ಆಕ್ಟೋಪಸ್ ಎಂಬ ಅಚ್ಚರಿ ಜೀವಿ 3 ಹೃದಯಗಳನ್ನು ಹೊಂದಿರುವುದೇಕೆ? ಒಂದೇ ಒಂದು ಮೂಳೆ ಇಲ್ಲದಿದ್ದರೂ ಅಷ್ಟು ಬಲಿಷ್ಠ ಹೇಗೆ? Octopus

ಅದ್ಭುತ ಜೀವಿಗಳಲ್ಲಿ ಆಕ್ಟೋಪಸ್‌ ಕೂಡ ಒಂದು. ಎಂಟು ತೋಳುಗಳು, ಬಣ್ಣ ಬದಲಿಸುವ ಸಾಮರ್ಥ್ಯ, ವಿಶಿಷ್ಟ ಬುದ್ಧಿಶಕ್ತಿ ಹೀಗೆ ಹಲವು ವಿಶೇಷತೆಗಳನ್ನು ಹೊಂದಿರುವ ಈ ಜೀವಿಯ ದೇಹದಲ್ಲಿ ಮೂರು ಹೃದಯಗಳಿವೆ ಎಂದರೆ ನಂಬಲು ಕಷ್ಟವಾಗಬಹುದು.
Octopus
ಸಾಂದರ್ಭಿಕ ಚಿತ್ರAI Generated Image
Published on

Octopus : ಸಮುದ್ರದ ಆಳದಲ್ಲಿ ಬದುಕುವ ಜೀವಿಗಳ ಲೋಕವೇ ಒಂದು ವಿಸ್ಮಯ. ಅಲ್ಲಿನ ಜಗತ್ತು ಇಂದಿಗೂ ವಿಜ್ಞಾನಿಗಳಿಗೆ ಹಲವು ಅಚ್ಚರಿಗಳನ್ನು ಉಳಿಸಿಕೊಂಡಿದೆ. ಸಾಗರದಾಳದಲ್ಲಿ ಅನೇಕ ಜೀವರಾಶಿಗಳಿದ್ದು, ಒಂದೊಂದು ಜೀವಿಯೂ ಅಚ್ಚರಿಯ ಆಗರ ಎನ್ನಬಹುದು. ಅಂತಹ ಅದ್ಭುತ ಜೀವಿಗಳಲ್ಲಿ ಆಕ್ಟೋಪಸ್‌ ಕೂಡ ಒಂದು. ಎಂಟು ತೋಳುಗಳು, ಬಣ್ಣ ಬದಲಿಸುವ ಸಾಮರ್ಥ್ಯ, ವಿಶಿಷ್ಟ ಬುದ್ಧಿಶಕ್ತಿ ಹೀಗೆ ಹಲವು ವಿಶೇಷತೆಗಳನ್ನು ಹೊಂದಿರುವ ಈ ಜೀವಿಯ ದೇಹದಲ್ಲಿ ಮೂರು ಹೃದಯಗಳಿವೆ ಎಂದರೆ ನಂಬಲು ಕಷ್ಟವಾಗಬಹುದು. ಆದರೆ, ಇದು ನಿಜ. ಹಾಗಾದರೆ ಆಕ್ಟೋಪಸ್‌ಗೆ ಮೂರು ಹೃದಯಗಳಿರುವುದೇಕೆ? ಅವು ಹೇಗೆ ಕೆಲಸ ಮಾಡುತ್ತವೆ? ಇದರ ಹಿಂದಿರುವ ವಿಜ್ಞಾನವೇನು ಎಂಬುದನ್ನು ನಾವೀಗ ತಿಳಿಯೋಣ.

ಆಕ್ಟೋಪಸ್‌ಗೆ ಮೂರು ಹೃದಯಗಳೇಕೆ?

ಆಕ್ಟೋಪಸ್ ತನ್ನ ದೇಹದಲ್ಲಿ ರಕ್ತವನ್ನು ಸಮರ್ಥವಾಗಿ ಮತ್ತು ವೇಗವಾಗಿ ಪಂಪ್ ಮಾಡಲು ಮೂರು ಹೃದಯಗಳನ್ನು ಹೊಂದಿದೆ. ಇದರ ಮೂರು ಹೃದಯಗಳಲ್ಲಿ ಎರಡು ಹೃದಯಗಳು ಕಿವಿರುಗಳಿಗೆ ರಕ್ತವನ್ನು ಸಾಗಿಸುವ ಕೆಲಸ ಮಾಡಿದರೆ, ಮೂರನೇ ಮುಖ್ಯ ಹೃದಯವು ದೇಹದ ಉಳಿದ ಎಲ್ಲಾ ಭಾಗಗಳಿಗೆ ಆಮ್ಲಜನಕಯುಕ್ತ ರಕ್ತವನ್ನು ಪೂರೈಸುತ್ತದೆ. ಆಕ್ಟೋಪಸ್‌ನ ರಕ್ತವು ಕಬ್ಬಿಣದ ಬದಲಿಗೆ ತಾಮ್ರ ಆಧಾರಿತ ಪ್ರೊಟೀನ್ ಅನ್ನು ಹೊಂದಿರುವುದರಿಂದ ಆಮ್ಲಜನಕವನ್ನು ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆ ಇರುತ್ತದೆ, ಹೀಗಾಗಿ ಇದರ ದೇಹಕ್ಕೆ ಹೆಚ್ಚಿನ ಒತ್ತಡದಿಂದ ರಕ್ತ ಪರಿಚಲನೆ ಮಾಡಲು ಮೂರು ಹೃದಯಗಳ ಅವಶ್ಯಕತೆಯಿರುತ್ತದೆ.

Also Read
ಮನುಷ್ಯರೇ ಇಲ್ಲದಿದ್ದರೆ ಭೂಮಿ ಹೇಗಿರುತ್ತೆ? ಕೆಲವೇ ವರ್ಷಗಳಲ್ಲಿ ನಗರಗಳು ಕಾಡಾಗುವ ರೋಚಕ Timeline | Earth without humans
Octopus

ಆಕ್ಟೋಪಸ್‌ ಆಹಾರ ಹೇಗಿದೆ?

ಆಕ್ಟೋಪಸ್‌ ಸಾಮಾನ್ಯವಾಗಿ ಮಾಂಸಾಹಾರಿ ಜೀವಿ. ಸಣ್ಣ ಮೀನುಗಳು, ಏಡಿಗಳು, ಸೀಗಡಿಗಳು, ನಳ್ಳಿ ಹಾಗೂ ಇತರ ಸಮುದ್ರ ಜೀವಿಗಳು ಇದರ ಆಹಾರವಾಗಬಹುದು. ತನ್ನ ಎಂಟು ತೋಳುಗಳಲ್ಲಿರುವ ಸಕ್ಕರ್‌ಗಳ ಸಹಾಯದಿಂದ ಬೇಟೆಯನ್ನು ಹಿಡಿದುಕೊಳ್ಳುತ್ತದೆ. ನಂತರ ತನ್ನ ಬಲವಾದ ಕೊಕ್ಕಿನಂಥ ಬಾಯಿಯ ಭಾಗದಿಂದ ಆಹಾರವನ್ನು ತುಂಡು ಮಾಡುತ್ತದೆ. ಕೆಲವು ಆಕ್ಟೋಪಸ್‌ಗಳು ಬೇಟೆಯನ್ನು ಹುಡುಕುವಾಗ ಸಮುದ್ರದ ತಳದಲ್ಲಿ ನಿಧಾನವಾಗಿ ಚಲಿಸುತ್ತವೆ. ತಮ್ಮ ಸುತ್ತಲಿನ ಪರಿಸರವನ್ನು ಗಮನಿಸಿ, ಸೂಕ್ತ ಸಮಯದಲ್ಲಿ ಬೇಟೆಯ ಮೇಲೆ ದಾಳಿ ಮಾಡುತ್ತವೆ.

ಬಣ್ಣ ಬದಲಿಸುವುದೇ ಪ್ರಮುಖ ರಕ್ಷಣೆ

ಆಕ್ಟೋಪಸ್‌ನ ಅತ್ಯಂತ ಪ್ರಸಿದ್ಧ ಗುಣವೆಂದರೆ ತನ್ನ ದೇಹದ ಬಣ್ಣ ಮತ್ತು ವಿನ್ಯಾಸವನ್ನು ಬದಲಿಸಿಕೊಳ್ಳುವುದು. ಚರ್ಮದಲ್ಲಿರುವ ವಿಶೇಷ ವರ್ಣ ಕೋಶಗಳ ಸಹಾಯದಿಂದ ಸುತ್ತಲಿನ ಪರಿಸರಕ್ಕೆ ಹೊಂದಿಕೊಳ್ಳುವಂತೆ ಕಾಣಿಸಿಕೊಳ್ಳಬಹುದು. ಇದು ಕೇವಲ ಅಡಗಿಕೊಳ್ಳಲು ಮಾತ್ರವಲ್ಲ. ಕೆಲವು ಸಂದರ್ಭಗಳಲ್ಲಿ ಶತ್ರುವಿಗೆ ಎಚ್ಚರಿಕೆ ನೀಡಲು ಅಥವಾ ಇತರ ಆಕ್ಟೋಪಸ್‌ಗಳೊಂದಿಗೆ ಸಂವಹನ ನಡೆಸಲು ಬಣ್ಣ ಮತ್ತು ದೇಹದ ವಿನ್ಯಾಸದಲ್ಲಿ ಬದಲಾವಣೆ ಮಾಡಬಹುದು.

ಆಕ್ಟೋಪಸ್‌ ಪುನರ್ ಬೆಳವಣಿಗೆ

ಆಕ್ಟೋಪಸ್‌ನಲ್ಲಿ ಒಂದು ವಿಚಿತ್ರ ಸಾಮರ್ಥ್ಯವಿದೆ. ಇದು ಬೇರೆ ಪ್ರಾಣಿಗಳಿಂದ ಹಾನಿಗೊಳಗಾಗಿ ತನ್ನ ದೇಹದ ಯಾವುದೇ ಭಾಗವನ್ನು (ಕೈಗಳನ್ನು) ಕಳೆದುಕೊಂಡರೆ, ಅದೇ ಜಾಗದಲ್ಲಿ ಹೊಸ ಅಂಗವನ್ನು ಮರುಬೆಳೆಸಿಕೊಳ್ಳುತ್ತದೆ. ಈ ಪ್ರಕ್ರಿಯೆಯನ್ನು ಅಂಗ ಪುನರುತ್ಪಾದನೆ ಎಂದು ಕರೆಯಲಾಗುತ್ತದೆ. ಹಾನಿಗೊಳಗಾದ ಭಾಗಗಳು ನಂತರ ಸ್ನಾಯು, ನರ, ರಕ್ತನಾಳ ಮತ್ತು ಇತರ ಅಂಗಾಂಶಗಳಾಗಿ ರೂಪುಗೊಂಡು ಹೊಸ ಅಂಗವು ಪುನರಾವರ್ತನೆಗೊಳ್ಳುತ್ತದೆ. ತನ್ನ ದೇಹವನ್ನು ಸ್ವತಃ ಸರಿಪಡಿಸಿಕೊಂಡು ಕಳೆದುಹೋದ ಅಂಗವನ್ನು ಮರಳಿ ಪಡೆದುಕೊಳ್ಳುವ ಪ್ರಕೃತಿಯ ಈ ಅದ್ಭುತ ಸಾಮರ್ಥ್ಯ ನಿಜಕ್ಕೂ ವಿಜ್ಞಾನಿಗಳಿಗೆ ವಿಶೇಷ ಆಸಕ್ತಿಯನ್ನುಂಟು ಮಾಡಿದೆ!

Also Read
ಸಾವಿನ ಬೆನ್ನಲ್ಲೇ ಮಾನವನ ದೇಹದಲ್ಲಿ ಏನೆಲ್ಲ ನಡೆಯುತ್ತೆ? ಮೊದಲ ನಿಮಿಷದಿಂದಲೇ ಅಚ್ಚರಿಯ ಬದಲಾವಣೆಗಳು ಶುರು..! Death Timeline
Octopus

ಎಲುಬುಗಳಿಲ್ಲದ ದೇಹದ ರಚನೆ

ಆಕ್ಟೋಪಸ್‌ ಮೂರು ಹೃದಯಗಳನ್ನು ಹೊಂದಿದ್ದರು ಸಹ ಇದಕ್ಕೆ ಯಾವುದೇ ಗಟ್ಟಿಯಾದ ಅಸ್ಥಿಪಂಜರವಿಲ್ಲ. ಆದ್ದರಿಂದ ಅದರ ದೇಹ ಅತ್ಯಂತ ಹೊಂದಿಕೊಳ್ಳುವಂತಿದೆ. ತಲೆಯ ಭಾಗದ ಗಾತ್ರಕ್ಕೆ ತಕ್ಕಷ್ಟು ಸಣ್ಣ ಜಾಗವಿದ್ದರೆ, ದೇಹವನ್ನು ಕುಗ್ಗಿಸಿಕೊಂಡು ಆ ಜಾಗದ ಮೂಲಕ ಸಾಗಲು ಸಾಧ್ಯವಾಗುತ್ತದೆ. ಈ ಗುಣವು ಬೇಟೆಯಿಂದ ತಪ್ಪಿಸಿಕೊಳ್ಳಲು ಮತ್ತು ಕಲ್ಲುಗಳ ನಡುವಿನ ಸಣ್ಣ ಬಿರುಕುಗಳಲ್ಲಿ ಅಡಗಿಕೊಳ್ಳಲು ಸಹಾಯ ಮಾಡುವಂತ್ತಿದೆ.

ಅತ್ಯಂತ ಕುತೂಹಲಕಾರಿ ಜೀವಿ

ಆಕ್ಟೋಪಸ್‌ನ ಪ್ರತಿಯೊಂದು ವಿಶೇಷತೆಯೂ ಅದರ ಸಮುದ್ರ ಜೀವನಕ್ಕೆ ಹೊಂದಿಕೊಂಡಿದೆ. ಮೂರು ಹೃದಯಗಳು ಆಮ್ಲಜನಕ ಸಾಗಿಸಲು, ಎಂಟು ತೋಳುಗಳು ಬೇಟೆ ಹಿಡಿಯಲು, ಮೃದು ದೇಹ ಸಣ್ಣ ಜಾಗಗಳಲ್ಲಿ ಅಡಗಿಕೊಳ್ಳಲು ಮತ್ತು ಬಣ್ಣ ಬದಲಿಸುವ ಸಾಮರ್ಥ್ಯ ಶತ್ರುಗಳಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದೇ ಕಾರಣಕ್ಕೆ ಆಕ್ಟೋಪಸ್‌ ಸಮುದ್ರದ ಅತ್ಯಂತ ಕುತೂಹಲಕಾರಿ ಜೀವಿಗಳಲ್ಲಿ ಒಂದಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net