

ನ್ಯೂಯಾರ್ಕ್: ಶಾಂತಿಯೊಂದಿಗೆ ಸಮೃದ್ಧಿ ಬರುತ್ತದೆ. ಶಾಂತಿಯಿಲ್ಲದೆ ಸಮೃದ್ಧಿ ಇಲ್ಲ ಎಂದು ಆರ್ಟ್ ಆಫ್ ಲಿವಿಂಗ್ ಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ( Gurudev Sri Sri Ravi Shankar ) ಅಭಿಪ್ರಾಯಪಟ್ಟಿದ್ದಾರೆ.
ನ್ಯೂಯಾರ್ಕ್‌ನ ಸೆಮಾಫೋರ್‌ನ ‘ದಿ ನೆಕ್ಸ್ಟ್ 3 ಬಿಲಿಯನ್’ ಶೃಂಗಸಭೆಯಲ್ಲಿ ಸೆಮಾಫೋರ್ ಸಿಇಒ ಜಸ್ಟಿನ್ ಬಿ. ಸ್ಮಿತ್ ಜೊತೆಗಿನ ಸಂವಾದದಲ್ಲಿ ಮಾತನಾಡಿದರು. ಅಮೆರಿಕ ಸೇರಿದಂತೆ ಎಲ್ಲೆಡೆ ಉಳ್ಳವರು, ಇಲ್ಲದವರ ನಡುವೆ ಅಂತರವಿದೆ. ಜನರು ತಮ್ಮ ಪ್ರಗತಿಯ ಜವಾಬ್ದಾರಿ ಹೊರಬೇಕು, ಸಂಪನ್ಮೂಲ ಉಳ್ಳವರು ಸಹಾನುಭೂತಿ, ಹಂಚಿಕೊಳ್ಳುವಿಕೆಗೆ ಒತ್ತು ಕೊಡಬೇಕು. ಗ್ಲೋಬಲ್ ಸೌತ್ (ಜಾಗತಿಕ ದಕ್ಷಿಣ) ನಲ್ಲಿ ಸಂಪನ್ಮೂಲಗಳು ತಳಮಟ್ಟದ ಜನರಿಗೆ ತಲುಪದಿರಲು ಭ್ರಷ್ಟಾಚಾರವೇ ಪ್ರಮುಖ ಕಾರಣ. ಆರ್ಟ್ ಆಫ್ ಲಿವಿಂಗ್ ಬಳಿಯ 500 ನಿರುದ್ಯೋಗಿಗಳು ಸರ್ಕಾರದ 200 ಯೋಜನೆ ತಿರಸ್ಕರಿಸಿದ್ದರು. ಆದರೆ ಉದ್ಯಮಶೀಲತೆ ಬೆಳೆಸುವ ಎರಡು ತಿಂಗಳ ಕಾರ್ಯಕ್ರಮ ಅವರ ಮನಸ್ಥಿತಿ ಬದಲಾಯಿಸಿತು. ಇದೇ ಮಾದರಿಯನ್ನು ಕೀನ್ಯಾ, ಘಾನಾ, ನೈಜೀರಿಯಾ, ಬೋಟ್ಸ್‌ವಾನಾ, ದಕ್ಷಿಣ ಆಫ್ರಿಕಾ ಸೇರಿದಂತೆ ಇತರ ಆಫ್ರಿಕನ್ ರಾಷ್ಟ್ರಗಳಿಗೆ ಕೊಂಡೊಯ್ಯಲಾಗಿದೆ ಎಂದರು.
ಕೆಲಸದ ಸ್ಥಳದ ಒತ್ತಡವು ಸಂವಹನಕ್ಕೆ ಅಡ್ಡಿಪಡಿಸಿ ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ. ಅನಿಶ್ಚಿತತೆಯ ಕಾಲದಲ್ಲಿ ಜನರನ್ನು ಒಟ್ಟುಗೂಡಿಸುವ ಮತ್ತು ಅವರಲ್ಲಿ ಭದ್ರತೆಯ ಭಾವನೆ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಕೀನ್ಯಾ ಅಧ್ಯಕ್ಷ ವಿಲಿಯಂ ಸಮೋಯಿ ರುಟೊ, ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ ಪ್ರಧಾನಿ ಜುಡಿತ್ ಸುಮಿನಾ, ಡಬ್ಲ್ಯುಟಿಒ ಮಹಾನಿರ್ದೇಶಕಿ ಡಾ. ನೊ್ಕೋಜಿ ಒಕೊಂಜೊ ಇವೆಲಾ, ಐಎಂಎಫ್ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಶೃಂಗಸಭೆಯ ಭಾಷಣಕಾರರಾಗಿದ್ದರು.