ಚಕ್ರಗಳ ಮೇಲಿನ ಏಳು ಸುತ್ತಿನ ಕೋಟೆ: ರಷ್ಯಾ ಅಧ್ಯಕ್ಷರ ಔರಸ್ ಸೆನೆಟ್ ಕಾರಿನ ವಿಶೇಷತೆ ತಿಳಿದ್ರೆ ನಿಮ್ಮ ಹುಬ್ಬೇರುತ್ತೆ! Vladimir Putin

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಅವರ ಔರಸ್ ಸೆನೆಟ್ ಕಾರಿನ ವಿಶೇಷತೆ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಅವರ ಔರಸ್ ಸೆನೆಟ್ ಕಾರಿನ ವಿಶೇಷತೆ
Published on

ಪ್ರಮುಖ ಮುಖ್ಯಾಂಶಗಳು

  • ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಎರಡು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮನ
  • ವಿಶ್ವದ ಪ್ರಬಲ ನಾಯಕನ ಆಗಮನ ಹಿನ್ನೆಲೆಯಲ್ಲಿ ಭಾರೀ ಭದ್ರತೆ ಏರ್ಪಾಡು
  • ಕಳೆದ ನಾಲ್ಕು ವರ್ಷಗಳಲ್ಲಿ ಇದು ಪುಟಿನ್​ ಅವರ ಭಾರತದ ಮೊದಲ ಭೇಟಿ
  • ತಮ್ಮ ಭದ್ರತೆಗಾಗಿ ರಷ್ಯಾ ಅಧ್ಯಕ್ಷರು ಬಳಸುವ ಔರಸ್ ಸೆನೆಟ್ ಕಾರಿನಲ್ಲಿದೆ ಹಲವು ವಿಶೇಷ
ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ( Vladimir Putin )​ ಅವರು ಎರಡು ದಿನಗಳ ಪ್ರವಾಸಕ್ಕಾಗಿ ಇಂದು ಭಾರತಕ್ಕೆ ಆಗಮಿಸಲಿದ್ದಾರೆ. ವಿಶ್ವದ ಪ್ರಬಲ ನಾಯಕನ ಆಗಮನ ಹಿನ್ನೆಲೆಯಲ್ಲಿ ಭಾರೀ ಭದ್ರತೆಯನ್ನು ಏರ್ಪಡಿಸಲಾಗಿದೆ. ಇದರ ಜೊತೆಗೆ ಪುಟಿನ್​ ಕೂಡ ತಮ್ಮ ಬೆಂಗಾವಲು ಪಡೆಯೊಂದಿಗೆ ಭಾರತಕ್ಕೆ ಆಗಮಿಸಲಿದ್ದಾರೆ. ಅವರ ಬೆಂಗಾವಲು ಪಡೆಯಲ್ಲಿ ತಾವು ಬಳಸುವ ವಿಶ್ವದ ಅತ್ಯಂತ ರಹಸ್ಯಾತ್ಮಕ ಮತ್ತು ಹೆಚ್ಚು ಸಂರಕ್ಷಿತ ವಾಹನವು ಸೇರಿದೆ. ಅದುವೇ ಔರಸ್ ಸೆನೆಟ್.
ಅಂದಹಾಗೆ, ಕಳೆದ ನಾಲ್ಕು ವರ್ಷಗಳಲ್ಲಿ ಇದು ಪುಟಿನ್​ ಅವರ ಭಾರತದ ಮೊದಲ ಭೇಟಿಯಾಗಿದೆ. ಈ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸರಣಿ ಮಾತುಕತೆ ನಡೆಸಲಿದ್ದಾರೆ. ಸರ್ಕಾರದ ಔತಣಕೂಟದಲ್ಲಿ ಭಾಗವಹಿಸಿ, ಭಾರತ-ರಷ್ಯಾ ನಡುವಿನ ಕಾರ್ಯತಂತ್ರದ ಪಾಲುದಾರಿಕೆ ಬಗ್ಗೆ ಜಾಗತಿಕ ನಾಯಕರು ಚರ್ಚಿಸಲಿದ್ದಾರೆ.
ಅತ್ಯಂತ ಬಿಗಿ ಭದ್ರತೆ ಹೊಂದಿರುವ ಜಾಗತಿಕ ನಾಯಕರಲ್ಲಿ ಪುಟಿನ್ ಕೂಡ ಒಬ್ಬರು. ಅದರಲ್ಲೂ ಯೂಕ್ರೇನ್​ ವಿರುದ್ಧ ರಷ್ಯಾ ತನ್ನ ಯುದ್ಧವನ್ನು ಮುಂದುವರಿಸಿರುವ ಪ್ರಸ್ತುತ ಸನ್ನಿವೇಶದಲ್ಲಿ ಪುಟಿನ್​ ಅವರ ಭದ್ರತೆ ಈಗ ಇನ್ನಷ್ಟು ಹೆಚ್ಚಿದೆ. ಶಸ್ತ್ರಸಜ್ಜಿತ ಲಿಮೋಸಿನ್ ಕಾರು ಯಾವಾಗಲೂ ಪುಟಿನ್​ ಅವರೊಂದಿಗೆ ಇರುತ್ತದೆ. ಎಲ್ಲೇ ಹೋದರು ಪುಟಿನ್​ ಅವರು ಈ ಕಾರನ್ನೇ ಬಳಸುತ್ತಾರೆ.

ಔರಸ್ ಸೆನೆಟ್ ಬಗ್ಗೆ

ಪುಟಿನ್​ ಅವರ ಔರಸ್ ಸೆನಟ್, ರಷ್ಯಾದ ಐಷಾರಾಮಿ ಲಿಮೋಸಿನ್ ಕಾರಾಗಿದೆ. ಇದನ್ನು ಅಧ್ಯಕ್ಷೀಯ ಮತ್ತು ಸರ್ಕಾರಿ ಬಳಕೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕಾರನ್ನು ಸಾಮಾನ್ಯವಾಗಿ "ರಷ್ಯನ್ ರೋಲ್ಸ್ ರಾಯ್ಸ್" ಎಂದೇ ಕರೆಯಲಾಗುತ್ತದೆ. ಇದು ಶಸ್ತ್ರಸಜ್ಜಿತ ಶೆಲ್, ಬ್ಲ್ಯಾಕೌಟ್ ಕಿಟಕಿಗಳು ಮತ್ತು ಪ್ಲಶ್, ಹೈಟೆಕ್ ಒಳಾಂಗಣದ ವಿನ್ಯಾಸವನ್ನು ಹೊಂದಿದೆ. ಈ ಕಾರು ರಷ್ಯಾದ ಸ್ವದೇಶಿ ಮಾದರಿಯಾಗಿದೆ. ಈ ಕಾರನ್ನು ತಮ್ಮ ಭದ್ರತೆಯಲ್ಲಿ ಅಳವಡಿಸಿಕೊಳ್ಳುವ ಮೊದಲು, ಪುಟಿನ್ ಅವರು ಮರ್ಸಿಡಿಸ್-ಬೆನ್ಜ್ ಎಸ್ 600 ಗಾರ್ಡ್ ಪುಲ್‌ಮ್ಯಾನ್ ಅನ್ನು ಬಳಸುತ್ತಿದ್ದರು. ಆದರೆ, ನಂತರದಲ್ಲಿ ತಮ್ಮದೇಯಾದ ಕೊರ್ಟೆಜ್ ಯೋಜನೆಯಡಿಯಲ್ಲಿ ನಿರ್ಮಿಸಲಾದ ಹೊಸ ವಾಹನಗಳನ್ನು ಬಳಸಲು ಶುರು ಮಾಡಿದರು. ಕೊರ್ಟೆಜ್ ಯೋಜನೆಯು ಅಲ್ಟ್ರಾ-ಐಷಾರಾಮಿ, ಸಂಪೂರ್ಣ ಶಸ್ತ್ರಸಜ್ಜಿತ ಅಧಿಕೃತ ವಾಹನಗಳನ್ನು ಅಭಿವೃದ್ಧಿಪಡಿಸುವ ಯೋಜನೆಯಾಗಿದೆ.
ಅಂದಹಾಗೆ, 2018ರಲ್ಲಿ ಪುಟಿನ್ ಅವರು ಈ ಕಾರನ್ನು ಉದ್ಘಾಟನೆ ಮಾಡಿದರು. ಆ ಸಮಯದಲ್ಲಿ ಈ ಸೆನಟ್ ಕಾರನ್ನು ರಷ್ಯಾದ NAMI ಸಂಸ್ಥೆ, ಸೊಲ್ಲರ್ಸ್ JSC ಮತ್ತು ಯುಎಇಯ ತವಾಜುನ್ ಹೋಲ್ಡಿಂಗ್ ನಡುವಿನ ಸಹಯೋಗದೊಂದಿಗೆ ಔರಸ್ ಮೋಟಾರ್ಸ್ ಕಂಪನಿ ತಯಾರಿಸಿದೆ. 2021 ರಲ್ಲಿ ಯೆಲಬುಗಾದಲ್ಲಿ ಈ ಕಾರಿನ ಬೃಹತ್ ಉತ್ಪಾದನೆ ಪ್ರಾರಂಭವಾಯಿತು. ಈ ಲಿಮೋಸಿನ್ ಅನ್ನು 2024ರಲ್ಲಿ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರಿಗೆ ಉಡುಗೊರೆಯಾಗಿ ನೀಡಲಾಯಿತು. ಹಲವಾರು ಉನ್ನತ ರಾಜತಾಂತ್ರಿಕ ಕ್ಷಣಗಳಲ್ಲಿ ಈ ಕಾರು ಕಾಣಿಸಿಕೊಂಡಿದೆ.

ಔರಸ್ ಸೆನೆಟ್ ವಿಶೇಷತೆ ಏನು?

ತೀವ್ರ ಬೆದರಿಕೆ ಅಥವಾ ಅಪಾಯದ ಸಂದರ್ಭಗಳಲ್ಲೂ ಹೆಚ್ಚಿನ ಬದುಕುಳಿಯುವ ಸಾಧ್ಯತೆಯ ದೃಷ್ಟಿಯಿಂದ ಈ ಔರಸ್ ಸೆನೆಟ್ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಇದರ ಪ್ರಮುಖ ಲಕ್ಷಣಗಳು ಯಾವುವೆಂದರೆ...
* ಸಂಪೂರ್ಣ ಬುಲೆಟ್​ಪ್ರೋಫ್​: ಕಾರಿನಲ್ಲಿರುವ ಶಸ್ತ್ರಸಜ್ಜಿತ ಶೆಲ್, ಹೆಚ್ಚಿನ ಕ್ಯಾಲಿಬರ್ ಗುಂಡುಗಳನ್ನು ತಡೆದುಕೊಳ್ಳಬಲ್ಲದು.

* ಕ್ಷಿಪಣಿ ಮತ್ತು ಡ್ರೋನ್ ದಾಳಿಗೆ ಪ್ರತಿರೋಧ: ಸೆನೆಟ್​ ಕಾರಿನಲ್ಲಿರುವ ರಕ್ಷಣಾತ್ಮಕ ಪದರವು, ಯಾವುದೇ ಸ್ಫೋಟಕಗಳ ಸ್ಫೋಟಗಳು ಮತ್ತು ವೈಮಾನಿಕ ದಾಳಿಗಳಿಂದಲೂ ಬದುಕುಳಿಯುವಂತೆ ವಿನ್ಯಾಸಗೊಳಿಸಲಾಗಿದೆ.

* ಜಲಾಂತರ್ಗಾಮಿಯಂತಹ ಸಾಮರ್ಥ್ಯ: ಒಂದು ವೇಳೇ ಈ ಕಾರು ನೀರಿಗೆ ಬಿದ್ದರೆ ತೇಲುತ್ತಲೇ ಇರುತ್ತದೆ ಮತ್ತು ಅದು ಸುರಕ್ಷಿತ ಸ್ಥಳವನ್ನು ತಲುಪುವವರೆಗೆ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ.
* ರನ್-ಫ್ಲಾಟ್ ಮೊಬಿಲಿಟಿ: ಯಾವುದಾರೂ ಸನ್ನಿವೇಶದಲ್ಲಿ ಎಲ್ಲ ಟೈರ್‌ಗಳು ನಾಶವಾದರೂ ಸಹ ಕಾರು ಹೆಚ್ಚಿನ ವೇಗದಲ್ಲಿ ಚಲಿಸುವುದನ್ನು ಮುಂದುವರಿಸಬಹುದು.

* ರಾಸಾಯನಿಕ ದಾಳಿಯಿಂದ ರಕ್ಷಣೆ: ವಿಷಕಾರಿ ಅನಿಲಗಳನ್ನು ಹೊರಗಾಕಲು ಕ್ಯಾಬಿನ್ ಸ್ವತಂತ್ರ ಗಾಳಿ-ಶೋಧನೆ ವ್ಯವಸ್ಥೆಯನ್ನು ಹೊಂದಿದೆ.

* ಹೆಚ್ಚಿನ ಕಾರ್ಯಕ್ಷಮತೆ: 4.4 ಲೀಟರ್ ಟ್ವಿನ್-ಟರ್ಬೊ V8 ಹೈಬ್ರಿಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಈ ಕಾರು, ಆಕ್ಸಲರೇಟ್​ ಒತ್ತಿದರೆ ಸಾಕು ಸುಮಾರು 6 ರಿಂದ 9 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ ವೇಗವನ್ನು ತಲುಪುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 160 ಕಿಮೀ.

* ಸುಧಾರಿತ ಐಷಾರಾಮಿ ಒಳಾಂಗಣ: ಕಾರಿನ ಒಳಗೆ ಚರ್ಮದ ಸಜ್ಜು, ಕೈಯಿಂದ ಮಾಡಿದ ಮರದ ಫಲಕಗಳು, ಹವಾಮಾನ ನಿಯಂತ್ರಣ ಮತ್ತು ಸುರಕ್ಷಿತ ಸಂವಹನ ವ್ಯವಸ್ಥೆಗಳು ಇವೆ.

ಬೆಲೆ ಎಷ್ಟು?

ಔರಸ್ ಸೆನೆಟ್ ಕಾರಿನ ಮೂಲ ಬೆಲೆ ಸುಮಾರು 18 ಮಿಲಿಯನ್ ರೂಬಲ್ಸ್​ಗಳಿಂದ (ಸುಮಾರು 2.5 ಕೋಟಿ ರೂ.) ಪ್ರಾರಂಭವಾಗುತ್ತದೆ. ಪುಟಿನ್ ಅವರಿಗಾಗಿ ಕಸ್ಟಮೈಸ್ ಮಾಡಿದ, ಸಂಪೂರ್ಣವಾಗಿ ಶಸ್ತ್ರಸಜ್ಜಿತ ಸರ್ಕಾರಿ ಕಾರು ಭದ್ರತಾ ತಂತ್ರಜ್ಞಾನದಿಂದ ತುಂಬಿದ್ದು, ಮಾಮೂಲಿ ಬೆಲೆಗಿಂತ ಎರಡು ಪಟ್ಟು ದುಬಾರಿಯಾಗಿದೆ. ಇಂತಹ ಕಾರುಗಳು ಸಾಮಾನ್ಯ ನಾಗರಿಕರಿಗೆ ಲಭ್ಯವಿರುವುದಿಲ್ಲ.
ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ನಂತರ, ಪ್ರಧಾನಿ ಮೋದಿ ಮತ್ತು ಪುಟಿನ್ ದ್ವಿಪಕ್ಷೀಯ ಸಭೆಗಾಗಿ ಔರಸ್ ಸೆನೆಟ್‌ ಕಾರಿನಲ್ಲಿ ಒಟ್ಟಿಗೆ ಪ್ರಯಾಣಿಸಿದರು. ಪ್ರಧಾನಿ ಮೋದಿ ಬರುವವರೆಗೂ ಪುಟಿನ್ ಅವರು ಸುಮಾರು ಹತ್ತು ನಿಮಿಷಗಳ ಕಾಲ ತಮ್ಮ ಕಾರಿನಲ್ಲೇ ಕಾಯುತ್ತಿದ್ದರು. ಕಾರಿನಲ್ಲಿ ಪ್ರಯಾಣಿಸುತ್ತಾ ಇಬ್ಬರೂ ನಾಯಕರು ಸುಮಾರು ಒಂದು ಗಂಟೆ ಮಾತುಕತೆ ನಡೆಸಿದರು. ಆ ಸಂದರ್ಭದಲ್ಲಿ ಕಾರಿನ ಫೋಟೋಗಳು ವೈರಲ್​ ಆಗಿದ್ದವು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net