ಶ್ರೀಲಂಕಾದ ತಿುಕೋಮಲೆ ಜಿಲ್ಲಾ ಜನರಲ್ ಆಸ್ಪತ್ರೆಗೆ 55 ವರ್ಷದ ವ್ಯಕ್ತಿಯೊಬ್ಬರು ಪಾರ್ಶ್ವವಾಯು ಸಮಸ್ಯೆಗೆ ಹೆಚ್ಚಿನ ಚಿಕಿತ್ಸೆ ಪಡೆಯಲು ಆಗಮಿಸಿದ್ದರು. ಈ ವೇಳೆ ವೈದ್ಯರು ಆತನಿಗೆ ಮೂತ್ರದ ಹರಿವಿನಲ್ಲಿ ತೀವ್ರ ತಡೆ ಉಂಟಾಗುತ್ತಿರುವುದನ್ನು ಗಮನಿಸಿ, ಮುಂದುವರಿದು ಕೂಲಂಕಷವಾಗಿ ವೈದ್ಯಕೀಯ ತಪಾಸಣೆ ನಡೆಸಲು ಮುಂದಾದರು. ಆಗ ಸ್ಕ್ಯಾನಿಂಗ್ ವರದಿ ನೋಡಿ ವೈದ್ಯರೇ ದಂಗಾಗಿ ಹೋದರು, ಏಕೆಂದರೆ, ರೋಗಿಯ ಮೂತ್ರಕೋಶದಲ್ಲಿ ಕಲ್ಪನೆಗೂ ಮೀರಿದ ಅಳತೆಯ ಬೃಹತ್ ಕಲ್ಲೊಂದು ಬೆಳೆದಿತ್ತು. ತಕ್ಷಣವೇ ಡಾ. ಪ್ರಹ್ಲಾದನ್ ಬಾಲಕೃಷ್ಣನ್ ನೇತೃತ್ವದ ನುರಿತ ತಜ್ಞ ವೈದ್ಯರ ತಂಡವು ಅತ್ಯಂತ ಎಚ್ಚರಿಕೆಯಿಂದ ಈ ಜಟಿಲ ಹಾಗೂ ಜೋಪಾನವಾದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿ, ಮೂತ್ರಕೋಶದಲ್ಲಿದ್ದ 3.1 ಕೆಜಿ ತೂಕದ ರಾಕ್ಷಸ ಕಲ್ಲನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಇದುವರೆಗಿನ ಲಭ್ಯವಿರುವ ವೈದ್ಯಕೀಯ ದಾಖಲೆಗಳ ಪ್ರಕಾರ, ಇದುವರೆಗೂ ತೆಗೆಯಲಾದ ಕಲ್ಲುಗಳ ಪೈಕಿ ಇದುವೇ ಅತ್ಯಂತ ದೊಡ್ಡ ಕಲ್ಲಾಗಿದೆ ಎಂದು ಡಾ. ಪ್ರಹ್ಲಾದನ್ ಬಿಬಿಸಿ ಸಿಂಹಳಕ್ಕೆ ತಿಳಿಸಿದ್ದಾರೆ.