

ನವದೆಹಲಿ: ವಿಶ್ವದಾದ್ಯಂತ ಕೋಟ್ಯಂತರ ಮಂದಿ ಹಾಗೂ ಪ್ರಮುಖ ಸಂಸ್ಥೆಗಳು ಅವಲಂಬಿಸಿರುವ ಮೈಕ್ರೋಸಾಫ್ಟ್ 365 ( Microsoft 365 ) ಸೇವೆಗಳಲ್ಲಿ ಉಂಟಾಗಿದ್ದ ಬೃಹತ್ ತಾಂತ್ರಿಕ ದೋಷವು ಜಾಗತಿಕವಾಗಿ ತೀವ್ರ ಸಂಚಲನ ಮೂಡಿಸಿದೆ. ಔಟ್ಲುಕ್ (Outlook), ಟೀಮ್ಸ್ (Teams) ಮತ್ತು ಕೋಪಿಲೋಟ್ (Copilot) ಸೇರಿದಂತೆ ಪ್ರಮುಖ ಮೈಕ್ರೋಸಾಫ್ಟ್ ಸೇವೆಗಳು ಸ್ಥಗಿತಗೊಂಡು ಬರೋಬ್ಬರಿ 12 ಗಂಟೆಗಳಿಗೂ ಅಧಿಕ ಸಮಯ ಕಳೆದ ಬಳಿಕ, ಅಂತಿಮವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿರುವುದಾಗಿ ಮೈಕ್ರೋಸಾಫ್ಟ್ ಶುಕ್ರವಾರ (ನ.13) ಅಧಿಕೃತವಾಗಿ ಘೋಷಿಸಿದೆ. ಸರ್ವರ್ ಸ್ಥಿರತೆಯಲ್ಲಿ ಪಾಸಿಟಿವ್ ಬದಲಾವಣೆಗಳು ಕಂಡುಬರುತ್ತಿದ್ದು, ಸೇವೆಗಳು ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಿವೆ ಎಂದು ಕಂಪನಿ ತಿಳಿಸಿದೆ.
ತನ್ನ ಮೈಕ್ರೋಸಾಫ್ಟ್ 365 ಸರ್ವೀಸ್ ಹೆಲ್ತ್ ಪೇಜ್ನಲ್ಲಿ ನೀಡಿರುವ ಇತ್ತೀಚಿನ ಅಪ್‌ಡೇಟ್ ಪ್ರಕಾರ, ಕಂಪನಿಯು ತನ್ನ ಮೂಲಸೌಕರ್ಯದ ಒಂದು ಭಾಗಕ್ಕೆ 'ಅಪ್‌ಸ್ಟ್ರೀಮ್ ದೃಢೀಕರಣ ಮತ್ತು ರೂಟಿಂಗ್ ಕಾನ್ಫಿಗರೇಶನ್ ಕಾಂಪೊನೆಂಟ್ ಪ್ಯಾಚ್' ಅಳವಡಿಸಿದೆ. ಅಂದರೆ, ಬಳಕೆದಾರರು ಮೈಕ್ರೋಸಾಫ್ಟ್ ಸರ್ವರ್‌ಗಳೊಂದಿಗೆ ಸಂಪರ್ಕ ಸಾಧಿಸುವ ವಿಧಾನವನ್ನು ಫಿಕ್ಸ್ ಮಾಡಲಾಗಿದೆ. ಈ ಪ್ಯಾಚ್ ಕಾರ್ಯನಿರ್ವಹಣೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಸಕ್ರಿಯ ಪ್ರದೇಶಗಳಲ್ಲಿ ಕಾರ್ಯಾಚರಣೆ ಆರಂಭಿಸುತ್ತಿರುವ ಸರ್ವರ್‌ಗಳಿಗೆ ಇದನ್ನು ವಿಸ್ತರಿಸಲಾಗುತ್ತಿದೆ. ಆದರೂ, ಸಂಪೂರ್ಣ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲು ಇನ್ನೂ ಸ್ವಲ್ಪ ಸಮಯಾವಕಾಶ ಹಿಡಿಯಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಮೈಕ್ರೋಸಾಫ್ಟ್ ಸರ್ವರ್‌ಗಳು ಸತತವಾಗಿ ಪರಿಶೀಲನೆಯಲ್ಲಿ (Health Checks) ವಿಫಲಗೊಂಡಿದ್ದರಿಂದಲೇ ಔಟ್ಲುಕ್ ಮತ್ತು ಟೀಮ್ಸ್ ಸೇವೆಗಳು ದೀರ್ಘಕಾಲದವರೆಗೆ ಸ್ಥಗಿತಗೊಂಡಿದ್ದವು. ಆರಂಭದಲ್ಲಿ ಕೇವಲ 'ಅಲ್ಪ ಪ್ರಮಾಣದ ಯಶಸ್ಸು' ಸಿಕ್ಕಿದೆ ಎಂದು ಒಪ್ಪಿಕೊಂಡಿದ್ದ ಕಂಪನಿ, ಸರ್ವರ್ ಸಾಮರ್ಥ್ಯವನ್ನು ಹೆಚ್ಚಿಸಲು ಹೆಚ್ಚಿನ ವರ್ಚುವಲ್ ಯಂತ್ರಗಳನ್ನು ಕಣಕ್ಕಿಳಿಸಿತ್ತು. ಗುರುವಾರ ರಾತ್ರಿ ಭಾರತೀಯ ಕಾಲಮಾನ ಸುಮಾರು 11:30 ರ ಸುಮಾರಿಗೆ ಅಮೆರಿಕದಲ್ಲಿ ಮೊದಲ ಬಾರಿಗೆ ಎಕ್ಸ್‌ಚೇಂಜ್ ಆನ್‌ಲೈನ್ ಮೇಲ್‌ಬಾಕ್ಸ್ ತಲುಪಲು ಬಳಕೆದಾರರಿಗೆ ಅಸಾಧ್ಯವಾದಾಗ ಈ ತಾಂತ್ರಿಕ ದೋಷ ಬೆಳಕಿಗೆ ಬಂದಿತ್ತು. ನಂತರ ಇದು ಜಾಗತಿಕ ಮಟ್ಟದ ಸಮಸ್ಯೆ ಎಂಬುದು ದೃಢಪಟ್ಟಿತು.
ಈ ತಾಂತ್ರಿಕ ಸಮಸ್ಯೆಯಿಂದಾಗಿ ಎಕ್ಸ್‌ಚೇಂಜ್ ಆನ್‌ಲೈನ್, ಮೈಕ್ರೋಸಾಫ್ಟ್ ಟೀಮ್ಸ್, ಶೇರ್‌ಪಾಯಿಂಟ್ ಆನ್‌ಲೈನ್, ಮೈಕ್ರೋಸಾಫ್ಟ್ 365 ಕೋಪಿಲೋಟ್ ಮತ್ತು ಮೈಕ್ರೋಸಾಫ್ಟ್ ಡಿಫೆಂಡರ್ ಎಕ್ಸ್‌ಡಿಆರ್ ಸೇರಿ ಪ್ರಮುಖ ಸಾಫ್ಟ್ವೇರ್ಗಳು ಬಾಧಿತಗೊಂಡವು. ಇನ್ನು ಗ್ರಾಹಕ ವಿಭಾಗದಲ್ಲಿ ಔಟ್ಲುಕ್ ಡಾಟ್ ಕಾಂ, ಒನ್‌ಡ್ರೈವ್, ಒನ್‌ನೋಟ್, ಮೈಕ್ರೋಸಾಫ್ಟ್ ಟು ಡು ಹಾಗೂ ವೆಬ್‌ಗಾಗಿ ಮೈಕ್ರೋಸಾಫ್ಟ್ 365 ಅಪ್ಲಿಕೇಶನ್‌ಗಳಲ್ಲಿಯೂ ವ್ಯತ್ಯಯ ಉಂಟಾಯಿತು. ಆರಂಭದಲ್ಲಿ ಮೂಲಸೌಕರ್ಯದ ಮೇಲೆ ಅತಿಯಾದ ದಟ್ಟಣೆ ಉಂಟಾಗಿರುವುದೇ ಕಾರಣವೆಂದು ಶಂಕಿಸಲಾಗತ್ತಿದ್ದರೂ, ವಾಸ್ತವದಲ್ಲಿ ಯಾವುದೇ ಟ್ರಾಫಿಕ್ ಸ್ಪೈಕ್ ಆಗಿಲ್ಲ ಎಂದು ನಂತರ ಕಂಪನಿ ಸ್ಪಷ್ಟಪಡಿಸಿತು. ಬದಲಿಗೆ ಕೆಲವು ಸರ್ವರ್‌ಗಳು ಅನಿರೀಕ್ಷಿತವಾಗಿ ಆಫ್‌ಲೈನ್ ಆಗಿದ್ದು ಪ್ರಮುಖ ಕಾರಣವಾಗಿತ್ತು.
ಈ ಅಸ್ತವ್ಯಸ್ತತೆಯು ಕೇವಲ ಕಚೇರಿ ಮೇಲ್‌ಬಾಕ್ಸ್‌ಗಳಿಗೆ ಮಾತ್ರ ಸೀಮಿತವಾಗಿರದೆ, ವಿಶ್ವಾದ್ಯಂತ ವಿಮಾನಯಾನ ಸಂಸ್ಥೆಗಳು, ಕೃತಕ ಬುದ್ಧಿಮತ್ತೆ (AI) ಕಂಪನಿಗಳು ಮತ್ತು ಸರ್ಕಾರಿ ಆಡಳಿತ ವ್ಯವಸ್ಥೆಗಳ ಮೇಲೂ ತೀವ್ರ ಪರಿಣಾಮ ಬೀರಿದೆ. ಭಾರತದಲ್ಲಿ ಇಂಡಿಗೋ ಮತ್ತು ಆಕಾಶಾ ಏರ್ ಸಂಸ್ಥೆಗಳ ಇಮೇಲ್ ಬೆಂಬಲ ಸೇವೆಗಳಿಗೆ ತೊಂದರೆಯಾಯಿತು. ಜಪಾನ್‌ನಲ್ಲಿ ಸರ್ಕಾರಿ ಇಮೇಲ್ ಸೇವೆಗಳು ಸ್ತಬ್ಧಗೊಂಡಿದ್ದರಿಂದ ಅಧಿಕಾರಿಗಳು ಪರ್ಯಾಯವಾಗಿ ಪಠ್ಯ ಸಂದೇಶಗಳನ್ನು (SMS) ಬಳಸುವಂತಾಯಿತು. ಆಸ್ಟ್ರೇಲಿಯಾದಲ್ಲಿ ಗೂಢಚಾರಿಕೆ ಏಜೆನ್ಸಿಗಳು ಮತ್ತು ಫೆಡರಲ್ ಪೊಲೀಸ್ ಇಲಾಖೆಗಳು ತೊಂದರೆ ಅನುಭವಿಸಿದರೆ, ಬ್ರಿಟನ್‌ನಲ್ಲಿ ಪೊಲೀಸರು ಹಾಗೂ ಶಾಲೆಗಳು ಸಾರ್ವಜನಿಕರನ್ನು ತುರ್ತು ಸೇವೆಗಳಿಗಾಗಿ ನೇರ ಫೋನ್ ಕರೆಗಳನ್ನು ಮಾಡುವಂತೆ ಕೋರಬೇಕಾಯಿತು.
ಸೇವೆಯಲ್ಲಿ ವ್ಯತ್ಯಯ ಉಂಟಾಗಲು ಯಾವುದೇ ರೀತಿಯ ಸೈಬರ್ ದಾಳಿ ಅಥವಾ ದುರುದ್ದೇಶಪೂರ್ವಕ ಹ್ಯಾಕಿಂಗ್ ಕಾರಣವಲ್ಲ ಎಂದು ಮೈಕ್ರೋಸಾಫ್ಟ್ ಸ್ಪಷ್ಟಪಡಿಸಿದೆ. "ಸದ್ಯದ ಪರಿಸ್ಥಿತಿಯ ಪ್ರಕಾರ ಯಾವುದೇ ರೀತಿಯ ದುಷ್ಕೃತ್ಯ ಅಥವಾ ಸೈಬರ್ ಚಟುವಟಿಕೆಗಳು ನಡೆದಿಲ್ಲ" ಎಂದು ಮೈಕ್ರೋಸಾಫ್ಟ್ ಕಾರ್ಯನಿರ್ವಾಹಕ ಚಾರ್ಲ್ಸ್ ಲಮನ್ನಾ ಸಾಮಾಜಿಕ ಜಾಲತಾಣಗಳಲ್ಲಿ ಖಚಿತಪಡಿಸಿದ್ದಾರೆ. ಸಮಸ್ಯೆ ಸಂಪೂರ್ಣವಾಗಿ ಬಗೆಹರಿದ ಬಳಿಕ ಇದರ ಮೂಲ ಕಾರಣ ಮತ್ತು ಭವಿಷ್ಯದಲ್ಲಿ ಇಂತಹ ಲೋಪಗಳು ಮರುಕಳಿಸದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಸಮಗ್ರ 'ಘಟನೆಯ ನಂತರದ ವರದಿಯನ್ನು ನೀಡುವುದಾಗಿ ಕಂಪನಿ ಭರವಸೆ ನೀಡಿದೆ.
ಪ್ರಸ್ತುತ ಬಳಕೆದಾರರು ಮೈಕ್ರೋಸಾಫ್ಟ್ 365 ಅಪ್ಲಿಕೇಶನ್‌ಗಳಿಗೆ ಸಂಪರ್ಕ ಸಾಧಿಸುವಾಗ ಇನ್ನೂ ಕೆಲವು ಸಣ್ಣಪುಟ್ಟ ತೊಂದರೆಗಳನ್ನು ಎದುರಿಸುತ್ತಿರಬಹುದು. ಕ್ಲೈಂಟ್‌ಗಳು ಮರು-ಸಂಪರ್ಕಗೊಳ್ಳುತ್ತಿರುವುದರಿಂದ ಚೇತರಿಕೆಯ ಪ್ರಕ್ರಿಯೆಯು ಕ್ರಮೇಣವಾಗಿ ನಡೆಯಲಿದೆ. ಐಟಿ ನಿರ್ವಾಹಕರು ಮೈಕ್ರೋಸಾಫ್ಟ್ 365 ಅಡ್ಮಿನ್ ಸೆಂಟರ್‌ನಲ್ಲಿ MO1550821 ಅಡಿಯಲ್ಲಿ ಅಥವಾ ಅಡ್ಮಿನ್ ಸೆಂಟರ್ ಲಭ್ಯವಿಲ್ಲದಿದ್ದರೆ status.cloud.microsoft ವೆಬ್‌ಸೈಟ್ ಮೂಲಕ ಇತ್ತೀಚಿನ ಅಪ್‌ಡೇಟ್‌ಗಳನ್ನು ಪಡೆದುಕೊಳ್ಳಬಹುದು. ಪ್ಯಾಚ್ ಮಾಡಲಾದ ಸರ್ವರ್‌ಗಳು ಪೂರ್ಣ ಪ್ರಮಾಣದ ಟ್ರಾಫಿಕ್ ಅನ್ನು ನಿಭಾಯಿಸಿ ಸ್ಥಿರವಾಗಿ ನಿಲ್ಲುತ್ತವೆಯೇ ಎಂಬುದೇ ಸದ್ಯದ ಸವಾಲಾಗಿದೆ, (ಏಜೆನ್ಸೀಸ್).