

ಇಸ್ರೇಲ್: ದುಬೈನಿಂದ ಇಸ್ರೇಲ್ಗೆ ಪ್ರಯಾಣ ಬೆಳೆಸಿದ್ದ ಫ್ಲೈದುಬೈ (flydubai) ವಿಮಾನದ ಕಾಕ್‌ಪಿಟ್‌ನಲ್ಲಿ ನಡೆದ ಭೀಕರ ದಾಳಿಯನ್ನು ವಿಫಲಗೊಳಿಸಿ ನೂರಾರು ಜೀವಗಳನ್ನು ಉಳಿಸಿದ ಭಾರತದ ಹೆಮ್ಮೆಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಈಗ ಜಾಗತಿಕ ಮಟ್ಟದಲ್ಲಿ ಹೀರೋ ಆಗಿ ಹೊರಹೊಮ್ಮಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ವತಃ ಕ್ಯಾಪ್ಟನ್ ಸ್ಮಿತ್ ಅವರಿಗೆ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ, ಇಸ್ರೇಲ್‌ನ ಸ್ವಾತಂತ್ರ್ಯ ದಿನಾಚರಣೆಗೆ ಗೌರವಾನ್ವಿತ ಅತಿಥಿಯಾಗಿ ಆಗಮಿಸುವಂತೆ ಆಹ್ವಾನಿಸಿದ್ದಾರೆ.
ಈ ಧೈರ್ಯಶಾಲಿ ಸಾಹಸಕ್ಕೆ ಜಾಗತಿಕ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕ್ಯಾಪ್ಟನ್ ಸ್ಮಿತ್ ಜತೆ ದೂರವಾಣಿಯಲ್ಲಿ ಮಾತನಾಡಿ, "ನೀವು ಭಾರತ ಮತ್ತು ಇಸ್ರೇಲ್‌ನ ಧೈರ್ಯಶಾಲಿ ಜನರ ನಿಜವಾದ ನಾಯಕ ಹಾಗೂ ಇಡೀ ಜಗತ್ತಿಗೆ ಮಾದರಿ" ಎಂದಿದ್ದಾರೆ. ಅಲ್ಲದೆ, ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜ್ಯೋತಿ ಬೆಳಗಿಸುವಂತೆ ವಿಶೇಷ ಆಹ್ವಾನ ನೀಡಿದ್ದಾರೆ.
ಇದಕ್ಕೂ ಮುನ್ನ ಶನಿವಾರ (ಅ.3) ದುಬೈನ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಆಸ್ಪತ್ರೆಗೆ ಖುದ್ದಾಗಿ ಭೇಟಿ ನೀಡಿ ಕ್ಯಾಪ್ಟನ್ ಸ್ಮಿತ್ ಅವರನ್ನು ಸನ್ಮಾನಿಸಿದ್ದಾರೆ. ಯುಎಇ ನಾಯಕತ್ವದ ಪರವಾಗಿ ಅವರ ಅಸಾಮಾನ್ಯ ಜವಾಬ್ದಾರಿ ಹಾಗೂ ಮಾನವೀಯ ಕಾಳಜಿಯನ್ನು ಕೊಂಡಾಡಿದ್ದರು.
ಸೆಪ್ಟೆಂಬರ್ 30 ರಂದು ದುಬೈನಿಂದ ಟೆಲ್ ಅವಿವ್‌ಗೆ ಹೊರಟಿದ್ದ 'ಫ್ಲೈದುಬೈ' ವಿಮಾನ FZ1073 ಎಂದಿನಂತೆ ಆಕಾಶದಲ್ಲಿ ಹಾರುತ್ತಿತ್ತು. ಆದರೆ ಒಮಾನಿ ಮೂಲದ ಸಹ-ಪೈಲಟ್ ಹಮಾಮ್ ಅಲ್-ಹಮ್ಮಮಿ ಇದ್ದಕ್ಕಿದ್ದಂತೆ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಕೊಡಲಿಯಿಂದ ಮಾರಣಾಂತಿಕ ದಾಳಿ ನಡೆಸಿದ್ದಾರೆ.
ಈ ಅನಿರೀಕ್ಷಿತ ಹಲ್ಲೆಯಿಂದ ವಿಮಾನದ ನಿಯಂತ್ರಣ ತಪ್ಪಿ, ಕೇವಲ ಮೂವತ್ತು ಸೆಕೆಂಡ್ಗಳಲ್ಲಿ ಬರೊಬ್ಬರಿ 17,000 ಅಡಿಗಳಷ್ಟು ಕೆಳಗೆ ಧುಮುಕಿದೆ. ವಿಮಾನದ ಹೈಜಾಕ್ ತುರ್ತು ಸಂದೇಶವೂ ರವಾನೆಯಾಗಿದೆ. ಎಲ್ಲವೂ ಮುಗಿಯಿತು, ಇನ್ನೊಂದು 9/11 ಮಾದರಿಯ ದುರಂತ ಸಂಭವಿಸುವುದು ಖಚಿತ ಎಂದುಕೊಳ್ಳುವಷ್ಟರಲ್ಲಿ ಕ್ಯಾಪ್ಟನ್ ಸ್ಮಿತ್ ತೋರಿದ ಒನ್-ಮ್ಯಾನ್ ಶೋ ಎಲ್ಲರನ್ನೂ ಬೆರಗುಗೊಳಿಸಿದೆ.
ತಲೆಗೆ ಹಾಗೂ ದೇಹಕ್ಕೆ ತೀವ್ರ ಗಾಯಗಳಾಗಿ ರಕ್ತಸಿಕ್ತರಾಗಿದ್ದರೂ ಸಹ, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಧೃತಿಗೆಡಲಿಲ್ಲ. ತಮ್ಮ ಪ್ರಾಣದ ಹಂಗು ತೊರೆದು ವಿಫಲಗೊಳಿಸಿದರು ಕಾಕ್ಪಿಟ್ ದ್ವಾರವನ್ನು ತೆಗೆದು, ಪ್ರಯಾಣಿಕರು ಸಹಾಯಕ್ಕೆ ದಾವಿಸುವಂತೆ ಮಾಡಿದ್ದಾರೆ. ನಂತರ ಪ್ರಯಾಣಿಕರು ಆ ದುಷ್ಟ ಸಹ ಪೈಲಟ್ನನ್ನು ಕಟ್ಟಿಹಾಕಿದರೆ, ವಿಮಾನದಲ್ಲಿದ್ದ ಹೆಚ್ಚುವರಿ ಪೈಲಟ್ ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಪ್ರಸ್ತುತ ಯುನೈಟೆಡ್ ಅರಬ್ ಎಮಿರೇಟ್ಸ್‌ನ (UAE) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಮಿತ್ ಅವರ ದಿಟ್ಟತನಕ್ಕೆ ಈಗ ವಿಶ್ವದ ನಾಯಕರಿಂದ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ,(ಏಜೆನ್ಸೀಸ್).