ಸೋಲಲ್ಲ ಇದು ಸೇಡು!...ಅಂದು ವಾಜಪೇಯಿ, ಇಂದು ಕಾಂಗ್ರೆಸ್; 27 ವರ್ಷಗಳ ಬಳಿಕ ಮರುಕಳಿಸಿದ ಒಡಿಶಾ ರಾಜಕೀಯ ಇತಿಹಾಸದ ರೋಚಕ ಕಥೆ ಇಲ್ಲಿದೆ | Odisha Politics

Odisha Politics | 27 ವರ್ಷಗಳ ಬಳಿಕ ಮರುಕಳಿಸಿದ ಒಡಿಶಾ ರಾಜಕೀಯ ಇತಿಹಾಸದ
Odisha Politics | 27 ವರ್ಷಗಳ ಬಳಿಕ ಮರುಕಳಿಸಿದ ಒಡಿಶಾ ರಾಜಕೀಯ ಇತಿಹಾಸದ
Published on
ಭುವನೇಶ್ವರ: ಒಂದು ಮತಕ್ಕೆ ಎಷ್ಟು ಶಕ್ತಿ ಇದೆ ಎನ್ನುವುದು ಭಾರತದ ರಾಜಕೀಯ ಇತಿಹಾಸಕ್ಕೆ ಹೊಸತಲ್ಲ, ಆದರೆ 2026ರ ಒಡಿಶಾ ರಾಜ್ಯಸಭಾ ಚುನಾವಣೆಯ (Odisha Politics) ಫಲಿತಾಂಶವು 1999ರ ಕರಾಳ ನೆನಪುಗಳನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿದೆ. ಅಂದು ವಾಜಪೇಯಿ ಸರ್ಕಾರ ಕೇವಲ ಒಂದು ಮತದಿಂದ ಪತನಗೊಂಡಿದ್ದರೆ, ಇಂದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೂಡ ಅದೇ ಒಂದು ಮತದ ಅಂತರದಿಂದ ಸೋಲನುಭವಿಸಿದ್ದಾರೆ.

ಬೆಂಬಲ ವಾಪಸ್ ಪಡೆದ ಜಯಲಲಿತಾ

1998ರಲ್ಲಿ ಅಧಿಕಾರಕ್ಕೆ ಬಂದಿದ್ದ ವಾಜಪೇಯಿ ಸರ್ಕಾರಕ್ಕೆ ತಮಿಳುನಾಡಿನ ಎಐಎಡಿಎಂಕೆ ನಾಯಕಿ ಜೆ. ಜಯಲಲಿತಾ ಬೆಂಬಲ ನೀಡಿದ್ದರು. ಆದರೆ, ಕೆಲವೇ ತಿಂಗಳಲ್ಲಿ ಉಭಯ ಪಕ್ಷಗಳ ನಡುವೆ ಬಿರುಕು ಕಾಣಿಸಿಕೊಂಡಿತು. ಅಂತಿಮವಾಗಿ ಏಪ್ರಿಲ್ 14ರಂದು ಜಯಲಲಿತಾ ತಮ್ಮ 18 ಸಂಸದರ ಬೆಂಬಲವನ್ನು ವಾಪಸ್ ಪಡೆದರು. ರಾಷ್ಟ್ರಪತಿ ಕೆ.ಆರ್. ನಾರಾಯಣನ್ ವಾಜಪೇಯಿ ಅವರಿಗೆ ವಿಶ್ವಾಸಮತ ಸಾಬೀತುಪಡಿಸಲು ಸೂಚಿಸಿದರು.

ವಾಜಪೇಯಿ ಸರ್ಕಾರದ ಪತನಕ್ಕೆ ಕಾರಣವಾದ ಆ ಒಂದು ಮತ!

1999ರ ಏಪ್ರಿಲ್ 17 ಭಾರತೀಯ ಸಂಸದೀಯ ಇತಿಹಾಸದಲ್ಲಿ ನೆನಪಿಡುವಂತಹ ದಿನ. ಅಂದು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಲೋಕಸಭೆಯಲ್ಲಿ ವಿಶ್ವಾಸಮತ ಯಾಚಿಸಿತ್ತು. ಆಗ ಒಡಿಶಾದ ಮುಖ್ಯಮಂತ್ರಿಯಾಗಿದ್ದ ಗಿರಿಧರ್ ಗಮಾಂಗ್ ಇನ್ನೂ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ. ಮುಖ್ಯಮಂತ್ರಿಯಾಗಿದ್ದವರೂ ಸಂಸದರಾಗಿ ಚಲಾಯಿಸಿದ ಆ ಒಂದು ಮತ ವಾಜಪೇಯಿ ಸರ್ಕಾರವನ್ನು 269-270 ಅಂತರದಲ್ಲಿ ಬೀಳಿಸಿತು. ಅಂದು ಕಾಂಗ್ರೆಸ್ ಮಾಡಿದ ಆ ತಂತ್ರಗಾರಿಕೆ ಇಂದಿಗೂ ಬಿಜೆಪಿಯ ಮನಸ್ಸಿನಲ್ಲಿ ಹಚ್ಚ ಹಸಿರಾಗಿದೆ.

ಇತಿಹಾಸದ ಸೇಡು..? ಕಾಂಗ್ರೆಸ್‌ಗೆ ಮುಖಭಂಗ!

ಸುಮಾರು 27 ವರ್ಷಗಳ ಬಳಿಕ ಕಾಲಚಕ್ರ ಉರುಳಿದ್ದು, ಒಡಿಶಾದ ರಾಜ್ಯಸಭಾ ಚುನಾವಣೆಯಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕಾಂಗ್ರೆಸ್ ಮತ್ತು ಬಿಜೆಡಿ ಮೈತ್ರಿಯೊಂದಿಗೆ ಕಣಕ್ಕಿಳಿದಿದ್ದ ಡಾ. ದತ್ತೇಶ್ವರ್ ಹೋತಾ ಗೆಲುವು ಸುಲಭವೆಂದೇ ಭಾವಿಸಲಾಗಿತ್ತು. ಆದರೆ, ಅಂತಿಮ ಕ್ಷಣದಲ್ಲಿ ನಡೆದ ಅಡ್ಡಮತದಾನ ಚುನಾವಣೆಯ ಇಡೀ ಚಿತ್ರಣವನ್ನೇ ಬದಲಿಸಿತು.
ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ದಿಲೀಪ್ ರಾಯ್ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿ ಕೇವಲ ಒಂದು ಮತದ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಕಾಂಗ್ರೆಸ್‌ನ ಮೂವರು ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿ ಬಿಜೆಪಿಯತ್ತ ವಾಲಿದ್ದು ಕಾಂಗ್ರೆಸ್‌ಗೆ ದೊಡ್ಡ ಹೊಡೆತ ನೀಡಿದೆ.
ಅಂದು ಕಾಂಗ್ರೆಸ್ ಒಂದು ಮತದಿಂದ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿತ್ತು. ಇಂದು ಒಡಿಶಾದಲ್ಲಿ ಬಿಜೆಪಿ ಅಧಿಕಾರದಲ್ಲಿರುವಾಗ, ಅದೇ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಒಂದು ಮತದಿಂದ ರಾಜ್ಯಸಭೆಯ ಅವಕಾಶ ವಂಚಿತರಾಗಿದ್ದಾರೆ. ಇದಕ್ಕೆ ಸ್ಥಳೀಯ ಕೇಸರಿ ನಾಯಕರು ಪ್ರತಿಕ್ರಿಯೆ ನೀಡಿದ್ದು, ಇದು ಕೇವಲ ಸೋಲಲ್ಲ, ಇತಿಹಾಸದ ಪ್ರತಿಫಲ. 1999ರಲ್ಲಿ ಗಮಾಂಗ್ ಅವರ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿತ್ತು, ಇಂದು ನ್ಯಾಯ ಸಿಕ್ಕಿದೆ ಎಂದು ಸಂಭ್ರಮಿಸುತ್ತಿದ್ದಾರೆ.
ಒಡಿಶಾದ ಈ ಒಂದು ಮತದ ರಾಜಕೀಯವು ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಸದ್ದು ಮಾಡಿದ್ದು, ಕಾಂಗ್ರೆಸ್ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗಿರುವುದು ಸ್ಪಷ್ಟವಾಗಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net