ಶಾಂತಿ ಮಾತೇ ಇಲ್ಲ, ಯುದ್ಧವೊಂದೇ ದಾರಿ! ಅಮೆರಿಕ-ಇಸ್ರೇಲ್ ಮಂಡಿಯೂರಿಸದೆ ಬಿಡುವುದಿಲ್ಲ ಎಂದು ಮೊಜ್ತಾಬಾ ಖಮೇನಿ ಶಪಥ | Mojtaba Khamenei

Mojtaba Khamenei |  ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ
Mojtaba Khamenei | ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ
Published on
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಶಾಂತಿಯ ಭರವಸೆ ಕ್ಷೀಣಿಸುತ್ತಿದ್ದು, ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ನೀಡಿರುವ ಹೇಳಿಕೆಗಳು ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿವೆ. ಅಧಿಕಾರ ವಹಿಸಿಕೊಂಡ ಬಳಿಕ ಎರಡನೇ ಬಾರಿ ಪ್ರತಿಕ್ರಿಯೆ ನೀಡಿರುವ ಮೊಜ್ತಾಬಾ ಖಮೇನಿ (Mojtaba Khamenei), ಯುದ್ಧ ನಿಲ್ಲುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕ ಮತ್ತು ಇಸ್ರೇಲ್ ರಾಷ್ಟ್ರಗಳು ಮಂಡಿಯೂರಿ ಸೋಲೊಪ್ಪಿಕೊಳ್ಳಬೇಕು ಎಂದು ಮೊಜ್ತಾಬಾ ಗುಡುಗಿದ್ದಾರೆ ಎನ್ನಲಾಗಿದ್ದು, ಅಲಿ ಖಮೇನಿ ನಿಧನದ ಬಳಿಕ ಇರಾನ್‌ನ ಚುಕ್ಕಾಣಿ ಹಿಡಿದಿರುವ ಅವರ ಪುತ್ರ, ಈ ಸಂದೇಶದ ಮೂಲಕ ಪಶ್ಚಿಮ ರಾಷ್ಟ್ರಗಳ ವಿರುದ್ಧ ಮಹಾ ಸಮರಕ್ಕೆ ಮುನ್ನುಡಿ ಬರೆದಿದ್ದಾರೆ.

ಸೇಡು ತೀರಿಸಿಕೊಳ್ಳುವುದು ಖಚಿತ

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಮೊಜ್ತಾಬಾ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಈ ಹಿಂದೆ ಹೇಳಿಕೆ ನೀಡಿದ್ದರು. ಆದರೆ, ಈ ಹೇಳಿಕೆಗಳ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಮೊಜ್ತಾಬಾ, ಇರಾನ್ ಅನುಭವಿಸಿದ ಹಾನಿಗೆ ಅಮೆರಿಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ನಮ್ಮ ಸೇಡು ತುಂಬಾ ಕಠಿಣ ಮತ್ತು ಗಂಭೀರವಾಗಿರುತ್ತದೆ. ಶತ್ರುಗಳು ಮಾಡಿದ ವಿನಾಶಕ್ಕೆ ಪರಿಹಾರ ನೀಡಲೇಬೇಕು ಎಂದು ಇರಾನ್ ನೂತನ ಸರ್ವೊಚ್ಛ ನಾಯಕ ಮೊಜ್ತಾಬಾ ಖಮೇನಿ ಪುನರುಚ್ಛರಿಸಿದ್ದಾರೆ.

ಮೊದಲ ಸಂದೇಶದಲ್ಲಿ ಹೇಳಿದ್ದೇನು..?

ಇರಾನ್‌ನ ನೂತನ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡ ಬಳಿಕ ತಮ್ಮ ಮೊದಲ ಅಧಿಕೃತ ಹೇಳಿಕೆಯಲ್ಲೇ ಜಗತ್ತಿಗೆ ನಡುಕ ಹುಟ್ಟಿಸುವಂತಹ ಎಚ್ಚರಿಕೆ ನೀಡಿದ್ದ ಮೊಜ್ತಾಬಾ ಖಮೇನಿ, ತಮ್ಮ ತಂದೆ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಸೇಡು ತೀರಿಸಿಕೊಳ್ಳುವುದಾಗಿ ಘೋಷಿಸಿದ್ದರು.
ಇರಾನ್‌ನ ಸರ್ಕಾರಿ ದೂರದರ್ಶನದಲ್ಲಿ ಪ್ರಸಾರವಾದ ಲಿಖಿತ ಸಂದೇಶದಲ್ಲಿ ಮೊಜ್ತಬಾ, ಶತ್ರುಗಳ ವಿರುದ್ಧ ಹಾರ್ಮುಜ್ ಜಲಸಂಧಿಯನ್ನು ತಡೆಯುವ ಲಿವರ್ ಅನ್ನು ಬಳಸುವುದನ್ನು ಮುಂದುವರಿಸಬೇಕು ಎಂದು ತಿಳಿಸಿದ್ದರು. ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಇರಾನ್ ತನ್ನ ಮೇಲುಗೈ ಸಾಧಿಸಲು ಈ ಮಾರ್ಗವನ್ನು ಬಂದ್ ಮಾಡುವುದು ಅನಿವಾರ್ಯ ಎಂದಿದ್ದಾರೆ.
ಶತ್ರುಗಳು ಎಲ್ಲಿ ದುರ್ಬಲವಾಗಿದ್ದಾರೋ ಅಲ್ಲಿ ಹೊಸ ರಂಗಗಳನ್ನು ತೆರೆಯುವ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ಅಗತ್ಯ ಬಿದ್ದರೆ ಈ ರಂಗಗಳನ್ನು ಸಕ್ರಿಯಗೊಳಿಸಲಾಗುವುದು. ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಎಲ್ಲಾ ಮಿಲಿಟರಿ ನೆಲೆಗಳನ್ನು ತಕ್ಷಣವೇ ಮುಚ್ಚಬೇಕು, ಇಲ್ಲದಿದ್ದರೆ ದಾಳಿ ಎದುರಿಸಲು ಸಿದ್ಧರಾಗಿ ಎಂದು ಮೊಜ್ತಬಾ ಕಠಿಣ ಪದಗಳಲ್ಲಿ ಎಚ್ಚರಿಕೆ ನೀಡಿದ್ದರು.

ಆಸ್ತಿ ವಶದ ಎಚ್ಚರಿಕೆ

ನಡೆಯುತ್ತಿರುವ ಸಂಘರ್ಷದಲ್ಲಿ ಇರಾನ್‌ಗೆ ಉಂಟಾದ ಹಾನಿಗೆ ಶತ್ರು ರಾಷ್ಟ್ರಗಳಿಂದಲೇ ಪರಿಹಾರ ಪಡೆಯುವುದಾಗಿ ಪ್ರತಿಜ್ಞೆ ಮಾಡಿರುವ ಖಮೇನಿ ಪುತ್ರ, ಒಂದು ವೇಳೆ ಅವರು ಪರಿಹಾರ ನೀಡಲು ನಿರಾಕರಿಸಿದರೆ, ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗುವುದು, ಇಲ್ಲವೇ ಸಮಾನ ಮೌಲ್ಯದ ಆಸ್ತಿಯನ್ನು ನಾಶಪಡಿಸಲಾಗುವುದು, ನಮ್ಮ ಜನರ ರಕ್ತಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶವನ್ನು ನಾವು ಕಳೆದುಕೊಳ್ಳುವುದಿಲ್ಲ ಎಂದಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net