ಅಮೆರಿಕದಲ್ಲಿ ‘ಟಾಕ್ಸಿಕ್’ಗೆ ಮಿಶ್ರ ಪ್ರತಿಕ್ರಿಯೆ; ಯಶ್ ಅಭಿನಯ, ಛಾಯಾಗ್ರಹಣಕ್ಕೆ ಮೆಚ್ಚುಗೆ; ದುರ್ಬಲ ಕಥೆ, ಅತಿಯಾದ ಹಿಂಸೆಗೆ ಬೇಸರ | Toxic

‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’
‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’
Published on
ನ್ಯೂಯಾರ್ಕ್: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’(Toxic) ಚಿತ್ರಕ್ಕೆ ಅಮೆರಿಕದ ನ್ಯೂಯಾರ್ಕ್‌ನ ಆಲ್ಬನಿಯಲ್ಲಿ ಮೊದಲ ಪ್ರದರ್ಶನ ವೀಕ್ಷಿಸಿದ ಕನ್ನಡಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಭಾರತಕ್ಕಿಂತ ಅಮೆರಿಕ ಸುಮಾರು 12 ಗಂಟೆ ಹಿಂದೆ ಇರುವುದರಿಂದ, ಭಾರತದಲ್ಲಿ ಬುಧವಾರ ಬಿಡುಗಡೆಯಾಗುವ ಮುನ್ನವೇ ಮಂಗಳವಾರ ಸಂಜೆ ಅಮೆರಿಕದಲ್ಲಿ ಚಿತ್ರದ ಮೊದಲ ಪ್ರದರ್ಶನ ನಡೆಯಿತು. ಬೆಂಕಿ ಬಸಣ್ಣ ಅವರ ನೇತೃತ್ವದಲ್ಲಿ ಸುಮಾರು 25–30 ಆಲ್ಬನಿ ಕನ್ನಡಿಗರು ಒಟ್ಟಾಗಿ ಮೊದಲ ಪ್ರದರ್ಶನ ವೀಕ್ಷಿಸಿದರು.
ಚಿತ್ರದ ಛಾಯಾಗ್ರಹಣ, ಅದ್ದೂರಿ ಮೇಕಿಂಗ್, ದೃಶ್ಯ ವೈಭವ ಹಾಗೂ ಯಶ್ ಅವರ ಸ್ಕ್ರೀನ್ ಪ್ರೆಸೆನ್ಸ್ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ವಿಶೇಷವಾಗಿ ಯಶ್ ಅವರ ಮತ್ತೊಂದು ಗೆಟಪ್ ಗಮನ ಸೆಳೆಯುತ್ತದೆ. ಆ ಪಾತ್ರದಲ್ಲಿ ಅವರು ಅತ್ಯಂತ ಯುವಕನಂತೆ ಕಾಣುವುದರ ಜೊತೆಗೆ ಅಭಿನಯದಲ್ಲೂ ಮಿಂಚಿದ್ದಾರೆ.
ಆದರೆ ಬಲವಾದ ಕಥಾಹಂದರದ ಕೊರತೆಯೇ ಚಿತ್ರದ ಪ್ರಮುಖ ದೌರ್ಬಲ್ಯ ಎಂಬ ಅಭಿಪ್ರಾಯ ಹಲವರಿಂದ ವ್ಯಕ್ತವಾಗಿದೆ. ಅತಿಯಾದ ಹಿಂಸೆ, ರಕ್ತಪಾತ, ಲೈಂಗಿಕ ಹಾಗೂ ಅಶ್ಲೀಲ ದೃಶ್ಯಗಳು ಕಥೆಯ ಮೇಲೆ ಮೇಲುಗೈ ಸಾಧಿಸಿವೆ ಎಂಬ ಟೀಕೆಯೂ ಕೇಳಿಬಂದಿದೆ. ಮತ್ತು ಕೊನೆಯ 20–30 ನಿಮಿಷಗಳಲ್ಲಿ ಮಾತ್ರ ಕಥೆ ಹೆಚ್ಚು ಹಿಡಿತ ಪಡೆಯುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಹಿಂಸಾತ್ಮಕ ಚಿತ್ರಗಳಲ್ಲಿಯೂ ಗಟ್ಟಿಯಾದ ಕಥೆ ಇದ್ದರೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಹುದು. ಆದರೆ ‘ಟಾಕ್ಸಿಕ್’ನಲ್ಲಿ ತಾಂತ್ರಿಕ ಶ್ರೀಮಂತಿಕೆ ಮತ್ತು ಸ್ಟಾರ್ ಪವರ್‌ಗೆ ತಕ್ಕಷ್ಟು ಗಟ್ಟಿಯಾದ ಕಥೆ ಇಲ್ಲ ಎನ್ನಲಾಗಿದೆ. ಕೆಲವು ದೃಶ್ಯಗಳು ‘ಕೆಜಿಎಫ್’ ಛಾಯೆಯನ್ನು ನೆನಪಿಸಿದರೆ, ಕಥೆಯ ಕೆಲ ಅಂಶಗಳು ‘ಲೂಸಿಯಾ’ ಚಿತ್ರವನ್ನು ನೆನಪಿಸುತ್ತವೆ ಕೆಲವರು ಹೇಳಿದ್ದಾರೆ.
ನಾಲ್ಕು ವರ್ಷಗಳ ಬಳಿಕ ಯಶ್ ದೊಡ್ಡ ನಿರೀಕ್ಷೆಯೊಂದಿಗೆ ತೆರೆಗೆ ಮರಳಿದ್ದು, ಅವರ ಅಭಿನಯ ಮತ್ತು ಚಿತ್ರದ ತಾಂತ್ರಿಕ ವೈಭವ ಗಮನ ಸೆಳೆಯುತ್ತದೆ. ಆದರೆ “ಇಷ್ಟೆಲ್ಲ ವೈಭವಕ್ಕೆ ಇನ್ನಷ್ಟು ಗಟ್ಟಿಯಾದ ಕಥೆ ಇದ್ದಿದ್ದರೆ ‘ಟಾಕ್ಸಿಕ್’ ಮತ್ತೊಂದು ಮಟ್ಟಕ್ಕೇ ಹೋಗುತ್ತಿತ್ತು” ಎಂಬುದು ಆಲ್ಬನಿಯ ಮೊದಲ ಪ್ರದರ್ಶನ ವೀಕ್ಷಿಸಿದ ಕನ್ನಡಿಗರ ಒಟ್ಟಾರೆ ಅಭಿಪ್ರಾಯವಾಗಿದೆ.
ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net