ಅಮೆರಿಕ ಇನ್ನೊಂದು ಮಿಸ್ಟೇಕ್​ ಮಾಡಿದ್ರು... ಅಧ್ಯಕ್ಷ ಟ್ರಂಪ್​ಗೆ ಇರಾನ್ ಅಧಿಕಾರಿ ಗಾಲಿಬಾಫ್ ಖಡಕ್ ಎಚ್ಚರಿಕೆ | Iran US War

 Iran US War
ಅಮೆರಿಕ ಇನ್ನೊಂದು ಮಿಸ್ಟೇಕ್​ ಮಾಡಿದ್ರು... ಅಧ್ಯಕ್ಷ ಟ್ರಂಪ್​ಗೆ ಇರಾನ್ ಅಧಿಕಾರಿ ಗಾಲಿಬಾಫ್ ಖಡಕ್ ಎಚ್ಚರಿಕೆ | Iran US War
Published on: 

ಟೆಹ್ರಾನ್​: ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಆತಂಕ ಎದುರಾಗಿದೆ. ಇರಾನ್ ವಿರುದ್ಧ ಮತ್ತೊಮ್ಮೆ ದಾಳಿ ನಡೆಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಲಿಗೆ ಹರಿಬಿಟ್ಟ ಬೆನ್ನಲ್ಲೇ ಇದೀಗ ಇರಾನ್ ಸಂಸತ್ತಿನ ಸ್ಪೀಕರ್ ಹಾಗೂ ಪ್ರಮುಖ ಸಂಧಾನಕಾರ ಮೊಹಮ್ಮದ್ ಬಾಘರ್ ಗಾಲಿಬಾಫ್ ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

ಭಾನುವಾರ ಸಂಸತ್ತಿನ ಮುಕ್ತ ಅಧಿವೇಶನದಲ್ಲಿ ಮಾತನಾಡಿದ ಇರಾನ್ ಸಂಸತ್ತಿನ ಸ್ಪೀಕರ್ ಆಗಿರುವ ಗಾಲಿಬಾಫ್, ಇರಾನ್ ಇನ್ನು ಮುಂದೆ 'ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ' ಎಂಬ ಅನಿಶ್ಚಿತ ಸ್ಥಿತಿಯಲ್ಲಿ ಮುಂದುವರಿಯುವುದಿಲ್ಲ. ಅಮೆರಿಕ ಮಾತುಕತೆಯ ಹಾದಿ ಆಯ್ಕೆ ಮಾಡಿದರೂ ಅಥವಾ ಯುದ್ಧಕ್ಕೆ ಮುಂದಾದರೂ ಇರಾನ್ ಎಲ್ಲದಕ್ಕೂ ಸಿದ್ಧವಿದೆ ಎಂದಿದ್ದಾರೆ.

ಇರಾನ್ ಮುಂದಿಟ್ಟಿರುವ ಏಳು ಷರತ್ತುಗಳನ್ನು ಯುಎಸ್​ ಒಪ್ಪಿಕೊಂಡರೆ ಮಾತ್ರ ಒಪ್ಪಂದಕ್ಕೆ ಅವಕಾಶವಿದೆ. ಅಮೆರಿಕ ಮತ್ತೊಮ್ಮೆ ತಪ್ಪು ಮಾಡಿದ್ದೇ ಆದರೆ, ಇರಾನ್‌ನ ಶಕ್ತಿಶಾಲಿ ಸಶಸ್ತ್ರ ಪಡೆಗಳು ಯುದ್ಧಭೂಮಿಯ ಭೌಗೋಳಿಕತೆಯನ್ನು ನಿರ್ಧರಿಸಲಿವೆ" ಎಂದು ಎಚ್ಚರಿಸಿದ್ದಾರೆ.

ಫೆ.28ರಂದು ಆರಂಭಗೊಂಡ ಯುದ್ಧ

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದಕ್ಕೆ ಮಧ್ಯಪ್ರಾಚ್ಯದಲ್ಲಿ ಯುದ್ಧ ಭುಗಿಲೆದ್ದಿತು. ಈ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಸೇರಿದಂತೆ ಹಲವು ಹಿರಿಯ ಸೇನಾಧಿಕಾರಿಗಳು ಮೃತಪಟ್ಟರು. ಇದಕ್ಕೆ ಪ್ರತಿಯಾಗಿ ಇರಾನ್ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಛಿದ್ರಗೊಳಿಸಿತು. ಅಲ್ಲದೆ, ಜಾಗತಿಕ ತೈಲ ಸಾಗಣೆಗೆ ಅತ್ಯಂತ ಪ್ರಮುಖವಾಗಿರುವ ಹೊರ್ಮುಜ್ ಜಲಸಂಧಿಯನ್ನೂ ಮುಚ್ಚಿತ್ತು. ಇದರಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಆತಂಕ ಉಂಟಾಗಿತ್ತು.

Also Read
ಇಡೀ ಕ್ರೆಡಿಟ್​ ಅವರಿಗೆ... ಕಿವೀಸ್​ ಎದುರು ಏಕದಿನ ಸರಣಿ ಗೆದ್ದ ಬೆನ್ನಲ್ಲೇ ಶ್ರೇಯಸ್​ ಅಯ್ಯರ್​ ಮಾತು | Shreyas Iyer
 Iran US War

ಜೂನ್ 17ರಂದು ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ 14 ಅಂಶಗಳ ಒಪ್ಪಂದಕ್ಕೆ ಸಹಿ ಹಾಕಿದ್ದರು. ತಕ್ಷಣವೇ ಸೇನಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವುದು, ಲೆಬನಾನ್‌ನಲ್ಲಿನ ಸಂಘರ್ಷವನ್ನೂ ನಿಲ್ಲಿಸುವುದು ಹಾಗೂ 60 ದಿನಗಳೊಳಗೆ ಅಂತಿಮ ಒಪ್ಪಂದಕ್ಕೆ ಪ್ರಯತ್ನಿಸುವುದು ಈ ಒಪ್ಪಂದದ ಪ್ರಮುಖ ಅಂಶಗಳಾಗಿದ್ದವು. ಆದರೆ, ಜುಲೈ 8ರಂದು ಟ್ರಂಪ್ ಈ ಒಪ್ಪಂದ ಮುಗಿದಿದೆ ಎಂದು ಘೋಷಿಸಿದ್ದು ಆಶ್ಚರ್ಯಕರ.

ಇದಾದ ಒಂದು ವಾರದ ಬಳಿಕ ಅಮೆರಿಕ ತನ್ನ ಬದ್ಧತೆಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಇರಾನ್ ಕೂಡ ತಿಳಿವಳಿಕೆ ಒಪ್ಪಂದವನ್ನು ಸ್ಥಗಿತಗೊಳಿಸಿತ್ತು. ಅಂದಿನಿಂದ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಮತ್ತೆ ಹದಗೆಟ್ಟು, ದಾಳಿಗೆ ಪ್ರತಿದಾಳಿ ಎಂದಿನಂತೆ ಮುಂದುವರೆಯಿತು. ಇದರಿಂದ ಎರಡೂ ದೇಶಗಳ ನಡುವಿನ ಯುದ್ಧ ಕಾರ್ಮೋಡ ಇನ್ನಷ್ಟು ಜೋರಾಯಿತು. ಅಂದಿನಿಂದ ಇಂದಿನವರೆಗೆ ಯುದ್ಧವನ್ನು ನಿಲ್ಲಿಸಲು ಮನಸ್ಸು ಮಾಡದ ಇರಾನ್ ಮತ್ತು ಅಮೆರಿಕಕ್ಕೆ ಇತರೆ ರಾಷ್ಟ್ರಗಳು, ಇಲ್ಲಿಗೆ ಇದನ್ನೆಲ್ಲ ನಿಲ್ಲಿಸುವಂತೆ ಮನವಿ ಮಾಡುತ್ತಿವೆ. ಆದರೆ, ಆಲಿಸುವ ಮನಸ್ಥಿತಿ ಅಥವಾ ತಾಳ್ಮೆ ಇರಾನ್​ ಮತ್ತು ಯುಎಸ್​ಗೆ ಇಲ್ಲದಿರುವುದು ದುರಂತವೇ ಸರಿ,(ಏಜೆನ್ಸೀಸ್).