Ramayana: ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ನಲ್ಲಿ ಹೊಸ ಐತಿಹಾಸಿಕ ದಾಖಲೆಯನ್ನು ಸೃಷ್ಟಿಸಿರುವ ನಿತೇಶ್ ತಿವಾರಿ ನಿರ್ದೆಶನದ ಹಾಗೂ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಭಿನಯದ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರವು ಇದೀಗ ರಿಲೀಸ್ ಆದ 8 ದಿನಕ್ಕೆ ಜಾಗತಿಕವಾಗಿ 1000 ಕೋಟಿ ಕ್ಲಬ್ ಸೇರಿದೆ.
ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಮತ್ತು ರಾವಣನಾಗಿ ಯಶ್ ಅಭಿನಯದ ರಾಮಾಯಣ ಹಿಂದಿ ಚಿತ್ರವು ಸದ್ಯ ದೇಶಿಯ ಮತ್ತು ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಕಾಣುತ್ತಿದೆ. ಮತ್ತೊಂದೆಡೆ, ಸಿನಿಮಾದ ಅಮೋಘ ದೃಶ್ಯಗಳು ನೋಡುಗರ ಗಮನ ಸೆಳೆದಿವೆ. ಇಂದಿಗೂ ಚಿತ್ರಮಂದಿರಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ದೌಡಾಯಿಸುತ್ತಿರುವ ಸಿನಿಪ್ರಿಯರು, ದಾಖಲೆಯ ಪ್ರಮಾಣದಲ್ಲಿ ಚಿತ್ರದ ಟಿಕೆಟ್ಗಳನ್ನು ಖರೀದಿಸುತ್ತಿದ್ದಾರೆ.
ಕೇವಲ ಬಾಕ್ಸ್ ಆಫೀಸ್ನಲ್ಲಿ ಸಾವಿರ ಕೋಟಿ ಗಳಿಕೆ ಮಾತ್ರ ಕಾಣದ ರಾಮಾಯಣ, ಮೊದಲ ವಾರದಲ್ಲೇ ಒಂದರ ಹಿಂದೆ ಎಂಬಂತೆ ಸಾಲು ಸಾಲು ದಾಖಲೆಗಳನ್ನು ಉಡೀಸ್ ಮಾಡಿದೆ. ಟಿಕೆಟ್ ಮಾರಾಟದಿಂದ ಹಿಡಿದು ಐಮ್ಯಾಕ್ಸ್ ಕಲೆಕ್ಷನ್ವರೆಗೆ ಹಲವು ವಿಭಾಗಗಳಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಬುಕ್ಮೈಶೋದಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟ, ಒಂದು ಗಂಟೆಯಲ್ಲಿ ಗರಿಷ್ಠ ಟಿಕೆಟ್ ಮಾರಾಟ ಹಾಗೂ ಸತತ ನಾಲ್ಕು ದಿನಗಳ ಕಾಲ 10 ಲಕ್ಷಕ್ಕೂ ಹೆಚ್ಚು ಟಿಕೆಟ್ಗಳ ಮಾರಾಟ ಸೇರಿದಂತೆ ಹಲವು ರೆಕಾರ್ಡ್ಗಳು ಈ ಚಿತ್ರದ ಪಾಲಾಗಿದೆ.
ಹಿಂದಿ ಚಿತ್ರಗಳ ಪೈಕಿ ಅತಿ ದೊಡ್ಡ ಆರಂಭಿಕ ವಾರಾಂತ್ಯದ ಟಿಕೆಟ್ ಮಾರಾಟ ದಾಖಲೆಯನ್ನೂ ನಿರ್ಮಿಸಿರುವ ನಿತೇಶ್ ತಿವಾರಿ ಸಿನಿಮಾ, ಭಾರತೀಯ ಸಿನಿಮಾವೊಂದಕ್ಕೆ ವಿಶ್ವಾದ್ಯಂತ ಅತಿ ದೊಡ್ಡ ಐಮ್ಯಾಕ್ಸ್ ಓಪನಿಂಗ್ ಹಾಗೂ ಭಾರತದಲ್ಲೂ ಅತಿ ದೊಡ್ಡ ಐಮ್ಯಾಕ್ಸ್ ಆರಂಭಿಕ ಗಳಿಕೆ ದಾಖಲಿಸಿದೆ. ಇನ್ನು ಹಿಂದಿ ಚಿತ್ರರಂಗದಲ್ಲಿ ಒಂದೇ ದಿನ 100 ಕೋಟಿ ರೂ. ಕಲೆಕ್ಷನ್ ಕಂಡ ಎರಡನೇ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಭಾರತದಲ್ಲಿ 300 ಕೋಟಿ ರೂ. ನೆಟ್ ಕಲೆಕ್ಷನ್ ಗಡಿಯನ್ನು ಅತಿ ವೇಗವಾಗಿ ದಾಟಿದ ಹಿಂದಿ ಚಿತ್ರ ಎಂಬ ದಾಖಲೆ ಕೂಡ ನಿರ್ಮಿಸಿದೆ. ಸೋಮವಾರ, ಮಂಗಳವಾರ ಮತ್ತು ಬುಧವಾರದ ಗಳಿಕೆಯಲ್ಲಿ ಹಿಂದಿ ಚಿತ್ರಗಳ ಹಿಂದಿನ ದಾಖಲೆಗಳನ್ನು ಮುರಿದಿದ್ದು, ಸತತ ಮೂರು ದಿನಗಳ ಕಾಲ ಹೊಸ ವಾರದ ದಿನದ ದಾಖಲೆಗಳನ್ನು ನಿರ್ಮಿಸಿದೆ. ಸಿನಿಮಾ ಬಿಡುಗಡೆಯಾದ ಎಂಟನೇ ದಿನಕ್ಕೆ ವಿಶ್ವಾದ್ಯಂತ ಒಟ್ಟು ಗಳಿಕೆ 1,000 ಕೋಟಿ ರೂ. ದಾಟಿದೆ ಎನ್ನಲಾಗಿದ್ದು, ಈ ಸಾಧನೆ ಮಾಡಿದ ಮೂರನೇ ಅತಿ ವೇಗದ ಭಾರತೀಯ ಚಿತ್ರ ರಾಮಾಯಣ ಎನ್ನಲಾಗಿದೆ.
ಇದಲ್ಲದೆ, ವಿಶ್ವಾದ್ಯಂತ 500 ಕೋಟಿ ರೂ. ಗಳಿಸಿದ ಎರಡನೇ ಹಿಂದಿ ಚಿತ್ರ ಎಂಬ ದಾಖಲೆಯನ್ನೂ ತನ್ನದಾಗಿಸಿಕೊಂಡಿದೆ. ನಿರ್ದೇಶಕ ನಿತೇಶ್ ತಿವಾರಿ ತಮ್ಮದೇ ‘ದಂಗಲ್’ ಚಿತ್ರದ ಆರಂಭಿಕ ಗಳಿಕೆಯ ದಾಖಲೆಯನ್ನೂ ಈ ಸಿನಿಮಾ ಮೂಲಕ ಮೀರಿಸಿದ್ದಾರೆ. ಒಟ್ಟಾರೆ, ಮೊದಲ ವಾರದಲ್ಲೇ ಹಲವು ದಾಖಲೆಗಳನ್ನು ಬರೆದಿರುವ ‘ರಾಮಾಯಣ’ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, 4000 ರೂ. ಬಜೆಟ್ನಲ್ಲಿ ನಿರ್ಮಾಪಕರಿಗೆ ಹಾಕಿದ ಬಂಡವಾಳದ ಮೊದಲ ಪಾಲನ್ನು ತಂದುಕೊಟ್ಟಿದೆ. ಇನ್ನುಳಿದ ಹಣ ಎಷ್ಟು ದಿನಗಳಲ್ಲಿ ಸೇರಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).