

ಬಿಹಾರ: ಉಪ್ಪಿಗಿಂತ ರುಚಿ ಇಲ್ಲ, ತಾಯಿಗಿಂತ ಬಂಧುವಿಲ್ಲ ಎನ್ನಲಾಗುತ್ತದೆ. ಹೆತ್ತ ತಾಯಿಯ ಮೇಲಿನ ಪ್ರೀತಿ ಹಾಗೂ ದೇವರಲ್ಲಿಟ್ಟ ಭಕ್ತಿ ಮುಂದೆ ಎಂತಹ ಕಠಿಣ ಸವಾಲು ಕೂಡ ಹುಲ್ಲು ಕಡ್ಡಿಗೆ ಸಮವಾಗುತ್ತದೆ ಎಂದು ಹೇಳಬಹುದಾಗಿದೆ. ಈ ಮಾತಿಗೆ ಸಾಕ್ಷಿ ಎಂಬಂತೆ ಬಿಹಾರದ ಯುವಕರನೊಬ್ಬನ ಕತೆ ಈಗ ದೇಶದ ಜನರ ಗಮನವನ್ನು ಆತನತ್ತ ಸೆಳೆಯುತ್ತಿದೆ.
ತಾಯಿಯ ಪ್ರಾಣ ಉಳಿಸಿಕೊಟ್ಟ ಆ ಪರಮಶಿವನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು 19 ವರ್ಷದ ಯುವಕನೊಬ್ಬ ಭಾರತದಾದ್ಯಂತ ಓಡುತ್ತಲೇ 12 ಜ್ಯೋತಿರ್ಲಿಂಗಗಳ ಯಾತ್ರೆ ಕೈಗೊಂಡಿದ್ದಾನೆ. ಈತನ ಸಾಹಸ ಮತ್ತು ತಾಯಿಯ ಮೇಲಿನ ಪ್ರೀತಿ ಕಂಡ ಜನ ಈತನನ್ನು ‘ಕಲಿಯುಗದ ಶ್ರವಣಕುಮಾರ’ ಎಂದು ಕರೆಯುತ್ತಿದ್ದಾರೆ.
ಈ ಸಾಹಸಿ ಯುವಕನ ಹೆಸರು ಮೋನು ಮೆತುರ್ಬಾಲಾ. ಬಿಹಾರದ ಅರಾರಿಯಾ ಜಿಲ್ಲೆಯ ನಿವಾಸಿಯಾದ ಮೋನು ಬದುಕಿನಲ್ಲಿ ಕೆಲ ತಿಂಗಳ ಹಿಂದೆ ದೊಡ್ಡ ಬಿರುಗಾಳಿಯೇ ಎದ್ದಿತ್ತು. ಆತನ ತಾಯಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ವೈದ್ಯರ ಚಿಕಿತ್ಸೆ ಒಂದು ಕಡೆಯಾದರೆ, ಹೆತ್ತವ್ವನನ್ನು ಉಳಿಸಿಕೊಡುವಂತೆ ಮೋನು, ಶಿವನ ಮೊರೆ ಹೋಗಿದ್ದ.
"ನನ್ನ ತಾಯಿ ಗುಣಮುಖಳಾದರೆ, ದೇಶದಲ್ಲಿರುವ ಎಲ್ಲಾ 12 ಜ್ಯೋತಿರ್ಲಿಂಗಗಳಿಗೂ ಬರಿಗಾಲಲ್ಲಿ ಓಡುತ್ತಾ ಬಂದು ದರ್ಶನ ಪಡೆಯುತ್ತೇನೆ" ಎಂದು ಶಿವನ ಸನ್ನಿಧಿಯಲ್ಲಿ ಕಠಿಣ ಸಂಕಲ್ಪ ತೊಟ್ಟಿದ್ದ. ಪವಾಡ ಎಂಬಂತೆ ತಾಯಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂತು. ತಾಯಿ ಸಾವಿನ ದವಡೆಯಿಂದ ಪಾರಾಗಿ ಬಂದ ಬೆನ್ನಲ್ಲೇ, ತಾನು ಶಿವನಿಗೆ ಕೊಟ್ಟ ಮಾತನ್ನು ನೆರವೇರಿಸಲು ಮೋನು ಸಜ್ಜಾಗಿದ್ದಾನೆ.
ಹರಕೆ ತೀರಿಸಲು ವಾಹನ, ಬಸ್ಸು ಅಥವಾ ರೈಲು ಹತ್ತಿ ಆರಾಮಾಗಿ ಹೋಗಬಹುದಿತ್ತು. ಆದರೆ ಮೋನು ಕೇವಲ ತನ್ನ ಎರಡು ಕಾಲುಗಳನ್ನು ನಂಬಿಕೊಂಡು, ಕಳೆದ ಮಾರ್ಚ್ 15 ರಂದು ಬಿಹಾರದ ತನ್ನ ಊರಿನಿಂದ ಓಟವನ್ನು ಆರಂಭಿಸಿದ್ದಾನೆ. ಪ್ರತಿದಿನ ಸುಮಾರು 50 ಕಿಲೋಮೀಟರ್‌ಗಳಷ್ಟು ದೂರ ಓಡುತ್ತಲೇ ಸಾಗುವ ಮೋನು, ಸುಡುಬಿಸಿಲು, ರಣಮಳೆ, ಹಳ್ಳ-ಕೊಳ್ಳ, ಕಲ್ಲು-ಮುಳ್ಳುಗಳ ಹಾದಿಯನ್ನು ಲೆಕ್ಕಿಸದೆ ಶಿವನ ಧ್ಯಾನದಲ್ಲೇ ಮುನ್ನುಗ್ಗುತ್ತಿದ್ದಾನೆ.
ವರದಿಗಳ ಪ್ರಕಾರ, ಆತ ಈಗಾಗಲೇ ಬರೋಬ್ಬರಿ 8,000 ಕಿಲೋಮೀಟರ್‌ಗೂ ಹೆಚ್ಚು ದೂರವನ್ನು ಓಡಿಯೇ ಕ್ರಮಿಸಿದ್ದಾನೆ. ಈಗಾಗಲೇ ಐದು ಪವಿತ್ರ ಜ್ಯೋತಿರ್ಲಿಂಗಗಳ ದರ್ಶನ ಮುಗಿದಿದ್ದು, ಇನ್ನುಳಿದ ಏಳು ಜ್ಯೋತಿರ್ಲಿಂಗಗಳತ್ತ ಆತನ ಪಯಣ ಬಿರುಸಿನಿಂದ ಸಾಗಿದೆ ಎನ್ನಲಾಗಿದೆ.
ಮೋನು ತನ್ನ ಈ ರೋಚಕ ಮತ್ತು ಭಕ್ತಿಪೂರ್ವಕ ಯಾತ್ರೆಯ ಪ್ರತಿ ಕ್ಷಣದ ಅಪ್‌ಡೇಟ್‌ಗಳನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆ ಮೂಲಕ ಜನರೊಂದಿಗೆ ಹಂಚಿಕೊಳ್ಳುತ್ತಿದ್ದಾನೆ. ರಸ್ತೆಯಲ್ಲಿ ಓಡುತ್ತಿರುವ ವಿಡಿಯೋಗಳು, ಸ್ಥಳೀಯರು ಆತನಿಗೆ ನೀಡುತ್ತಿರುವ ಪ್ರೀತಿ ಮತ್ತು ಶಿವನ ದೇವಾಲಯಗಳನ್ನು ತಲುಪಿದಾಗ ಆತನ ಕಣ್ಣಲ್ಲಿ ಕಾಣುವ ಭಾವುಕ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನರ ಮನಗೆದ್ದಿವೆ.
ಪುರಾಣಗಳಲ್ಲಿ ಹೆತ್ತ ತಂದೆ-ತಾಯಿಯನ್ನು ಕಾವಡಿಯಲ್ಲಿ ಹೊತ್ತು ತೀರ್ಥಯಾತ್ರೆ ಮಾಡಿಸಿದ ಶ್ರವಣಕುಮಾರನ ಕಥೆಯನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಇಂದಿನ ಆಧುನಿಕ ಯುಗದಲ್ಲಿ, ತಾಯಿಯ ಮೇಲಿನ ಪ್ರೀತಿಗಾಗಿ ತನ್ನ ಶರೀರವನ್ನು ದಂಡಿಸಿ, ಸಾವಿರಾರು ಕಿಲೋಮೀಟರ್ ಓಡುತ್ತಿರುವ ಈ 19 ವರ್ಷದ ಹುಡುಗನನ್ನು ನೋಡಿ ಜನ ಬೆರಗಾಗಿದ್ದಾರೆ. ಪ್ರತಿಯೊಂದು ಊರಿನಲ್ಲೂ ಜನರು ಈತನಿಗೆ ಊಟ, ನೀರು ನೀಡಿ ಬೆಂಬಲಿಸುತ್ತಿದ್ದಾರೆ.
ದೈಹಿಕವಾಗಿ ಎಷ್ಟೇ ಸುಸ್ತಾದರೂ, ಮುಖದಲ್ಲಿ ನಗು ಮತ್ತು ತಾಯಿಯ ಮೇಲಿನ ಭಕ್ತಿಯೊಂದಿಗೆ ಮುನ್ನುಗ್ಗುತ್ತಿರುವ ಮೋನುವಿನ ಈ ಪಯಣ ಇಂದಿನ ಯುವಪೀಳಿಗೆಗೆ ದೊಡ್ಡ ಸ್ಪೂರ್ತಿಯಾಗಿದೆ. ಇನ್ನುಳಿದ ಜ್ಯೋತಿರ್ಲಿಂಗಗಳ ಯಾತ್ರೆ ಯಶಸ್ವಿಯಾಗಿ ಪೂರ್ಣಗೊಂಡು, ಆತ ಕ್ಷೇಮವಾಗಿ ಮನೆ ತಲುಪಲಿ ಎಂದು ಇಡೀ ದೇಶವೇ ಹಾರೈಸುತ್ತಿದೆ, (ಏಜೆನ್ಸೀಸ್).