

ನವದೆಹಲಿ: ಜಾಗತಿಕ ತಂತ್ರಜ್ಞಾನ ದೈತ್ಯ 'ಅಮೆಜಾನ್' (Amazon) ಸಂಸ್ಥೆಯು ತನ್ನ ಸಾಧನಗಳು ಮತ್ತು ಸೇವೆಗಳ ವಿಭಾಗದಲ್ಲಿ ( Devices and Services Unit) ಸುಮಾರು 250 ನೌಕರರನ್ನು ವಜಾಗೊಳಿಸುವ ( Amazon Lays Off ) ಮೂಲಕ ಉದ್ಯೋಗಿಗಳಿಗೆ ಬಿಗ್ ಶಾಕ್ ನೀಡಿದೆ.
ಕಂಪನಿಯು ಹೊಸ ಕಿಂಡಲ್ ಇ-ರೀಡರ್‌ಗಳು ಹಾಗೂ ಟ್ಯಾಬ್ಲೆಟ್ ಕಂಪ್ಯೂಟರ್‌ಗಳು ಸೇರಿದಂತೆ ಸಾಲು ಸಾಲು ನೂತನ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಕೆಲವೇ ವಾರಗಳಲ್ಲಿ ಈ ಉದ್ಯೋಗ ಕಡಿತ ಪ್ರಕ್ರಿಯೆ ನಡೆದಿರುವುದು ಆಶ್ಚರ್ಯ ಮೂಡಿಸಿದೆ. ಉದ್ಯೋಗ ಕಡಿತದ ಬಗ್ಗೆ ಅಮೆಜಾನ್ ಕಂಪನಿಯು ಸುದ್ದಿ ಸಂಸ್ಥೆ ರಾಯಿಟರ್ಸ್ಗೆ ಅಧಿಕೃತವಾಗಿ ದೃಢಪಡಿಸಿದೆ.
ಸಂಸ್ಥೆಯ ವಕ್ತಾರರು ಮಾತನಾಡಿ, "ನಾವು ಅತ್ಯಂತ ಕಷ್ಟದ ನಿರ್ಧಾರವನ್ನು ತೆಗೆದುಕೊಂಡಿದ್ದು, ಅತ್ಯಲ್ಪ ಸಂಖ್ಯೆಯ ಉದ್ಯೋಗಿಗಳನ್ನು ಹುದ್ದೆಯಿಂದ ತೆಗೆದುಹಾಕುತ್ತಿದ್ದೇವೆ" ಎಂದು ಯಾವುದೇ ವಿಸ್ತೃತ ವಿವರ ನೀಡದೆ ಸ್ಪಷ್ಟಪಡಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಪ್ರಮುಖವಾಗಿ ಸಾಫ್ಟ್‌ವೇರ್ ಡೆವಲಪ್‌ಮೆಂಟ್ (ತಂತ್ರಾಂಶ ಅಭಿವೃದ್ಧಿ) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನೌಕರರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಸಂಸ್ಥೆಯು ಹೆಚ್ಛು ದಕ್ಷತೆಯಿಂದ ಕಾರ್ಯಾಚರಣೆ ನಡೆಸಲು ಮತ್ತು ಕಂಪನಿಯ ಮುಂಬರುವ ಉತ್ಪನ್ನಗಳ ರೋಡ್‌ಮ್ಯಾಪ್‌ಗೆ ತಕ್ಕಂತೆ ತನ್ನ ಸಿಬ್ಬಂದಿ ಬಲವನ್ನು ಮರುಸಂಘಟಿಸಲು ಈ ನಿರ್ಧಾರ ಸಹಕಾರಿಯಾಗಲಿದೆ ಎಂದು ಅಮೆಜಾನ್ ಸ್ಪಷ್ಟಪಡಿಸಿದೆ. ಇದೇ ಸಂದರ್ಭದಲ್ಲಿ ಅಮೆಜಾನ್ ಅಲೆಕ್ಸಾ (Alexa) ಚಾಲಿತ ಹೊಸ ಅಲಾರಾಂ ಕ್ಲಾಕ್ ಮತ್ತು ಡಿಜಿಟಲ್ ಫೋಟೋ ಫ್ರೇಮ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಕಂಪನಿಯ ವಾಡಿಕೆಯಂತೆ, ನೌಕರರಿಗೆ ಉದ್ಯೋಗ ಕಡಿತದ ಕುರಿತ ಶಾಕಿಂಗ್ ಮಾಹಿತಿಯನ್ನು ಮೆಸೇಜನ್ ಮತ್ತು ಇಮೇಲ್‌ಗಳ ಮೂಲಕ ಕಳುಹಿಸಲಾಗಿದೆ. ಬುಧವಾರ ಬೆಳಗಿನ ಜಾವದಲ್ಲೇ ಮೆಸೇಜ್ ಕಳುಹಿಸಲಾಗಿದ್ದು, ಬೆಳಗ್ಗೆ ನಿದ್ರೆಯಿಂದ ಎದ್ದು ತಮ್ಮ ಫೋನ್ ಅಥವಾ ಕಂಪ್ಯೂಟರ್ ನೋಡಿದ ಉದ್ಯೋಗಿಗಳಿಗೆ ಭಾರಿ ಆಘಾತ ಉಂಟಾಗಿದೆ. ಸಾಧನಗಳು ಮತ್ತು ಸೇವೆಗಳ ವಿಭಾಗದ ಮಾನವ ಸಂಪನ್ಮೂಲ (HR) ಉಪಾಧ್ಯಕ್ಷೆ ಚೆರಿ ರಾಬಿನ್ಸನ್ ಅವರು ಕಳುಹಿಸಿದ ಇಮೇಲ್‌ನಲ್ಲಿ, "ಕಂಪನಿಯು ತನ್ನ ರಚನೆಯ ಬಗ್ಗೆ ಸಂಪೂರ್ಣ ಮತ್ತು ಸಮಗ್ರ ಪರಿಶೀಲನೆಯನ್ನು ನಡೆಸಿದ್ದು, ಅದರ ಪರಿಣಾಮವಾಗಿ ಈ ಹುದ್ದೆಗಳ ಕಡಿತದ ಅಗತ್ಯ ಕಂಡುಬಂದಿದೆ" ಎಂದು ಸಿಬ್ಬಂದಿಗೆ ವಿವರಿಸಲಾಗಿದೆ.
ಅಂದಹಾಗೆ, ಅಮೆಜಾನ್ ಈ ತಿಂಗಳ ಆರಂಭದಲ್ಲಷ್ಟೇ ತನ್ನ ಮುಖ್ಯ ಚಿಲ್ಲರೆ (Retail) ವಿಭಾಗದಲ್ಲಿ ಸುಮಾರು 1,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ತಂತ್ರಜ್ಞಾನ ವಲಯವು ತೀವ್ರ ಸವಾಲುಗಳನ್ನು ಎದುರಿಸುತ್ತಿದ್ದು, ವೆಚ್ಚ ಕಡಿತಕ್ಕೆ ಪ್ರಮುಖ ಕಂಪನಿಗಳು ಮುಂದಾಗಿವೆ. ಈ ನಡುವೆ ಅಮೆಜಾನ್ ತನ್ನ ಮೂರನೇ ತ್ರೈಮಾಸಿಕದ ಹಣಕಾಸು ಗಳಿಕೆಯ ವರದಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿರುವ ಬೆನ್ನಲ್ಲೇ ಈ ಎರಡನೇ ಸುತ್ತಿನ ಉದ್ಯೋಗ ಕಡಿತ ಪ್ರಕ್ರಿಯೆ ನಡೆದಿರುವುದು ಜಾಗತಿಕ ಐಟಿ ಕ್ಷೇತ್ರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ, (ಏಜೆನ್ಸೀಸ್).