ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರದು ಒಂದೇ ಪಟ್ಟು, ‘ಇರಾನ್ ತನ್ನ ಅಣ್ವಸ್ತ್ರ ಯೋಜನೆಯನ್ನು ನಿಲುಗಡೆಗೆ ತರಬೇಕು’ ಎಂದು. ಇರಾನ್ನದೂ ಒಂದೇ ಹಠ, ‘ನಾವು ಅಣ್ವಸ್ತ್ರ ಯೋಜನೆಯನ್ನು ಮುಂದುವರಿಸುತ್ತಲೇ ಹೋಗುತ್ತೇವೆ, ಅದು ನಮ್ಮ ಹಕ್ಕು’ ಎಂದು. ಕೆರಳಿದ ಟ್ರಂಪ್ ಮೊದಲಿಗೆ ಅಮೆರಿಕವನ್ನು 2015ರ ಜುಲೈನ ಬಹುಪಕ್ಷೀಯ ಒಪ್ಪಂದದಿಂದ ಹೊರಗೊಯ್ದರು, ಇರಾನ್ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ಹೇರಿದರು. ‘ಆದಾಯವನ್ನೇ ಕುಗ್ಗಿಸಿದರೆ ಅಣ್ವಸ್ತ್ರ ಯೋಜನೆ ನಿಲ್ಲುತ್ತದೆ’ ಎಂದವರ ಲೆಕ್ಕಾಚಾರ. ಅವರ ಜತೆಗೆ ನಿಂತ ಇಸ್ರೇಲ್, ಇರಾನಿ ಅಣುವಿಜ್ಞಾನಿಗಳನ್ನು ಹತ್ಯೆಗೈಯುವುದರ ಜತೆಗೆ ಇರಾನಿ ಅಣು ಸಂಯಂತ್ರಗಳಲ್ಲಿ ಅವಘಡಗಳನ್ನು ಸೃಷ್ಟಿಸಿ ತೆಹರಾನ್ನ ಅಣ್ವಸ್ತ್ರ ಕನಸು ಹಗಲುಗನಸಾಗಿಯೇ ಉಳಿದುಹೋಗುವಂತೆ ಮಾಡಲು ಶತಾಯಗತಾಯ ಪ್ರಯತ್ನ ನಡೆಸುತ್ತಲೇ ಬಂತು. ಅತ್ತ ಇರಾನ್ ಯಾವುದಕ್ಕೂ ಜಗ್ಗದೇ ತನ್ನ ಕನಸನ್ನು ನೇರವಾಗಿ ಬೆಂಬತ್ತಿತು. ‘ಸಣ್ಣಪುಟ್ಟ ಏಟುಗಳಿಗೆ ಬಗ್ಗದ ಮೊಂಡ ಈ ಇರಾನ್’ ಎಂದು ಇಸ್ರೇಲ್ ಮತ್ತು ಅಮೆರಿಕ ಎರಡೂ ಒಟ್ಟುಗೂಡಿ 2025ರ ಜೂನ್ನಲ್ಲಿ ಇರಾನ್ ಮೇಲೆ ಸತತ 12 ದಿನಗಳವರೆಗೆ ಘಾತಕ ದಾಳಿ ನಡೆಸಿದವು.