ಇದನ್ನು ನೋಡಿ ಸಾಮಾನ್ಯ ಎರೆಹುಳು ಅಂದುಕೊಳ್ಳಬೇಡಿ ಏಕೆಂದ್ರೆ ಇದು... ಪ್ರಾಣಿ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿ! Earthworm

ವಿಶ್ವದ ಅತ್ಯಂತ ದೊಡ್ಡ ಹಾಗೂ ಎತ್ತರವಾದ ಪ್ರಸ್ಥಭೂಮಿಯಾದ ಕಿಂಗ್ಹೈ-ಕ್ಸಿಜಾಂಗ್ ಪ್ರಸ್ಥಭೂಮಿಯ (Qinghai-Xizang Plateau) ಅರಣ್ಯ ಪ್ರದೇಶದಲ್ಲಿ ಈ ಹೊಸ ಹಾವನ್ನು ಕಂಡುಹಿಡಿಯಲಾಗಿದೆ.
Earthworm
Blind snake
Published on

Earthworm : ಪ್ರಪಂಚದಲ್ಲಿ ನಮಗೆ ತಿಳಿದಿರುವ ಜೀವಿಗಳಿಗಿಂತ ನಿಸರ್ಗದ ಮಡಿಲಲ್ಲಿ ಅದೆಷ್ಟೋ ರಹಸ್ಯಗಳು ಅಡಗಿವೆ. ಇವುಗಳಲ್ಲಿ ಕೆಲವು ಮಾನವನ ಕಣ್ಣಿಗೆ ಬಿದ್ದಿದ್ದರೆ, ಇನ್ನು ಕೆಲವು ಇಂದಿಗೂ ನಿಗೂಢವಾಗಿಯೇ ಉಳಿದಿವೆ. ವಿಜ್ಞಾನಿಗಳು ಸತತ ಸಂಶೋಧನೆಯ ಮೂಲಕ ಇದೀಗ ಅಂತಹದ್ದೇ ಒಂದು ವಿಸ್ಮಯಕಾರಿ ಮತ್ತು ವಿಭಿನ್ನ ಹಾವಿನ ಪ್ರಭೇದವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನೋಡಲು ಕೇವಲ ದೊಡ್ಡ ಗಾತ್ರದ ಮಣ್ಣುಹುಳುವಿನಂತೆ ಕಾಣುವ ಈ ಅಪರೂಪದ ಹೆಣ್ಣು ಹಾವು, ಪ್ರಾಣಿ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ವಿಶ್ವದ ಅತ್ಯಂತ ದೊಡ್ಡ ಹಾಗೂ ಎತ್ತರವಾದ ಪ್ರಸ್ಥಭೂಮಿಯಾದ ಕಿಂಗ್ಹೈ-ಕ್ಸಿಜಾಂಗ್ ಪ್ರಸ್ಥಭೂಮಿಯ (Qinghai-Xizang Plateau) ಅರಣ್ಯ ಪ್ರದೇಶದಲ್ಲಿ ಈ ಹೊಸ ಹಾವನ್ನು ಕಂಡುಹಿಡಿಯಲಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಚೀನಾ-ನೇಪಾಳದ ಗಡಿಭಾಗದ ಕಾಡಿನಲ್ಲಿ ಈ ಜೀವಿಯನ್ನು ಸಂಶೋಧಕರು ಗುರುತಿಸಿದ್ದಾರೆ. ಜಗತ್ತಿನ ಗಮನ ಸೆಳೆದಿರುವ ಈ ವೈಜ್ಞಾನಿಕ ಅನ್ವೇಷಣೆಯು ಪ್ರಕೃತಿಯ ವೈವಿಧ್ಯತೆಯನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದೆ.

Also Read
ಆಕ್ಟೋಪಸ್ ಎಂಬ ಅಚ್ಚರಿ ಜೀವಿ 3 ಹೃದಯಗಳನ್ನು ಹೊಂದಿರುವುದೇಕೆ? ಒಂದೇ ಒಂದು ಮೂಳೆ ಇಲ್ಲದಿದ್ದರೂ ಅಷ್ಟು ಬಲಿಷ್ಠ ಹೇಗೆ? Octopus
Earthworm

ಈ ಹಾವಿನ ವಿಶೇಷತೆಯೆಂದರೆ ಇದಕ್ಕೆ ಕಣ್ಣುಗಳೇ ಇಲ್ಲ. ನೋಡಲು ಅಚ್ಚರಿಯೆಂಬಂತೆ ಇದು ದೊಡ್ಡ ಗಾತ್ರದ ಮಣ್ಣುಹುಳುವಿನಂತೆ ಕಾಣುತ್ತದೆ. ಕಣ್ಣು ಕಾಣದ ಕಾರಣದಿಂದಾಗಿ ಇವುಗಳನ್ನು ‘ಕುರುಡು ಹಾವು’ (Blind Snake) ಅಥವಾ ‘ಬ್ಲೈಂಡ್ ಸ್ನೇಕ್’ ಎಂದು ಕರೆಯಲ್ಪಡುವ ವಿಶೇಷ ವರ್ಗದಡಿ ಸೇರಿಸಲಾಗಿದೆ. ಭೂಮಿಯ ಅಡಿಯಲ್ಲಿ, ಮರಗಳ ಬೇರುಗಳ ನಡುವೆ ಅಥವಾ ಒಣಗಿದ ಎಲೆಗಳ ರಾಶಿಯ ಅಡಿಯಲ್ಲಿ ವಾಸಿಸುವ ಇತರ ಹಾವುಗಳಂತೆ ಇದರ ಜೀವನಶೈಲಿಯೂ ವಿಭಿನ್ನವಾಗಿದೆ.

ಈ ಕುರಿತಾದ ಸಮಗ್ರ ವಿವರಗಳು ಪ್ರತಿಷ್ಠಿತ ‘ಝೂ ಕೀಸ್’ (Zoo Keys) ಜರ್ನಲ್‌ನಲ್ಲಿ ಪ್ರಕಟವಾಗಿವೆ. ಇದರ ವೈಜ್ಞಾನಿಕ ಹೆಸರು ‘ಇಂಡೋಟೈಫ್ಲೋಪ್ಸ್ ಗೈರಾಂಗೆಂಸಿಸ್’ (Indotyphlops gyirongensis) ಎಂದಾಗಿದೆ. ಸರಿಸುಮಾರು 26.5 ಸೆಂಟಿಮೀಟರ್ ಉದ್ದವಿರುವ ಈ ಹಾವಿನ ತಲೆಯ ಮೇಲ್ಭಾಗವು ತಿಳಿ ಕೆನೆ (light cream) ಬಣ್ಣದಲ್ಲಿದ್ದರೆ, ದೇಹವು ತಿಳಿ ಕಂದು ಬಣ್ಣದಿಂದ ಕೂಡಿದೆ. ತಲೆಯಿಂದ ಬಾಲದ ಕಡೆಗೆ ಸಾಗುತ್ತಿದ್ದಂತೆ ಇದರ ದೇಹದ ಬಣ್ಣವು ಕ್ರಮೇಣ ತಿಳಿಯುತ್ತಾ ಹೋಗುತ್ತದೆ.

ಈ ಹಾವಿನ ದೇಹದ ಪ್ರಮುಖ ಲಕ್ಷಣಗಳು ಮತ್ತು ಡಿಎನ್‌ಎ (DNA) ಇತರ ಕುರುಡು ಹಾವುಗಳಿಗಿಂತ ಭಿನ್ನವಾಗಿವೆ. ಸಂಶೋಧಕರು ಇದು ‘ಟೈಫ್ಲೋಪಿಡೆ’ (Typhlopidae) ಕುಟುಂಬಕ್ಕೆ ಸೇರಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಕುರುಡು ಹಾವುಗಳಲ್ಲಿ ಒಟ್ಟು ಐದು ಕುಟುಂಬಗಳಿದ್ದು, ಅದರಲ್ಲಿ ಟೈಫ್ಲೋಪಿಡೆ ಕುಟುಂಬವು ಅತ್ಯಂತ ವಿಶಾಲವಾದುದು. ವಿಶೇಷವೆಂದರೆ, ಈ ಕುಟುಂಬಕ್ಕೆ ಸೇರಿದ ಬಹುತೇಕ ಹಾವುಗಳು ಯಾವುದೇ ವಿಷಕಾರಿಯಲ್ಲದವುಗಳಾಗಿವೆ.

Also Read
ನಿಮಗೆ ಪ್ರತಿದಿನ ನಿಂಬೆ ನೀರು ಕುಡಿಯುವ ಅಭ್ಯಾಸವಿದೆಯೇ? ಹಾಗಾದರೆ ಈ ಮಾಹಿತಿ ತಪ್ಪದೆ ತಿಳಿದುಕೊಳ್ಳಿ...Lemon Water
Earthworm

ಚೀನಾ-ನೇಪಾಳ ಗಡಿಯಲ್ಲಿ ಈ ಅಪರೂಪದ ಪ್ರಭೇದ ಪತ್ತೆಯಾಗಿರುವುದರಿಂದ, ಇದು ಕೇವಲ ಚೀನಾದಲ್ಲಿ ಮಾತ್ರವಲ್ಲದೆ ನೇಪಾಳದ ಅಂಚಿನ ಪ್ರದೇಶಗಳಲ್ಲೂ ಹೇರಳವಾಗಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಭಾರತ, ನೇಪಾಳ ಮತ್ತು ಭೂತಾನ್ ದೇಶಗಳ ಗಡಿ ಭಾಗಗಳಲ್ಲೂ ಇದೇ ರೀತಿಯ ವಿಸ್ಮಯಕಾರಿ ಆವಿಷ್ಕಾರಗಳು ನಡೆದಿವೆ. ಈ ಮೂಲಕ, ದಕ್ಷಿಣ ಏಷ್ಯಾದ ಅರಣ್ಯ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ವೈಜ್ಞಾನಿಕ ಅಧ್ಯಯನಗಳು ಮತ್ತು ಸಂಶೋಧನೆಗಳು ನಡೆಸುವ ಅಗತ್ಯವಿದೆ ಎಂದು ತಜ್ಞರು ಒತ್ತಿಹೇಳಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net