

ನ್ಯೂಯಾರ್ಕ್: ಅಮೆರಿಕ ಮತ್ತು ಇರಾನ್ ಯುದ್ಧದ ನಡುವೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿರುವ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಅಮೆರಿಕದ ಭಯೋತ್ಪಾದನೆಯ ಬಲಿಪಶುಗಳು ನಾವು, ಇರಾನ್ ಎಂದಿಗೂ ತಲೆಬಾಗುವುದಿಲ್ಲ ಎಂದು ಹೇಳಿದ್ದಾರೆ.
ಯುಎನ್ ಸಾಮಾನ್ಯ ಸಭೆಯಲ್ಲಿ ಮಾತನಾಡುವ ವೇಳೆ ಪೆಜಿಶ್ಕಿಯಾನ್, ಯುದ್ಧದ ಮೊದಲ ದಿನವಾದ ಅಮೆರಿಕ ಹತ್ಯೆ ಮಾಡಿದ ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಇತರೆ ದಾಳಿಯಲ್ಲಿ ಸಾವನ್ನಪ್ಪಿದ 150 ಶಾಲಾ ಮಕ್ಕಳ ಫೋಟೋಗಳನ್ನು ಎತ್ತಿ ಹಿಡಿದು ಪ್ರದರ್ಶಿಸಿದರು.
ನಾವು ನಮ್ಮನ್ನು ಮಾತ್ರ ರಕ್ಷಿಸಿಕೊಂಡಿದ್ದೇವೆ. ನಾವು ಭಯೋತ್ಪಾದಕರಲ್ಲ ಎಂದ ಅವರು, ನಮ್ಮ ಮುಗ್ಧ ಜನರು ನಮ್ಮ ದೇಶದ ಮೇಲೆ ಹೇರಲಾದ ಹೇಡಿತನದ ದಾಳಿಗಳು ಮತ್ತು ಆಕ್ರಮಣಗಳಿಗೆ ಗುರಿಯಾಗಿದ್ದಾರೆ. ಇಸ್ರೇಲ್-ಅಮೆರಿಕ ನಮ್ಮ ಮೇಲೆ ದಾಳಿ ನಡೆಸಿವೆ. ಆದರೆ ನಾವು ನಮ್ಮನ್ನು ಅತ್ಯಂತ ಬಲವಾಗಿ ರಕ್ಷಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಅಮೆರಿಕವು ತನ್ನ ನಿರ್ಬಂಧಗಳು, ಒತ್ತಡ ಮತ್ತು ದಬ್ಬಾಳಿಕೆಯನ್ನು ಹೆಚ್ಚಿಸುತ್ತಿದ್ದಂತೆ ಇರಾನ್‌ನ ಪ್ರತಿರೋಧವೂ ಹೆಚ್ಚಲಿದೆ ಎಂಬುದನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅರಿಯಬೇಕು. ನಾವು ಎಂದಿಗೂ ತಲೆಬಾಗುವುದಿಲ್ಲ ಅಥವಾ ಮಂಡಿಯೂರುವುದಿಲ್ಲ ಎಂದು ಸವಾಲು ಹಾಕಿದ್ದಾರೆ.
ಇದೇ ಸಾಮಾನ್ಯ ಮಂಡಳಿ ಸಭೆಯಲ್ಲಿ ಮಂಗಳವಾರ(ಸೆ. 22) ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ಸುಮಾರು ಏಳು ತಿಂಗಳುಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಶೀಘ್ರವೇ ಒಪ್ಪಂದವೊಂದನ್ನು ಮಾಡಿಕೊಳ್ಳದಿದ್ದರೆ, ಇಡೀ ಇಸ್ಲಾಮಿಕ್ ಗಣರಾಜ್ಯವನ್ನೇ ನಾಶ ಮಾಡಬಹುದು ಎಂದು ಎಚ್ಚರಿಕೆ ನೀಡಿದ್ದರು (ಏಜೆನ್ಸೀಸ್).