

ಪ್ಯಾರಿಸ್: ಫ್ರಾನ್ಸ್‌ನಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ನಿರ್ವಹಣ ವೆಚ್ಚ ಹೆಚ್ಚಳವಾಗಿದ್ದು, ಇದರ ವಿರುದ್ಧ ಭಾರಿ ಪ್ರತಿಭಟನೆಗಳು ( France protests ) ನಡೆಯುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಇತ್ತೀಚೆಗೆ ಈ ಪ್ರತಿಭಟನೆಗಳು ಹಿಂಸಾತ್ಮಕ ರೂಪ ತಾಳಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಲೂಟಿಕೋರರು ಆ್ಯಪಲ್ ಸ್ಟೋರ್‌ಗಳನ್ನು ಗುರಿಯಾಗಿಸಿಕೊಂಡು ದುಬಾರಿ ಐಫೋನ್‌ಗಳನ್ನು ದೋಚಿದ್ದರು. ಇದರ ಬೆನ್ನಲ್ಲೇ ಆ್ಯಪಲ್ ಕಂಪನಿ ಎಲ್ಲ ಫೋನ್‌ಗಳನ್ನು ನಿಷ್ಕ್ರಿಯಗೊಳಿಸಿ ಬಿಗ್ ಶಾಕ್ ನೀಡಿದೆ.
ಫ್ರಾನ್ಸ್‌ನಲ್ಲಿ ಇತ್ತೀಚೆಗೆ ಜೀವನ ವೆಚ್ಚದ ಏರಿಕೆ ಮತ್ತು ಆರ್ಥಿಕ ಸಂಕಷ್ಟದ ವಿರುದ್ಧ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆದವು. ಆರಂಭದಲ್ಲಿ ಶಾಂತಿಯುತವಾಗಿದ್ದ ಪ್ರತಿಭಟನೆಗಳು ಕೆಲವು ನಗರಗಳಲ್ಲಿ ಹಿಂಸಾತ್ಮಕ ಸ್ವರೂಪ ಪಡೆದುಕೊಂಡವು. ಪ್ಯಾರಿಸ್, ಮಾರ್ಸೆಯ್, ಬೋರ್ಡೋ, ಲಿಲ್ ಮತ್ತು ಲಿಯಾನ್‌ನಂತಹ ನಗರಗಳಲ್ಲಿ ಕೆಲ ಗುಂಪುಗಳು ಸರ್ಕಾರಿ ಕಟ್ಟಡಗಳು, ಸಾರ್ವಜನಿಕ ಆಸ್ತಿಗಳು, ಸೂಪರ್‌ಮಾರ್ಕೆಟ್‌ಗಳು ಹಾಗೂ ಹೈ-ಎಂಡ್ ರಿಟೇಲ್ ಅಂಗಡಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದವು.
ಈ ಘಟನೆಯಲ್ಲಿ ಲಿಲ್ ನಗರದ ಆ್ಯಪಲ್ ರಿಟೇಲ್ ಸ್ಟೋರ್‌ನಿಂದ ಐಫೋನ್‌ಗಳು ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳನ್ನು ದೊಡ್ಡ ಪ್ರಮಾಣದಲ್ಲಿ ದೋಚಲಾಯಿತು. ಬೋರ್ಡೋನಲ್ಲಿಯೂ ಅ್ಯಪಲ್ ಸ್ಟೋರ್ ಲೂಟಿಯಾಗಿದ್ದು, ಈ ಎರಡೂ ಸ್ಥಳಗಳು ಈ ಹಿಂದೆ ಕೂಡ ಅಶಾಂತಿಯ ಸಮಯದಲ್ಲಿ ಗುರಿಯಾಗಿದ್ದವು. ಆದರೆ, ಲೂಟಿ ಮಾಡಿದವರ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಫೋಟೋಗಳು ಮತ್ತು ವಿಡಿಯೋಗಳಲ್ಲಿ, ದೋಚಿದ ಐಫೋನ್‌ಗಳ ಪರದೆಯ ಮೇಲೆ ಎಚ್ಚರಿಕೆ ಸಂದೇಶಗಳು ಕಾಣಿಸಿಕೊಂಡಿವೆ. ದಯವಿಟ್ಟು ಈ ಸಾಧನವನ್ನು ಆ್ಯಪಲ್ ಲಿಲ್‌ಗೆ ಹಿಂತಿರುಗಿಸಿ. ಈ ಸಾಧನವನ್ನು ನಿಷ್ಕ್ರಿಯಗೊಳಿಸಲಾಗಿದೆ ಮತ್ತು ಅದರ ಸ್ಥಳವನ್ನು ಟ್ರ್ಯಾಕ್ ಮಾಡಲಾಗುತ್ತಿದೆ. ಸ್ಥಳೀಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುವುದು ಎಂಬಂತಹ ಸಂದೇಶಗಳು ಕಾಣಿಸಿಕೊಂಡಿವೆ.
ಇನ್ನೂ ಈ ಘಟನೆಯು ಆ್ಯಪಲ್‌ನ ಭದ್ರತಾ ವ್ಯವಸ್ಥೆಯ ಶಕ್ತಿಯನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ. ಆ್ಯಪಲ್ ಸ್ಟೋರ್‌ಗಳಲ್ಲಿನ ಪ್ರದರ್ಶನ (ಡೆಮೊ) ಯಂತ್ರಗಳು ವಿಶೇಷ ಸಾಫ್ಟ್‌ವೇರ್‌ನೊಂದಿಗೆ ಕಾರ್ಯನಿರ್ವಹಿಸುತ್ತವೆ. ಅಂಗಡಿಯ ವೈ-ಫೈ ವ್ಯಾಪ್ತಿಯಿಂದ ಹೊರಬಂದ ತಕ್ಷಣ ಅವು ಲಾಕ್ ಆಗಿ, ಬಳಕೆಗೆ ಅನರ್ಹವಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಆದರೆ, ಎಲ್ಲಾ ಸಾಧನಗಳನ್ನು ದೂರದಿಂದಲೇ ನಿಷ್ಕ್ರಿಯಗೊಳಿಸಲಾಗಿದೆಯೇ ಎಂಬುದಕ್ಕೆ ಆ್ಯಪಲ್ ಅಧಿಕೃತವಾಗಿ ದೃಢೀಕರಣ ನೀಡಿಲ್ಲ. ಸಾಮಾಜಿಕ ಮಾಧ್ಯಮದ ವಿಡಿಯೋಗಳ ಸತ್ಯತೆಯನ್ನು ಸಂಪೂರ್ಣವಾಗಿ ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ ಎಂಬುದು ಕೂಡ ಗಮನಾರ್ಹ.
ಈ ಪ್ರತಿಭಟನೆಗಳ ಸಂದರ್ಭದಲ್ಲಿ ಆ್ಯಪಲ್ ಮಾತ್ರವಲ್ಲದೆ ಲೂಯಿಸ್ ವಿಟನ್, ಹರ್ಮೆಸ್, ಡಿಯೋರ್‌ನಂತಹ ಲಕ್ಸುರಿ ಬ್ರ್ಯಾಂಡ್‌ಗಳ ಅಂಗಡಿಗಳೂ ಲೂಟಿಗೆ ಗುರಿಯಾಗಿವೆ. ಮಾರ್ಸೆಯ್‌ನ ಹರ್ಮೆಸ್ ಬೂಟಿಕ್, ವಿವಿಧ ನಗರಗಳ ಸೂಪರ್‌ಮಾರ್ಕೆಟ್‌ಗಳು, ಬಟ್ಟೆ ಅಂಗಡಿಗಳು ಮತ್ತು ಔಷಧಿ ಅಂಗಡಿಗಳು ಸಹ ದಾಳಿಗೆ ಒಳಗಾಗಿವೆ. ಲಿಯಾನ್ ಮತ್ತು ಮಾರ್ಸೆಯ್‌ನಂತಹ ನಗರಗಳಲ್ಲಿ ಪುರಸಭೆ ಕಟ್ಟಡಗಳು ಮತ್ತು ಇತರ ಸರ್ಕಾರಿ ಆಸ್ತಿಗಳಿಗೆ ಹಾನಿಯಾಗಿದೆ. ಸಾವಿರಾರು ಜನರು ಬಂಧನಕ್ಕೊಳಗಾಗಿದ್ದಾರೆ ಎಂದು ವರದಿಗಳು ತಿಳಿಸುತ್ತವೆ. ಪ್ರತಿಭಟನೆಗಳು ಆರ್ಥಿಕ ಸಮಸ್ಯೆಗಳ ವಿರುದ್ಧದ ಧ್ವನಿಯಾಗಿ ಆರಂಭವಾದರೂ, ಅವು ಲೂಟಿ ಮತ್ತು ವಿನಾಶದ ರೂಪ ತಾಳಿದ್ದು ಸಾರ್ವಜನಿಕ ಆಸ್ತಿ ರಕ್ಷಣೆ ಮತ್ತು ಭದ್ರತಾ ಕ್ರಮಗಳ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯು ವ್ಯಾಪಕವಾಗಿ ಚರ್ಚೆಗೆ ಒಳಗಾಗಿದೆ. ಹಲವು ನೆಟಿಜನ್‌ಗಳು ಲೂಟಿಕೋರರನ್ನು ಟೀಕಿಸಿದ್ದಾರೆ. “ಎರಡು ನಿಮಿಷದಲ್ಲಿ ಲಾಕ್ ಆಗುವ ಫೋನ್‌ಗಳನ್ನು ದೋಚುವುದು ಅತ್ಯಂತ ಮೂರ್ಖತನ” ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆ್ಯಪಲ್‌ನ ಫೈಂಡ್ ಮೈ ಮತ್ತು ಆಕ್ಟಿವೇಶನ್ ಲಾಕ್‌ನಂತಹ ಭದ್ರತಾ ವೈಶಿಷ್ಟ್ಯಗಳು ದೋಚಿದ ಸಾಧನಗಳನ್ನು ಬಳಸಲು ಅಸಾಧ್ಯವಾಗಿಸುತ್ತವೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆದರೆ ಈ ಸಾಧನಗಳ ನಿಖರವಾದ ಸ್ಥಳ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಲಾಗಿದೆಯೇ ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಲೂಟಿ ಮಾಡಿದ ಸಾಧನಗಳನ್ನು ಮಾರಾಟ ಮಾಡುವ ಪ್ರಯತ್ನಗಳಿಗೆ ಸಹ ಎಚ್ಚರಿಕೆ ನೀಡಲಾಗಿದ್ದು, ಕಾಳಸಂತೆಯಲ್ಲಿ ಅಂತಹ ಫೋನ್‌ಗಳನ್ನು ಖರೀದಿಸುವವರಿಗೆ ನಷ್ಟವಾಗುವ ಸಾಧ್ಯತೆ ಇದೆ, (ಏಜೆನ್ಸೀಸ್).