ನಿಮ್ಮನಂತು ಬಿಡೋದಿಲ್ಲ... ಅಮೆರಿಕ​ ನೌಕಾಪಡೆಯ ಇಬ್ಬರು ಅಧಿಕಾರಿಗಳ ಫೋಟೋ ಹರಿಬಿಟ್ಟು ಇರಾನ್​ ಎಚ್ಚರಿಕೆ! Iran Warning

Iran Warning
ನಿಮ್ಮನಂತು ಬಿಡೋದಿಲ್ಲ... ಯುಎಸ್​ ನೌಕಾಪಡೆಯ ಇಬ್ಬರು ಅಧಿಕಾರಿಗಳಿಗೆ ಫೋಟೋ ಹರಿಬಿಟ್ಟು ಇರಾನ್​ ಎಚ್ಚರಿಕೆ! Iran Warning
Published on: 

ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಇನ್ನಷ್ಟು ಜೋರಾಗಲಿದೆ ಎಂಬುದಕ್ಕೆ ಇರಾನ್​ ಹರಿಬಿಟ್ಟಿರುವ ಅಮೆರಿಕದ ಇಬ್ಬರು ನೌಕಾಪಡೆಯ ಅಧಿಕಾರಿಗಳ ಫೋಟೋಗಳೇ ಜ್ವಲಂತ ಸಾಕ್ಷಿ.

ತಮ್ಮ ಮೇಲಿನ ದಾಳಿಯಲ್ಲಿ ಯುಎಸ್​ ನೌಕಾಪಡೆಯ ಈ ಇಬ್ಬರು ಹಿರಿಯ ಅಧಿಕಾರಿಗಳು ಮುಂದಾಳತ್ವ ವಹಿಸಿರುವ ಬಗ್ಗೆ ಖಚಿತಪಡಿಸಿಕೊಂಡಿರುವ ಇರಾನ್​, ಇವರಿಬ್ಬರ ಮುಖವಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಬಹಿರಂಗವಾಗಿ ಬೆದರಿಕೆ ಹಾಕಿದೆ. ಈ ಬೆಳವಣಿಗೆಯಿಂದ ಇದೀಗ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಗಿದೆ.

ಇರಾನ್ ಮೇಲಿನ ಅಮೆರಿಕದ ಸೇನಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಯುದ್ಧನೌಕೆ 'ಯುಎಸ್‌ಎಸ್ ಸ್ಪ್ರೂಯನ್ಸ್'ನ ಕಮಾಂಡರ್ ಲೀ ಆರ್. ಟೇಟ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಲೆಫ್ಟಿನೆಂಟ್ ಕಮಾಂಡರ್ ಜೆಫ್ರಿ ಇ. ಯಾರ್ಕ್ ಅವರನ್ನು ಗುರಿಯಾಗಿಸಿ, ನಿಮ್ಮನ್ನು ಹುಡುಕಿ ಬರುತ್ತೇವೆ ಎಂದು ಇರಾನ್​ ಬಹಿರಂಗವಾಗಿ ಬೆದರಿಕೆಯೊಡ್ಡಿದೆ.

ಶಾಲಾ ಮಕ್ಕಳ ಪ್ರಾಣ ಕಸಿದ ದಾಳಿ!

ದಕ್ಷಿಣ ಆಫ್ರಿಕಾದಲ್ಲಿರುವ ಇರಾನ್ ರಾಯಭಾರ ಕಚೇರಿ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಇಬ್ಬರು ಅಧಿಕಾರಿಗಳ ಫೋಟೋಗಳನ್ನು ಹಂಚಿಕೊಂಡಿದ್ದು, "ಈ ಇಬ್ಬರು ಅಪರಾಧಿಗಳನ್ನು ನೆನಪಿಟ್ಟುಕೊಳ್ಳಿ. ಮಿನಾಬ್‌ನ ಶಾಲೆಯಲ್ಲಿ 168 ಅಮಾಯಕ ಮಕ್ಕಳ ಸಾವಿಗೆ ಇವರು ಕಾರಣರಾಗಿದ್ದಾರೆ. ನಿಮ್ಮನ್ನು ನಾವು ಖಂಡಿತವಾಗಿ ಹುಡುಕಿ ಬರುತ್ತೇವೆ" ಎಂಬ ಬೆದರಿಕೆಯ ಸಂದೇಶವನ್ನು ಪ್ರಕಟಿಸಿ ಎಚ್ಚರಿಸಿದೆ.

Also Read
ಸಾವಿಗೂ ಮುನ್ನ ತಾನೇ ಮುಂದೆ ನಿಂತು ತನ್ನ ತಿಥಿ ಕಾರ್ಯ ನಡೆಸಿದ ವೃದ್ಧ: ಈ ಅಜ್ಜ ಕೊಟ್ಟ ಕಾರಣ ಕೇಳಿದ್ರೆ ಮನಕಲಕುತ್ತೆ..! Terahvin
Iran Warning

ಏನದು ಘಟನೆ?

ಫೆಬ್ರವರಿ 28ರಂದು ಇರಾನ್‌ನ ಮಿನಾಬ್‌ನಲ್ಲಿರುವ ಪ್ರಾಥಮಿಕ ಶಾಲೆಯ ಮೇಲೆ ಅಮೆರಿಕದ ಸೇನೆ ಟೊಮಾಹಾಕ್, ಭೀಕರ ಕ್ಷಿಪಣಿ ದಾಳಿ ನಡೆಸಿ, 168 ವಿದ್ಯಾರ್ಥಿಗಳ ಜೀವವನ್ನು ಕಸಿಯಿತು. ಈ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರು ಅಧಿಕಾರಿಗಳು ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆಯಲ್ಲಿ 357 ದಿನಗಳ ಸಕ್ರಿಯ ಸೇವೆ ಪೂರ್ಣಗೊಳಿಸಿ ಶುಕ್ರವಾರ ಕ್ಯಾಲಿಫೋರ್ನಿಯಾಗೆ ಮರಳಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ಇರಾನ್, ಈಗ ಅವರನ್ನು ಬಿಡುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.

ಅಮೆರಿಕ ಅಧಿಕಾರಿಗಳಿಗೆ ಟ್ರಂಪ್ ಎಚ್ಚರಿಕೆ

ಇನ್ನೊಂದೆಡೆ, ಅಮೆರಿಕದ ಅಧಿಕಾರಿಗಳನ್ನು ಹತ್ಯೆಗೈಯಲು ಇರಾನ್ ಪ್ರಯತ್ನಿಸಿದ್ದೇ ಆದರೆ, ಅದಕ್ಕೆ ಭಾರಿ ಬೆಲೆಯನ್ನೇ ತೆರಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಇರಾನ್‌ನಿಂದ ಬೆದರಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಸೇರಿ ಹಲವು ಹಿರಿಯ ಅಧಿಕಾರಿಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸೇನಾ ನೆಲೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಂತಾರಾಷ್ಟ್ರೀಯ ವರದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).