕ್ಕಲ್ಲ, ಅವರ ಜೀವ ಉಳಿಸಲು ಮಾಧ್ಯಮಗಳ ಮುಂದೆ ಭಿಕ್ಷೆ ಬೇಡಬೇಕೇ ಎಂದು ಅವರು ಕಣ್ಣೀರಿಟ್ಟಿದ್ದಾರೆ.
ಮತ್ತೊಂದೆಡೆ ನೇಪಾಳ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 1,093ಕ್ಕೆ ಏರಿಕೆಯಾಗಿದ್ದು, ಸುಮಾರು 4,000 ಜನರು ಕಾಣೆಯಾಗಿದ್ದಾರೆ. ದೇಶದ ವಿವಿಧ ಜಲವಿದ್ಯುತ್ ಯೋಜನೆಗಳಿಂದ ನೂರಾರು ಕಾರ್ಮಿಕರು ನಾಪತ್ತೆಯಾಗಿದ್ದಾರೆ. 216 MW ಸಾಮರ್ಥ್ಯದ ಅಪ್ಪರ್ ತ್ರಿಶೂಲಿ-1 ಯೋಜನೆಯಿಂದಲೇ 557ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, 254 ಜನರನ್ನು ರಕ್ಷಿಸಲಾಗಿದೆ. ಇಲ್ಲಿ ಚೀನಾ ಮತ್ತು ದಕ್ಷಿಣ ಕೊರಿಯಾ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. 37 MW ನ ಅಪ್ಪರ್ ತ್ರಿಶೂಲಿ-3B ಯೋಜನೆಯಲ್ಲಿ 122 ಜನರು, 22 MW ನ ಚಿಲಿಮೆ ಯೋಜನೆಯಲ್ಲಿ 8 ಜನರು, 20 MW ನ ಲಾಂಗ್‌ಟಾಂಗ್ ಖೋಲಾದಲ್ಲಿ 41 ಜನರು ಹಾಗೂ 14.1 MW ನ ಮೈಲುಂಗ್ ಖೋಲಾ ಯೋಜನೆಯಲ್ಲಿ 7 ಜನರು ನಾಪತ್ತೆಯಾಗಿದ್ದಾರೆ. ಇವುಗಳ ಹೊರತಾಗಿ ರಸುವಾಗಢಿ ಯೋಜನೆಯಲ್ಲಿ 93, ರಸುವಾ-ಭೋಟೇಕೋಶಿಯಲ್ಲಿ 4, ಮಿಡಲ್ ತ್ರಿಶೂಲಿ ಗಂಗಾದಲ್ಲಿ 2 ಹಾಗೂ ತ್ರಿಶೂಲಿ ಮತ್ತು ದೇವಿಘಾಟ್ ಯೋಜನೆಗಳಲ್ಲಿ ತಲಾ ಒಬ್ಬರು ನಾಪತ್ತೆಯಾಗಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net