

ಟೆಹ್ರಾನ್: ಹೆಚ್ಚು ಕಡಿಮೆ ಕಳೆದ ಏಳೆಂಟು ತಿಂಗಳುಗಳಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್ ಮತ್ತು ಅಮೆರಿಕದ ನಡುವಿನ ಸಂಘರ್ಷ ಸಮಾಪ್ತಿ ಕಾಣುವ ಬೆಳವಣಿಗೆಯೊಂದು ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಅಮೆರಿಕ ತನ್ನ ಮಿಲಿಟರಿ ಒತ್ತಡವನ್ನು ಸಡಿಲಗೊಳಿಸಿ, ಬಂದರುಗಳ ಮೇಲಿನ ದಿಗ್ಬಂಧನವನ್ನು ಸಂಪೂರ್ಣವಾಗಿ ತೆಗೆದುಹಾಕಿದರೆ, ಕೇವಲ ಏಳು ದಿನಗಳಲ್ಲಿ ಪ್ರಮುಖ ವ್ಯಾಪಾರ ಮಾರ್ಗವಾದ ಹೊರ್ಮುಜ್ ಜಲಸಂಧಿ (Strait Of Hormuz) ಯನ್ನು ಮತ್ತೆ ತೆರೆಯುವುದಾಗಿ ಇರಾನ್ ಸ್ಪಷ್ಟಪಡಿಸಿದೆ.
ಹೆಸರು ಬಹಿರಂಗಪಡಿಸಲು ಇಚ್ಛಿಸದ ಇರಾನ್ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಈ ಹೇಳಿಕೆ ನೀಡಿದ್ದಾರೆಂದು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ. ಸುಮಾರು ಏಳು ತಿಂಗಳ ಯುದ್ಧದ ಭೀಕರತೆ ಮತ್ತು ಟ್ರಂಪ್ ಆಡಳಿತದ ಬಿಗಿಯಾದ ಆರ್ಥಿಕ ದಿಗ್ಬಂಧನಗಳ ಮಧ್ಯೆ ಇರಾನ್‌ನಿಂದ ಬಂದಿರುವ ಈ ಪ್ರಸ್ತಾವನೆ ಅತ್ಯಂತ ಕುತೂಹಲ ಮೂಡಿಸಿದೆ.
ಈ ಹೊರ್ಮುಜ್ ಜಲಸಂಧಿ ಜಾಗತಿಕ ತೈಲ ಮಾರುಕಟ್ಟೆಯ ಪ್ರಮುಖ ಜೀವನಾಡಿಯಾಗಿದ್ದು, ವಿಶ್ವದ ಒಟ್ಟು ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಯ ಶೇಕಡಾ 20 ರಷ್ಟು ಭಾಗ ಇದೇ ಜಲಮಾರ್ಗದ ಮೂಲಕವೇ ಸಾಗುತ್ತದೆ. ಹೀಗಾಗಿ ಈ ಮಾರ್ಗದಲ್ಲಿ ಸ್ಪಲ್ಪ ವ್ಯತ್ಯಯವಾದರೂ ಇಡೀ ವಿಶ್ವದ ಮಾರುಕಟ್ಟೆಗಳು ಅಸ್ತವ್ಯಸ್ತಗೊಳ್ಳುತ್ತವೆ. ಕಳೆದ ಕೆಲವು ತಿಂಗಳುಗಳಿಂದ ಉಂಟಾಗಿರುವ ಉದ್ವಿಗ್ನತೆಯಿಂದಾಗಿ ತೈಲ ಬೆಲೆ ಗಗನಕ್ಕೇರಿತ್ತು. ಆದರೆ, ಇರಾನ್ ಜಲಸಂಧಿ ತೆರೆಯುವ ಸುಳಿವು ನೀಡುತ್ತಿದ್ದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ದಿಢೀರ್ ಕುಸಿದಿವೆ.
ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇಕಡಾ 2.6 ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 97.73 ಡಾಲರ್‌ಗೆ ತಲುಪಿದ್ದರೆ, ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಬೆಲೆಯು ಶೇಕಡಾ 3.1 ರಷ್ಟು ಕುಸಿದು 92.40 ಡಾಲರ್‌ಗೆ ವಹಿವಾಟು ನಡೆಸಿದೆ. ಈ ಬೆಳವಣಿಗೆ ಆರ್ಥಿಕ ತಜ್ಞರಿಗೆ ಜೊತೆಗೆ ಜನಸಾಮಾನ್ಯರಿಗೂ ಮುಂದಿನ ದಿನಗಳಲ್ಲಿ ಶುಭ ಸುದ್ದಿದೊರೆಯಲಿದೆ ಎಂಬ ಸೂಚನೆ ನೀಡಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡುವುದಕ್ಕೂ ಕೆಲವೇ ಗಂಟೆಗಳ ಮುಂಚಿತವಾಗಿ ಈ ವರದಿಗಳು ಹೊರಬಿದ್ದಿವೆ. ಇರಾನ್ ವಿರುದ್ಧ ಯುದ್ಧ ಸಾರುವ ವಿಚಾರದಲ್ಲಿ ಅಮೆರಿಕದ ಒಳಗೇ ಟ್ರಂಪ್ ಆಡಳಿತಕ್ಕೆ ತೀವ್ರ ಒತ್ತಡವಿದೆ. ಈ ಮಧ್ಯೆ ಇರಾನ್ ಮುಂದಿಟ್ಟಿರುವ ಈ ಶಾಂತಿ ಸೂತ್ರ ಅಥವಾ ಷರತ್ತು ಜಾಗತಿಕ ರಾಜಕಾರಣದಲ್ಲಿ ಯಾವ ಹೊಸ ತಿರುವು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನೊಂದೆಡೆ, ಯೆಮೆನ್ ಮತ್ತು ಸೌದಿ ಅರೇಬಿಯಾ ಮೇಲೆ ಹೌತಿ ಬಂಡುಕೋರರು ನಡೆಸುತ್ತಿರುವ ಸರಣಿ ದಾಳಿಗಳು ತೀವ್ರ ಕಳವಳಕ್ಕೆ ಕಾರಣವಾಗಿವೆ. ನಾಗರಿಕ ಹಡಗುಗಳ ಮೇಲಿನ ದಾಳಿಯನ್ನು ಜಿ 7 (G7) ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ. ಇರಾನ್ ಈ ಬಂಡುಕೋರರಿಗೆ ನೀಡುತ್ತಿರುವ ಬೆಂಬಲವನ್ನು ತಕ್ಷಣವೇ ನಿಲ್ಲಿಸಬೇಕೆಂದು ಸ್ಪಷ್ಟ ಎಚ್ಚರಿಕೆ ನೀಡಿವೆ.
ಹೌತಿಗಳು ಸೌದಿ ಅರೇಬಿಯಾದ ಸೂಕ್ಷ್ಮ ಪ್ರದೇಶಗಳ ಮೇಲೆ ದಾಳಿ ನಡೆಸಿರುವುದು ಮತ್ತು ಕೆಂಪು ಸಮುದ್ರದ ಪೆರಿಮ್ ದ್ವೀಪವನ್ನು ವಶಪಡಿಸಿಕೊಂಡು ಬಾಬ್ ಎಲ್-ಮಂಡೇಬ್ ಜಲಸಂಧಿಯ ಮೇಲೆ ತಮ್ಮ ಹಿಡಿತ ಬಿಗಿಗೊಳಿಸುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಮನಗಂಡು, ಬ್ರಿಟನ್ ತನ್ನ ರಾಯಲ್ ಏರ್ ಫೋರ್ಸ್ ಮೂಲಕ ಸೌದಿ ಅರೇಬಿಯಾಕ್ಕೆ ಬೆಂಬಲ ನೀಡಲು ಮುಂದಾಗಿದೆ ಎಂದು ವರದಿಯಾಗಿದೆ, (ಏಜೆನ್ಸೀಸ್).